ಮಂಗಳವಾರ, ಮೇ 17, 2022
24 °C

ದಿನದ ಸೂಕ್ತಿ: ನಿಜವಾದ ವಿದ್ಯಾವಂತ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕಪಾಲಸ್ಥಂ ಯಥಾ ತೋಯಂ ಶ್ವದೃತೌ ಚ ಯಥಾ ಪಯಃ ।

ಹೇಯಂ ದುಃಸ್ಥಾನದೋಷೇಣ ವೃತ್ತಹೀನಂ ತಥಾ ಶ್ರುತಮ್‌ ।।

ಇದರ ತಾತ್ಪರ್ಯ ಹೀಗೆ:

‘ತಲೆಬುರುಡೆಯಲ್ಲಿರುವ ನೀರು, ನಾಯಿಯ ಚರ್ಮದಲ್ಲಿ ತಂದಿರುವ ಹಾಲು ಹೇಗೆ ಸ್ಥಾನದೋಷದಿಂದ ಅಸಹ್ಯವೋ ಅಥವಾ ತ್ಯಾಜ್ಯಾವೋ ಆಗುತ್ತದೆಯೊ ಹಾಗೆಯೇ ನಡತೆಯಿಲ್ಲದವನ ವಿದ್ಯೆಯೂ ಅಸಹ್ಯವೂ ತ್ಯಾಜ್ಯವೂ ಆಗುತ್ತದೆ.’

ನಮಗೆ ತುಂಬ ಹಸಿವು. ಏನು ಸಿಕ್ಕರೂ ಕೂಡಲೇ ತಿನ್ನುವಷ್ಟು ಹಸಿವು. ಆ ಸಂದರ್ಭದಲ್ಲಿ ಯಾರಾದರೂ ಅನ್ನವನ್ನು ನೆಲದ ಮೇಲೆ ಬಡಿಸಿದರೆ ನಾವು ಅದನ್ನು ತಿನ್ನುತ್ತೇವೆಯೆ?

ಏನನ್ನು ತಿನ್ನುತ್ತೇವೆ ಎಂಬುದಷ್ಟೆ ಮುಖ್ಯವಲ್ಲ; ಹೇಗೆ ತಿನ್ನುತ್ತೇವೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ ಅಲ್ಲವೆ?

ಸುಭಾಷಿತ ಇಂಥ ಸಂಗತಿಯನ್ನೇ ಹೇಳುತ್ತಿರುವುದು.

ವಿದ್ಯೆ ಎಂಬುದು ತುಂಬ ದೊಡ್ಡದು; ಪವಿತ್ರವಾದುದುದು; ನಿಜ. ವಿದ್ಯೆಯನ್ನು ಸಂಪಾದಿಸುವುದೂ ಸುಲಭವಲ್ಲ; ಅದನ್ನು ಮಹಾಸಾಧನೆಯಿಂದಲೇ ಪಡೆದುಕೊಳ್ಳಬೇಕಾಗುತ್ತದೆ. ಹೀಗೆಂದು ವಿದ್ಯೆಯನ್ನು ಪಡೆದಿರುವ ವಿದ್ಯಾವಂತನೊಬ್ಬ ಹೇಗೆ ಬೇಕಾದರೂ ನಡೆದುಕೊಳ್ಳಬಹುದೆ? ಅವನಿಗೆ ಯಾವುದೇ ನಿರ್ಬಂಧಗಳು ಅನ್ವಯವಾಗುವುದಿಲ್ಲವೆ? ಸುಭಾಷಿತ ಹೇಳುತ್ತಿದೆ: ನಡತೆಯಿಲ್ಲದವನ ವಿದ್ಯೆ ಅದು ಅಸಹ್ಯವೂ ಹೌದು, ತ್ಯಾಜ್ಯವೂ ಹೌದು.

ಇಂದು ನಾವು ಸ್ವಘೋಷಿತ ವಿದ್ಯಾವಂತರಿಂದ ನೋಡುತ್ತಿರುವುದು ಬಹುಪಾಲು ಇಂಥ ಅಸಹ್ಯಕರ ನಡೆವಳಿಕೆಯನ್ನೇ ಹೌದು. ಮಾತಿನಲ್ಲಿ ಸಂಯಮ ಇಲ್ಲ, ಹೊಣೆಗಾರಿಕೆ ಇಲ್ಲ; ಆ ಕ್ಷಣ ಏನು ತೋಚುತ್ತದೆಯೋ ಅದನ್ನು ಒರಟಾಗಿ ಹೇಳುವಂಥ ಧೋರಣೆ ಇಂದು ಎಲ್ಲೆಲ್ಲೂ ಹೆಚ್ಚುತ್ತಿದೆ; ಸಾಮಾಜಿಕ ಜಾಲತಾಣಗಳನ್ನು ನೋಡಿದರೆ ಈ ಮಾತಿಗೆ ಸ್ಪಷ್ಟ ಸಾಕ್ಷ್ಯ ಸಿಗುತ್ತದೆ.

ವಿದ್ಯಾವಂತನಿಗೆ ಹೊಣೆಗಾರಿಕೆ ಹೆಚ್ಚು. ಯೋಚಿಸುವ ಶಕ್ತಿಯನ್ನು ಅವನಿಗೆ ವಿದ್ಯೆ ಕೊಟ್ಟಿರುತ್ತದೆ. ಅದನ್ನು ಅವನು ಬಳಸಿಕೊಂಡು ತನ್ನ ನಡೆವಳಿಕೆಯನ್ನು ರೂಢಿಸಿಕೊಳ್ಳಬೇಕು; ಸುಂದರವಾಗಿಸಿಕೊಳ್ಳಬೇಕು; ಸಂಸ್ಕಾರಯುತವನ್ನಾಗಿಸಿಕೊಳ್ಳಬೇಕು. ಆದರೆ ಹಲವರು ಈ ನಿಲುವಿಗೆ ವಿರುದ್ಧವಾಗಿದ್ದಾರೆ ಎಂಬುದೇ ಇಂದಿನ ಆತಂಕ. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು: ನಡತೆಯಿಲ್ಲದವನ ವಿದ್ಯೆ ಅಸಹ್ಯವೂ ಹೌದು, ತ್ಯಾಜ್ಯವೂ ಹೌದು. ನಡತೆ ಎಂಬುದು ತುಂಬ ವಿಶಾಲವಾದ ವಿವರ. ನಾವು ಮನೆಯಲ್ಲಿ ಹೇಗಿರಬೇಕು ಎಂಬುದನ್ನೂ ಅದು ಸೂಚಿಸುತ್ತದೆ, ಸಮಾಜದಲ್ಲಿ ಹೇಗಿರಬೇಕೆಂದೂ ಸೂಚಿಸುತ್ತದೆ.

ನೀರು ನಮಗೆ ಅತ್ಯಂತ ಆವಶ್ಯಕ. ಹೀಗೆಂದು ನಾವು ತಲೆಬುರುಡೆಯಲ್ಲಿರುವ ನೀರನ್ನು ಕುಡಿಯುವುದಿಲ್ಲವಷ್ಟೆ! ಹಾಲು ಕೂಡ ನಮಗೆ ತುಂಬ ಮುಖ್ಯವಾದ ಆಹಾರ. ಆದರೆ ನಾಯಿಯ ಚರ್ಮದಲ್ಲಿ ಯಾರಾದರೂ ಹಾಲನ್ನು ತಂದುಕೊಟ್ಟರೆ ನಾವು ಕುಡಿಯುತ್ತೇವೆಯೆ?

ಹೀಗೆಯೇ ಒಬ್ಬ ವ್ಯಕ್ತಿ ವಿದ್ಯಾವಂತನೇ ಆಗಿರಬಹುದು; ಅವನಲ್ಲಿ ನಾಲ್ಕಾರು ಪದವಿಪತ್ರಗಳೂ ಇರಬಹುದು. ಆದರೆ ಅವನು ಅಯೋಗ್ಯನಾಗಿದ್ದರೆ, ನೀಚನಾಗಿದ್ದರೆ, ದುಷ್ಟನಾಗಿದ್ದರೆ – ಅವನು ನಮ್ಮ ಪಾಲಿಗೆ ಅಸಹ್ಯವೂ ಹೌದು, ತ್ಯಾಜ್ಯವೂ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು