ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕನಕದಾಸ ಜಯಂತಿ: ಬಾಳಿನ ಕನಕ ತೋರಣ

Last Updated 10 ನವೆಂಬರ್ 2022, 19:44 IST
ಅಕ್ಷರ ಗಾತ್ರ

‘ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ – ಎನ್ನುವ ಭರವಸೆಯ ಮಾತುಗಳನ್ನು ಆಡಿದವರು ಭಕ್ತ ಕನಕದಾಸರು. ಅವರು ವಿಜಯನಗರ ಸಾಮ್ರಾಜ್ಯದ ಆಸುಪಾಸಿನಲ್ಲಿದ್ದವರು. ಆ ಕಾಲದ ಪರಿಸರ ಮತ್ತು ಅವರು ಬೆಳೆದು ಬಂದ ಪರಿಸರಗಳ ಸಂಕೀರ್ಣತೆಯಲ್ಲಿ ಕನಕದಾಸರ ವ್ಯಕ್ತಿತ್ವ ಅರಳಿಕೊಂಡಿದೆ. ಯುದ್ಧದಿಂದ ಗಾಯಗೊಂಡ ಸಂದರ್ಭ ಅವರ ಬದುಕಿನ ಧ್ಯಾನವನ್ನೇ ಬದಲಿಸಿತು. ಲೌಕಿಕದ ಮನುಷ್ಯ ಅಲೌಕಿಗೊಳ್ಳುವ ಸಂತದಾರಿಗಳು ಇಲ್ಲಿಯೇ ಗೋಚರಿಸಿದವು. ಇತಿಹಾಸವನ್ನು ಸಾಹಿತ್ಯದ ಪಠ್ಯದಲ್ಲಿರಿಸಿ ಅದಕ್ಕೊಂದು ಸೌಂದರ್ಯಪ್ರಜ್ಞೆ ಮೂಡಿಸುವ ಕಲೆ ಕನಕದಾಸರಿಗೆ ದಕ್ಕಿದೆ. ಅದಕ್ಕೆ ಉದಾಹರಣೆ ಅವರ ‘ಮೋಹನತರಂಗಿಣಿ’. ನಳಚರಿತ್ರೆ, ಹರಿಭಕ್ತಿಸಾರಗಳು ಕೂಡ ಅವರ ಸೃಜನಶೀಲ ಬದುಕಿನ ಧ್ಯಾನವೇ.

ಹಳ್ಳಿಯ ಒಬ್ಬ ದೇಸೀಹುಡುಗ ಕಾವ್ಯದ ಸೋಪಜ್ಞತೆಯನ್ನು ಭಕ್ತಿಯ ಮೂಲಕ ವಿಸ್ತರಿಸಿಕೊಂಡದ್ದು, ದೈವಮೂಲವನ್ನು ಸಾಮಾಜಿಕ ಸಂರಚನೆಯೊಳಗೆ ತಂದು ಸಮನ್ವಯಗೊಳಿಸಿದ್ದು, ಸಮಾಜದ ದುಃಖವನ್ನು ನಿವಾರಿಸಿಕೊಳ್ಳಲು ಹಾಡು–ಭಜನೆಗಳನ್ನು ರಚಿಸಿ ನಾಡು ಸುತ್ತುತ್ತಾ ಪ್ರೇಮವನ್ನು ಬಯಸಿದ್ದು – ಇವೆಲ್ಲವೂ ಅಪರೂಪದ ಸಂಗತಿಗಳು. ಕನಕದಾಸರ ಕಾವ್ಯಗಳಲ್ಲಿ ನಿಸರ್ಗ ಮತ್ತು ಭಕ್ತಿಯ ಪರಿಮಳ ಎದ್ದುಕಾಣುತ್ತದೆ. ತನ್ನ ನೆಲದ ಸ್ವಾಭಿಮಾನವನ್ನು, ಅಂತಃಸತ್ವವನ್ನು, ಅದರ ರುಚಿ–ಗಂಧವನ್ನು ಅನನ್ಯವಾಗಿ ಕಟ್ಟಿಕೊಟ್ಟದ್ದು ಅವರ ‘ರಾಮಧಾನ್ಯಚರಿತೆ’. ಅಲ್ಲಿ ಭತ್ತ ಮತ್ತು ರಾಗಿಯ ಸಂಘರ್ಷಗಳು ಏನೇ ಇರಲಿ; ಅವೆರಡೂ ಈ ನೆಲದ ದುಡಿಮೆಯಲ್ಲಿ, ಈ ನೆಲದ ಬೆವರಿನಲ್ಲಿ ಮೊಳಕೆ ಕಟ್ಟಿದ ಬೀಜದ ಕಾಳುಗಳೇ! ಇಂತಹ ನೆಲದ ಬೀಜದಲ್ಲಿ, ಅದರ ತತ್ವದಲ್ಲಿ ಭೇದವಿರಬಾರದು ಎನ್ನುವುದನ್ನು ಅವರ ಕಾವ್ಯತತ್ವ ಮಾನ್ಯಮಾಡಿದೆ. ಅಯೋಧ್ಯೆಯ ರಾಮನು ಈ ನೆಲದ ದುಡಿಯುವ ವರ್ಗದ ರಾಗಿಯ ಸವಿಯನ್ನು ಉಂಡು ಸಂಭ್ರಮಿಸಿದ ಬಗೆ, ಅದನ್ನು ಕನಕದಾಸರು ವರ್ಣಿಸುವ ಬಗೆ, ಉತ್ತರದ ಎಲ್ಲ ಶಕ್ತಿಗಳ ಜೊತೆ ಕನ್ನಡದ ನೆಲದ ಸಹಬಾಳ್ವೆಯ ಗಟ್ಟಿತನವನ್ನು, ಸುಕ್ಕಾಗದ ಜೀವನಪ್ರೀತಿಯನ್ನು ತೋರುವುದು – ಇವು ಇದು ಕನಕದಾಸರ ವ್ಯಕ್ತಿತ್ವ.

ಕನಕದಾಸರ ವ್ಯಕ್ತಿತದ ಭಾಗವೇ ಅವರ ಬರಹಗಳು. ಅವರ ಕೀರ್ತನೆಗಳಲ್ಲಿ ಸಮಾಜವನ್ನು ಕಟ್ಟುವ ಕ್ರಿಯೆಯಿದೆ. ಕುಟುಂಬವನ್ನು ಸೌಹಾರ್ದಗೊಳಿಸುವ ನೀತಿ ಇದೆ. ನಾಡನ್ನು ನಿಸರ್ಗದತ್ತವಾಗಿ ತೆಗೆದುಕೊಂಡು ಹೋಗುವ ಕೌಶಲ ಇದೆ. ಅವರ ಮುಂಡಿಗೆಗಳಂತೂ ನಮ್ಮ ಜ್ಞಾನವನ್ನು ಸದಾ ಎಚ್ಚರಿಸುತ್ತವೆ. ಇಂತಹ ಕವಿ, ಸಂತ ಬಾಳಿ ಬದುಕಿದ ನಾಡು ಸದಾ ಸೌಹಾರ್ದದ ತೋಟವಾಗಿ ಇರಬೇಕಾದದ್ದು, ನಾವುಗಳು ನಾಡನ್ನು ಕೂಡಿ ಕಾಪಿಟ್ಟು ಹಸನು ಮಾಡಬೇಕಾದದ್ದು ನಮ್ಮ ಕರ್ತವ್ಯ. ಕನಕದಾಸರು ಮೋಹನತರಂಗಿಣಿಯಲ್ಲಿ ಕಾಣಿಸುವ ಹಲಸು, ನೇರಳೆ, ದಾಳಿಂಬೆ, ಖರ್ಜೂರ, ದ್ರಾಕ್ಷಿ, ಕಬ್ಬು, ತೆಂಗು, ಪಪ್ಪಾಯಿ, ಕಿತ್ತಳೆ, ಮಾವು, ಬಾಳೆ, ನಿಂಬೆ ಮತ್ತು ಜಾಜಿ, ಮಲ್ಲಿಗೆ, ಸುರಹೊನ್ನೆ, ಸಂಪಿಗೆ, ಪಾದರಿ, ಸುರಗಿ, ಸೇವಂತಿಯ ತೋಟಗಳನ್ನು ಈ ಮಣ್ಣು ಸದಾ ಕಾಪಾಡಿಕೊಳ್ಳಬೇಕಿದೆ.

ಕವಿಯಾದವನ ಯೋಗವೆಂದರೆ ಅವನ ಕಾವ್ಯದಲ್ಲಿ ಸದಾ ನಿಸರ್ಗವೊಂದು ಕೂಡಿಕೊಂಡಿರುವುದು. ಅದನ್ನು ಬುದ್ಧನಲ್ಲೂ ನೋಡುತ್ತೇವೆ; ಪಂಪನ ಕಾವ್ಯದಲ್ಲೂ ಕಾಣುತ್ತೇವೆ; ಹರಿಹರನ ರಗಳೆಗಳಲ್ಲೂ ಭಕ್ತಿಯೊಂದಿಗೆ ನಿಸರ್ಗವೇ ಕಾಣುತ್ತದೆ. ಕವಿ ನಿಸರ್ಗದಲ್ಲಿ ಬದುಕುತ್ತಾನೆ. ಅಲ್ಲಿ ಸೃಜನಶೀಲತೆಯೂ ಬದುಕುತ್ತದೆ. ಸಂತನು ಸದಾ ನಿಸರ್ಗದ ಜೊತೆ ಸಂಬಂಧವನ್ನಿಟ್ಟುಕೊಂಡೇ ಸಾಗುವಂಥವನು. ಪ್ರಕೃತಿಯೇ ದೇವರೆಂದು ಭಾವಿಸಿದ ಲೋಕದೃಷ್ಟಿಯೇ ಕನ್ನಡ ಕಾವ್ಯತತ್ವವಾಗಿ ನಮ್ಮ ಸೃಜನಶೀಲ ಬಾಳನ್ನು ಬಾಳಿಸುತ್ತಲೇ ಬಂದಿದೆ. ನಾವು ಉಳಿಯುವ, ಬದುಕಿ ಬಾಳುವ ನುಡಿಯ ಪರಿಸರವನ್ನು ಮಲಿನವಾಗದಂತೆ ಕಾಪಾಡುವ ಜವಾಬ್ದಾರಿಯೂ ನಮ್ಮಮೇಲಿದೆ. ನಮ್ಮೆಲ್ಲ ಸಂತರು ನುಡಿಯನ್ನು ಮಲಿನವಾಗದಂತೆ ತಮ್ಮ ಅರಿವಿನಿಂದ, ಗುರುತ್ವದ ಶಕ್ತಿಯಿಂದ ಶುಚಿಗೊಳಿಸಿದರು. ನಾವು ಈ ನುಡಿಗಳನ್ನು ಹಿಡಿದು ಮನದ ತೋರಣಗಳನ್ನು ಕಟ್ಟುವ, ಸಮಾಜವನ್ನು ಅಂದಗೊಳಿಸುವ ಪ್ರಯತ್ನವನ್ನು ಮಾಡುತ್ತಲೇ ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT