ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಯಾತ್ರೆ | ನೋಡು ಬಾರಾ ಕಬೀರ್‌ ವಾಡಾ!

Published 4 ಜೂನ್ 2023, 0:19 IST
Last Updated 4 ಜೂನ್ 2023, 0:19 IST
ಅಕ್ಷರ ಗಾತ್ರ

ಡಾ. ಕೆ.ಎಸ್.ಚೈತ್ರಾ

ಭಾರತೀಯ ಅಧ್ಯಾತ್ಮ ಪರಂಪರೆಯ ಜೊತೆಗೆ ಸಾಹಿತ್ಯದಲ್ಲೂ ಸಂತ ಕಬೀರರದ್ದು ಮಹತ್ವದ ಸ್ಥಾನ. ಅಸಮಾನತೆಯ ವಿರುದ್ಧ ಸಿಡಿದೆದ್ದು ಶೋಷಣೆಯನ್ನು ಅತ್ಯಂತ ಕಟುವಾಗಿ ಟೀಕಿಸಿದರೂ ಸಾಮಾನ್ಯರೊಂದಿಗೆ ಬೆರೆತ ಕವಿ, ಸಂತ, ಗುರುವಿನ ವಾಡೆಯೊಂದು ಗುಜರಾತ್‌ನ ವಡೋದರದಿಂದ ಸುಮಾರು ಅರವತ್ತೈದು ಮೈಲಿ ದೂರದಲ್ಲಿ ನರ್ಮದೆ ತಟದಲ್ಲಿದೆ...

ಭಾರತೀಯ ಅಧ್ಯಾತ್ಮ ಪರಂಪರೆಯ ಜೊತೆಗೆ ಸಾಹಿತ್ಯದಲ್ಲೂ ಸಂತ ಕಬೀರರದ್ದು ಮಹತ್ವದ ಸ್ಥಾನ. ಅಸಮಾನತೆಯ ವಿರುದ್ಧ ಸಿಡಿದೆದ್ದು ಶೋಷಣೆಯನ್ನು ಅತ್ಯಂತ ಕಟುವಾಗಿ ಟೀಕಿಸಿದರೂ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜನರೊಂದಿಗೆ ಬೆರೆತು ಅವರ ಪ್ರೀತಿ ವಿಶ್ವಾಸವನ್ನು ಗಳಿಸಿದ ಕವಿ, ಸಂತ, ಗುರು ಮತ್ತು ಮಾನವೀಯತೆಯ ಸಾಕಾರ ಮೂರ್ತಿ ಕಬೀರರು. ಹದಿನೈದನೇ ಶತಮಾನದಲ್ಲಿದ್ದ ಸಂತಕಬೀರರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಿದರು, ಸಮಾನತೆಯ ಬೆಳಕನ್ನು ಬೀರಿದರು.
ಲೋಕಸಂಚಾರಿಯಾಗಿದ್ದ ಕಬೀರರು ಭಾರತದಲ್ಲಿ ಅಷ್ಟೆ ಅಲ್ಲ ಮಧ್ಯಪ್ರಾಚ್ಯ ರಾಷ್ಟ್ರದ ಮೆಕ್ಕಾ, ಪೇಶಾವರ್, ಲಾಹೋರ್, ಕಾಬುಲ್ ಹೀಗೆ ಸಾಕಷ್ಟು ದೂರ ಪ್ರವಾಸವನ್ನು ಕೈಗೊಂಡಿದ್ದರು ಎಂದು ಹೇಳಲಾಗುತ್ತದೆ. ಜನಜೀವನ ಅರಿಯುವುದರ ಜತೆ ಅಲ್ಲಿನ ಅರಸರು, ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರ ಜತೆ ಜತೆ ವಿಚಾರ ವಿನಿಮಯ, ಚರ್ಚೆ ಅವರ ಉದ್ದೇಶವಾಗಿತ್ತು. ನಿಖರವಾಗಿ ಅವರ ಪಯಣದ ಹಾದಿಯನ್ನು ಗುರುತಿಸಲು ಸಾಧ್ಯವಿಲ್ಲವಾದರೂ ಭಾರತದಲ್ಲಿ,ಗುಜರಾತ್ ಅವರು ಸಂದರ್ಶಿಸಿದ ಪ್ರಮುಖ ಸ್ಥಾನವಾಗಿತ್ತು. ಕಬೀರರು ಕ್ರಿ.ಶ 1440 ರಲ್ಲಿ ಮತ್ತು ಐವತ್ತು ವರ್ಷಗಳ ನಂತರ 1490ರಲ್ಲಿ ಒಟ್ಟು ಎರಡು ಬಾರಿ ಗುಜರಾತ್‍ಗೆ ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಅದರಲ್ಲಿಯೂ ಅವರ ಎರಡನೇ ಪಯಣ ಬಹಳ ಮುಖ್ಯವಾಗಿತ್ತು. ಗ್ಯಾನಿ ಸಾಹೇಬ್, ನಿರ್ವಾನ್‍ಜಿ ಮಹಾರಾಜ್ ಮುಂತಾದ ಧಾರ್ಮಿಕ ಗುರುಗಳೊಡನೆ ಅವರ ಭೇಟಿ ನಡೆದಿತ್ತು. ಸಂತ ಕಬೀರರ ಜೀವನ ಮತ್ತು ಬೋಧನೆ ಆಧಾರಿತ ‘ಕಮಲ್ ಬೋಧ್’ ಎನ್ನುವ ಕೃತಿಯಲ್ಲಿ ಇದರ ಬಗ್ಗೆ ಉಲ್ಲೇಖವಿದೆ.ಹಾಗೆ ಅವರು ಸಂದರ್ಶಿಸಿದ್ದ ಸಮಯದಲ್ಲಿ ಕೆಲಕಾಲ ತಂಗಿದ್ದ ಪುಣ್ಯಭೂಮಿ ದೊಡ್ಡ ಆಲದ ಮರವಿರುವ ಕಬೀರ್‍ವಾಡಾ ! ಗುಜರಾತಿನ ಭರೂಚ್ ನಗರದಿಂದ ಹದಿನೈದು ಕಿಮೀ ದೂರದಲ್ಲಿ , ಅರಬ್ಬಿ ಸಮುದ್ರವನ್ನು ಸೇರುವ ನರ್ಮದಾ ನದಿಯ ತೀರದಲ್ಲಿ ಇರುವ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಿದು. ವಾಡ್ ಎಂದರೆ ಗುಜರಾತಿಯಲ್ಲಿ ಆಲದ ಮರ ಎಂದರ್ಥ. ಅಲೆಕ್ಸಾಂಡರ್‍ನ ಸೇನಾಧಿಪತಿ ಆಗಿದ್ದ ನಿಯರ್‍ಕಸ್ ನರ್ಮದಾ ನದಿಯ ತೀರದಲ್ಲಿದ್ದ ಆಲದ ಮರಗಳ ಗುಂಪನ್ನು ವರ್ಣಿಸಿದ್ದಾನೆ. ವಿಶಾಲವಾಗಿ ಹರಡಿದ್ದ ಆ ಮರದ ಕೆಳಗಡೆ ಏಳು ಸಾವಿರ ಜನ ಆಶ್ರಯ ಪಡೆಯಬಹುದಿತ್ತು ಎಂದು ಉಲ್ಲೇಖಿಸಿದ್ದಾನೆ. ಹದಿನೆಂಟನೇ ಶತಮಾನದಲ್ಲಿ ಜೇಮ್ಸ್ ಫೋಬ್ರ್ಸ್ ತನ್ನ ಓರಿಯೆಂಟಲ್ ಮೆಮಾಯರ್ಸ್ ಕೃತಿಯಲ್ಲಿ ಮೂರುಸಾವಿರಕ್ಕೂ ಹೆಚ್ಚು ರೆಂಬೆಗಳನ್ನು ಹೊಂದಿದ ಎರಡು ಸಾವಿರ ಅಡಿ ಸುತ್ತಳತೆಯ ಈ ವೃಕ್ಷ ಸಮೂಹವನ್ನು ಬಣ್ಣಿಸಿದ್ದಾನೆ.

ಕಬೀರ್‌ ವಾಡಾ ಬಳಿಯಿರುವ ದೊಡ್ಡಾಲದ ಮರ
ಕಬೀರ್‌ ವಾಡಾ ಬಳಿಯಿರುವ ದೊಡ್ಡಾಲದ ಮರ


ದೊಡ್ಡಾಲದ ಮರ!
ವಡೋದರದಿಂದ ಸುಮಾರು ಅರವತ್ತೈದು ಮೈಲಿ ದೂರದಲ್ಲಿರುವ ಶುಕ್ಲತೀರ್ಥದಲ್ಲಿ ಎರಡು ಸಾವಿರ ವರ್ಷಗಳಷ್ಟು ಪುರಾತನ ಶಿವಮಂದಿರವಿದೆ. ಇಲ್ಲಿಂದ ನರ್ಮದಾ ನದಿಯಲ್ಲಿ ದೋಣಿಯ ಮೂಲಕ ಕಬೀರ್‍ವಾಡಾ ತಲುಪಬಹುದು. ಪ್ರತಿ ಅರ್ಧ ಗಂಟೆಗೊಮ್ಮೆ ದೋಣಿ ಸಂಚಾರ ಲಭ್ಯವಿದೆ. ದೋಣಿ ಪಯಣಕ್ಕೆ ಸುಮಾರು ನೂರು ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಭರೂಚ್‍ನ ಸಮೀಪದ ಮಂಗಳೇಶ್ವರ ಎನ್ನುವ ಹಳ್ಳಿಯ ಪಕ್ಕದಲ್ಲಿ ನರ್ಮದಾ ನದಿ ಎರಡು ಕವಲಾಗಿ ಹರಿದು ಮಧ್ಯದಲ್ಲೊಂದು ದ್ವೀಪ ನಿರ್ಮಾಣವಾಗಿದೆ. ಅದೇ ಕಬೀರ್‍ವಾಡ್. ದೋಣಿಯಿಂದ ಇಳಿದು ನದಿತೀರದಲ್ಲಿ ಮುಕ್ಕಾಲು ಕಿಮೀ ನಡೆಯುತ್ತಿದ್ದಂತೆ ಕಾಣುತ್ತದೆ ಮೂರುವರೆ ಎಕರೆ ವಿಸ್ತೀರ್ಣದಲ್ಲಿ ಹರಡಿ ನಿಂತಿರುವಂತಹ ಈ ವಿಶಾಲ ಆಲದ ಮರ. ಈ ಮರದ ಕಾಂಡಗಳು ಬಿಳಿ ಮತ್ತು ಕೆಂಪು ಬಣ್ಣಗಳನ್ನು ಸಮವಸ್ತ್ರದಂತೆ ಧರಿಸಿ ಶಿಸ್ತಾಗಿ ನಿಂತಿವೆ. ಈ ರೀತಿ ಬಣ್ಣ ಬಳಿಯುವುದರ ಹಿಂದೆ ನಾಲ್ಕು ಉದ್ದೇಶಗಳಿವೆ. ಹಳೆಯದಾದಂತೆ ಗಿಡಗಳಲ್ಲಿ ಬಿರುಕುಗಳು ಕಾಣ ಸಲಾರಂಭಿಸುತ್ತದೆ ಇವುಗಳಿಂದ ಗಿಡ ದುರ್ಬಲವಾಗುತ್ತದೆ ಹೀಗಾಗಿ ಬಿರುಕುಗಳನ್ನು ಮುಚ್ಚಿ ಗಿಡವನ್ನು ದೃಢವಾಗಿಸಲು ಬಣ್ಣವನ್ನು ಬಳಸಲಾಗುತ್ತದೆ. ಹಾಗೆಯೇ ಗಿಡ ಹಳೆಯದಾದಷ್ಟು ಅವುಗಳಿಗೆ ಗೆದ್ದಲು ಅಥವಾ ಇನ್ನಿತರ ಕೀಟಗಳು ಹಿಡಿಯುವ ಸಾಧ್ಯತೆ ಹೆಚ್ಚು. ಹೀಗೆ ಬಣ್ಣ ಬಳಿದಾಗ ಅವುಗಳಿಗೆ ಒಳಹೊಕ್ಕಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಗಿಡಗಳಿಗೆ ಬಿಳಿ ಬಣ್ಣವನ್ನು ಬಳಿದಾಗ ರಾತ್ರಿಯಲ್ಲಿಯೂ ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಕಡೆಯದಾಗಿ ಬಿಸಿಲಿನ ಧಗೆ ಹೆಚ್ಚಿರುವ ಗುಜರಾತ್‍ನಲ್ಲಿ ಬಿಳಿಬಣ್ಣ ಉಷ್ಣವನ್ನು ತಗ್ಗಿಸುತ್ತದೆ.


ವಿಶಾಲವಾಗಿ ಹಬ್ಬಿ ನಿಂತಿರುವ ಈ ಆಲದ ಮರವನ್ನು ನೋಡುವುದೇ ಕಣ್ಣಿಗೆ ಹಬ್ಬ. ರೆಂಬೆ ಕೊಂಬೆಗಳು ಒಂದಕ್ಕೊಂದು ಹೆಣೆದುಕೊಂಡು, ಬಿಳಲುಗಳು ಆಸರೆಯಾಗಿ ಬಗ್ಗಿ, ತಗ್ಗಿ, ಹರಡಿ ನಿಂತಿರುವ ಈ ಆಲದ ಮರದ ಮೂಲ ಕೊಂಬೆ ಯಾವುದು ಎಂದು ಹೇಳಲು ಅಸಾಧ್ಯ. ಕೊಡೆಯಂತೆ ಹಬ್ಬಿ ನಿಂತಿರುವ ಆಲದ ಮರಗಳ ನಡುವೆ ಮೂಡುವ ಬಿಸಿಲುಕೋಲು, ಪ್ರಶಾಂತ-ಸ್ವಚ್ಛ ಪರಿಸರ ಮತ್ತು ನದಿತೀರದಿಂದ ಬೀಸುವ ಗಾಳಿ ಇವೆಲ್ಲವೂ ಪ್ರಕೃತಿ ಪ್ರಿಯರಿಗೆ ಖುಷಿಯನ್ನು ನೀಡುತ್ತದೆ. ಮರದ ನಡುವಲ್ಲಿ ಅಲ್ಲಲ್ಲಿ ಮಕ್ಕಳ ಆಟಕ್ಕೆ ಅನುಕೂಲ ಮಾಡಿರುವ ಸಾಧನಗಳು, ವೀಕ್ಷಿಸಲು ಬೆಂಚುಗಳ ವ್ಯವಸ್ಥೆ, ತಿಂಡಿಗಳನ್ನು ಮಾರುವ ಸಣ್ಣಪುಟ್ಟ ಅಂಗಡಿಗಳು ಇವೆಲ್ಲವೂ ಪ್ರವಾಸಿಗರಿಗೆ ಅಚ್ಚುಮೆಚ್ಚು. ಎಲ್ಲಕ್ಕಿಂತ ಮಿಗಿಲಾಗಿ ಕಬೀರರು ವಾಸವಾಗಿದ್ದ ಸ್ಥಳ ಎನ್ನುವಂತದ್ದು ಧನ್ಯತಾಭಾವವನ್ನು ಮೂಡಿಸುತ್ತದೆ. ಇದೇ ದ್ವೀಪದಲ್ಲಿಯೇ ಕಬೀರರ ಮೂರ್ತಿಯನ್ನು ಇಟ್ಟಿರುವ ಕಮಲ ವಿನ್ಯಾಸದ ದೇವಸ್ಥಾನವು ಇದೆ. ಎರಡು ಅಂತಸ್ತಿನ ಈ ದೇಗುಲದಲ್ಲಿ ಕಬೀರರಿಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಸುತ್ತಲೂ ಗೋಡೆಗಳಲ್ಲಿ ಹಾಕಲಾಗಿದೆ.


ದಂತ ಕಥೆ
ಒಂದು ದಂತಕಥೆಯ ಪ್ರಕಾರ ಈ ಸ್ಥಳದಲ್ಲಿ ಸಂತ ಕಬೀರರು ಹಲವು ಕಾಲ ತಂಗಿದ್ದು ಧ್ಯಾನ ಮಾಡುತ್ತಿದ್ದರು. ಆಗ ಅವರು ಹಲ್ಲುಜ್ಜಲು ಬಳಸಿ ಬಿಸಾಡಿದ ಒಣ ಮಸ್ವಾಕ್ (ಗೋಣ ಮರದ) ಕಡ್ಡಿಯು ಅವರ ಮಹಿಮೆಯಿಂದಾಗಿ ಚಿಗುರಿ ಈ ಬೃಹತ್ ಆಲದ ಮರವಾಯಿತು.

ಮತ್ತೊಂದು ಹೀಗಿದೆ; ಸುಮಾರು ಐದು ನೂರು ವರ್ಷಗಳ ಹಿಂದೆ ಶುಕ್ಲತೀರ್ಥ ಎನ್ನುವ ಈ ಪುಟ್ಟ ಹಳ್ಳಿಯಲ್ಲಿ ಕೆಲವೇ ಮನೆಗಳಿದ್ದವು. ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಸಹೋದರರಾದ ಜೀವ ಮತ್ತು ತತ್ವಜರಿಗೆ ಧಾರ್ಮಿಕ ಪ್ರವಚನಗಳನ್ನು ಆಲಿಸಿ, ಬಲು ದುರ್ಲಭವಾದ ಮಾನವ ಜನ್ಮವನ್ನು ಸಫಲಗೊಳಿಸಿಕೊಳ್ಳಬೇಕಾದರೆ ಪರಿಪೂರ್ಣ ಸಂತನ ಕರುಣೆ ಅಗತ್ಯ ಎಂಬುದನ್ನು ಅರಿತಿದ್ದರು. ಆದರೆ ಅಂತವರನ್ನು ಹುಡುಕುವುದೆಲ್ಲಿ ? ಹಾಗಾಗಿಯೇ ತಾವೇ ಒಂದು ನಿರ್ಧಾರಕ್ಕೆ ಬಂದರು. ಆಲದ ಮರದ ಒಣಗಿದ ರೆಂಬೆಯನ್ನು ಮನೆಯ ಮುಂದಿನ ಖಾಲಿ ಜಾಗದಲ್ಲಿ ನೆಟ್ಟರು. ತಮ್ಮಲ್ಲಿಗೆ ಬರುವ ಎಲ್ಲಾ ಧಾರ್ಮಿಕ ಗುರುಗಳು ಸಂತರ ಪಾದವನ್ನು ತೊಳೆಯವ ಕ್ರಮ ಮೊದಲಿನಿಂದಲೂ ಜಾರಿಯಲ್ಲಿತ್ತು. ಅಂತಹ ಪವಿತ್ರ ಪಾದಜಲವನ್ನು ಈ ರೆಂಬೆಗೆ ಹಾಕಿದಾಗ ಯಾರ ಪುಣ್ಯ ಬಲದಿಂದ ಒಣಗಿದ ರೆಂಬೆ ಚಿಗುರುಗುವುದೋ ಅವರು ಪರಿಪೂರ್ಣ ಸಂತ. ಅಂತವರಿಂದ ದೀಕ್ಷೆಯನ್ನು ತೆಗೆದುಕೊಳ್ಳೋಣ ಎಂದು ನಿರ್ಧರಿಸಿದರು.

ಅದೇ ಪ್ರಕಾರ ಎಲ್ಲಾ ಧಾರ್ಮಿಕ ಗುರು/ಸಂತರ ಪಾದವನ್ನು ತೊಳೆದು ಆ ನೀರನ್ನು ರೆಂಬೆಗೆ ಹಾಕಿದರೂ ಚಿಗುರುವ ಬದಲು ಅದು ಕೊಳೆತು ನಾರಲಾರಂಭಿಸಿತು. ಅನೇಕ ವಾರಗಳ ಕಾಲ ಇದು ನಡೆದಾಗ ಸಹೋದರರು ಚಿಂತೆಗೀಡಾದರು. ಆಗ ಬಂದವರು ಕಬೀರ. ಅವರ ಪಾದ ಜಲದಿಂದ ಒಣಗಿದ ರೆಂಬೆ ಚಿಗುರಿ ಹಸಿರಾಗಿ ನಳನಳಿಸಿತು. ಪರಿಪೂರ್ಣ ಸಂತನನ್ನು ಕಂಡ ಸಹೋದರರು ಕಬೀರರನ್ನು ತಮ್ಮ ಗುರುವಾಗಿ ಸ್ವೀಕರಿಸಿ ದೀಕ್ಷೆಯನ್ನು ಪಡೆದರು. ಚಿಗುರಿದ ಆ ರೆಂಬೆ ಈಗಿನ ದೊಡ್ಡಾಲದ ಮರ!!


ಈ ಕಥೆ ಕೇಳುತ್ತಾ, ಕಡ್ಲೆಕಾಯಿ ತಿನ್ನುತ್ತಾ, ತಂಪಾದ ನೆರಳಿನಲ್ಲಿ ನಡೆಯುತ್ತಿದ್ದೆ. ಚಿಲಿಪಿಲಿಗುಡುವ ಹಕ್ಕಿಗಳು, ಜಿಗಿದಾಡುವ ಮಂಗಗಳು, ಚಿನ್ನಾಟವಾಡುವ ಅಳಿಲು ಇವೆಲ್ಲಾ ನೋಡಿ ನನಗೆ

‘ದೊಡ್ಡವರಾದರೆ ಏನು ಬಂತು? ಖರ್ಜೂರದ ಮರದಂತೆ!
ದಾರಿಹೋಕರಿಗೆ ನೆರಳಿಲ್ಲ, ಹಣ್ಣೂ ಬಲು ದೂರ..’


ರಾಮಕೃಷ್ಣಾಶ್ರಮದಲ್ಲಿ ಕೇಳಿದ್ದ ಕಬೀರರ ದೋಹೆ ನೆನಪಿಗೆ ಬಂತು. ಜೊತೆಯಲ್ಲಿದ್ದ ಮಾರ್ಗದರ್ಶಿ ಪರೇಶ್‍ಗೆ ಹೇಳಿದೆ. ಆತ ‘ ಕಬೀರರ ದೋಹೆ, ಬೀಜಕ್ ಎಲ್ಲಾ ನೆನಪಿಸಿಕೊಳ್ಳುವವರು ಕಡಿಮೆ. ಮೂರ್ತಿಗೆ ನಮಸ್ಕಾರ್ ಮಾಡಿ ಹೋಗ್ತಾರೆ. ಹೆಚ್ಚಿನವರು ಏನಿದ್ದರೂ ಘೂಮ್ನಾ ಔರ್ ಮಸ್ತಿ ಕರ್ನಾ ! ಈ ಕರೋನಾದ ನಂತರ ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ತಿಂದು-ಕುಡಿದು ಅಲ್ಲಲ್ಲೇ ಬಿಸಾಡಿ, ಮರವನ್ನು ಜಗ್ಗಿ-ಮುರಿದು ಪರಿಸರವನ್ನೇ ನಾಶ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಇದು ಗಲೀಜ್‍ವಾಡಾ ಆಗುತ್ತದೆ’ ಎಂದ. ಬೇಸರವಾದರೂ, ಇದು ಹೊಸ ವಿಷಯವೇನಲ್ಲ! ಮಾನವತಾವಾದದ ಚಪ್ಪರ ಹಬ್ಬಿಸಿದ ಕಬೀರರನ್ನು ಮನನ ಮಾಡಿಕೊಳ್ಳುತ್ತಲೇ ಈ ಕ್ಷೇತ್ರವನ್ನು ಸ್ವಚ್ಛ, ಸುಂದರವಾಗಿಡುವುದು ನಮ್ಮ ಕರ್ತವ್ಯ ಎನಿಸಿತು.

ಖಾರಿಸಿಂಗ್ ಮತ್ತು ಪೋಂಕ್!

ಗುಜರಾತ್, ಭಾರತದಲ್ಲಿ ಅತಿ ಹೆಚ್ಚು ಕಡ್ಲೆಕಾಯಿ ಬೆಳೆಯುವ ರಾಜ್ಯವಾಗಿದೆ. ಭರೂಚ್, ಕಡಲೆಕಾಯಿಗಳಿಗಾಗಿ ಬಹಳ ಪ್ರಸಿದ್ಧ. ಸೌರಾಷ್ಟ್ರದಲ್ಲಿ ಬೆಳೆಯುವಂತಹ ಕಡಲೆಕಾಯಿ, ನರ್ಮದಾ ನೀರಿನಿಂದಾಗಿ ಅತ್ಯುತ್ತಮ ಗುಣಮಟ್ಟದ್ದು ಎಂದು ಹೇಳಲಾಗುತ್ತದೆ. ಇವುಗಳನ್ನು ಎರಡು ನಿಮಿಷ ಕಾಲ ನೀರಿನಲ್ಲಿ ನೆನೆಸಿ, ನಂತರ ಉಪ್ಪನ್ನು ಬೆರೆಸಿ ಆರರಿಂದ ಏಳು ಗಂಟೆಗಳ ಕಾಲ ಹಾಗೆ ಇಡಲಾಗುತ್ತದೆ. ಆಮೇಲೆ, ಭರೂಚ್ ಸಮೀಪದ ಸಮುದ್ರದ ಮರಳನ್ನು ಬಿಸಿ ಮಾಡಿ ಅದರಲ್ಲಿ ಹುರಿಯಲಾಗುತ್ತದೆ. ಇದಕ್ಕೆ ಗುಜರಾತಿಯಲ್ಲಿ ಖಾರಿಸಿಂಗ್ ಎಂದು ಕರೆಯಲಾಗುತ್ತದೆ ಇವುಗಳಲ್ಲಿ ಬೆಳ್ಳುಳ್ಳಿ, ಪುದಿನಾ, ಎಳನೀರು, ಚಾಕಲೇಟ್, ಲಿಂಬು ಹೀಗೆ ವಿವಿಧ ಸ್ವಾದದ ಕಡಲೆಕಾಯಿಗಳು ಲಭ್ಯವಿದೆ. ಪೋಂಕ್, ಚಳಿಗಾಲದಲ್ಲಿ ಗುಜರಾತಿಗಳು ತಿನ್ನುವ ಮತ್ತೊಂದು ಖಾದ್ಯ. ಜೋಳ ಅಥವಾ ಗೋಧಿಯ ಹಸಿ ಕಾಳುಗಳುಳ್ಳ ತೆನೆಯನ್ನು ಇದ್ದಿಲ ಮೇಲೆ ಸುಟ್ಟು ಕಾಳು ಉಜ್ಜಿ ಬೇರ್ಪಡಿಸುತ್ತಾರೆ. ಅದನ್ನು ಸೇವ್, ನಿಂಬೆರಸ, ಬೆಳ್ಳುಳ್ಳಿ ಚಟ್ನಿ ಮತ್ತು ಸಕ್ಕರೆಯ ಹರಳುಗಳೊಂದಿಗೆ ಸೇವಿಸಲಾಗುತ್ತದೆ. ಪ್ರೊಟೀನ್‌ ಸಾಕಷ್ಟು ಹೊಂದಿರುವ ಇದು ಚಳಿಗಾಲದಲ್ಲಿ ದೇಹಕ್ಕೆ ಶಕ್ತಿಯ ಜೊತೆಗೆ ಬಾಯಿಗೆ ರುಚಿಯನ್ನು ನೀಡುವ ಆಹಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT