ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಸೌಂದರ್ಯ | ನಿನಗೆ ನೀನೇ ಬೆಳಕು

ಜೀವನ ಸೌಂದರ್ಯ
Last Updated 15 ಜುಲೈ 2020, 19:30 IST
ಅಕ್ಷರ ಗಾತ್ರ

ಜೀವನ ಸದಾ ಚೈತನ್ಯಭರಿತವಾಗಿರಬೇಕಾದರೆ ನಾವೇನು ಮಾಡಬೇಕು? ಯಾವುದೇ ವಿಷಮ ಪರಿಸ್ಥಿತಿಯಲ್ಲೂ ಬದುಕಿನಲ್ಲಿ ಭರವಸೆಯನ್ನು, ಜೀವನಪ್ರೀತಿಯನ್ನು ಕಳೆದುಕೊಳ್ಳದಿರುವುದು ಹೇಗೆ? ಕೆಟ್ಟ ಅನುಭವಗಳು, ಸವಾಲುಗಳು ಎಲ್ಲರ ಬಾಳಿನಲ್ಲೂ ಇರುವುದಾದರೂ ಅದನ್ನು ಪ್ರತಿಯೊಬ್ಬರೂ ತಮ್ಮದೇ ಅನನ್ಯ ರೀತಿಯಲ್ಲಿ ನಿಭಾಯಿಸುತ್ತಾರೆ. ಕೆಲವರು ಸೋತು ಕೈಚೆಲ್ಲಿ ಎಲ್ಲವೂ ಮುಳುಗಿಹೋಯಿತು ಎಂಬ ದಿಗ್ಭ್ರಮೆಯಲ್ಲಿ ಕಳೆದುಹೋದರೆ, ಇನ್ನೂ ಕೆಲವರು ಹಲವು ದುರಿತಗಳನ್ನು ಅತಿ ಸಾಮಾನ್ಯ ಮತ್ತು ಸಹಜ ಎಂಬ ರೀತಿಯಲ್ಲಿ ಸ್ವೀಕರಿಸಿ ಮುನ್ನಡೆಯುತ್ತಾರೆ. ಇದರಲ್ಲಿ ಯಾರ ನಡವಳಿಕೆ ಶ್ರೇಷ್ಠ, ಯಾರದು ಕನಿಷ್ಠ ಎಂದು ಹೇಳುವಂತಿಲ್ಲ; ಮನುಷ್ಯ ಜೀವನದ ವಿಸ್ತಾರ ಮತ್ತು ಬದುಕಿಳಿ್ಎನ ಕುರಿತಾದ ದೃಷ್ಟಿಕೋನದಲ್ಲಿನ ವೈವಿಧ್ಯ ನಮ್ಮನ್ನು ಬೆರಗುಗೊಳಿಸುತ್ತದೆ ಅಷ್ಟೇ.

ಅದು ಹೇಗೆ ಕೆಲವರು ಹೆಚ್ಚಿನ ಸಮಯ ಉದ್ವೇಗರಹಿತರೂ ಉತ್ಸಾಹಶೀಲರೂ ದೃಢಚಿತ್ತರೂ ಆಗಿರುತ್ತಾರೆ? ಹಾಗಿರುವುದು ಸ್ವಾಭಾವಿಕವೇ? ಸುಲಭಸಾಧ್ಯವೆ? – ಈ ಪ್ರಶ್ನೆಗಳು ನಮ್ಮನ್ನು ಕಾಡಿಸದೆ ಇರದು. ಬೇರೆಯವರು, ಅಂದರೆ ನಮ್ಮ ಸುತ್ತಲಿನವರು ಹೇಗೆ ಸವಾಲುಗಳನ್ನು, ಅಡೆ ತಡೆಗಳನ್ನು, ನೋವು, ದುಃಖವನ್ನು ನಿಭಾಯಿಸುತ್ತಾರೆ ಎನ್ನುವುದನ್ನು ಗಮನಿಸುವ ಅಭ್ಯಾಸ ಮಾಡಿಕೊಂಡರೆ ಸಾಕು ಹೊಸದೊಂದು ಲೋಕವೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಉದ್ವೇಗ, ಚಿಂತೆ, ಭಯ ಇವುಗಳನ್ನು ನಿರ್ವಹಿಸುವ ರೀತಿಯೂ ನಾವು ನೋಡಿ ಕಲಿತದ್ದೇ ಆಗಿದೆ. ಹಾಗೆಯೇ ನಾವು ವಿನಾ ಕಾರಣ ಅತಿಯಾದ ಉದ್ವೇಗ, ಆತಂಕಕ್ಕೆ ಒಳಗಾದಾಗ ಕೇವಲ ನಮ್ಮ ನೆಮ್ಮದಿಯನ್ನಷ್ಟೇ ಹಾಳುಮಾಡಿಕೊಳ್ಳುವುದಿಲ್ಲ, ನಮ್ಮ ಸುತ್ತಲಿನವರನ್ನೂ ಕಳವಳಗೊಳಿಸುತ್ತೇವೆ. ನಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆ ಇವರುಗಳು ಭಯ, ಗೊಂದಲದಲ್ಲಿ ಮುಳುಗಿರುವಾಗ, ಸ್ಪಷ್ಟವಾದ ಆಲೋಚನೆ ನಮಗೆ ಸಾಧ್ಯವಾಗಬೇಕಾದರೆ ನಾವು ಅವರೆಲ್ಲರಿಂದ ಹೊರತಾದ ನಮಗೇ ವಿಶಿಷ್ಟವಾದ ಆಂತರ್ಯದ ಶಕ್ತಿಯನ್ನು ಕಂಡುಕೊಂಡಿರಬೇಕಾದುದು ಅವಶ್ಯ. ಇಲ್ಲವಾದರೆ 'herd mentality' ನಮ್ಮನ್ನು ಹಿಂಡಿ ಹಿಪ್ಪೆಯಾಗಿಸಿ ನಮ್ಮ ಬದುಕು ನಮ್ಮ ಹಿಡಿತಕ್ಕೇ ಸಿಗದ ಗಾಳಿಪಟವಾಗುತ್ತದೆ.

ನಮ್ಮ ಸ್ವತಂತ್ರ ಆಲೋಚನೆ, ದಿಟ್ಟತನ, ಆಂತರಿಕ ಗಟ್ಟಿತನ – ಇವುಗಳೇ ನಮ್ಮನ್ನು ಎಂದಿಗೂ ಪೊರೆಯುವ ಅಮೃತದ ಚಿಲುಮೆ ಎಂಬುದು ಸಿದ್ಧ ಸತ್ಯ. ಮರದ ಮೇಲೆ ಕುಳಿತಿರುವ ಹಕ್ಕಿ ತನ್ನ ಹಾರುವ ಶಕ್ತಿಯ ಕುರಿತಾದ ನಂಬಿಕೆಯಿಂದಲಷ್ಟೇ ಧೈರ್ಯವಾಗಿ ಕುಳಿತಿರುತ್ತದೆಯೇ ಹೊರತು ಕೊಂಬೆಯ ಗಟ್ಟಿತನದ ಮೇಲಿನ ನಂಬಿಕೆಯಿಂದಲ್ಲ. ಕಷ್ಟಕಾಲದಲ್ಲಿ ನಾವು ನಮ್ಮವರು, ಹಿತೈಷಿಗಳು ಎನಿಸಿಕೊಂಡವರಿಂದ ಸಹಾಯ, ಸ್ಥೈರ್ಯ ಎದುರುನೋಡುವುದು ಸಹಜ. ಆದರೆ ಅದು ದೊರಕದಿದ್ದಾಗ ನಾವು ನಮ್ಮ ಆಂತರಿಕ ಶಕ್ತಿಯನ್ನೇ ಹೊರತೆಗೆದು ನಮ್ಮದೇ ಆಸರೆಯಲ್ಲಿ ಬೆಳೆಯಬೇಕಾಗುತ್ತದೆ. ಈ ಆಂತರಿಕ ಶಕ್ತಿಯನ್ನು ನಮಗೆ ಪೂರೈಸುವ ವ್ಯಕ್ತಿ ವಿಶಿಷ್ಟ ವ್ಯವಸ್ಥೆ ಅಥವಾ ರಚನೆಯನ್ನೇ ನಾವು 'ವ್ಯಕ್ತಿತ್ವ' ಎನ್ನಬಹುದು. ಯಾವುದೇ ಪರಿಸ್ಥಿತಿಯನ್ನು ನಾವು ಹೇಗೆ ಎದುರಿಸಬೇಕು ಎನ್ನುವ ಸೂಚನೆ ನಮಗೆ ನಮ್ಮ ವ್ಯಕ್ತಿತ್ವದಿಂದಲೇ ದೊರಕುವಂಥದ್ದು. ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವ ಜಾಣತನ, ನಮ್ಮ ಜೀವನವನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳುವ ಧೈರ್ಯ, ಹಳೆಯ ಪ್ರಶ್ನೆಗಳಿಗೆ ಹೊಸ ಉತ್ತರಗಳನ್ನು ಕಂಡುಕೊಳ್ಳುವ ಸೃಜನಶೀಲತೆ, ನಮ್ಮನ್ನು ನಾವೇ ಅವಲೋಕಿಸಿಕೊಳ್ಳುವ ಪ್ರಬುದ್ಧತೆ, ನಮ್ಮ ಜೀವನವನ್ನು ಧನ್ಯಗೊಳಿಸುವಂತಹ ಕೆಲಸ, ಗುರಿ, ಅಭೀಪ್ಸೆ – ಇವುಗಳೆಲ್ಲ ಬದುಕನ್ನು ಎದುರಿಸಲು, ಆಸ್ವಾದಿಸಲು ಬೇಕಾದ ಅಂತಃಸತ್ವ. ಕೆಲವರು ಎಂತದ್ದೇ ಕ್ಲಿಷ್ಟ ಪರಿಸ್ಥಿತಿಗಳನ್ನು ಶಾಂತವಾಗಿ ಎದುರಿಸುವ ಗುಟ್ಟು ಇದೇ: ಅವರ ವ್ಯಕ್ತಿತ್ವದ ಶಕ್ತಿಯಿಂದ. ಬದುಕಿನ ಬತ್ತದ ಚೈತನ್ಯದ ಧಾರೆ ಹೊರಗೆಲ್ಲೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT