ಶುಕ್ರವಾರ, ಮಾರ್ಚ್ 31, 2023
32 °C

ದಿನದ ಸೂಕ್ತಿ| ಕತ್ತಲೆಯನ್ನು ಕಳೆಯುವವರು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಉದ್ಯಂತು ಶತಮಾದಿತ್ಯಾ ಉದ್ಯಂತು ಶತಮಿಂದವಃ ।

ನ ವಿನಾ ವಿದುಷಾಂ ವಾಕ್ಯೈರ್ನಶ್ಯತ್ಯಾಭ್ಯಂತರಂ ತಮಃ ।।

ಇದರ ತಾತ್ಪರ್ಯ ಹೀಗೆ:

‘ನೂರು ಸೂರ್ಯರು ಹುಟ್ಟಲಿ. ನೂರು ಚಂದ್ರರೂ ಹುಟ್ಟಲಿ. ಜ್ಞಾನಿಗಳ ನುಡಿಗಳಿಂದಲ್ಲದೆ ಅಂತರಂಗದ ಅಜ್ಞಾನದ ಕತ್ತಲೆ ಹರಿಯುವುದಿಲ್ಲ.’

ನಮ್ಮ ಅಜ್ಞಾನ ತೊಲಗದೆ ಜೀವನದ ಹಾದಿಯಲ್ಲಿ ಬೆಳಕು ಕಾಣದು. ಹಾಗಾದರೆ ಅಜ್ಞಾನದಿಂದ ಮುಕ್ತರಾಗುವ ಬಗೆ ಹೇಗೆ? ಅದನ್ನೇ ಸುಭಾಷಿತ ಹೇಳುತ್ತಿರುವುದು.

ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಬಲ್ಲ ಶಕ್ತಿ ಇರುವುದು ಜ್ಞಾನಿಗಳ ಮಾತಿಗೆ ಮಾತ್ರವೇ ಎನ್ನುತ್ತಿದೆ ಸುಭಾಷಿತ. ಹಾಗಾದರೆ ಜ್ಞಾನಿಗಳು ಯಾರು? ಅವರ ಮಾತು ನಮಗೆ ಬೆಳಕಾಗುವ ಪರಿ ಹೇಗೆ?

ರಾಮಾಯಣದಲ್ಲಿ ಒಂದು ಮಾತು ಬರುತ್ತದೆ: ’ಸಾವಿರ ಮೂರ್ಖರಿಗಿಂತಲೂ ಒಬ್ಬ ವಿದ್ವಾಂಸನೇ ಮೇಲು. ಏಕೆಂದರೆ ಕಷ್ಟಕಾಲದಲ್ಲಿ ವಿದ್ವಾಂಸನೊಬ್ಬನೇ ನಮಗೆ ಸರಿಯಾದ ಉಪಾಯವನ್ನು ಉಪದೇಶಿಸಿ ಒಳಿತನ್ನು ಉಂಟುಮಾಡಬಲ್ಲ.’

ಕಷ್ಟಕಾಲದಲ್ಲೂ ಧೃತಿಗೆಡದೆ ಪರಿಸ್ಥಿತಿಯನ್ನು ನಿಭಾಯಿಸಬಲ್ಲವನೇ ವಿದ್ವಾಂಸ, ಜ್ಞಾನಿ ಎಂಬುದನ್ನು ಈ ಮಾತಿನಿಂದ ಗ್ರಹಿಸಬಹುದು. ಇದು ಜ್ಞಾನಿಗಳ ಮೊದಲ ಲಕ್ಷಣ. ಇನ್ನೊಂದು ಲಕ್ಷಣ ಎಂದರೆ, ಅವರು ಸ್ವಾರ್ಥದಿಂದ ನಡೆದುಕೊಳ್ಳುವುದಿಲ್ಲ. ಹೀಗಾಗಿಯೇ ಅವರು ಇನ್ನೊಬ್ಬರ ಕಷ್ಟಕಾಲದಲ್ಲೂ ಒದಗುತ್ತಾರೆ; ಅವರಿಗೆ ಸರಿಯಾದ ತಿಳಿವಳಿಕೆಯನ್ನು ಕೊಟ್ಟು, ಅವರನ್ನು ಕಷ್ಟದಿಂದ ಪಾರುಮಾಡುತ್ತಾರೆ.

ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ನೂರು ಸೂರ್ಯರು ಹುಟ್ಟಿದರೂ ನೂರು ಚಂದ್ರರು ಹುಟ್ಟಿದರೂ ಜ್ಞಾನಿ ಮಾತ್ರವೇ ನಮ್ಮ ಅಂತರಂಗದ ಅಜ್ಞಾನದ ಕತ್ತಲೆಯನ್ನು ಓಡಿಸಬಲ್ಲ. ಇಲ್ಲಿ ಸೂರ್ಯ–ಚಂದ್ರರು ಹೊರಗಿನ ಬೆಳಕಾಗಿ, ಎಂದರೆ ನಮ್ಮಿಂದ ದೂರ ನಿಲ್ಲುವ ಬೆಳಕಾಗಿ ಸುಭಾಷಿತ ಕಂಡಿದೆ. ಆದರೆ ಜ್ಞಾನಿ ಮಾತ್ರವೇ ನಮ್ಮ ಅಂತರಂಗವನ್ನು ಪ್ರವೇಶಿಸಬಲ್ಲ. ನಮ್ಮ ಜೊತೆ ಒಂದಾಗಬಲ್ಲವರು, ನಮ್ಮ ಹತ್ತಿರ ನಿಲ್ಲಬಲ್ಲವರು ಮಾತ್ರವೇ ನಮಗೆ ದಿಟವಾದ ಆಪ್ತರು, ಮಾರ್ಗದರ್ಶಕರು ಎಂಬುದು ಸುಭಾಷಿತದ ಇನ್ನೊಂದು ಧ್ವನಿ.

ಅರಿವನ್ನು ಉಳ್ಳವರು ನಮಗೆ ಅರಿವನ್ನು ನೀಡಿದಾಗ ಅದನ್ನು ಸ್ವೀಕರಿಸುವ, ಸ್ವೀಕರಿಸಿ ಜೀವನದಲ್ಲಿ ಅನ್ವಯಿಸಿಕೊಳ್ಳುವ ಎಚ್ಚರ ನಮಗೆ ಸಿದ್ಧಿಸಬೇಕಷ್ಟೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು