ಮಂಗಳವಾರ, ಆಗಸ್ಟ್ 16, 2022
30 °C

ದಿನದ ಸೂಕ್ತಿ: ಮಹಾತ್ಮರ ವ್ರತ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕಿಂ ಶೇಷಸ್ಯ ಭರವ್ಯಥಾ ನ ವಪುಷಿ ಕ್ಷ್ಮಾಂನ ಕ್ಷಿಪತ್ಯೇಷ ಯತ್‌

ಕಿಂ ವಾ ನಾಸ್ತಿ ಪರಿಶ್ರಮೋ ದಿನಪತೇರಾಸ್ತೇನ ಯನ್ನಿಶ್ಚಲಃ ।

ಕಿಂ ತ್ವಂಗೀಕೃತಮುತ್ಸೃಜನ್‌ ಕೃಪವಣತ್‌ ಶ್ಲಾಘ್ಯೋ ಜನೋ ಲಜ್ಜತೇ

ನಿರ್ವ್ಯೂಢಂ ಪ್ರತಿಪನ್ನವಸ್ತುಷು ಸತಾಮೇತದ್ಧಿ ಗೋತ್ರವ್ರತಮ್‌ ।।

ಇದರ ತಾತ್ಪರ್ಯ ಹೀಗೆ:

‘ಆದಿಶೇಷನಿಗೆ ಶರೀರದಲ್ಲಿ ಭಾರದ ನೋವು ಇಲ್ಲವೆ? ಆದರೂ ಅವನು ಹೊತ್ತಿರುವ ಭೂಮಿಯನ್ನು ಕೆಳಗೆ ಇಳಿಸಲಿಲ್ಲ! ಸೂರ್ಯನಿಗೆ ಕಷ್ಟವಿಲ್ಲವೆ? ಆದರೂ ಅವನು ನಿಲ್ಲದೆ ಸಂಚರಿಸುತ್ತಲೇ ಇದ್ದಾನೆ! ಉತ್ತಮರಾದ ಜನರು ತಾವು ಒಪ್ಪಿಕೊಂಡ ಕೆಲಸವನ್ನು ಬಿಡಬೇಕಾದರೆ ನಾಚಿಕೆ ಪಡುತ್ತಾರೆ. ಒಪ್ಪಿಕೊಂಡ ಕೆಲಸವನ್ನು ನಿರ್ವಹಿಸುವುದೇ ಮಹಾತ್ಮರ ವ್ರತ.’

ಯಾವುದೇ ಕೆಲಸವೂ ಕಷ್ಟವಿಲ್ಲದೆ ಪೂರ್ಣವಾಗಲಾರದು. ಕೈ ಕೆಸರಾದರೆ ಮಾತ್ರವೇ ಬಾಯಿ ಮೊಸರು ಆಗಲು ಸಾಧ್ಯ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ನಾವು ಕೆಲಸವನ್ನು ಉತ್ಸಾಹದಿಂದಲೇ ಆರಂಭಿಸುತ್ತೇವೆ. ಆದರೆ ಅನಂತರದಲ್ಲಿ ಎದುರಾಗುವ ಕಷ್ಟಗಳ ಪರಂಪರೆಯಿಂದ ಎದೆಗುಂದುತ್ತೇವೆ. ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಕೆಲಸವನ್ನು ಪೂರ್ಣಗೊಳಿಸದೆಯೇ ಅಲ್ಲಿಗೆ ಅದನ್ನು ನಿಲ್ಲಿಸಿಬಿಡುತ್ತೇವೆ. ಇದು ನಮ್ಮೆಲ್ಲರ ಸಹಜ ಸ್ವಭಾವ.

ನಾವು ನಮ್ಮ ಕೆಲಸ, ಅದಕ್ಕೆ ಎದುರಾದ ಕಷ್ಟಗಳ ಬಗ್ಗೆ ಮಾತ್ರವೇ ಯೋಚಿಸುತ್ತಿರುತ್ತೇವೆ. ಆದರೆ ನಮ್ಮ ಅಸ್ತಿತ್ವ ಹಲವರ ಕಾರ್ಯವಂತಿಕೆಯ ಮೇಲೆ ನಿಂತಿರುತ್ತದೆ. ಇಡಿಯ ಪ್ರಕೃತಿಯೇ ನಮಗಾಗಿ ನಿರಂತರವಾಗಿ ತನ್ನದಾದ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಪ್ರಕೃತಿಯಾಗಲೀ ಅಥವಾ ಸಮಾಜದ ಬೇರೆ ಬೇರೆ ಕೆಲಸಗಳಲ್ಲಿ ನಿರತರಾದ ಪುರುಷರಾಗಲೀ ತಮ್ಮ ಕರ್ತವ್ಯಗಳನ್ನು ನಿಲ್ಲಿಸಬಿಟ್ಟರೆ ಆಗ ನಮ್ಮ ಪರಿಸ್ಥಿತಿ ಏನಾದೀತು? ಇದನ್ನೇ ಸುಭಾಷಿತ ಇಲ್ಲಿ ಎಚ್ಚರಿಸುತ್ತಿರುವುದು. (ಇಲ್ಲಿ ಪುರುಷರು ಎಂದರೆ ಗಂಡಸರು ಎಂದಲ್ಲ; ಇಡಿಯ ಮಾನವಕುಲ ಎಂದು ಅರ್ಥ.)

ಸುಭಾಷಿತ ಇಲ್ಲಿ ಒಂದೆರಡು ಉದಾಹರಣೆಗಳನ್ನೂ ನೀಡಿದೆ: ಆದಿಶೇಷನಿಗೆ ಶರೀರದಲ್ಲಿ ಭಾರದ ನೋವು ಇಲ್ಲವೆ? ಆದರೂ ಅವನು ಹೊತ್ತಿರುವ ಭೂಮಿಯನ್ನು ಕೆಳಗೆ ಇಳಿಸಲಿಲ್ಲ! ಸೂರ್ಯನಿಗೆ ಕಷ್ಟವಿಲ್ಲವೆ? ಆದರೂ ಅವನು ನಿಲ್ಲದೆ ಸಂಚರಿಸುತ್ತಲೇ ಇದ್ದಾನೆ! 

ನಮ್ಮ ಭೂಮಿಯನ್ನು ಆದಿಶೇಷ ಹೊತ್ತಿದ್ದಾನೆ – ಎಂಬುದು ನಮ್ಮ ಸಂಸ್ಕೃತಿಯ ನಂಬಿಕೆ. ನಮಗೆ ನಾಲ್ಕಾರು ಕೆಜಿಗಳನ್ನು ಒಂದೆರಡು ಗಂಟೆಗಳ ಕಾಲ ಹೊತ್ತರೂ ಮೈ–ಕೈ ನೋವು ಆರಂಭವಾಗುತ್ತದೆ. ಹೀಗಿದ್ದರೂ ಸೃಷ್ಟಿ ಆರಂಭವಾದ ದಿನದಿಂದಲೂ ಒಂದು ಕ್ಷಣವೂ ತಪ್ಪಿಸದೆ ಈ ಭೂಮಿಯನ್ನು ಹೊತ್ತುನಿಂತಿರುವ ಆದಿಶೇಷ ತನಗೆ ಮೈಕೈ ನೋವು ಎಂದು ಭೂಮಿಯನ್ನು ಹೊರವುದನ್ನು ತಪ್ಪಿಸಿದರೆ ಆಗ ನಮ್ಮ ಭೂಮಂಡಲದ ಪರಿಸ್ಥಿತಿ ಹೇಗಿರುತ್ತದೆ? ಅಂತೆಯೇ ಸೂರ್ಯ ಕೂಡ ನಿರಂತರವಾಗಿ ನಮಗೆ ಬೆಳಕು ಮತ್ತು ಶಾಖಗಳನ್ನು ಕೊಡುತ್ತಲೇ ಇದ್ದಾನೆ; ಇದಕ್ಕಾಗಿ ಅವನು ಸದಾ ಸುತ್ತುತ್ತಲೇ ಇರುತ್ತಾನೆ. ಒಂದೆರಡು ಕಿಲೋಮೀಟರ್‌ಗಳನ್ನು ನಡೆದರೂ ನಮಗೆ ಆಯಾಸ ಆರಂಭವಾಗುತ್ತದೆ. ಹೀಗಿರುವಾಗ ಲಕ್ಷಾಂತರ ವರ್ಷಗಳಿಂದ ಸೂರ್ಯ ನಮಗಾಗಿ ಒಂದು ಕ್ಷಣವೂ ನಿಲ್ಲದೆ ಸುತ್ತುತ್ತಲೇ ಇದ್ದಾನೆ. ಅವನೇನಾದರೂ ಒಂದು ದಿನ ತನ್ನ ಸುತ್ತಾಟವನ್ನು ನಿಲ್ಲಿಸಿದರೆ ಆಗ ನಮ್ಮ ಗತಿ ಏನಾಗಬಹುದು?

ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ಹಿಡಿದ ಕೆಲಸವನ್ನು, ಎಷ್ಟೇ ಅಡ್ಡಿ–ಆತಂಕಗಳು ಎದುರಾದರೂ, ಮಧ್ಯೆ ನಿಲ್ಲಿಸದೆ ಅದನ್ನು ಪೂರ್ಣಗೊಳಿಸುವವನೇ ನಿಜವಾದ ಮಹಾತ್ಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು