ಬುಧವಾರ, ಜೂನ್ 16, 2021
28 °C

ಕಲೆ-ಸಂಪ್ರದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಮ್ಮ ದೇಶದಲ್ಲಿ ಎಲ್ಲಾ ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೂ ವೇದಮೂಲವನ್ನೂ ಆಧ್ಯಾತ್ಮಿಕ ತಾತ್ಪರ್ಯವನ್ನೂ ಸೂಚಿಸುವ ವಾಡಿಕೆಯಿದೆಯಷ್ಟೆ. ಹಲವು ವೇಳೆ ಇದು ಉತ್ಪ್ರೇಕ್ಷೆಯಂತೆ ಕಂಡರೂ ಅದರಲ್ಲಿ ದಿಟದ ಪಾಲು ಇಲ್ಲದೆ ಇಲ್ಲ. ನಮ್ಮ ಸಂಸ್ಕೃತಿಯ ಮೂಲಭೂತಮೌಲ್ಯಗಳನ್ನು ನಾವು ವೇದವಾಙ್ಮಯದಲ್ಲೇ ಕಾಣುವುದು ಸಾಧ್ಯ. ಮುಂದೆ ಮಾರ್ಪಾಡು, ಬೆಳವಣಿಗೆ, ಹೊಸ ಮೌಲ್ಯಗಳು ಇಲ್ಲವೆಂದಲ್ಲ. ಆಳದಲ್ಲಿ ಆಧ್ಯಾತ್ಮಿಕ ಮನೋಧರ್ಮ ಮಿಡಿಯುತ್ತದೆ. ವೈದಿಕ ಋಷಿಗಳು ಕಂಡುಕೊಂಡ ಬದುಕಿನ ಸ್ವಾರಸ್ಯ ಉಳಿದೇ ಇರುತ್ತದೆ.

ನಮ್ಮ ಕಲಾನುಭವದಲ್ಲಿ ಆಪಾತಮಧುರ, ಆಲೋಚನಾಮೃತ – ಎಂಬ ಎರಡು ವಿವರಗಳು ಎದ್ದು ನಿಲ್ಲುತ್ತವೆ. ಕಲಾಸಾಮಗ್ರಿಯನ್ನು ಇಂದ್ರಿಯಗಳ ಮೂಲಕ ಅನುಭವಿಸುವಾಗ  ಒಡನೆಯೇ ಸುಖ ಒದಗಿ ಬರಬೇಕು. ಹಾಗಿಲ್ಲವಾದರೆ ಅದರ ಆಕರ್ಷಣೆಯೇನು? ಆದರೆ ಅನುಭವ ಅಷ್ಟರಲ್ಲೇ ಮುಗಿಯಬಾರದು. ಕಲಾನುಭವದಲ್ಲಿ ಹೆಚ್ಚುಕಾಲ ಉಳಿಯುವುದು ನಮ್ಮ ಆಲೋಚನೆಗಳಿಗೆ, ಭಾವನೆಗಳಿಗೆ, ಕಲ್ಪನೆಗಳಿಗೆ ಒದಗುವ ಸಾಮಗ್ರಿ. ಕಲಾಸಾಮಗ್ರಿಯನ್ನು ಇಂದ್ರಿಯಗಳು ಅನುಭವಿಸಿದ ಮೇಲೆ ಮನಸ್ಸು ಅದನ್ನು ತನ್ನದಾಗಿ ಮಾಡಿಕೊಂಡು ಅನುಭವ ಅಂತರಂಗದ ವ್ಯಾಪಾರವಾದಾಗ ಒದಗುವ ಸಂತೋಷ ನಾಲ್ಕು ಕಾಲ ಉಳಿಯುವಂಥದು; ನಮ್ಮ ಸಂಸ್ಕಾರದೊಳಗೆ ಸೇರಿಕೊಳ್ಳುವಂಥದು; ನಮ್ಮ ವ್ಯಕ್ತಿತ್ವದ ಓರೆಕೋರೆಗಳನ್ನು ತಿದ್ದಿ ಬದುಕಿಗೆ ಹೊಸದೊಂದು ಬೆಳಕನ್ನು ನೀಡುವಂಥದು. ಇದೇ ಸಾಂಪ್ರದಾಯಿಕ ಕಲೆಯ ಉದ್ದೇಶ.

ನಾಡ್ಯ ಮನುಷ್ಯನ ಆದಿಮಾನವ ನೆಲೆಯಿಂದಲೇ ಬಂದದ್ದು. ಭಾವದ ಆವೇಗ ಮಿತಿಮೀರಿದಾಗ ಮೈಮರೆತು ಕುಣಿಯುವುದು ಮನುಷ್ಯನಿಗೆ ಸಹಜ ಪ್ರವೃತ್ತಿಯೇ. ಲಯಬದ್ಧವಾದ ಅಂಗವಿನ್ಯಾಸ, ಪಾದಚಲನೆ, ಭಂಗಿನಿರ್ದೇಶ – ಇವು ಶಾಸ್ತ್ರದ ವಿವರಗಳಾಗಿ ಕಾಣಿಸಿಕೊಳ್ಳುವ ಮೊದಲೆ ಇದ್ದವು. ಆಟದಲ್ಲಿ, ಬೇಟೆಯಲ್ಲಿ, ಪ್ರೀತಿಯಲ್ಲಿ, ಕೋಪದಲ್ಲಿ, ಕಾಮದಲ್ಲಿ, ಕೇಳಿಯಲ್ಲಿ ಸಂಗೀತದ ನೃತ್ಯದ ಪಾಲು ಮೊದಲಿಂದ ಇದ್ದದ್ದೇ. ಇದಕ್ಕೊಂದು ಸಾಂಸ್ಕೃತಿಕವಾಗಿ ಪ್ರಸ್ತುತವಾಗಬಲ್ಲ ಚೌಕಟ್ಟನ್ನು ಒದಗಿಸುವುದು ಶಾಸ್ತ್ರದ ಕೆಲಸ. ಭರತಮುನಿ ನಾಟ್ಯಶಾಸ್ತ್ರವನ್ನು ಸಿದ್ಧಪಡಿಸುವಾಗ ಅವನ ಉದ್ದೇಶ ಇಷ್ಟೆ. ಮನುಷ್ಯನಿಗೆ ಸಹಜವಾಗಿ ಮತ್ತು ಸಾಮೂಹಿಕವಾಗಿ ಒದಗುವ ಭಾವನೆಗಳಿಗೆಲ್ಲ ಅಭೀವ್ಯಕ್ತಿ ಆಪಾತಮಧುರವಾಗಿಯೂ ಆಲೋಚನಾಮೃತವಾಗಿಯೂ ಇರುವಂತೆ ಒಂದು ಹಂದರ ನಾಟ್ಯಶಾಸ್ತ್ರದಲ್ಲಿದೆ.

ಸ್ವರ್ಗದಲ್ಲಿ ದೇವತೆಗಳ ನಡುವೆ ಇದ್ದ ಕಲೆಯೇ ಮನುಷ್ಯರ ನೆಲೆಗೆ ಇಳಿದು ಬಂದಿತು ಎಂಬುದು ರೂಢಮೂಲವಾದ ಕಲ್ಪನೆ. ಗಂಧರ್ವರು, ಯಕ್ಷರು, ಕಿನ್ನರು, ಗಾಯಕರು, ಸಿದ್ಧರು, ವಿದ್ಯಾಧರರು, ಅಪ್ಸರೆಯರು ನಾಟ್ಯಕ್ಕೆ ಒಲಿದವರು. ಗಂಡುದೇವತೆಗಳಲ್ಲಿ ವಿಷ್ಣು ಸಂಗೀತರಸಿಕ; ಶಿವ ನಾಟ್ಯಪ್ರಿಯ. ಬ್ರಹ್ಮನ ಮಾತು ಬಿಡಿ, ಅವನು ಹೇಗೂ ‘ವೇದಾಭ್ಯಾಸಜಡ’. ಹೆಣ್ಣುದೇವತೆಗಳಲ್ಲಿ ಸರಸ್ವತಿ ವೀಣಾಪಾಣಿ; ಪಾರ್ವತಿ ಲಾಸ್ಯಚತುರೆ; ಕಾಳಿ ನಟಭಯಂಕರೆ. ಶಿಲ್ಪದಲ್ಲಿ ದೇವತೆಗಳನ್ನು ಕಂಡರಿಸುವಾಗ ತ್ರಿಭಂಗಿ ಮತ್ತು ಅತಿಭಂಗಿ ನೃತ್ಯದ ಕಲ್ಒನೆಗೆ ಅನುವಾಗುವಂಥವೇ. ಹೀಗೆ ಸಂಪ್ರದಾಯದ ಕಲ್ಪನೆಯಲ್ಲಿ ಮನುಷ್ಯನ ಇಂದಿನ ಕಲಾಭಿರುಚಿಗೂ ಎಂದಿಗೂ ಉಳಿದುಬಂದಿರುವ ಅಲೌಕಿಕ ಭಾವನೆಗಳಿಗೂ ನಂಟು ಮುಖ್ಯವಾದುದು.

(ಗ್ರಂಥಕೃಪೆ: ಸಾ. ಕೃ. ರಾಮಚಂದ್ರರಾವ್‌ ಅವರ ‘ಭರತಮುನಿಯ ನಾಟ್ಯಶಾಸ್ತ್ರ ಮತ್ತು ನಟರಾಜನ ಕಲ್ಪನೆ’)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು