ಬುಧವಾರ, ಅಕ್ಟೋಬರ್ 28, 2020
20 °C

ಸ್ಮರಣೆ: ಅವತಾರ ಪುರುಷ ಶ್ರೀರಾಮಕೃಷ್ಣ ಪರಮಹಂಸ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಪರಕೀಯರ ಸಾಂಸ್ಕೃತಿಕ ಆಕ್ರಮಣದಿಂದಾಗ ಕಳೆಗುಂದಿದ್ದ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವಿತಗೊಳಿಸಿದವರು ಶ್ರೀ ರಾಮಕೃಷ್ಣ ಪರಮಹಂಸರು. ಆ ಎಲ್ಲ ಮಾರ್ಗಗಳಿಂದಲೂ ಗುರಿಯನ್ನು ತಲಪಬಹುದು ಎಂದು ತೋರಿಸಿಕೊಟ್ಟ ವಿಶ್ವಗುರು ಅವರು.

ಮನುಕುಲದ ಮಹಾಸಾಗರದಲ್ಲಿ ಆಗಾಗ ಹೆದ್ದೆರೆಗಳೇಳುತ್ತವೆ. ಹೀಗೆ ಸಮುದಾಯದ ದಡಕ್ಕೆ ಬಡಿದ ಹೆದ್ದೆರೆಯ ನಿನಾದ ಬಹುಕಾಲದವರೆಗೆ ಬಹುದೂರದವರೆಗೆ ಕೇಳಿಸುತ್ತದೆ. ಕಾಲಕಾಲಕ್ಕೆ ಆಯಾ ಆವಶ್ಯಕತೆಗಳಿಗೆ ಮಹಾತ್ಮರ ಅವತಾರವಾಗುವುದೂ ಹೀಗೆಯೇ. ಕೃಷ್ಣ ಹುಟ್ಟಿದ್ದು ಹೀಗೇ, ಕ್ರಿಸ್ತ ಹುಟ್ಟಿದ್ದೂ ಹೀಗೇ. 1800-1900ರ ಅವಧಿ ಹೊಸ ಚಿಂತನೆಗಳ ಹರಿವನ್ನು ವಿಜ್ಞಾನ-ಮನೋವಿಜ್ಞಾನದ ಪ್ರವಾಹವನ್ನು ಕಂಡಂತಹ ಸಮಯ. ಪರಕೀಯ ಆಡಳಿತ ಭಾರತೀಯ ಚಿಂತನ ಸಂಸ್ಕೃತಿಯನ್ನು ಹೆಚ್ಚೂ ಕಡಿಮೆ ನಾಶ ಮಾಡಿದಂತಹ ಸನ್ನಿವೇಶ. ಆತ್ಮವಿಶ್ವಾಸ, ಆತ್ಮಸ್ಥೈರ್ಯ ಕಳೆದುಕೊಂಡು ಭವಿಷ್ಯವೆಂದರೆ ಅಂಧಕಾರವೆಂದೇ ಭಾವಿಸಿದ್ದಂತಹ ಭಾರತೀಯ ಸಮುದಾಯಕ್ಕೆ ಆಶಾಕಿರಣವಾಗಿ ಕಾಣಿಸಿಕೊಂಡವರು ಶ್ರೀರಾಮಕೃಷ್ಣ ಪರಮಹಂಸರು.

1836ರ ಫೆಬ್ರುವರಿ 18ರಂದು ಬಂಗಾಳದ ಕುಗ್ರಾಮ ಕಾಮಾರಪುಕುರದ ಬಡ ಬ್ರಾಹ್ಮಣದಂಪತಿಗಳಾದ ಕ್ಷುಧಿರಾಮ ಮತ್ತು ಚಂದ್ರಮಣಿದೇವಿ – ಇವರ ಮಗನಾಗಿ ರಾಮಕೃಷ್ಣರು ಜನಿಸಿದರು. ಬಾಲ್ಯದ ಹೆಸರು ಗದಾಧರ; ಹಳ್ಳಿಯ ಮುಗ್ಧರ ಪಾಲಿಗೆ ‘ಗಧಾಯ್’; ಮುಂದೆ ದಕ್ಷಿಣೇಶ್ವರದ ಕಾಳಿಯ ಅರ್ಚಕರಾಗಿ ಪ್ರಸಿದ್ಧರಾದುದು ಶ್ರೀರಾಮಕೃಷ್ಣ ಎಂದು. ಅವರ ಇಡೀ ಜೀವನ ಆಧ್ಯಾತ್ಮಿಕ ಸಾಧನೆಯ ಪ್ರಯೋಗಾಲಯವಾಯಿತು. ದೇಹ-ಮನಸ್ಸುಗಳೇ ಸಮಿತ್ತಾದವು. ನಾನಾ ತೆರನಾದ ಸಾಧನಾಮಾರ್ಗಗಳಿಂದ ಪರಮಸತ್ಯದ ದರ್ಶನ ಪಡೆದು ಪರಮಹಂಸರಾದರು. ಈ ಬಗೆ ಬಗೆಯ ಸಾಧನೆಗಳ ಫಲವೇನೆಂದರೆ, ಮುಂದೆ ಅವರ ಬಳಿ ಮಾರ್ಗದರ್ಶನಕ್ಕೆ ಬಂದ ನಾನಾ ಭಾವದ ಸಾಧಕರಿಗೆ ಅವರವರ ಭಾವಕ್ಕೆ ತಕ್ಕಂತೆ ಸೂಚನೆಗಳನ್ನು ನೀಡಲು ಅವರಿಗೆ ಸಾಧ್ಯವಾಯಿತು. ನರೇಂದ್ರ ಮೊದಲಾದ ಆಧುನಿಕ ವಿದ್ಯಾಭ್ಯಾಸ ಪ್ರಭಾವಿತ ಯುವಜನರ ಮನವನ್ನು ದೇಸೀ ಧರ್ಮ-ಅಧ್ಯಾತ್ಮದ ಮೂಸೆಯಲ್ಲಿ ಹದಗೊಳಿಸಲು ಶ್ರೀರಾಮಕೃಷ್ಣರು ತಮ್ಮ ಅನುಭವದ ಕುಲುಮೆಯನ್ನು ಸಮರ್ಥವಾಗಿ ಬಳಸಿಕೊಂಡರು. ತತ್ಫಲವಾಗಿ ಅವರ ಮಹಾಸಮಾಧಿಯ ನಂತರವೂ ಶ್ರೀರಾಮಕೃಷ್ಣರ ಜೀವನ-ಸಂದೇಶಗಳ ಪ್ರಭಾವ ಇಡೀ ಜಗತ್ತನ್ನು ಆವರಿಸಿಕೊಂಡಿತು.

ಶ್ರೀರಾಮಕೃಷ್ಣರೆನ್ನುತ್ತಾರೆ: ‘ಭಗವಂತನನನ್ನು ನೀವು ಶ್ರೀಮಂತಿಕೆಯಿಂದ ಪ್ರಭಾವಗೊಳಿಸಲು ಸಾಧ್ಯವೆ? ಅವನು ಒಲಿಯುವುದು ಭಕ್ತಿಗೆ. ಅವನಿಗೇನು ಬೇಕು? ಖಂಡಿತ ಹಣವಲ್ಲ. ತನ್ನ ಭಕ್ತರಿಂದ ಪ್ರೀತಿ, ಪ್ರೇಮ, ವಿವೇಕ ಮತ್ತು ವೈರಾಗ್ಯಗಳಷ್ಟನ್ನೇ ಅವನು ಬಯಸುತ್ತಾನೆ.

‘ಯಾರಿಗೆ ಭಗವದ್ದರ್ಶನವಾಗಿರುತ್ತದೊ ಅವರಿಗೆ ಜಗತ್ತೆಲ್ಲವೂ ಭಗವಂತನ ರೂಪವೇ. ಅವರಿಗೆ ಮಗು, ತಂದೆ-ತಾಯಿ ಬಂಧುಗಳೆಲ್ಲರೂ ಭಗವಂತನ ರೂಪಗಳೇ. ಇಂತಹವರಿಗೆ ಪ್ರಾಪಂಚಿಕ ಮಾತುಕತೆ ಹಿಡಿಸುವುದಿಲ್ಲ. ಭಗವಂತನ ಕುರಿತಾಗಿ, ಅಧ್ಯಾತ್ಮಜೀವನದ ಕುರಿತಾಗಿ ಇವರು ಮಾತಾಡುತ್ತಿರುತ್ತಾರೆ.

‘ದೇವರು ಕೇವಲ ನಮ್ಮೊಳಗಿಲ್ಲ, ಹೊರಗೂ-ಒಳಗೂ ಇದ್ದಾನೆ. ತಾಯಿ ಕಾಳಿ ನನಗೆ ಅಂತಹ ದರ್ಶನ ನೀಡಿದ್ದಾಳೆ. ಎಲ್ಲವೂ ಚಿನ್ಮಯವೇ. ಅವಳೇ ಎಲ್ಲವೂ ಆಗಿದ್ದಾಳೆ. ಮೂರ್ತಿ, ಭಕ್ತ, ಪೂಜಾಸಾಮಗ್ರಿ, ಬಾಗಿಲು, ನೆಲ - ಎಲ್ಲವೂ ಚಿನ್ಮಯವೇ.

‘ಒಣಜ್ಞಾನವೆಂಬುದು ಸಾಮಾನ್ಯ ರಾಕೆಟ್‍ನಂತೆ. ಕೆಲವೇ ಕಿಡಿ ಹಾರಿಸಿ ನಂದಿಹೋಗುತ್ತದೆ. ಆದರೆ ನಾರದ, ಶುಕನಂತಹವರ ಜ್ಞಾನ ಒಳ್ಳೆಯ ರಾಕೆಟ್‍ನಂತೆ. ಒಂದಿಷ್ಟು ಬಗೆ ಬಗೆಯ ಬಣ್ಣದ ಬೆಳಕು ಚೆಲ್ಲಿ ಕ್ಷಣಕಾಲ ತಣ್ಣಗಿದ್ದು ಮತ್ತೆ ಬಣ್ಣದ ಬೆಳಕು ನೀಡುತ್ತದೆ. ಹೀಗೆ ಮತ್ತೆ ಮತ್ತೆ ಹೊಸ ಹೊಳಹು ಕಾಣಬರುತ್ತದೆ. ಈ ಮುನಿಗಳದ್ದು ಭಗವಂತನ ಬಗ್ಗೆ ಇರುವ ದಿಟವಾದ ಪ್ರೇಮ. ಸಚ್ಚಿದಾನಂದನನ್ನು ಮುಟ್ಟಲು ನಾವು ಬಳಸುವ ಹಗ್ಗವೇ ಪ್ರೇಮ.‘

ದಕ್ಷಿಣೇಶ್ವರದ ಈ ದೇವಮಾನವನ ಲೀಲೆ ಮುಗಿದದ್ದು 1886ರ ಆಗಸ್ಟ್ 16ರಂದು; ಪಂಚಾಂಗದ ಪ್ರಕಾರ ಭಾದ್ರಪದ ಶುಕ್ಲ ದಶಮಿಯಂದು. ಅವರ ಜೀವನ-ಚಿಂತನೆಗಳ ಸ್ಮರಣೆಯೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವ. 

ವಚನವೇದ: ಮುಮುಕ್ಷುಗಳ ಕೈಪಿಡಿ

ಶ್ರೀರಾಮಕೃಷ್ಣರು ಯುಗಾವತಾರರು; ಜಗದ ಪ್ರವರ್ತಕರು. ಮನುಷ್ಯನ ಜೀವನವು ಇಂದ್ರಿಯಾನುಭವಗಳ ಆಧಾರಿತವೂ, ಆಕರ್ಷಣೆಗಳ ಆಗರವೂ ಆಗಿರುವ ಆಧುನಿಕ ಸಂದರ್ಭದಲ್ಲಿ ಅದರಾಚೆಗೂ ಅವನ ಅಸ್ತಿತ್ವವಿದೆ, ಅದೇ ಮನುಷ್ಯನಿಗೆ ಸಾರ್ಥಕತೆಯನ್ನು ನೀಡುವ ಗುರಿ ಎಂದು ಮನವರಿಕೆ ಮಾಡಿಕೊಡುವುದು ಸಾಮಾನ್ಯವೆ? ಅನುಭವದ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು, ಅನುಭಾವದ ಎತ್ತರದಲ್ಲಿ ವಿಹರಿಸಿ ಆನಂದಿಸಬೇಕು ಎಂದು, ನರಜೀವನದ ಆಶಯವನ್ನು ಎತ್ತರಿಸುವ ಧೈರ್ಯ ತೋರಿದ್ದು ಸಾಮಾನ್ಯವೆ? ಶಾಸ್ತ್ರಗಳು ಹೇಳುವುದು ಅಂತಿರಲಿ, ಅನುಭವದ ಪ್ರಮಾಣ ಎಷ್ಟಿದೆ ಎಂದು ಕೇಳುವುದು ಸಾಮಾನ್ಯ ಧೈರ್ಯವೆ? ವಿಶ್ವದ ಪ್ರಮುಖ ಮತ-ಧರ್ಮಗಳ ಮಾದರಿಯನ್ನು ಅನುಸರಿಸಿ, ಆ ಎಲ್ಲ ಮಾರ್ಗಗಳಿಂದ ಗುರಿಯನ್ನು ತ‌ಲುಪಬಹುದು ಎಂದು ಘೋಷಿಸಿದ್ದು ಸಾಮಾನ್ಯವೆ? ಇಷ್ಟೆಲ್ಲ ಸಾಧಿಸಿದ ಶ್ರೀರಾಮಕೃಷ್ಣರು ನಿರಕ್ಷರಕುಕ್ಷಿ - ಸರಿಯಾಗಿ ಸಹಿ ಮಾಡಲೂ ಅವರಿಗೆ ಬರುತ್ತಿರಲಿಲ್ಲ. ದೊಡ್ಡ ಭಾಷಣಕಾರರೂ ಬರಹಗಾರರೂ ಅಲ್ಲ. ಆದರೆ ಅವರು ಆಡಿದ ಮಾತುಗಳೇ ‘ವಚನವೇದ’ ಆಗಿ ಸಹಸ್ರಾರು ಮುಮುಕ್ಷುಗಳಿಗೆ ಇಂದಿಗೂ ಮಾರ್ಗದರ್ಶಕವಾಗಿದೆ.

***

ದೈವೀಕತೆಯ ಮೂರ್ತರೂಪ

‘ಶ್ರೀರಾಮಕೃಷ್ಣರ ಜೀವನ ನಮ್ಮನ್ನು ಭಗವಂತನೊಂದಿಗೆ ಮುಖಾಮುಖಿಯಾಗಿಸುತ್ತದೆ... ಶ್ರೀರಾಮಕೃಷ್ಣರೆಂದರೆ ದೈವೀಕತೆಯ ಮೂರ್ತರೂಪ.’

– ಮಹಾತ್ಮ ಗಾಂಧಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು