ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ಯೋಗಿಗಳು

Last Updated 4 ಫೆಬ್ರುವರಿ 2021, 0:56 IST
ಅಕ್ಷರ ಗಾತ್ರ

ಆಜನ್ಮಮರಣಾಂತಂ ಚ ಗಂಗಾದಿತಟಿನೀಸ್ಥಿತಾಃ ।

ಮಂಡೂಕಮತ್ಸ್ಯಪ್ರಮುಖಾ ಯೋಗಿನಸ್ತೇ ಭವಂತಿ ಕಿಮ್‌ ।।

ಇದರ ತಾತ್ಪರ್ಯ ಹೀಗೆ:

‘ಕಪ್ಪೆ, ಮೀನು ಮೊದಲಾದ ಪ್ರಾಣಿಗಳು ಗಂಗಾನದಿಯೇ ಮೊದಲಾದ ಪವಿತ್ರನದಿಗಳಲ್ಲಿ ಹುಟ್ಟುತ್ತವೆ, ಅಲ್ಲಿಯೇ ಸಾಯುವವರೆಗೂ ವಾಸಮಾಡುತ್ತವೆ. ಹೀಗೆಂದು ಅವು ಯೋಗಿಗಳು ಆಗಿಬಿಡುತ್ತವೆಯೇನು?‘

ನಿಜವಾದ ಯೋಗ ಎಂದರೆ ಏನು – ಎಂಬುದನ್ನು ಸುಭಾಷಿತ ತಿಳಿಸಿಕೊಡುತ್ತಿದೆ.

ಯೋಗ ಎಂದರೆ ಏನು? ಇದಕ್ಕೆ ಹಲವು ರೀತಿಯ ಅರ್ಥಗಳನ್ನು ಮಾಡಬಹುದು. ಸೇರುವಿಕೆ, ಕೂಡುವಿಕೆ, ತಾದಾತ್ಮ್ಯ – ಹೀಗೆಲ್ಲ ಅರ್ಥಮಾಡಬಹುದು. ಭಗವಂತನಲ್ಲಿ ಒಂದಾಗುವುದು, ಅವನ ಮಹಿಮೆಯಲ್ಲಿ ಪಾಲ್ಗೊಳ್ಳುವುದು, ಅವನ ಸಾಮೀಪ್ಯದಲ್ಲಿಯೇ ಇರುವುದು ಭಕ್ತಿಯೋಗ ಎಂದೆನಿಸಿಕೊಳ್ಳುತ್ತದೆ. ಸಾಮೀಪ್ಯದಲ್ಲಿ ಎಂದರೆ ಹತ್ತಿರ ತಾನೆ? ದೇವರು ಎಲ್ಲಿರುತ್ತಾನೆ? ದೇವಸ್ಥಾನಗಳಲ್ಲಿ ಇರುತ್ತಾನೆ, ತೀರ್ಥಕ್ಷೇತ್ರಗಳಲ್ಲಿ ಇರುತ್ತಾನೆ ಎಂಬುದು ಭಕ್ತರ ನಂಬಿಕೆ. ಹೀಗಾಗಿಯೇ ನಾವು ಸದಾ ದೇವಸ್ಥಾನಗಳಿಗೆ ಹೋಗುವುದು, ತೀರ್ಥಕ್ಷೇತ್ರಗಳನ್ನು ಸಂದರ್ಶಿಸುವುದು. ಹೀಗೆ ಮಾಡುವುದರಿಂದ ಭಕ್ತರು ಎಂದೆನಿಸಿಕೊಳ್ಳುವ ಅರ್ಹತೆ ನಮಗೆ ಒದಗುತ್ತದೆಯೆ? ಸುಭಾಷಿತ ಇಲ್ಲ ಎಂದು ಹೇಳುತ್ತಿದೆ! ಏಕೆಂದರೆ ಭಕ್ತಿ ಎನ್ನುವುದಕ್ಕೆ ಗಹನವಾದ ಅರ್ಥವೇ ಇದೆ.

ಭಕ್ತಿ ಎನ್ನುವುದನ್ನು ಪರಮಪ್ರೇಮರೂಪ ಎಂದು ಪರಂಪರೆ ವ್ಯಾಖ್ಯಾನಿಸಿದೆ. ಹೀಗಾಗಿ ಭಕ್ತಿಯೋಗ ಎಂದರೆ ಭಗವಂತನೊಂದಿಗೆ ಪ್ರೀತಿಯಿಂದ ತಾದಾತ್ಮ್ಯವನ್ನು ಸಾಧಿಸುವುದು ಎಂದು ಸರಳವಾಗಿ ಅರ್ಥಮಾಡಬಹುದು. ಆದುದರಿಂದ ನಾವು ದೇವಸ್ಥಾನಕ್ಕೋ ತೀರ್ಥಕ್ಷೇತ್ರಕ್ಕೋ ಓಡಾಡುವುದರಿಂದ ಭಕ್ತರು ಆಗುವುದಿಲ್ಲ; ಭಗವಂತನಲ್ಲಿ ನಿಜವಾದ ಪ್ರೀತಿ ಬೇಕು. ಅವನ ಸೇವೆಯಲ್ಲಿ ಶ್ರದ್ಧೆ ಮೂಡಬೇಕು. ಮನಸ್ಸಿನಲ್ಲಿ ಅವನ ಸ್ಮರಣೆಯನ್ನು ಹೊರತು ಪಡಿಸಿ ಇನ್ನೊಂದು ಯೋಚನೆ ಇರಬಾರದು. ಆಗ ಮಾತ್ರ ನಮ್ಮದು ಭಕ್ತಿ ಎನಿಸಿಕೊಳ್ಳುತ್ತದೆ; ನಮ್ಮ ಸೇವೆ ಭಕ್ತಿಯೋಗವಾಗುತ್ತದೆ. ಹೀಗಲ್ಲದೆ ಸುಮ್ಮನೆ ದೈಹಿಕವಾಗಿ ತೀರ್ಥಕ್ಷೇತ್ರಗಳಲ್ಲಿ ಸಂಚಾರಮಾಡುವುದರಿಂದಲೋ ನೆಲಸುವುದರಿಂದಲೋ ಭಕ್ತಿಯ ಫಲ ನಮಗೆ ಒದಗದು.

ಕೇವಲ ಭೌತಿಕವಾಗಿ ತೀರ್ಥಕ್ಷೇತ್ರಗಳಲ್ಲಿ ತಂಗುವುದರಿಂದಲೇ ಭಕ್ತಿಯ ಫಲ ಒದಗುವುದಾದರೆ, ಯೋಗಿಗಳು ಎನಿಸಿಕೊಳ್ಳುವುದಾದರೆ ಹೀಗೆ ಯೋಗಿಗಳು ಎಂದೆನಿಸಿಕೊಳ್ಳಲು ನಮಗಿಂತಲೂ ಹೆಚ್ಚು ಅರ್ಹತೆ ಕಪ್ಪೆ, ಮೀನುಗಳಂಥ ಪ್ರಾಣಿಗಳಿಗೆ ಇವೆ ಎಂದು ಸುಭಾಷಿತ ವ್ಯಂಗ್ಯ ಮಾಡುತ್ತಿದೆ. ಏಕೆಂದರೆ ಅವು ತೀರ್ಥಕ್ಷೇತ್ರಗಳಲ್ಲಿ ಹರಿಯುವ ನದಿಗಳಲ್ಲಿಯೇ ಹುಟ್ಟುತ್ತವೆ; ಅಷ್ಟೇಕೆ, ಸಾಯುವವರೆಗೂ ಅವು ಅಲ್ಲೇ ನೆಲಸುತ್ತವೆ ಕೂಡ. ಹೀಗೆ ತೀರ್ಥಕ್ಷೇತ್ರಗಳಲ್ಲಿ ಅವು ಹುಟ್ಟಿದ ಮಾತ್ರಕ್ಕೆ ಯಾರೂ ಅವುಗಳನ್ನು ಯೋಗಿಗಳು ಎಂದು ಕರೆಯುವುದಿಲ್ಲವಷ್ಟೆ!

ಹೀಗೆಯೇ ಸುಮ್ಮನೆ ಮಂತ್ರಿಗಳೋ ಎಂಪಿಗಳೋ ಎಂಎಲ್‌ಎಗಳೋ ಆದಮಾತ್ರಕ್ಕೆ ಜನಪ್ರತಿನಿಧಿಗಳೂ ಆಗುವುದಿಲ್ಲ, ಸಮಾಜಸೇವಕರೂ ಆಗುವುದಿಲ್ಲ. ಜನರ ಆಶೋತ್ತರಗಳನ್ನು ಎತ್ತಿಹಿಡಿಯಬೇಕು, ಸಮಾಜದ ಉದ್ಧಾರಕ್ಖಾಗಿ ಪ್ರಾಮಾಣಿಕವಾಗಿ ಸೇವೆ ಮಾಡಬೇಕು. ಅಂಥವರು ಮಾತ್ರವೇ ನಿಜವಾದ ಜನಪ್ರತಿನಿಧಿಗಳು, ಸಮಾಜಸೇವಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT