ಬುಧವಾರ, ಏಪ್ರಿಲ್ 14, 2021
23 °C

ದಿನದ ಸೂಕ್ತಿ: ಕಾಲಧರ್ಮ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಶೀತೇsತೀತೇ ವಸನಮಶನಂ ವಾಸರಾಂತೇ ನಿಶಾಂತೇ

ಕ್ರೀಡಾರಂಭಂ ಕುವಲಯದೃಶಾಂ ಯೌವನಾಂತೇ ವಿವಾಹಮ್‌ ।

ಸೇತೋರ್ಬಂಧಂ ಪಯಸಿ ಚಲಿತೇ ವಾರ್ಧಕೇ ತೀರ್ಥಯಾತ್ರಾಂ

ವಿತ್ತೇsತೀತೇ ವಿತರಣಮತಿಂ ತರ್ತುಮಿಚ್ಛಂತಿ ಮೂಢಾಃ ।।

ಇದರ ತಾತ್ಪರ್ಯ ಹೀಗೆ:

‘ಚಳಿಗಾಲ ಹೋದಮೇಲೆ ಶಾಖವಾದ ಬಟ್ಟೆಯನ್ನೂ, ದಿನ ಕಳೆದಮೇಲೆ ಊಟವನ್ನೂ, ರಾತ್ರಿ ಕಳೆದಮೇಲೆ ಕ್ರೀಡೆಯನ್ನೂ, ಯೌವನ ಕಳೆದಮೇಲೆ ತರುಣಿಯರ ಮದುವೆಯನ್ನೂ, ನೀರು ಹರಿದುಹೋದಮೇಲೆ ಅಣೆಕಟ್ಟನ್ನೂ, ವಯಸ್ಸಾದಮೇಲೆ ತೀರ್ಥಯಾತ್ರೆಯನ್ನೂ, ದುಡ್ಡೆಲ್ಲ ಖರ್ಚಾದಮೇಲೆ ದಾನಬುದ್ಧಿಯನ್ನೂ ಮೂಢರು ಮಾಡಲು ಇಚ್ಛಿಸುತ್ತಾರೆ.’

ಪ್ರತಿಯೊಂದು ರೀತಿ–ನೀತಿಗೂ ತಕ್ಕ ಸಮಯ ಎಂಬುದು ಇರುತ್ತದೆ; ಪ್ರತಿಯೊಂದು ಕೆಲಸಕ್ಕೂ ತಕ್ಕ ಕಾಲ ಎಂಬುದು ಇರುತ್ತದೆ. ಅದನ್ನು ತಿಳಿದುಕೊಂಡು ಅವುಗಳನ್ನು ಆಚರಣೆಗೆ ತರಬೇಕು; ಆಗಲೇ ಅವುಗಳ ಸಾರ್ಥಕತೆ; ಸಮಯವಲ್ಲದ ಸಮಯದಲ್ಲಿ ಅವುಗಳನ್ನು ಮಾಡಿದರೆ ಆಗ ಅನರ್ಥವೇ ಆಗುತ್ತದೆ ಎಂದು ಹೇಳುತ್ತಿದೆ ಸುಭಾಷಿತ.

ಬೆಚ್ಚಗಿರುವ ಬಟ್ಟೆಗಳು ನಮಗೆ ಯಾವಾಗ ಬೇಕಿರುವುದು? ಚಳಿಗಾಲದಲ್ಲಿ ತಾನೆ? ಚಳಿಗಾಲ ಮುಗಿದಮೇಲೆ ಸ್ವೆಟರ್‌ಗಳನ್ನು ಕೊಂಡುಕೊಂಡರೆ ಪ್ರಯೋಜನ ಏನು? ಇಂದಿನ ಊಟವನ್ನು ಇಂದೇ ಮಾಡಬೇಕು; ಅದೂ ಸರಿಯಾದ ಹೊತ್ತಿನಲ್ಲಿ. ಹೀಗಲ್ಲದೆ ಹೊತ್ತಲ್ಲದ ಹೊತ್ತಿನಲ್ಲಿ ಊಟಮಾಡಿದರೆ ಅದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತೇವೆಯಷ್ಟೆ. ಹೀಗೆಯೇ ಆಟವನ್ನು ತಂಪಾದ ಹೊತ್ತಿನಲ್ಲಿ ಆಡಬೇಕಲ್ಲದೆ, ಆಯಾಸವಾಗುವ ಸಮಯದಲ್ಲಿ ಅಲ್ಲ. ತಾರುಣ್ಯದಲ್ಲಿದ್ದಾಗಲೇ ಮದುವೆಯಾಗಬೇಕು; ಅದುಬಿಟ್ಟು ಬಾಲ್ಯವಿವಾಹವಾದರೂ ಕಷ್ಟ, ವೃದ್ಧಾಪ್ಯದಲ್ಲಿ ಮದುವೆಯಾದರೂ ಕಷ್ಟವೇ. ನದಿಯಲ್ಲಿ ನೀರು ಹರಿಯುತ್ತಿರುವಾಗಲೇ ಅದಕ್ಕೆ ಅಣೆಕಟ್ಟನ್ನು ಕಟ್ಟಬೇಕೆ ವಿನಾ ನೀರೆಲ್ಲ ಹರಿದುಹೋದಮೇಲೆ ಕಟ್ಟಿದರೆ ಏನು ಪ್ರಯೋಜನ? ತೀರ್ಥಯಾತ್ರೆಯನ್ನು ಮಾಡಬೇಕಾದರೆ ದೇಹದಲ್ಲಿ ಬಲ ಇರಬೇಕು; ಅದನ್ನು ಬಿಟ್ಟು ವಯಸ್ಸಾದಮೇಲೆ ತೀರ್ಥಯಾತ್ರೆಯನ್ನು ಮಾಡುವೆ ಎಂದರೆ ಆಗ ಆಯಾಸವಾಗುತ್ತದೆಯೆ ಹೊರತು ತೀರ್ಥಯಾತ್ರೆ ಸುಲಭವಾಗಲಾರದು. ನಮ್ಮಲ್ಲಿ ಕೊಡುವ ಶಕ್ತಿ ಇದ್ದಾಗ ನಾವು ದಾನಮಾಡಬೇಕು. ಹೀಗಲ್ಲದೆ ವ್ಯಾಪಾರದಲ್ಲಿ ಸಂಪತ್ತೆಲ್ಲ ನಷ್ಟವಾದ ಮೇಲೆ ’ಅಯ್ಯೋ! ನಾನು ಆಗಲೇ ದಾನಮಾಡಬೇಕಿತ್ತು‘ ಎಂದು ಅಂದುಕೊಂಡರೂ ಅಥವಾ ’ಈಗ ದಾನಮಾಡಬೇಕೆಂದು ಅನಿಸುತ್ತದೆ‘ ಎಂದೂ ಅಂದುಕೊಂಡರೆ ಅದರಿಂದ ಏನು ಪ್ರಯೋಜನ?

ಹೀಗೆಯೇ ನಾವು ಕಷ್ಟ ಬಂದಾಗ ಧೈರ್ಯವಾಗಿರಬೇಕು; ಅನ್ಯಾಯ ನಡೆಯುತ್ತಿದ್ದಾಗ ಅದನ್ನು ಪ್ರತಿಭಟಿಸಬೇಕು. ನಮ್ಮ ಎಲ್ಲ ಕೆಲಸಗಳನ್ನೂ ನಾವು ಸರಿಯಾದ ಸಮಯದಲ್ಲಿ ಮಾಡುವುದೇ ಜೀವನಯಜ್ಞ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು