ಶನಿವಾರ, ಅಕ್ಟೋಬರ್ 31, 2020
22 °C

ದಿನದ ಸೂಕ್ತಿ| ನಿಜವಾದ ಈಶ್ವರ‍ಪೂಜೆ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಯೇನ ಕೇನ ಪ್ರಕಾರೇಣ ಯಸ್ಯ ಕಸ್ಯಾಪಿ ದೇಹಿನಃ ।

ಸಂತೋಷಂ ಜನಯೇತ್ ಪ್ರಾಜ್ಞಸ್ತದೇವೇಶ್ವರಪೂಜನಮ್ ।।

ಇದರ ತಾತ್ಪರ್ಯ ಹೀಗೆ:

’ಯಾವುದೇ ರೀತಿಯಲ್ಲಾದರೂ ಬೇರೆ ಒಬ್ಬ ವ್ಯಕ್ತಿಗಾದರೂ ಸಂತೋಷವನ್ನು ಉಂಟುಮಾಡುವಂಥ ಕೆಲಸವನ್ನು ಮಾಡುವುದು ಪ್ರಜ್ಞಾವಂತನ ಲಕ್ಷಣ. ತನ್ನ ಸುತ್ತಲಿನವರಲ್ಲಿ ಸಂತೋಷವನ್ನು ಹರಡುವುದೇ ದಿಟವಾದ ದೇವರ ಪೂಜೆ.‘

ಸಂತೋಷ ಎನ್ನುವುದು ತುಂಬ ದೊಡ್ಡ ಸಂಗತಿ. ಎಲ್ಲ ಜೀವಿಗಳೂ ಬಯಸುವ ಸಂಗತಿ ಅದು. ಆದರೆ ಸಂತೋಷವನ್ನು ದಕ್ಕಿಸಿಕೊಳ್ಳುವುದು ಸುಲಭವಲ್ಲ. ಇದಕ್ಕೆ ವಿಘ್ನಗಳು ಹತ್ತಾರು. ಕೆಲವೊಮ್ಮೆ ನಮಗೆ ನಾವೇ ತೊಂದರೆಯನ್ನು ಮಾಡಿಕೊಳ್ಳುತ್ತಿರುತ್ತೇವೆ; ಇನ್ನು ಕೆಲವೊಮ್ಮೆ ಇತರರೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾರೆ. 

ಹೀಗಿದ್ದರೂ ನಾವೆಲ್ಲರೂ ನಿರಂತರವಾಗಿ ಸಂತೋಷಕ್ಕಾಗಿಯೇ ಪರಿತಪಿಸುತ್ತಿರುತ್ತೇವೆ. ಬೇರೆಯವರ ಸಂತೋಷಕ್ಕೆ ನಾವು ಅಡ್ಡಿಯಾಗುವುದು ಕೂಡ ಅದರಲ್ಲಿ ನಮಗೆ ಸಂತೋಷ ಸಿಗುತ್ತದೆ ಎನ್ನುವ ಕಾರಣದಿಂದಲೇ. ಸುಭಾಷಿತ ಈ ವಿಷಯವನ್ನು ತೆಗೆದುಕೊಂಡೇ ಹೇಳುತ್ತಿರುವುದು: ಬೇರೆಯವರ ಸಂತೋಷವನ್ನು ಕಸಿದುಕೊಳ್ಳುವಂಥದ್ದು ನಮ್ಮ ಸಂತೋಷದ ಮೂಲಕಾರಣ ಆಗಬಾರದು; ಇನ್ನೊಬ್ಬರಿಗೆ ಸಂತೋಷವನ್ನು ನೀಡುವಂತೆ ನಡೆದುಕೊಳ್ಳುವುದೇ ನಮ್ಮ ವ್ಯಕ್ತಿತ್ವದ ಗುರಿಯಾಗಬೇಕು. ಇದೇ ಪ್ರಜ್ಞಾವಂತನ ಲಕ್ಷಣ. ಪ್ರಜ್ಞಾವಂತಿಕೆ ಎಂದರೇನು ಇದು: ಇನ್ನೊಬ್ಬರ ಸಂತೋಷಕ್ಕೆ ಕಾರಣವಾಗುವುದು – ಎನ್ನುತ್ತಿದೆ ಸುಭಾಷಿತ.

ಅಧಿಕಾರಿಗಳ ಕರ್ತವ್ಯವೇ ಜನರಿಗೆ ನೆರವಾಗುವುದು. ಆ ಮೂಲಕ ಅವರ ದುಃಖವನ್ನು ಹೊಗಲಾಡಿಸಿ, ಅವರ ಜೀವನದಲ್ಲಿ ಸಂತೋಷವನ್ನು ತುಂಬುವುದು. ಹೀಗೆಯೇ ರಾಜಕಾರಣದ ಉದ್ದೇಶವೂ ಜನರಿಗೆ ಸಂತೋಷದ ಜೀವನವನ್ನು ಒದಗಿಸುವುದು. ಆದರೆ ಅಧಿಕಾರಿಗಳಾಗಲೀ ರಾಜಕಾರಣಿಗಳಾಗಲೀ ತಮ್ಮ ಈ ಕರ್ತವ್ಯವನ್ನು ನೆರವೇರಿಸುತ್ತಿದ್ದಾರೆಯೆ? ಇವರ ತಮ್ಮತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿದಿದ್ದರೆ ಸಮಾಜ ಇಂದು ಇಷ್ಟೊಂದು ಸಂಕಟದಲ್ಲಿ ಇರಬೇಕಾಗುತ್ತಿತ್ತೆ?

ಪುಣ್ಯಸಂಪಾದನೆಯ ಶ್ರೇಷ್ಠಮಾರ್ಗ ಎಂದರೆ ಅದು ದೇವರ ಪೂಜೆ ಎಂಬ ಶ್ರದ್ಧೆ ನಮ್ಮದು. ದೇವರ ಪೂಜೆಯ ಮೂಲಕ ನಮ್ಮ ಎಲ್ಲ ಪಾಪಗಳನ್ನೂ ಕಳೆದುಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ಈ ಶ್ರದ್ಧೆ ಹರಡಿದೆ. ಆದರೆ ಸುಭಾಷಿತ ಹೇಳುತ್ತಿದೆ: ನಾಲ್ಕು ಜನರ ಜೀವನಕ್ಕೆ ಸಂತೋಷವನ್ನು ನೀಡುವುದೇ ನಿಜವಾದ ದೇವರ ಪೂಜೆ.

ನಮ್ಮ ಪರಿಸರದಲ್ಲಿ ಸಂತೋಷವನ್ನು ಪಸರಿಸುವಂಥ ರೀತಿಯಲ್ಲಿ ನಮ್ಮ ನಡೆ–ನುಡಿಗಳನ್ನು ರೂಪಿಸಿಕೊಳ್ಳಬೇಕು. ಆಗಲೇ ನಮ್ಮ ಜೀವನಕ್ಕೂ ಸಂತೋಷ ಸಿಗುವುದು. ಕುಟುಂಬ ಮತ್ತು ಸಮಾಜದ ಸಂತೋಷದಲ್ಲಿಯೇ ನಮ್ಮ ಸಂತೋಷವೂ ಸೇರಿಕೊಂಡಿದೆ ಎಂಬ ಸತ್ಯವನ್ನು ನಾವು ಮರೆಯಬಾರದು.

ನಾವೆಲ್ಲರೂ ದಿಟವಾದ ಈಶ್ವರಪೂಜೆಯಲ್ಲಿ ಒಂದಾಗುವ ಈ ಸಮಾಜಯಜ್ಞ ಎಂಬ ಕರ್ತವ್ಯವೇ ಭೂಲೋಕವನ್ನೇ ಸ್ವರ್ಗವನ್ನಾಗಿಸಬಲ್ಲದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು