ಸೋಮವಾರ, ಮಾರ್ಚ್ 1, 2021
19 °C

ದಿನದ ಸೂಕ್ತಿ: ವಿವೇಚನೆಯ ಫಲ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪ್ರಾರಬ್ಧವ್ಯೇ ನಿರುದ್ಯೋಗೋ ಜಾಗರ್ತವ್ಯೇ ಪ್ರಸುಪ್ತಕಃ ।

ವಿಶ್ವಸ್ತವ್ಯೇ ಭಯಸ್ಥಾನೇ ಹಾ! ನರಃ ಕೋ ನ ಹನ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಯಾವಾಗ ಒಂದು ಕಾರ್ಯವನ್ನು ಆರಂಭಿಸಬೇಕೋ ಆಗ ಸುಮ್ಮನಿರುತ್ತಾನೆ; ಎಚ್ಚರವಾಗಿರಬೇಕಾದಾಗ ಕಣ್ಣುಮುಚ್ಚಿ ಮಲಗಿರುತ್ತಾನೆ; ಮತ್ತು ಭಯಪಡಬೇಕಾದ ವಸ್ತುವನ್ನು ವಿಶ್ವಾಸಯೋಗ್ಯ ಎಂದು ತಿಳಿದುಕೊಳ್ಳುತ್ತಾನೆ. ಅಯ್ಯೋ! ಅಂಥ ಮನುಷ್ಯನು ಹಾಳಾಗದೆ ಹೇಗೆ ತಾನೆ ಉಳಿದಾನು?’

ಪ್ರತಿ ಕೆಲಸದ ಯಶಸ್ಸಿನ ಹಿಂದೆ ಹಲವಾರು ಕಾರಣಗಳು ಇರುತ್ತವೆ. ಅವುಗಳಲ್ಲಿ ಒಂದು ಆ ಕೆಲಸದ ಆವಶ್ಯಕತೆಗಳಿಗೆ ತಕ್ಕಂತೆ ಅದರಲ್ಲಿ ತೊಡಗುವುದು. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಈ ಶ್ಲೋಕವನ್ನು ಅರ್ಥೈಸಬಹುದಾದರೆ ಅದನ್ನು ಹೀಗೆ ಹೇಳಬಹುದು: ಯಾವಾಗ ಮಾಸ್ಕನ್ನು ಹಾಕಿಕೊಳ್ಳಬೇಕೊ ಆಗ ಹಾಕಿಕೊಳ್ಳದೆ, ಯಾವಾಗ ಬೇಡವೋ ಆಗ ಧರಿಸಿದವರು ಕೊವಿಡ್‌ ಬಾಧೆಗೆ ತುತ್ತಾಗುವ ಸಾಧ್ಯತೆ ಹೆಚ್ಚು!

ಸುಭಾಷಿತವೇ ಅಂಥ ಕೆಲವು ಸಂದರ್ಭಗಳನ್ನು ಕಾಣಿಸಿದೆ.

ಕೆಲಸವನ್ನು ಯಾವಾಗ ಆರಂಭಿಸಬೇಕೋ ಆಗ ನಾವು ಅದನ್ನು ಆರಂಭಿಸದಿದ್ದರೆ ಏನಾಗುತ್ತದೆ? ರೈತನೊಬ್ಬ ಯಾವಾಗ ಹೊಲವನ್ನು ಬಿತ್ತನೆಗೆ ಸಿದ್ಧಮಾಡಿಟ್ಟುಕೊಳ್ಳಬೇಕೋ ಆಗಲೇ ಅದನ್ನು ಸಿದ್ಧಮಾಡಿಟ್ಟುಕೊಳ್ಳಬೇಕು. ವಿದ್ಯಾರ್ಥಿಯೊಬ್ಬ ಯಾವಾಗ ಪರೀಕ್ಷೆಗೆ ಸಿದ್ಧವಾಗಬೇಕೋ ಆಗಲೇ ಸಿದ್ಧವಾಗಬೇಕು. ಹೀಗೆ ಪ್ರತಿಯೊಂದು ಕೆಲಸವನ್ನು ಆರಂಭಿಸಲೂ ಯುಕ್ತಕಾಲ ಎಂಬುದು ಇರುತ್ತದೆ. ಆ ಸಮಯದಲ್ಲಿಯೇ ನಾವು ಅದನ್ನು ಮಾಡಬೇಕು. ಹೀಗಲ್ಲದೆ ಆ ಸಮಯದಲ್ಲಿ ನಾವು ನಿಷ್ಕ್ರಿಯರಾಗಿದ್ದರೆ ಕೆಲಸದಲ್ಲಿ ಯಶಸ್ಸು ಸಿಗದು.

ಇದೇ ರೀತಿಯಲ್ಲಿ ಯಾವಾಗ ಎಚ್ಚರವಾಗಿರಬೇಕೋ ಆಗ ಎಚ್ಚರವಾಗಿರದಿದ್ದರೆ ಏನಾಗುತ್ತದೆ? ಕೆಲಸ ಕೆಡುತ್ತದೆಯಷ್ಟೆ! ಪರೀಕ್ಷೆಯ ಹಾಲ್‌ನಲ್ಲಿ ನಾವು ನಿದ್ರೆಮಾಡಲು ತೊಡಗಿದರೆ ನಮ್ಮ ಫಲಿತಾಂಶ ಏನಾದೀತು? ವಾಹನವನ್ನು ನಡೆಸುತ್ತಿರುವಾಗ ಮೈ ಎಲ್ಲ ಕಣ್ಣಾಗಿ ಎಚ್ಚರವಾಗಿರಬೇಕಾಗುತ್ತದೆ. ಆಗ ನಿದ್ರೆಗೆ ಜಾರಿದರೆ!?

ಕೆಲವೊಂದು ವಿಷಯಗಳ ಬಗ್ಗೆ ಭಯವನ್ನು ಪಡಬೇಕು, ಕೆಲವೊಂದು ಸಂಗತಿಗಳ ಬಗ್ಗೆ ಭಯವನ್ನು ಬಿಡಬೇಕು. ಈ ಎರಡೂ ಅದಲು ಬದಲಾದರೆ ನಮಗೆ ತೊಂದರೆ ತಪ್ಪದು. ತರಕಾರಿಯನ್ನು ಕತ್ತರಿಸಲು ಚಾಕು ಬೇಕು. ಆದರೆ ಅದನ್ನು ಬಳಸುವಾಗ ಎಚ್ಚರಿಕೆಯೂ ಬೇಕು. ತರಕಾರಿಯನ್ನು ಕತ್ತರಿಸುವಾಗ ಕೈ ಕೂಡ ಕತ್ತರಿಸಲ್ಪಟರೆ ಹೇಗೆ – ಎಂದು ಭಯಪಟ್ಟರೆ ಪ್ರಯೋಜನ ಸಿಗದು; ಏನಾಗುತ್ತದೆ ಬಿಡು – ಎಂದು ಉಡಾಫೆ ಮಾಡಿದರೆ ತೊಂದರೆ ತಪ್ಪದು. ನಾವು ಹರಿತವಾದುದರಿಂದಲೇ ನಮ್ಮ ಕೆಲಸವನ್ನು ಸಾಧಿಸಕೊಳ್ಳಬೇಕು. ಹೀಗಾಗಿ ಅದಕ್ಕೆ ಬೇಕಾದ ಎಚ್ಚರಿಕೆಗಳನ್ನು ಪಾಲಿಸಬೇಕು. ಆಗಷ್ಟೆ ತೊಂದರೆ ಇರದ ಪ್ರಯೋಜನ ನಮ್ಮ ಪಾಲಿಗೆ ಒದಗುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು