ಭಾನುವಾರ, ಆಗಸ್ಟ್ 14, 2022
26 °C

ದಿನದ ಸೂಕ್ತಿ: ಪಾಪವೂ ನಿಮ್ಮದೇ ಪುಣ್ಯವೂ ನಿಮ್ಮದೇ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಏಕಃ ಪ್ರಸೂಯತೇ ಜಂತುರೇಕ ಏವ ಪ್ರಲೀಯತೇ ।

ಏಕೋsನುಭುಂಕ್ತೇ ಸುಕೃತಮೇಕ ಏವ ಚ ದುಷ್ಕೃತಮ್‌ ।।

ಇದರ ತಾತ್ಪರ್ಯ ಹೀಗೆ:

’ಪ್ರಾಣಿಯು ಲೋಕದಲ್ಲಿ ಏಕಾಕಿಯಾಗಿ ಹುಟ್ಟುತ್ತಾನೆ; ಸಾಯುವುದು ಕೂಡ ಒಬ್ಬನೇ. ಒಬ್ಬನೇ ತಾನು ಮಾಡಿದ ಪುಣ್ಯವನ್ನು ಅನುಭವಿಸುತ್ತಾನೆ; ಹೀಗೆಯೇ ಕೆಟ್ಟದ್ದನ್ನೂ ತಾನೇ ಅನುಭವಿಸುತ್ತಾನೆ.’

ಮೇಲ್ನೋಟಕ್ಕೆ ಈ ಸುಭಾಷಿತ ನೈರಾಶ್ಯವನ್ನು ಹೇಳುತ್ತಿದೆ ಎಂದೆನಿಸುತ್ತದೆ. ಆದರೆ ಆಲೋಚಿದರೆ ಗೊತ್ತಾಗುತ್ತದೆ, ಇದು ವಾಸ್ತವವನ್ನು ಮಾತನಾಡುತ್ತಿದೆ, ಆದರ್ಶವನ್ನೂ ಬೋಧಿಸುತ್ತಿದೆ.

ಮನುಷ್ಯ ಹುಟ್ಟುವುದು ಒಂಟಿಯಾಗಿಯೇ. ಅವನು ಹತ್ತು ಜನರಿರುವ ಮನೆಯಲ್ಲಿ ಹುಟ್ಟಿರಬಹುದು. ಆದರೆ ಹುಟ್ಟುವುದು ಮಾತ್ರ ಒಂಟಿಯಾಗಿಯೇ. ಹೀಗೆಯೇ ಅವನು ಜೀವನದಲ್ಲಿ ಸಾವಿರ ಜನರ ಮಧ್ಯೆ ಇರಬಹುದು; ಆದರೆ ಸಾಯುವುದು ಕೂಡ ಒಂಟಿಯಾಗಿಯೇ. ಇದು ಸೃಷ್ಟಿಯ ನಿಯಮ. ನಮ್ಮಿಂದ ಈ ನಿಯಮವನ್ನು ಬದಲಾಯಿಸಲು ಶಕ್ಯವಿಲ್ಲ.

ಹಾಗಾದರೆ ಈಗ ನಾವು ಏನು ಮಾಡಬೇಕು? ಸುಭಾಷಿತ ನಮ್ಮನ್ನು ಹೆದರಿಸುತ್ತಿದೆಯೆ?

ಹುಟ್ಟನ್ನು ಮತ್ತು ಸಾವನ್ನು ಹೇಳಿದ ಮೇಲೆ ಸುಭಾಷಿತ ಏನನ್ನು ಹೇಳಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.

‘ಒಬ್ಬನೇ ತಾನು ಮಾಡಿದ ಪುಣ್ಯವನ್ನು ಅನುಭವಿಸುತ್ತಾನೆ; ಹೀಗೆಯೇ ಕೆಟ್ಟದ್ದನ್ನೂ ತಾನೇ ಅನುಭವಿಸುತ್ತಾನೆ’ – ಇದು ಸುಭಾಷಿತದ ಮುಂದಿನ ಮಾತು.

ನಾವು ಹೇಗೆ ಒಬ್ಬರೇ ಹುಟ್ಟಿ, ಒಬ್ಬರೇ ಸಾಯುತ್ತೇವೆಯೋ ಹಾಗೆಯೇ ನಾವು ಮಾಡುವ ಪಾಪ–ಪುಣ್ಯಗಳ ಫಲವನ್ನೂ ಒಬ್ಬರೇ ಅನುಭವಿಸಬೇಕಾಗುತ್ತದೆ – ಎಂಬುದು ಇದರ ಅರ್ಥ.

ಒಳ್ಳೆಯ ಕೆಲಸವನ್ನು ಮಾಡಿದರೆ ಪುಣ್ಯ ಬರುತ್ತದೆ, ಕೆಟ್ಟ ಕೆಲಸವನ್ನು ಮಾಡಿದರೆ ಪಾಪ ಬರುತ್ತದೆ – ಎಂಬುದು ನಮ್ಮ ನಂಬಿಕೆ. ನಾವು ಬಹುಪಾಲು ಸಮಯದಲ್ಲಿ ಒಳ್ಳೆಯ ಕೆಲಸವನ್ನು ಮಾಡುವುದಾಗಲೀ, ಕೆಟ್ಟ ಕೆಲಸವನ್ನು ಮಾಡುವುದಾಗಲೀ ನಮ್ಮ ಕುಟುಂಬದವರಿಗಾಗಿಯೋ ನಮ್ಮ ಆತ್ಮೀಯರಿಗಾಗಿಯೇ ಆಗಿರುತ್ತದೆಯಷ್ಟೆ. ನಮ್ಮ ಈ ಕೆಲಸಗಳಿಂದ ಅವರಿಗೆ ಒಳ್ಳೆಯದೋ ಕೆಟ್ಟದ್ದೋ ಆಗಬಹುದು, ಸಂತೋಷವೋ ದುಃಖವೋ ಆಗಬಹುದು. ಆದರೆ ಈ ಕೆಲಸಗಳ ನಿಜವಾದ ಫಲವನ್ನು ಅನುಭವಿಸಬೇಕಾದವರು ನಾವೇ. ಇದನ್ನೇ ಸುಭಾಷಿತ ಹೇಳುತ್ತಿರುವುದು. ನಾವು ಈ ಕೂಡಲೇ ಕಣ್ಣಿಗೆ ಕಾಣುವ ಸುಖ–ದುಃಖಗಳನ್ನು ಮಾತ್ರವೇ ಗಮನದಲ್ಲಿಟ್ಟುಕೊಂಡು ಕೆಲಸಗಳಲ್ಲಿ ತೊಡಗುತ್ತೇವೆ. ಆದರೆ ಅವು ಕಣ್ಣಿಗೆ ಕಾಣದ ಫಲಗಳನ್ನು, ಅದೂ ನಮ್ಮ ಪಾಪ–ಪುಣ್ಯಗಳ ಖಾತೆಯಲ್ಲಿ ಜಮೆ ಆಗುತ್ತಿರುತ್ತದೆ; ಅದನ್ನು ನಾವು ಮರೆಯಬಾರದು.

ಆದುದರಿಂದ ನಾವು ನಮ್ಮ ಹೆಂಡತಿ–ಮಕ್ಕಳೋ, ಅಪ್ಪ–ಅಮ್ಮ, ಮಗ–ಸೊಸೆ, ಪಾರ್ಟಿ–ಪಂಥ ಚೆನ್ನಾಗಿರಲೆಂದು ಮಾಡಬಾರದ ಕೆಲಸಗಳನ್ನು ಮಾಡಿದರೆ, ಇಂದಲ್ಲ ನಾಳೆ, ಅವುಗಳ ಫಲವನ್ನು ಮಾತ್ರ ನಾವೇ ಅನುಭವಿಸಬೇಕಾಗುತ್ತದೆ. ಹೀಗಾಗಿ ಎಚ್ಚರದಿಂದ ನಡೆದುಕೊಳ್ಳಿ; ಪಾಪ–ಪುಣ್ಯಗಳ ಬಗ್ಗೆ ಆಲೋಚಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು