ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Eid-e-Milad-un-Nabi 2024: ಮನುಕುಲದ ಬೆಳಕು ಮುಹಮ್ಮದ್ ಪೈಗಂಬರ್

Published : 15 ಸೆಪ್ಟೆಂಬರ್ 2024, 20:42 IST
Last Updated : 15 ಸೆಪ್ಟೆಂಬರ್ 2024, 20:42 IST
ಫಾಲೋ ಮಾಡಿ
Comments

‘ಮಾನವ ನಾಗರಿಕತೆಯ ಮೇಲೆ ಅವರು ಬೀರಿದ ಶಾಶ್ವತ ಪ್ರಭಾವ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅವರ ವರ್ಚಸ್ಸಿನ ವಿಸ್ತಾರ, ಸಾಂಸ್ಕೃತಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಅವರ ನಿರಂತರ ಇರುವಿಕೆ, ಅವರ ಧಾರ್ಮಿಕ ಸಿದ್ಧಾಂತ, ಸಮಾಜ ಸುಧಾರಣೆ, ದಾರ್ಶನಿಕ ನಾಯಕತ್ವದಿಂದಾಗಿ ಭೂಗೋಳದಲ್ಲಾದ ಅಗಾಧವಾದ ಪರಿವರ್ತನೆ, ಸಂಘಟಿತ ಸಮಾಜ ರಚಿಸುವಲ್ಲಿ ಅವರ ಪಾತ್ರ..’

-1978ರಲ್ಲಿ ಪ್ರಕಟವಾದ ‘The 100: A Ranking of the Most Influential Persons in History’ ಎಂಬ ಪುಸ್ತಕದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರಿಗೆ ಮೊದಲ ಸ್ಥಾನ ನೀಡಿದ್ದಕ್ಕೆ ಅಮೆರಿಕದ ಖ್ಯಾತ ಖಗೋಳ ಭೌತಶಾಸ್ತ್ರಜ್ಞ, ಲೇಖಕ ಮೈಕೆಲ್ ಎಚ್. ಹಾರ್ಟ್ ಅವರು ನೀಡಿದ ವಿವರಣೆ ಇದು. ಹಾರ್ಟ್ ಅವರ ಈ ಮಾತುಗಳು ಪ್ರವಾದಿ ಮುಹಮ್ಮದರ ವ್ಯಕ್ತಿತ್ವವನ್ನು ಕಟ್ಟಿ ಕೊಟ್ಟಿದೆ.

ಸಣ್ಣ ಮಾತಿಗೂ ಯುದ್ಧ ನಡೆಸುತ್ತಿದ್ದ, ದ್ವೇಷವನ್ನು ತಲೆಮಾರುಗಳಿಗೂ ದಾಟಿಸುತ್ತಿದ್ದ, ಪ್ರತಿಷ್ಠೆಯೇ ಜೀವನವೆಂದು ಬಗೆದಿದ್ದ, ಕುಲವೇ ಶ್ರೇಷ್ಠವೆಂದು ನಂಬಿದ್ದ, ಹೆಣ್ಣು ಮಕ್ಕಳನ್ನು ಜೀವಂತ ಹೂಳುತ್ತಿದ್ದ, ಅಮಲಿನ ದಾಸರಾಗಿದ್ದ ಒಂದು ಜನಾಂಗವನ್ನು ಪುನರುದ್ಧರಿಸಿದ ಶ್ರೇಯ ಪ್ರವಾದಿ ಮುಹಮ್ಮದರಿಗೆ ಸ‌ಲ್ಲಬೇಕು. ತನ್ನ ನಡವಳಿಕೆಯಿಂದ ಒಂದು ಯುಗವನ್ನು ಬದಲಾಯಿಸಿದ, ನಾಗರಿಕೆತೆಗೆ ಹೊಸ ರೂಪ ನೀಡಿ ಈ ಮಟ್ಟದಲ್ಲಿ ಪ್ರಗತಿಗೆ ಕಾರಣವಾದ ಮತ್ತೊಬ್ಬ ವ್ಯಕ್ತಿಯನ್ನು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಅವರ ಬೋಧನೆಗಳ ವ್ಯಾಪ್ತಿ ಹಾಗೂ ಪರಿಣಾಮವೇ ಅವರನ್ನು ಕೇವಲ ಧಾರ್ಮಿಕ ನಾಯಕರಾಗಿ ಮಾತ್ರವಲ್ಲದೆ, ಸಾಮಾಜಿಕ, ರಾಜಕೀಯ ನಾಯಕನಾಗಿ ಚರಿತ್ರೆಯಲ್ಲಿ ಜಾಗ ಪಡೆಯುವಂತೆ ಮಾಡಿದೆ.

ಅರಬರಲ್ಲಿ ಆಳವಾಗಿ ಬೇರೂರಿದ್ದ ಶ್ರೇಷ್ಠತೆಯ ಅಂಧಾಭಿಮಾನವನ್ನು ಹೋಗಲಾಡಿಸಿ, ಮನುಷ್ಯರೆಲ್ಲರೂ ಸಮಾನರೆಂದು ಸಾರಿದರು. ಕಪ್ಪು ಜನಾಂಗದ ಸಯ್ಯಿದ್ ಬಿಲಾಲ್ ಹಾಗೂ ಬಿಳಿವರ್ಣೀಯ ಸಯ್ಯಿದ್ ಸಲ್ಮಾನುಲ್ ಫಾರಿಸ್ ಅವರನ್ನು ಒಂದೇ ತಟ್ಟೆಯಲ್ಲಿ ಉಣ್ಣುವಂತೆ ಮಾಡಿದರು. ಭಾಷೆ, ವರ್ಣ, ಪ್ರಾದೇಶಿಕತೆಗಳನ್ನು ಬದಿಗಿಟ್ಟು ಸಾಮೂಹಿಕ ಪ್ರಾರ್ಥನೆಗೆ ಭುಜಕ್ಕೆ ಭುಜಕೊಟ್ಟು ನಿಲ್ಲುವಂತೆ ಮಾಡಿದರು. ತಾಯಿಯ ಪಾದದಡಿ ಸ್ವರ್ಗವಿದೆ, ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕಿದೆ ಎಂದು ಮಹಿಳಾ ಸಬಲೀಕರಣಕ್ಕೂ ಕಾರಣರಾದರು. ತಮ್ಮ ಕೊನೆಯ ಭಾಷಣದಲ್ಲೂ ಸಮಾನತೆ, ಏಕತೆ, ಸಹಿಷ್ಣುತೆ ಹಾಗೂ ಸಹೋದರತೆಗೆ ಒತ್ತುಕೊಟ್ಟರು. ‘ಜಗತ್ತಿಗೆ ಸಮಾನತೆಯ ಸಂದೇಶವನ್ನು ತಂದ ಮಹಾನ್ ವ್ಯಕ್ತಿ ಮುಹಮ್ಮದರ ಮೇಲೆ ನಮ್ಮ ದೃಷ್ಟಿ ಹೊರಳುತ್ತದೆ’ ಎಂದು ಸ್ವಾಮಿ ವಿವೇಕಾನಂದು 1900 ಏಪ್ರಿಲ್ 3ರಂದು ಅಮೆರಿಕದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು.

ಮುಹಮ್ಮದರ ಶಾಂತಿ, ಸಹಬಾಳ್ವೆಯ ಸಂದೇಶವು ಧರ್ಮಗಳ ನಡುವೆ ಸಂವಾದ ಮತ್ತು ಸಹಕಾರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮದೀನಾದಲ್ಲಿ ಹಲವು ಸಮುದಾಯಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು, ಮೈತ್ರಿ ರಚನೆ, ಸಂಘರ್ಷ ಪರಿಹಾರ ಸೂತ್ರಗಳು ಶಾಂತಿ, ಸಹಕಾರಕ್ಕೆ ಹೇತುವಾಯಿತು. ಇದು ಅವರ ರಾಜತಾಂತ್ರಿಕ ಚಾಕಚಕ್ಯತೆ ಮತ್ತು ಪರಸ್ಪರ ಗೌರವಿಸುವ ಗುಣಕ್ಕೆ ಹಿಡಿದ ಕೈಗನ್ನಡಿ. ಯುದ್ಧದಲ್ಲಿ ಮಕ್ಕಳು, ಮಹಿಳೆಯರನ್ನು ಕೊಲ್ಲಬಾರದು ಎಂದರು. ಯುದ್ಧ ಕೈದಿಗಳಲ್ಲಿ ಅಕ್ಷರಸ್ಥರಿದ್ದರೆ ಬೇರೆ ಬಂಧಿಗಳಿಗೆ ಅಕ್ಷರ ಕಲಿಸುವ ‘ಶಿಕ್ಷೆ’ಯನ್ನು ನೀಡಿ ಅವರನ್ನು ಬಂಧಮುಕ್ತಗೊಳಿಸುತ್ತಿದ್ದರು. ಅಕ್ಷರಾಭ್ಯಾಸ ಮಾಡಿದ ಕೈದಿಗಳನ್ನು ಬಿಡುಗಡೆಗೊಳಿಸಿ ಶಿಕ್ಷಣದ ಮಹತ್ವ ಸಾರಿದರು. ಜ್ಞಾನ ಪರಂಪರೆಯಲ್ಲಿ ಗುಲಾಮರಿಗೂ ಅವಕಾಶ ನೀಡಿ ಅವರನ್ನೂ ಪಂಡಿತರನ್ನಾಗಿ ಪರಿವರ್ತಿಸಿದರು. ಪರಿಣಾಮ ವಿಜ್ಞಾನ, ವೈದ್ಯಕೀಯ, ಗಣಿತಶಾಸ್ತ್ರ, ತತ್ವಶಾಸ್ತ್ರ ಕ್ಷೇತ್ರಗಳಲ್ಲಿ ಮುಸ್ಲಿಂ ವಿದ್ವಾ‌ಂಸರ ಕೊಡುಗೆ ಭಾರಿ ದೊಡ್ಡ ಮಟ್ಟದಲ್ಲಿ ಆಯಿತು.

ಶ್ರೀಮಂತರ ಸ್ವತ್ತಿನ ಶೇ 2.5ರಷ್ಟು ಬಡವನ ಹಕ್ಕು, ನೆರೆಹೊರೆಯವ ಹಸಿದಿರುವಾಗ ಉಣ್ಣುವವನ್ನು ನನ್ನವನಲ್ಲ ಎನ್ನುವ ಅವರ ಸಿದ್ಧಾಂತಗಳು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ಪ್ರತಿಧ್ವನಿಗಳು. ನಾಳೆ ಪ್ರಳಯವಾಗುವುದಿದ್ದರೂ ಇಂದು ಸಸಿಯೊಂದನ್ನು ನೆಡು, ತುಂಬಿ ಹರಿಯುವ ನದಿಯಿಂದಲೂ ಹನಿ ನೀರು ಪೋಲು ಮಾಡಕೂಡದು ಎಂದು ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು. ಹುಟ್ಟಿದ ಊರಿನಿಂದ ತೊರೆಯುವಂತೆ ಮಾಡಿದ, ತನ್ನನ್ನು ಹೀನಾಯವಾಗಿ ನಿಂದಿಸಿ, ಅವಮಾನಿಸಿ, ಪೀಡಿಸಿ, ಚಿಕ್ಕಪ್ಪನ ಕರುಳು ಬಗೆದು ರಕ್ತ ಕುಡಿದವರಿಗೂ ಸಾಮೂಹಿಕ ಕ್ಷಮಾದಾನ ನೀಡಿದ ಅವರ ಕ್ಷಮಾಗುಣವೇ ಅವರನ್ನು ಸಾರ್ವಕಾಲಿಕ ನಾಯಕನ್ನಾಗಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT