ಮಂಗಳವಾರ, ಮೇ 17, 2022
25 °C

ದಿನದ ಸೂಕ್ತಿ: ದೇವರಿಗೆ ಯಾರು ಪ್ರಿಯ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕಾ ದುರ್ಲಭಾ ನರಾಣಾಂ

ಹರಿಭಕ್ತಿಃ ಪಾತಕಂ ಚ ಕಿಂ ಹಿಂಸಾ ।।

ಕೋ ಹಿ ಭಗವತ್ಪ್ರಿಯಃ ಸ್ಯಾತ್‌

ಯೋನ್ಯಂ ನೋದ್ವೇಜಯೇದನುದ್ವಿಗ್ನಃ ।।

ಇದರ ತಾತ್ಪರ್ಯ ಹೀಗೆ:

‘ಜನರಿಗೆ ಯಾವುದು ದುರ್ಲಭ? ಹರಿಭಕ್ತಿ. ಯಾವುದು ಪಾಪಜನಕ? ಹಿಂಸೆ. ಯಾವನು ಭಗವಂತನಿಗೆ ಪ್ರಿಯನಾಗುತ್ತಾನೆ? ಯಾವನು ತಾನೂ ಉದ್ವೇಗಗೊಳ್ಳದೆ ಇನ್ನೊಬ್ಬರಿಗೂ ಉದ್ವೇಗವನ್ನು ಉಂಟುಮಾಡುವುದಿಲ್ಲವೋ ಅವನು.’

ದುರ್ಲಭ ಎಂದರೆ ದೊರೆಯುವುದು ಕಷ್ಟವಾದುದು ಎಂದರ್ಥ. ಜನರಿಗೆ ಯಾವುದು ದುರ್ಲಭ ಎಂದರೆ ಭಗವಂತನಲ್ಲಿ ಭಕ್ತಿ ಎಂದು ಹೇಳುತ್ತಿದೆ ಸುಭಾಷಿತ. ನಮಗೆ ಈ ಮಾತನ್ನು ಕೇಳಿ ಆಶ್ವರ್ಯವಾಗಬಹುದು. ಇಂದು ಎಲ್ಲೆಲ್ಲೂ ದೇವಾಲಯಗಳು ಭಕ್ತರಿಂದ ತುಂಬಿರುತ್ತವೆ; ತೀರ್ಥಕ್ಷೇತ್ರಗಳಲ್ಲಿ ಕಾಲಿಡುವುದಕ್ಕೂ ಸ್ಥಳವಿಲ್ಲದಷ್ಟು ಆಸ್ತಿಕರು ತುಂಬಿರುತ್ತಾರೆ. ಇಂಥದ್ದರಲ್ಲಿ ಭಕ್ತಿ ಎನ್ನುವುದು ಹೇಗೆ ದುಲರ್ಭವಾದೀತು – ಎಂದು ಅನಿಸುವುದು ಸಹಜ. ಇಲ್ಲಿ ಸುಭಾಷಿತ ಹೇಳುತ್ತಿರುವಂಥದ್ದು ನಿಜವಾದ ಭಕ್ತಿ; ಭಕ್ತಿಯ ತೋರಿಕೆ ಅಲ್ಲ.

ಸುಭಾಷಿತ ಕೇಳಿರುವ ಎರಡನೆಯ ಪ್ರಶ್ನೆ ಎಂದರೆ, ಯಾವುದರಿಂದ ಪಾಪ ಹುಟ್ಟುತ್ತದೆ? ಸುಭಾಷಿತ ಸ್ಪಷ್ಟವಾಗಿ ಹೇಳುತ್ತಿದೆ: ಹಿಂಸೆಯೇ ಪಾಪಜನಕ. ಹಿಂಸೆ ಎಂದರೆ ಏನು? ಯಾರನ್ನಾದರೂ ದೈಹಿಕವಾಗಿ ತೊಂದರೆಗೆ ಒಡ್ಡಿದರೆ ಅದನ್ನು ಹಿಂಸೆ ಎಂದು ಕರೆಯವುದು ಸಾಮಾನ್ಯವಾದ ರೂಢಿ. ಆದರೆ ಹಿಂಸೆಯ ಅರ್ಥ ಇಷ್ಟೇ ಅಲ್ಲ; ಮಾನಸಿಕವಾಗಿ ಯಾರನ್ನಾದರೂ ಸಂಕಟಕ್ಕೆ ಒಳಪಡಿಸಿದರೂ ಅದು ಹಿಂಸೆಯೇ ಎಂದೆನಿಸಿಕೊಳ್ಳುತ್ತದೆ. ಕಾರಣವಿಲ್ಲದೆ ಟೀಕಿಸುವುದು, ಬೈಯುವುದು, ಹಂಗಿಸುವುದು – ಇವೆಲ್ಲವೂ ಹಿಂಸೆಯೇ. ಇನ್ನು ಹೊಡೆಯುವುದು ಮುಂತಾದ ದೈಹಿಕ ದಾಳಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. ಹೀಗೆ ಬೇರೊಬ್ಬರನ್ನು ಹಿಂಸೆಗೆ ತುತ್ತಾಗಿಸುವುದರಿಂದ ನಮಗೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಸುಭಾಷಿತ ಹೇಳುತ್ತಿದೆ.

ಸುಭಾಷಿತ ಕೇಳುತ್ತಿರುವ ಮೂರನೆಯ ಪ್ರಶ್ನೆ ಸ್ವಾರಸ್ಯಕರವಾಗಿದೆ. ದೇವರಿಗೆ ಯಾರು ಪ್ರಿಯನಾಗುತ್ತಾನೆ? ನಮ್ಮ ತಂದೆತಾಯಿಗಳಿಗೋ ಅಣ್ಣತಮ್ಮಂದಿರಿಗೋ ಅಕ್ಕತಂಗಿಯರಿಗೋ ಕಚೇರಿಯಲ್ಲಿ ಮೇಲಧಿಕಾರಿಗೋ ಪಕ್ಷದ ಅಧ್ಯಕ್ಷರಿಗೋ – ಯಾರು ಪ್ರಿಯವಾಗುತ್ತಾರೆ ಎಂದರೆ ಸುಲಭವಾಗಿ ಹೇಳಬಹುದು. ಆದರೆ ದೇವರಿಗೆ ಯಾರು ಪ್ರಿಯ ಎಂದರೆ ಹೇಗೆ ಹೇಳುವುದು?

ಆದರೆ ಸುಭಾಷಿತ ಹೇಳುತ್ತಿದೆ: ಯಾವನು ಸ್ವಯಂ ಉದ್ವೇಗಕ್ಕೆ ಒಳಗಾಗುವುದಿಲ್ಲವೋ, ಯಾವನು ಇನ್ನೊಬ್ಬರಿಗೂ ಉದ್ವೇಗವನ್ನು ಉಂಟುಮಾಡುವುದಿಲ್ಲವೋ ಅವನು ಭಗವಂತನಿಗೆ ಪ್ರಿಯ.

ಉದ್ವೇಗ ಎಂದರೆ ದುಗುಡ, ಬುದ್ಧಿ ತನ್ನ ನೆಲೆಯನ್ನು ಕಂಡುಕೊಳ್ಳದಿರುವುದು, ವಿಚಲಿತವಾದ ಮನಸ್ಸು. ಇಂಥ ಸ್ಥಿತಿ ಯಾರಿಗೇ ಇದ್ದರೂ – ಅದು ನಮಗಾಗಲೀ ಇನ್ನೊಬ್ಬರಿಗಾಗಲೀ – ಅವರು ನೆಮ್ಮದಿಯಾಗಿರಲಾರರು; ಒಂದೋ ಅನಾಹುತಕ್ಕೆ ತುತ್ತಾಗುತ್ತಾರೆ, ಮತ್ತೊಂದೋ ಅನಾಹುತವನ್ನು ಉಂಟುಮಾಡುತ್ತಾರೆ. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ಇಂಥ ಸ್ಥಿತಿಯಿಂದ ಮುಕ್ತರಾದವರು ದೇವರಿಗೂ ಪ್ರಿಯವಾಗುತ್ತಾರೆ ಎಂದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು