ಗುರುವಾರ , ಏಪ್ರಿಲ್ 15, 2021
19 °C

ದಿನದ ಸೂಕ್ತಿ: ಭಕ್ತಿಯ ಶಕ್ತಿ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

 ಸೇವಧ್ವಂ ವಿಬುಧಾಸ್ತಮಂಧಕರಿಪುಂ ಮಾಕ್ಲಿಶ್ಯತಾನ್ಯಶ್ರುತೇ
ಯಸ್ಮಾದತ್ರ ಪರತ್ರ ಚ ತ್ರಿಜಗತಿ ತ್ರಾತಾ ಸ ಏಕಃ ಶಿವಃ ।
ಆಯಾತೇ ನಿಯತೇರ್ವಶಾತ್‌ ಸ್ವವಿಷಯೇ ಕಾಲಾತ್‌ ಕರಾಲಾದ್ಭಯೇ
ಕುತ್ರ ವ್ಯಾಕರಣಂ ಕ್ವ ತರ್ಕಕಲಹಃ ಕಾವ್ಯಶ್ರಮಃ ಕ್ವಾಪಿ ವಾ ।।

ಇದರ ತಾತ್ಪರ್ಯ ಹೀಗೆ:
‘ಎಲೈ ವಿದ್ವಾಂಸರೇ, ಅಂಧಕಾರಿಯಾದ ಆ ಮಹಾದೇವನನ್ನು ಸೇವಿಸಿರಿ. ಬೇರೆ ಶಾಸ್ತ್ರಗಳಲ್ಲಿ ಕ್ಲೇಶಪಡಬೇಡಿ. ಏಕೆಂದರೆ ಶಿವನೊಬ್ಬನೇ ಇಲ್ಲಿಯೂ ಪರಲೋಕದಲ್ಲಿಯೂ ಮೂರು ಲೋಕಗಳಲ್ಲಿಯೂ ರಕ್ಷಕ. ಭಯಂಕರನಾದ ಯಮನು ವಿಧಿನಿಯಮದಂತೆ ಭಯಪಡಿಸಿದಾಗ ವ್ಯಾಕರಣ ಎಲ್ಲೋ? ತರ್ಕಶಾಸ್ತ್ರದ ಜಗಳ ಮತ್ತೆಲ್ಲೋ? ಕಾವ್ಯರಚನೆಯ ಪರಿಶ್ರಮ ಎಲ್ಲೋ?’

ಭಕ್ತಿಯ ಪಾರಮ್ಯ, ಅದರಲ್ಲೂ ಶಿವಭಕ್ತಿಯ ವಿಶಿಷ್ಟತೆಯನ್ನು ಈ ಸುಭಾಷಿತ ನಿರೂಪಿಸುತ್ತಿದೆ.

ನಾವು ಏನೇನೋ ಶಾಸ್ತ್ರಗಳನ್ನು ಕಲಿಯುತ್ತೇವೆ. ಕೆಲವನ್ನು ಅನ್ನದ ಸಂಪಾದನೆಗೆ, ಮತ್ತೆ ಕೆಲವನ್ನು ತಿಳಿವಳಿಕೆಯ ಸಂಪಾದನೆಗೆ, ಇನ್ನು ಕೆಲವನ್ನು ಕೀರ್ತಿಯ ಸಂಪಾದನೆಗಾಗಿ, ಕೆಲವನ್ನು ಸಂತೋಷದ ಸಂಪಾದನೆಗಾಗಿ. ಸುಭಾಷಿತ ಹೇಳುತ್ತಿದೆ, ಈ ಎಲ್ಲ ಶಾಸ್ತ್ರಗಳೂ ವ್ಯರ್ಥ; ಕೇವಲ ಶಿವಭಕ್ತಿಯೊಂದೇ ನಿಜವಾದ ಶಾಸ್ತ್ರ, ಕಾವ್ಯ ಎಂದು. ನಮ್ಮನ್ನು ಎಂಥ ಕಷ್ಟದ ಸಂದರ್ಭದಲ್ಲೂ ಕಾಪಾಡಬಲ್ಲಂಥದ್ದೂ ಎಂಥ ಸಮಯದಲ್ಲೂ ಸಂತೋಷವನ್ನು ನೀಡುವಂಥದ್ದೂ ಶಿವಭಕ್ತಿಯೊಂದೇ ಎಂದು ಘೋಷಿಸುತ್ತಿದೆ.

ಇನ್ನೊಂದು ಸುಭಾಷಿತವನ್ನು ನೋಡಿ:

ಸಾ ರಸನಾ ತೇ ನಯನೇ ತಾವೇವ ಕರೌ ಸ ಏವ ಕೃತಕೃತ್ಯಃ ।
ಯಾ ಯೇ ಯೌ ಯೋ ಭರ್ಗಂ ವದತೀಕ್ಷತೇ ಸದಾರ್ಚತಃ ಸ್ಮರತಿ ।।

ಎಂದರೆ, ’ಯಾವುದು ಪರಮೇಶ್ವರನ ನಾಮಗಳನ್ನು ನುಡಿಯುವುದೋ ಅದು ನಾಲಗೆ! ಅವನನ್ನು ಯಾವ ಎರಡು ಕಣ್ಣುಗಳು ಕಾಣುವುವೋ ಅವೇ ಕಣ್ಣುಗಳು! ಯಾವ ಕೈಗಳು ಅವನನ್ನು ಪೂಜಿಸುವವೋ ಅವೇ ಕೈಗಳು! ಯಾರು ಅವನನ್ನು ಸ್ಮರಿಸುವನೋ ಅವನೇ ಕೃತಕೃತ್ಯನು!’

ಭಕ್ತಿಯೇ ನಿಜವಾದ ಶಾಸ್ತ್ರ, ಕಾವ್ಯ, ಅರಿವು, ನಲಿವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.