ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಹೆಂಡತಿ ಯಾರು? ದೇಶ ಯಾವುದು?

Last Updated 15 ಜುಲೈ 2020, 16:47 IST
ಅಕ್ಷರ ಗಾತ್ರ

ಸಾ ಭಾರ್ಯಾ ಯಾ ಪ್ರಿಯಂ ಬ್ರೂತೇ ಸ ಪುತ್ರೋ ಯತ್ರ ನಿರ್ವೃತಿಃ ।

ತನ್ಮಿತ್ರಂ ಯತ್ರ ವಿಶ್ವಾಸಃ ಸ ದೇಶೋ ಯತ್ರ ಜೀವ್ಯತೇ ।।

ಇದರ ತಾತ್ಪರ್ಯ ಹೀಗೆ:

’ಪ್ರಿಯವಾದ ಮಾತುಗಳನ್ನಾಡುವವಳು ಮಡದಿ; ಸಂತೋಷವನ್ನು ಉಂಟುಮಾಡುವವ ಮಗ; ವಿಶ್ವಾಸಕ್ಕೆ ಪಾತ್ರನಾದವನು ಮಿತ್ರ; ಎಲ್ಲಿ ಚೆನ್ನಾದ ಜೀವನ ನಡೆಯವುದೋ ಅದೇ ದೇಶ.‘

ಪ್ರಸ್ತುತ ಸಂದರ್ಭವೇ ’ಮಹಾಭಾರತ‘ದ ಈ ಶ್ಲೋಕಕ್ಕೆ ಸೊಗಸಾದ ನಿದರ್ಶನ.

ನಗರಗಳಿಂದ ಕಾರ್ಮಿಕರು ಅವರವರ ಊರುಗಳಿಗೆ ತೆರಳುತ್ತಿದ್ದಾರೆ; ಕಾರಣ ಸ್ಪಷ್ಟ: ಇಲ್ಲಿದ್ದರೆ ಜೀವನಕ್ಕೆ ದಾರಿ ಇಲ್ಲ.

ಸುಭಾಷಿತ ಇಲ್ಲಿ ಹೇಳುತ್ತಿರುವುದು ಇಂಥ ಸಂದರ್ಭಗಳನ್ನು!

ಯಾವುದೇ ವಸ್ತುವಾಗಲೀ ವ್ಯಕ್ತಿಯಾಗಲೀ ದಿಟವಾದ ಸಾರ್ಥಕತೆಯನ್ನು ಯಾವಾಗ ಹೊಂದುತ್ತದೆ? ಅದು ನಮ್ಮ ಪ್ರಯೋಜನಕ್ಕೆ ಒದಗಬೇಕು; ಅದರ ಲಕ್ಷಣದ ಉದ್ದೇಶ ನೆರವೇರಬೇಕು. ಆಗಲೇ ಅವುಗಳ ಸಾರ್ಥಕತೆ.

ಮನೆಯಲ್ಲಿ ಫ್ಯಾನ್‌ ಇದೆ ಎಂದಿಟ್ಟುಕೊಳ್ಳೋಣ. ಅದರ ಸಾರ್ಥಕತೆ ಹೇಗೆ? ಮೊದಲನೆಯದಾಗಿ ಅದು ತಿರುಗಬೇಕು; ತಿರುಗಬೇಕಾದ್ದು ಅದರ ಗುಣಗಳಲ್ಲಿ ಒಂದು. ಫ್ಯಾನ್‌ ತಿರುಗಿದರಷ್ಟೆ ಸಾಕೆ? ತಿರುಗಿದರಷ್ಟೆ ಸಾಲದು, ಅದು ತಿರುಗುತ್ತಿರಬೇಕಾದರೆ ನಮಗೆ ಗಾಳಿ ಬೀಸಬೇಕು. ಅದು ಬಿಟ್ಟು, ಗಾಳಿಯಿಲ್ಲದೆ ಸುಮ್ಮನೆ ತಿರುಗಿದರೆ ಅದು ಹೆಸರಿಗಷ್ಟೆ ’ಫ್ಯಾನ್‌‘ ಎಂದೆನಿಸಿಕೊಳ್ಳುತ್ತದೆಯೇ ವಿನಾ ’ಫ್ಯಾನ್‌‘ನ ಸಾರ್ಥಕತೆ ಅದಕ್ಕೆ ಒದಗದು.

ಸುಭಾಷಿತ ಇಲ್ಲಿ ಸಾರ್ಥಕತೆಗೆ ಮಾದರಿಗಳಾಗಿ ಕೆಲವೊಂದು ಸಂಗತಿಗಳನ್ನು ಕಾಣಿಸಿದೆ.

ಮೊದಲನೆಯದಾಗಿ ಮಡದಿ, ಎಂದರೆ ಹೆಂಡತಿ. ಯಾರು ನಿಜವಾದ ಮಡದಿ? ಪ್ರಿಯವಾದ ಮಾತುಗಳನ್ನಾಡುವವಳೇ ಮಡದಿ. ಇದು ಸುಭಾಷಿತದ ಪ್ರಿಯವಾದ ಮಾತು. ಮಡದಿಯರು ಮಾತ್ರವೇ ಪ್ರಿಯವಾದ ಮಾತುಗಳನ್ನಾಡಬೇಕೆ? ಗಂಡಂದಿರು ಒರಟು ಮಾತುಗಳನ್ನಾಡಬಹುದಾ? ಹೀಗೆಂದು ಯಾರೂ ಭಾವಿಸಬೇಡಿ. ಇಲ್ಲಿ ಮಡದಿ ಎಂದು ಹೇಳಿರುವುದರಲ್ಲಿ ಗಂಡನೂ ಸೇರುತ್ತಾನೆ. ಸಂಸಾರದಲ್ಲಿ ಸಂತೋಷ–ನೆಮ್ಮದಿಗಳು ನೆಲಸಬೇಕಾದರೆ ಗಂಡ–ಹೆಂಡತಿಯರ ನಡುವೆ ಪ್ರಿತಿ–ಸೌಹಾರ್ದತೆಗಳ ಸಂವಹನ ಚೆನ್ನಾಗಿರಬೇಕು. ಸರ್ವಜ್ಞನ ತ್ರಿಪದಿಯೊಂದು ಹೀಗಿದೆ:

ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯನರಿತು ನಡೆವ ಸತಿ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.

ಮುಂದಿನ ಪ್ರಶ್ನೆ: ಮಗ ಯಾರು? ಹೊಟ್ಟೆಯಲ್ಲಿ ಹುಟ್ಟಿದ ಮಾತ್ರಕ್ಕೆ ‘ಮಗ‘ ಎಂಬ ಪಟ್ಟ ಬರಬಹುದೆ ವಿನಾ ಅವನು ನಿಜವಾದ ಮಗನಾಗಲು ಅರ್ಹನಾಗಬೇಕಾದರೆ ಅವನು ಹೆತ್ತವರಿಗೆ ಸಂತೋಷವನ್ನು ಉಂಟುಮಾಡಬೇಕು. ಇದು ಎಲ್ಲ ಹೆತ್ತವರ ಕೋರಿಕೆಯೂ ಆಗಿರುತ್ತದೆಯಲ್ಲವೆ?

ಸ್ನೇಹಿತನ ಲಕ್ಷಣವನ್ನೂ ಸುಭಾಷಿತ ಹೇಳಿದೆ. ವಿಶ್ವಾಸಕ್ಕೆ ಪಾತ್ರನಾದವನೇ ದಿಟನಾದ ಮಿತ್ರ. ಜೊತೆಯಲ್ಲಿ ಓಡಾಡುವುದು, ಸೇರಿ ಕುಣಿಯುವುದು – ಇವಿಷ್ಟೇ ಸ್ನೇಹದ ಲಕ್ಷಣ ಅಲ್ಲ; ’ಅವನು ನಿಜವಾಗಿಯೂ ನನ್ನ ಸ್ನೇಹಿತ‘ ಎಂಬ ವಿಶ್ವಾಸ ಮೂಡುವಂತೆ ಯಾರ ವ್ಯಕ್ತಿತ್ವ ಇರುತ್ತದೆಯೋ ಅಂಥವರೇ ಸ್ನೇಹಿತ ಎಂಬ ಪದವಿಗೆ ಅರ್ಹರು.

ಕೊನೆಯದಾಗಿ, ದೇಶ – ಎಂದರೆ ನಮ್ಮ ಊರು ಯಾವುದು? ನಮ್ಮ ಜೀವನವನ್ನು ಯಾವ ಊರು ಕಟ್ಟಿಕೊಡುತ್ತದೆಯೋ ಅದೇ ನಮ್ಮ ದೇಶ. ಹುಟ್ಟಿದ ಊರಿನ ಬಗ್ಗೆ ಎಲ್ಲರಿಗೂ ತಾದಾತ್ಮ್ಯ ಇರುತ್ತದೆ. ಆದರೂ ಹುಟ್ಟೂರನ್ನು ಯಾರಾದರೂ ತೊರೆಯುವುದಾದರೂ ಏಕೆ? ಜೀವನಕ್ಕೆ ಆಶ್ರಯವನ್ನು ಹುಡುಕಿಕೊಂಡೇ ಅಲ್ಲವೆ? ಹಳ್ಳಿಯಿಂದ ಬೆಂಗಳೂರಿಗೆ ಹೋಗುವುದು, ಬೆಂಗಳೂರಿನಿಂದ ಅಮೆರಿಕಕ್ಕೆ ಹೋಗುವುದು – ಇಂಥ ವಲಸೆಗಳೆಲ್ಲವೂ ಜೀವನವನ್ನು ಕಟ್ಟಿಕೊಳ್ಳುವ ಕಾರಣದಿಂದಲೇ ನಡೆಯುವುದು. ಇಲ್ಲಿ ಜೀವನ ಇಲ್ಲ ಎಂದಾದ ಮೇಲೆ ಇನ್ನೊಂದು ಊರಿಗೆ ಪಯಣ. ಇದೇ ಅಲ್ಲವೆ ಜೀವನಪ್ರಯಾಣ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT