ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಒಗ್ಗಟ್ಟಿನಲ್ಲೇ ಇದೆ ಔಷಧ

Last Updated 16 ಜುಲೈ 2020, 17:02 IST
ಅಕ್ಷರ ಗಾತ್ರ

ಬಹೂನಾಮಪ್ಯಸಾರಾಣಾಂ ಸಮವಾಯೋ ಹಿ ದುರ್ಜಯಃ ।

ತೃಣೈರಾವೇಷ್ಟ್ಯತೇ ರಜ್ಜುರ್ಯಯಾ ನಾಗೋಪಿ ಬಧ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಕಡಿಮೆ ಶಕ್ತಿಯುಳ್ಳ ಅನೇಕ ವಸ್ತುಗಳು ಒಂದುಗೂಡಿದಾಗ ಅದನ್ನು ಗೆಲ್ಲುವುದು ಅಶಕ್ಯವಾಗುತ್ತದೆ; ಹುಲ್ಲುಗಳಿಂದ ಹೊಸೆಯಲ್ಪಟ್ಟ ಹಗ್ಗದಿಂದ ಆನೆಯೂ ಕೂಡ ಕಟ್ಟಲ್ಪಡುತ್ತದೆ.‘

ಒಗ್ಗಟ್ಟಿನಲ್ಲಿ ಶಕ್ತಿ ಎಂದು ಹೇಳುತ್ತಲೇ ಇರುತ್ತೇವೆ; ಆದರೆ ಅದರ ಉಪಯೋಗವನ್ನು ಮಾತ್ರ ನಾವು ಮಾಡಿಕೊಳ್ಳುವುದಿಲ್ಲ.

ಸುಭಾಷಿತ ಹೇಳುತ್ತಿರುವುದು ಒಗ್ಗಟ್ಟಿನ ಬಗ್ಗೆ.

ಹುಲ್ಲಿಗೆ ಗಟ್ಟಿತನ ಇಲ್ಲ; ಹುಲ್ಲಿನ ಒಂದು ಎಸಳಿಗೆ ಶಕ್ತಿ ಇಲ್ಲದಿರಬಹುದು. ಆದರೆ ಒಂದೊಂದೇ ಹುಲ್ಲಿನ ಎಸಳನ್ನು ಸೇರಿ ತೀಡಿದಾಗಲೇ ಹಗ್ಗ ತಯಾರಾಗುವುದು, ಅಲ್ಲವೆ? ಎಸಳಿಗೆ ಶಕ್ತಿ ಇಲ್ಲದಿರಬಹುದು, ಆದರೆ ಅದು ಹಗ್ಗವಾದಾಗ? ಶಕ್ತಿಶಾಲಿಯಾದ ಆನೆಯನ್ನೇ ಹಗ್ಗ ಕಟ್ಟಿಹಾಕಬಲ್ಲದು.

ನಮ್ಮ ಮನೆಯಲ್ಲಿ ಸಮಸ್ಯೆಯೊಂದು ಎದುರಾಗಿದೆ. ಆದರೆ ಆ ಸಮಸ್ಯೆಯನ್ನು ಒಬ್ಬರೇ ಪರಿಹರಿಸಲು ಆಗುತ್ತಿಲ್ಲ. ಆಗ ಏನು ಮಾಡಬೇಕು? ಮನೆಯವರೆಲ್ಲ ಒಂದಾಗಿ ಸಮಸ್ಯೆಯನ್ನು ಚರ್ಚಿಸಿ, ಪರಿಹಾರದ ಮಾರ್ಗವನ್ನು ಕಂಡುಕೊಳ್ಳಬೇಕು. ಒಬ್ಬರಿಂದ ಪರಿಹಾರವಾಗದ ಸಮಸ್ಯೆ ಮನೆಯವರೆಲ್ಲರ ಒಗ್ಗೂಡುವಿಕೆಯಿಂದ ಸುಲಭವಾಗಿ ಪರಿಹಾರವಾಗುತ್ತದೆ.

ಮನೆಯ ಸಮಸ್ಯೆಯಂತೆ ದೇಶಕ್ಕೂ ಸಮಸ್ಯೆ ಎದುರಾಗುವುದು ಸಹಜ. ಮನೆಯ ಸಮಸ್ಯೆಯನ್ನೇ ಒಬ್ಬರಿಂದ ಪರಿಹಾರಮಾಡಲು ಸಾಧ್ಯವಾಗದು. ಇನ್ನು ದೇಶದ ಸಮಸ್ಯೆ ಹೇಗೆ ಒಬ್ಬನಿಂದ ಪರಿಹಾರವಾದೀತು? ಹಾಗಾದರೆ ಪರಿಹಾರ ಹೇಗೆ? ನಾವೆಲ್ಲರೂ ದೇಶದ ಪ್ರಜೆಗಳು ಎಂಬುದನ್ನು ಮರೆಯಬಾರದು. ದೇಶ ಎನ್ನುವುದು ನಮ್ಮ ಕುಟುಂಬ ಎಂದು ಸ್ವೀಕರಿಸಬೇಕು. ಮನೆಯ ಸಮಸ್ಯೆಯನ್ನು ಮನೆಯವರೆಲ್ಲ ಒಂದಾಗಿ ಎದುರಿಸಿದಂತೆ ಈಗ ದೇಶದ ಸಮಸ್ಯೆಯನ್ನೂ ಪ್ರಜೆಗಳೆಲ್ಲರೂ ಒಂದಾಗಿ ಪರಿಹರಿಸಿಕೊಳ್ಳಬೇಕು. ನಮ್ಮನಮ್ಮಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಇರಬಹುದು; ಆದರೆ ಕಷ್ಟ ಬಂದಾಗ ಮೊದಲಿಗೆ ನಾವು ಅದರಿಂದ ಹೊರಗೆ ಬರುವ ದಾರಿಯ ಬಗ್ಗೆ ಯೋಚಿಸುವುದೇ ವಿವೇಕದ ಮಾರ್ಗ. ರಾಜಕೀಯವಾಗಿ ಹೇಳುವುದಾದರೆ, ಪ್ರತಿಪಕ್ಷಕ್ಕಾಗಲೀ ಆಡಳಿತಪಕ್ಷಕ್ಕಾಗಲೀ – ದೇಶವೇ, ದೇಶದ ಅಭಿವೃದ್ಧಿಯೇ ಮುಖ್ಯವಾಗಬೇಕು. ಆಗ ಮಾತ್ರವೇ ಪ್ರಜಾಪ್ರಭುತ್ವ ಅದರ ದಿಟವಾದ ಸಾರ್ಥಕತೆಯನ್ನು ಹೊಂದಲು ಸಾಧ್ಯ.

ಸದ್ಯದ ಸಮಸ್ಯೆಯ ಬಗ್ಗೆ ಆಲೋಚಿಸೋಣ. ಈಗ ಎದುರಾಗಿರುವ ಕೊರೊನಾ ಸಮಸ್ಯೆ ಒಬ್ಬ ವ್ಯಕ್ತಿ, ಒಂದು ಕುಟುಂಬ ಅಥವಾ ಒಂದು ದೇಶದ ಸಮಸ್ಯೆಯಲ್ಲ; ಇಡೀ ಜಗತ್ತಿನ ಸಮಸ್ಯೆ ಇದು. ’ಇಷ್ಟು ದೊಡ್ಡ ಸಮಸ್ಯೆಗೆ ನನ್ನೊಬ್ಬನಿಂದ, ನನ್ನಂಥ ಸಾಮಾನ್ಯನೊಬ್ಬನಿಂದ, ಪರಿಹಾರ ಹೇಗೆ ಸಾಧ್ಯ‘ ಎಂದು ನಮಗೆ ಅನಿಸಬಹುದು. ಆದರೆ ಒಬ್ಬೊಬ್ಬರಿಂದಲೇ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದನ್ನು ಮರೆಯಬಾರದು.

ಸಮಾಜದಲ್ಲಿ ನಮ್ಮೆಲ್ಲರಿಗೂ ನಿರ್ದಿಷ್ಟವಾದ ಕರ್ತವ್ಯಗಳಿರುತ್ತವೆ; ಈ ಕರ್ತವ್ಯಗಳು ಒಬ್ಬರಿಗೆ ಒಂದು ಇರಬಹುದು, ಇನ್ನೊಬ್ಬರಿಗೆ ಹತ್ತು ಇರಬಹುದು; ಆದರೆ ನಮಗೆಲ್ಲರಿಗೂ ನಮ್ಮದಾದ ಕರ್ತವ್ಯಗಳು ಇವೆ. ’ನಮಗೆ ಇಲ್ಲ‘ – ಎಂದು ಅಂದುಕೊಳ್ಳುವವರು ಮೊದಲಿಗೆ ಅವರ ಕರ್ತವ್ಯಗಳು ಏನು ಎಂಬುದನ್ನು ಕಂಡುಕೊಳ್ಳುವುದು ಆವಶ್ಯಕವೆನ್ನಿ!

ನಮ್ಮ ನಮ್ಮ ಕರ್ತವ್ಯಗಳು ಏನು ಎಂದು ನಿರ್ಧಾರವಾದ ಬಳಿಕ ಈ ಸಂದರ್ಭದಲ್ಲಿ ಅದರ ನಿರ್ವಹಣೆ ಹೇಗೆ ಎಂಬುದನ್ನು ಅರಿತುಕೊಂಡು ಅದರಂತೆ ನಡೆದುಕೊಳ್ಳಬೇಕು. ನಾವು ವೈದ್ಯರಾಗಿರಬಹುದು, ಪೊಲೀಸ್‌ ಆಗಿರಬಹುದು, ಸರ್ಕಾರೀ ಅಧಿಕಾರಿ ಆಗಿರಬಹುದು, ರಾಜಕಾರಣಿ ಆಗಿರಬಹುದು, ವ್ಯಾಪಾರಿ ಆಗಿರಬಹುದು, ಕಲಾವಿದ ಆಗಿರಬಹುದು, ಶಿಕ್ಷಕ ಆಗಿರಬಹುದು, ಪತ್ರಕರ್ತ ಆಗಿರಬಹುದು – ಎಲ್ಲರೂ ಈ ಸಂದರ್ಭದಲ್ಲಿ ಹೇಗೆ ನಡೆದುಕೊಂಡರೆ ಈ ಸಮಸ್ಯೆಗೆ ಪರಿಹಾರ ಒದಗಬಹುದೋ ಹಾಗೆ ಒಬ್ಬೊಬ್ಬರೂ ನಡೆದುಕೊಳ್ಳತಕ್ಕದ್ದು. ಹೀಗೆ ಪ್ರತಿಯೋರ್ವರು ತಮ್ಮ ಪಾಲಿನ ಕರ್ತವ್ಯವನ್ನು ವಿವೇಕದಿಂದ ನಿರ್ವಹಿಸುವುದೇ ಈ ಸಮಸ್ಯೆಯ ವಿಶಾಲಜಾಲದಲ್ಲಿ ಮಹತ್ವದ ಸಂಗತಿ. ವೈರಸ್‌ ಹರಡುವಿಕೆಯ ಮಹಾಜಾಲವನ್ನು ತುಂಡರಿಸಬೇಕಾದರೆ ನಾವೆಲ್ಲರೂ ಈ ವಿವೇಕದ ಜಾಲದಲ್ಲಿ ಒಂದಾಗಿ ಒಗ್ಗೂಡಬೇಕು. ನಮ್ಮೆಲ್ಲರ ಇಂಥ ಒಗ್ಗಟ್ಟಿನಲ್ಲೇ ಮನುಕುಲದ ಭವಿಷ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT