ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಶ್ರೀಕೃಷ್ಣನ ಸಂದೇಶ

Last Updated 10 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ತೇಜಸೇsಸ್ತು ನಮೋ ಧೇನುಪಾಲಿನೇ ಲೋಕಪಾಲಿನೇ ।
ರಾಧಾಪಯೋಧರೋತ್ಸಂಗಶಾಯಿನೇ ಶೇಷಶಾಯಿನೇ ।।

ಇದರ ತಾತ್ಪರ್ಯ ಹೀಗೆ:‘ದನಗಳನ್ನು ಕಾಯುವವನೂ ಲೋಕವನ್ನು ಪಾಲಿಸುವವನೂ, ರಾಧೆಯ ಎದೆಯ ಮೇಲೆ ಮಲಗಿರುವವನೂ ಆದಿಶೇಷನ ಮೇಲೆ ಮಲಗಿರುವವನೂ ಆದ ತೇಜಸ್ಸಿನ ಸ್ವರೂಪನಾದ ಶ್ರೀಕೃಷ್ಣನಿಗೆ ನಮಸ್ಕರಿಸುವೆ.’

ಇಂದು ಶ್ರೀಕೃಷ್ಣಾಜನ್ಮಾಷ್ಟಮೀ.ಶ್ರೀಕೃಷ್ಣನ ಜೀವನ–ಸಂದೇಶಗಳು ಸಾವಿರಾರು ವರ್ಷಗಳಿಂದ ನಮ್ಮ ಜೀವನವನ್ನು ಪ್ರಭಾವಿಸುತ್ತಬಂದಿವೆ. ಇಂದಿಗೂ ಇವು ಪ್ರಸ್ತುತವಾಗಿರುವುದು ಸುಳ್ಳಲ್ಲ. ಅವನ ಬಾಲ್ಯವನ್ನು ನಮ್ಮ ಮಕ್ಕಳ ಬಾಲ್ಯದಲ್ಲಿ ಕಾಣಲು ತವಕಿಸುತ್ತೇವೆ; ಅವನ ಪ್ರೀತಿ–ಪ್ರೇಮಗಳು ನಮ್ಮೆಲ್ಲರ ಜೀವನದಲ್ಲಿ ತುಂಬಿಬರಲೆಂದು ಬಯಸುತ್ತೇವೆ; ಅವನ ಕುಶಲತೆ ನಮ್ಮ ಬದುಕಿನ ಬೆಳಕಾಗಲಿ ಎಂದು ಆಶಿಸುತ್ತೇವೆ; ಅವನ ಪ್ರಬುದ್ಧತೆ ನಮ್ಮ ಸಂಕಷ್ಟದಲ್ಲಿ ದಾರಿಯಾಗಿ ತೋರಲಿ ಎಂದು ಅನ್ವೇಷಿಸುತ್ತೇವೆ; ಅವನ ಜೀವನಪ್ರೀತಿಯೊಂದಿಗೆ ನಾವೂ ಕುಣಿಯುತ್ತೇವೆ; ಅವನ ವೈರಾಗ್ಯಪ್ರವೃತ್ತಿಗೆ ಬೆರಗಾಗುತ್ತವೆ. ಎಷ್ಟೊಂದು ಗುಣಗಳ ಸಾಗರ ಅವನು ಎಂದು ಆರಾಧಿಸುತ್ತಲೇ, ಅವನು ಮನುಷ್ಯನೋ ದೇವರೋ ಎಂದು ಗೊಂದಲದಲ್ಲಿ ಮುಳುಗುತ್ತೇವೆ. ಒಮ್ಮೆ ಅವನು ಧರ್ಮಾತ್ಮನಾಗಿ ಕಾಣುತ್ತಾನೆ; ಮತ್ತೊಮ್ಮೆ ಕಪಟಿಯಾಗಿ ತೋರುತ್ತಾನೆ.

ಒಮ್ಮೆ ಯೋಗಿಯಾಗಿ ಕಂಡರೆ, ಮಗದೊಮ್ಮೆ ಭೋಗಿಯಾಗಿ ಪ್ರತ್ಯಕ್ಷನಾಗುತ್ತಾನೆ. ಒಮ್ಮೆ ಸ್ನೇಹಿತನಂತೆ ಜೊತೆಯಲ್ಲಿರುವಂತೆ ಭಾಸವಾಗುತ್ತಿರುತ್ತದೆ; ಮರುಕ್ಷಣವೇ ಅವನೊಬ್ಬ ಜಗದ್ಗುರುವಾಗಿ ದರ್ಶನ ಕೊಡುತ್ತಾನೆ. ಒಂದು ಕ್ಷಣ ನಮಗೆ ಅರ್ಥವಾಗುತ್ತಿದ್ದಾನೆ ಎಂದೆನಿಸುತ್ತದೆ, ತತ್‌ಕ್ಷಣವೇ ನಮ್ಮ ಭಾವ–ಬುದ್ಧಿಗಳಿಗೆ ಅವನು ಅತೀತ ಎಂಬ ಅನುಭವ ದಟ್ಟವಾಗುತ್ತದೆ. ಒಟ್ಟಿನಲ್ಲಿ ಅವನನ್ನು ಹೀಗೆ ಎಂದು ನಿರ್ಣಯಿಸಿ ಅವನೊಂದಿಗೆ ವ್ಯವಹರಿಸುವುದಕ್ಕೆ ಆಗುವುದಿಲ್ಲ ಎಂಬುದಂತೂ ಸ್ಪಷ್ಟ. ಹೀಗಾಗಿಯೇ ಡಿವಿಜಿ ಅವರು ‘ಶ್ರೀಕೃಷ್ಣ ಎಂಬುದು ಪ್ರಸಿದ್ಧ ರಹಸ್ಯ’ ಎಂದು ಉದ್ಗರಿಸಿರುವುದು.

ಶ್ರಿಕೃಷ್ಣನ ರಹಸ್ಯವನ್ನು ಲೀಲಾಶುಕನ ಈ ಪದ್ಯವೂ ಸೊಗಸಾಗಿ ವರ್ಣಿಸಿದೆ.

ಶ್ರೀಕೃಷ್ಣ, ಅವನೊಬ್ಬ ದನಕಾಯುವವನು. ಹೀಗೆಂದು ಅವನನ್ನು ಅಸಡ್ಡೆ ಮಾಡದಿರಿ; ಅವನು ಲೋಕವನ್ನು ಕಾಯುತ್ತಿರುವವನೂ ಅವನೇ. ಅವನು ರಾಧೆಯ ಎದೆಯ ಮೇಲೆ ಮಲಗಿದ್ದಾನೆ, ಹೌದು. ಆದರೆ, ಎಚ್ಚರ! ಅವನು ಮಹಾಸರ್ಪ, ಎಂದರೆ ಆದಿಶೇಷನನ್ನೇ ಹಾಸಿಗೆಯನ್ನಾಗಿಸಿಕೊಂಡವನೂ ಅವನೇ ಎನ್ನುವುದನ್ನೂ ಮರೆಯದಿರಿ.

ಅತ್ಯಂತ ಕಡಿಮೆ ಮಾತುಗಳಲ್ಲಿ ಲೀಲಾಶುಕನು ಶ್ರೀಕೃಷ್ಣನ ಅದ್ಭುತ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾನೆ. ಏಕಕಾಲದಲ್ಲಿ ಸಾಮಾನ್ಯನಾಗಿಯೂ ಅಸಾಮಾನ್ಯನಾಗಿಯೂ, ಲೌಕಿಕನಾಗಿಯೂ ಅಲೌಕಿಕನಾಗಿಯೂ ಕಾಣಿಸಿಕೊಳ್ಳಬಲ್ಲವನೇ ಶ್ರೀಕೃಷ್ಣ ಎನ್ನುವುದನ್ನು ಸೊಗಸಾಗಿ ನಿರೂಪಿಸಿದ್ದಾನೆ.

ಕೃಷ್ಣರಹಸ್ಯದ ಎಲ್ಲ ಗುಟ್ಟುಗಳೂ ಯಾರೋ ಒಬ್ಬ ಜ್ಞಾನಿಗೆ ತೆರೆದುಕೊಳ್ಳಲಾರದು. ಆದುದರಿಂದಲೇ ಗೊಂದಲಗಳು; ಅನರ್ಥಕಾರಿ ಅಪಾರ್ಥಪರಂಪರೆಗಳು. ’ಪ್ರಸಿದ್ಧ ದಶಾವತಾರಗಳಲ್ಲಿ ಶ್ರೀಕೃಷ್ಣಾವತಾರದಂತೆ ಬುದ್ಧಿಪ್ರಯತ್ನಕ್ಕೆ ದುಸ್ಸಾಧ್ಯವಾಗಿರುವ ಅವತಾರ ಇನ್ನಾವುದೂ ಇಲ್ಲ‘ – ಎಂಬ ಡಿವಿಜಿಯವರ ಮಾತು ಇಲ್ಲಿ ಮನನೀಯ.

ಹೀಗಿದ್ದರೂ ಕೃಷ್ಣ ನಮಗೆ ಬೇಕು; ನಮ್ಮ ಜೀವನಕ್ಕೆ ಬೇಕು; ಏಕೆಂದರೆ ಅವನು ನಮ್ಮ ಜೀವನಕ್ಕೆ ಬೆಳಕಾಗಿ ಒದಗುವವನು. ಇದು ಏಕೆಂಬುದನ್ನು ಡಿವಿಜಿ ಅವರ ಈ ಮಾತುಗಳು ಸೊಗಸಾಗಿ ನಿರೂಪಿಸುತ್ತವೆ:

‘ಕೃಷ್ಣನು ಸಾಮಾನ್ಯನೂ ಹೌದು; ಅದ್ಭುತನೂ ಹೌದು. ಮನುಷ್ಯನಾದವನು ಏನೇನನ್ನು ಬಯಸಬಹುದೋ, ಏನೇನನ್ನು ಉತ್ತಮವೆಂದು ಭಾವಿಸಬಹುದೋ, ಮನುಷ್ಯನಿಗೆ ಯಾವುದು ಶ್ರೇಯಸ್ಸೆಂದು ಅನ್ನಿಸುತ್ತದೆಯೋ ಆ ಎಲ್ಲ ಜಾತಿಯ ಭಾಗ್ಯಗಳ ಸಂಮೇಳನಮೂರ್ತಿಯೇ ಶ್ರೀಕೃಷ್ಣ... ಶ್ರೀಕೃಷ್ಣಾವತಾರವು ಮನಸ್ಸಿನ ದೃಷ್ಟಿಯಿಂದ ಸರ್ವಾಂಗ ಸಂಪೂರ್ಣವಾದ ಅವತಾರ.‘

ನಮಗೆ ಏನೆಲ್ಲ ಬೇಕೋ ಅದನ್ನೆಲ್ಲವನ್ನೂ ಪೂರೈಸಬಲ್ಲವನು ಶ್ರೀಕೃಷ್ಣ ಎನ್ನುವುದು ಇದರಿಂದ ಸಿದ್ಧವಾಗುತ್ತದೆ. ಇಲ್ಲಿ ನಮಗೆ ಬೇಕಾಗಿರುವುದು ಎಂದರೆ ಭೌತಿಕವಾಗಿ ಒದಗುವಂಥ ವಸ್ತುಗಳು ಎಂದಲ್ಲ; ನಮ್ಮ ಮನಸ್ಸಿಗೆ ಬೇಕಾಗಿರುವಂಥ ವಿವರಗಳು ಎನ್ನುವುದು ಇಲ್ಲಿರುವ ಧ್ವನಿ. ಹೀಗೆ ನಮ್ಮ ಎಲ್ಲ ಸ್ಥಿತಿಗಳಲ್ಲೂ ಒದಗಬಲ್ಲಂಥ ಜಗದ್ಗುರುವೇ ಶ್ರೀಕೃಷ್ಣ.

ಶ್ರೀಕೃಷ್ಣನ ಉಪದೇಶವನ್ನು ಸಂಗ್ರಹವಾಗಿ ಒಂದೆಡೆ ನಾವು ನೋಡುವಂಥದ್ದು ಭಗವದ್ಗೀತೆಯಲ್ಲಿಯೇ. ಅವನು ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ; ಅವನ ಉಪದೇಶಗಳಿಗೆ ಅವನ ಜೀವನವೇ ಸೊಗಸಾದ ಉದಾಹರಣೆಯೂ ಆಗಿದೆ. ಹೀಗಾಗಿ ಅವನ ಉಪದೇಶಗಳಿಗೆ ಭಗವದ್ಗೀತೆಯನ್ನು ನೋಡುವಂತೆ, ಅವನ ಜೀವನಕ್ಕೆ – ಎಂದರೆ ಉಪದೇಶಗಳಿಗೆ ವ್ಯಾಖ್ಯಾನವನ್ನು – ಮಹಾಭಾರತ, ಭಾಗವತ, ಹರಿವಂಶಗಳಲ್ಲಿ ನೋಡಬಹುದು.

ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಕೃಷ್ಣ ಹೇಗೆ ನಮಗೆ ನೆರವಾಗುತ್ತಾನೆ?

ಜಗದ್ರಣಾಂಗನೇ ಯಸ್ಯಸ್ಮರಣಂ ಜಯಕಾರಣಮ್‌ ।
ಪಾರ್ಥಸಾರಥಯೇ ತಸ್ಮೈ ಶ್ರೀಕೃಷ್ಣಪರಬ್ರಹ್ಮಣೇ ನಮಃ ।।

ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದ್ದೇ ಯುದ್ಧಭೂಮಿಯಲ್ಲಿ.ಸದ್ಯದಲ್ಲಿ ನಾವು ಕೂಡ ಯುದ್ಧಭೂಮಿಯಲ್ಲಿ ನಿಂತಂತೆ ಭಾಸವಾಗುತ್ತಿದೆ. ಇದು ಕೇವಲ ಹೊರಗಿನ ಶತ್ರುಗಳಿಂದಲೇ ನಡೆಯುವಂಥ ಯುದ್ಧವಾಗಬೇಕಿಲ್ಲ; ನಮ್ಮ ಒಳಗಿನ ಶತ್ರುಗಳಿಂದಲೂ ನಡೆಯುವ ಯುದ್ಧವೂ ಆಗಬಹುದು. ಈ ನೆಲೆಯಿಂದ ಯೋಚಿಸಿದಾಗ, ಯುದ್ಧ ಎನ್ನುವುದು ನಮ್ಮ ಜೀನವದುದ್ದಕ್ಕೂ ನಡೆಯುವಂಥ ಹಗರಣವೇ ಆಗಿರುತ್ತದೆ. ಹೀಗಾಗಿಯೇ ಡಿವಿಜಿಯವರು ಮೇಲಣ ಪದ್ಯದಲ್ಲಿ ಹೇಳಿರುವುದು: ’ಜಗತ್ತು ಎಂಬುದೇ ಒಂದು ರಣರಂಗ. ಈ ಯುದ್ಧದಲ್ಲಿ ಶ್ರೀಕೃಷ್ಣನ ಸ್ಮರಣೆಯಿಂದಲೇ ಜಯ ಒದಗುತ್ತದೆ.‘

ಇಲ್ಲಿ ಶ್ರೀಕೃಷ್ಣನ ಸ್ಮರಣೆ ಎಂದರೆ, ಅವನ ಜೀವನ–ದರ್ಶನಗಳ ಅನುಸಂಧಾನ. ಇದು ನಮ್ಮ ಸದ್ಯದ ಪರಿಸ್ಥಿತಿಗೆ ಹೇಗೆ ನೆರವಾಗುತ್ತದೆ?

ನಮ್ಮ ಜೀವನದಲ್ಲಿ ಎದುರಾಗುವ ಎಲ್ಲ ಕೆಲಸಗಳನ್ನೂ ಯೋಗದ ಮೂಲಕ ನಿರ್ವಹಿಸಬೇಕು ಎನ್ನುತ್ತಾನೆ, ಕೃಷ್ಣ. ಇಲ್ಲಿ ಯೋಗ ಎಂದರೇನು? ನಾವು ನಮ್ಮ ಪಾಲಿನ ಕೆಲಸಗಳಲ್ಲಿ ತೊಡಗುವಾಗ ತೋರುವ ಜಾಣ್ಮೆಯೇ, ಕುಶಲತೆಯೇ ಯೋಗ ಎಂದಿದ್ದಾನೆ, ಅವನು. ಈ ಕುಶಲತೆಯನ್ನು ಹೇಗೆ ತಿಳಿದುಕೊಳ್ಳುವುದು? ಅದು ನಮಗೆ ಭಗವದ್ಗೀತೆಯ ಅಧ್ಯಯನದಿಂದ ಗೊತ್ತಾಗುತ್ತದೆ.

ಭಗವದ್ಗೀತೆಯಲ್ಲಿ ಬರುವ ನೂರಾರು ಅಪೂರ್ವ ತತ್ತ್ವಗಳಲ್ಲಿ ಒಂದು ’ನಿನಗೆ ಕರ್ತವ್ಯವಾಗಿ ಒದಗಿಬಂದ ಕೆಲಸವನ್ನು ಬಿಡದೆ ಮಾಡು’ (ನಿಯತಂ ಕುರು ಕರ್ಮ ತ್ವಂ) – ಎಂಬ ಉಪದೇಶ. ಈ ಕರ್ತವ್ಯದ ಉದ್ದೇಶವಾದರೂ ಏನಾಗಿರಬೇಕು? ಫಲಾಪೇಕ್ಷೆಯಲ್ಲದ ಲೋಕಸಂಗ್ರಹ. ಎಂದರೆ ನನಗೆ ಪ್ರಯೋಜನವಾಗಲಿ ಎಂದು ಕರ್ತವ್ಯದಲ್ಲಿ ತೊಡಗುವುದಲ್ಲ, ಇಡಿಯ ಜಗತ್ತಿಗೆ ಒಳಿತಾಗಲಿ ಎಂದು ತೊಡಗುವುದು.

ಇಂದು ನಮಗೆ ಬೇಕಾಗಿರುವ ತಿಳಿವಳಿಕೆಯೇ ಇದು: ಲೋಕದ ಒಳಿತನ್ನು ಕಾಪಾಡುವುದೇ ನಮ್ಮೆಲ್ಲರ ದಿಟವಾದ ಕರ್ತವ್ಯ.

ಹೀಗಾಗಿಯೇ ಎಲ್ಲ ಕಾಲಕ್ಕೂ ಒದಗುವ ಜೀವನಕೈಪಿಡಿಯಾಗಿ ಭಗವದ್ಗೀತೆ ಒದಗಿಬರುತ್ತದೆ; ಶ್ರೀಕೃಷ್ಣ ನಮಗೆ ನಿತ್ಯಗುರುವಾಗಿ ಒದಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT