ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮಕೃಷ್ಣ: ದೈವಕೇಂದ್ರಿತ ವಿಶ್ವಮಾನವ

ಇಂದು ಪರಮಹಂಸರ ಜಯಂತಿ
Last Updated 4 ಮಾರ್ಚ್ 2022, 11:21 IST
ಅಕ್ಷರ ಗಾತ್ರ

ಶ್ರೀರಾಮಕೃಷ್ಣ ಪರಮಹಂಸರು ಬಾಲ್ಯದಿಂದಲೇ ದೈವಕೇಂದ್ರಿತ ಬದುಕನ್ನು ನಡೆಸಿದರು; ಮುಂದೆ ತಮ್ಮ ಶಿಷ್ಯರಿಗೂ ಜೀವರಲ್ಲಿ ಶಿವನನ್ನು ಕಾಣುವ ತತ್ತ್ವವನ್ನೇ ಬೋಧಿಸಿದರು.

ಶ್ರೀರಾಮಕೃಷ್ಣರ ಬದುಕನ್ನು ನಾಲ್ಕು ಮಜಲುಗಳಲ್ಲಿ ಗಮನಿಸಬಹುದು. ಬಾಲ್ಯ, ಸಾಧನೆಯ ಹಾದಿ, ಸಿದ್ಧಪುರುಷ, ಪ್ರಸಿದ್ಧ ಪುರುಷ - ಪರಮಹಂಸ. ಸಾಮಾನ್ಯವಾಗಿ ಧರ್ಮಗುರುಗಳು ತಮ್ಮ ಮತ–ಪಂಥದ ಪ್ರಮುಖರಾಗಿ, ಮಾರ್ಗದರ್ಶಕರಾಗಿ ಕಂಗೊಳಿಸುತ್ತಾರೆ; ತಾವು ಕಂಡಷ್ಟನ್ನೇ ಪರಮಸತ್ಯವೆಂದು ಜಗತ್ತಿಗೆ ಬೋಧಿಸುತ್ತಾರೆ. ಆದರೆ ಶ್ರೀರಾಮಕೃಷ್ಣರು ಈ ಜಗತ್ತು ಗುರುತಿಸಿದ ಎಲ್ಲಾ ಮತಗಳ ನಂಬಿಕೆಗಳನ್ನು ತಮ್ಮದಾಗಿಸಿಕೊಂಡು ಅವುಗಳದೇ ಮಾರ್ಗದಲ್ಲಿ ಮುಂದುವರೆದು ಅವೆಲ್ಲವೂ ಒಂದೇ ಸತ್ಯದ ನೆಲೆಯನ್ನು ಮುಟ್ಟುತ್ತವೆ ಎಂಬುದನ್ನು ಅರಿತರು. ಅಂತಧರ್ಮೀಯ ಭಿನ್ನತೆಗಳನ್ನು ಮತ್ತು ಸ್ವಧರ್ಮದಲ್ಲಿ ಇರುವ ಪರಮತ ಅಸಹಿಷ್ಣುತೆಯ ಮೊನಚನ್ನು ತಮ್ಮದೇ ಶೈಲಿಯಲ್ಲಿ ನಿರಾಕರಿಸಿದರು. ಹೇಗೆ ನೀರನ್ನು ‘ಜಲ್’, ‘ಪಾನಿ’, ‘ವಾಟರ್‘, ‘ಆಕ್ವಾ’ – ಎಂದು ಕರೆಯುತ್ತಾರೋ ಹಾಗೆ ಒಬ್ಬನೇ ಭಗವಂತನನ್ನು ಬೇರೆ ಬೇರೆ ಧರ್ಮದವರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ ಎಂದು ಅವರು ತಿಳಿಸಿದರು.

ಮತೀಯ ಭಿನ್ನತೆಗಳನ್ನು ಕುರಿತಂತೆ ಒಂದು ಸಂದರ್ಭದಲ್ಲಿ ಅವರು ಸಮನ್ವಯವನ್ನು ತಿಳಿಸುವ ಕ್ರಮ ಸೊಗಸಾಗಿದೆ. ಶಿವ ದೊಡ್ಡವನೋ, ವಿಷ್ಣು ದೊಡ್ಡವನೋ ಎಂಬ ಚರ್ಚೆ ತಾರಕಕ್ಕೇರಿದ ಸಂದರ್ಭದಲ್ಲಿ ಉದ್ಧಾಮ ಪಂಡಿತರೊಬ್ಬರು ‘ತಾವು ಶಿವನನ್ನೂ ಕಂಡಿಲ್ಲ, ವಿಷ್ಣುವನ್ನೂ ಕಂಡಿಲ್ಲ; ಆದ್ದರಿಂದ ಅವರವರ ಭಾವಕ್ಕೆ ತಕ್ಕಂತೆ ಅವರವರ ದೈವಗಳು ದೊಡ್ಡವು’ ಎಂದು ಘೋಷಿಸುತ್ತಾರೆ. ಸ್ವತಃ ದೇವದೇವತೆಗಳ ಅನುಭವವನ್ನು ಮತ್ತು ಸಮಾಧಿಸ್ಥಿತಿಯ ಅನುಭವವನ್ನು ಪಡೆದುಕೊಂಡ ಪರಮಹಂಸರು ‘ಧರ್ಮಕ್ಕೆ ಅನುಭವವೇ ಪ್ರಮಾಣ, ತರ್ಕವಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ. ಸೊಗಸಾದ ತೋಟವನ್ನು ನೋಡಲು ಹೋದವರಲ್ಲಿ ಒಬ್ಬ ತೋಟದ ಪ್ರಾಂಗಣದ ಗೋಡೆಯನ್ನು ಏರಿ ಅತ್ತ ಕಡೆಯ ಸೌಂದರ್ಯವನ್ನು ಸವಿದು ‘ಹಾ!’ ಎಂದು ಉದ್ಗರಿಸಿ ಅತ್ತ ಕಡೆಗೆ ಧುಮುಕಿದನಂತೆ. ಅದನ್ನು ನೋಡಿ ಮತ್ತೊಬ್ಬ ತಾನು ಆ ತೋಟವನ್ನು ನೋಡಿ ವಿವರಿಸುವುದಾಗಿ ಭಾವಿಸಿ ಗೋಡೆಯನ್ನು ಏರಿ ಅತ್ತ ನೋಡಿ ‘ಹಾ!’ ಎಂದು ಉದ್ಗರಿಸಿ ಅತ್ತಲೇ ಧುಮುಕಿದನಂತೆ. ಇದು ದೈವಸಾಕ್ಷಾತ್ಕಾರದ ಅನುಭವವನ್ನು ಕುರಿತು ಪರಮಹಂಸರ ನುಡಿ. ಸಾಕ್ಷತ್ಕಾರವು ಅನುಭವನಿಷ್ಠವೇ ಹೊರತು ಪದಗಳಿಗೆ ದಕ್ಕದಷ್ಟೆ.

ಪರಮಹಂಸರೆಂದು ವಿದ್ವಾಂಸರ ಸಭೆ ಅವರನ್ನು ಗುರುತಿಸುವ ಸಂದರ್ಭದಲ್ಲಿ ಅವರು ಮಡಿಲಲ್ಲಿದ್ದ ಮಂಡಕ್ಕಿಯನ್ನು ಮೆಲ್ಲುತ್ತ ಯಾರದೋ ಕುರಿತಾದ ಚರ್ಚೆ ಎಂಬಂತೆ ಆಲಿಸುತ್ತ ಕುಳಿತ್ತಿದ್ದರಂತೆ. ತಾವು ಪರಮಹಂಸರೆಂದು ವಿದ್ವತ್‌ಸಭೆ ಘೋಷಿಸಿದಾಗ ‘ಸದ್ಯ ಹುಚ್ಚ ಎಂದಾಗಲಿಲ್ಲ’ ಎಂದು ಉದ್ಗರಿಸಿದರಂತೆ. ಇದು ಅವರ ನಿರಹಂಕಾರದ ಪ್ರತೀಕ.

ಜೀವರಲ್ಲಿ ಶಿವನನ್ನು ಕಾಣುವ ಅವರ ಭಾವ ಎಷ್ಟು ಅತ್ಯುನ್ನತ ಮಟ್ಟದ್ದಾಗಿತ್ತೆಂದರೆ, ಒಮ್ಮೆ ಅವರು ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ತೀರ ಬಡತನದ ಮತ್ತು ಕಷ್ಟಗಳಿಂದ ನರಳುತ್ತಿದ್ದ ಗ್ರಾಮವಾಸಿಗಳನ್ನು ಕಂಡು ತಮಗೆ ಪ್ರವಾಸ ಏರ್ಪಡಿಸಿದ್ದ ಶ್ರೀಮಂತ ವ್ಯಕ್ತಿಯನ್ನು ಕರೆದು ಅವರಿಗೆಲ್ಲಾ ಊಟ ಮತ್ತು ಕನಿಷ್ಠ ಅವಶ್ಯಕತೆಗಳನ್ನು ನೀಡದಿದ್ದರೆ ತಾವು ತೀರ್ಥಯಾತ್ರೆಯನ್ನು ಮುಂದುವರೆಸುವುದಿಲ್ಲವೆಂದು ಹಠ ಹಿಡಿದರು; ಅವನು ಆ ವ್ಯವಸ್ಥೆ ಮಾಡಿದ ಬಳಿಕವೇ ತೀರ್ಥಯಾತ್ರೆಯನ್ನು ಮುಂದುವರೆಸಿದರಂತೆ. ಇದೇ ಭಾವವನ್ನು ಅವರ ಶಿಷ್ಯ ಸ್ವಾಮಿ ವಿವೇಕಾನಂದರು ಕೂಡ ವಿಸ್ತರಿಸಿ ಮುಂದುವರೆಸಿದುದನ್ನು ಚರಿತ್ರೆ ದಾಖಲಿಸುತ್ತದೆ. ಸಾಧಕರಾಗಿ, ಸಿದ್ಧರಾಗಿ, ಪರಮಹಂಸರಾಗಿ ಅವರು ಗಳಿಸಿದ ಅತ್ಯಂತ ಶ್ರೇಷ್ಠ ಜ್ಞಾನವು ಅತಿ ಸರಳಭಾಷೆಯ ‘ವಚನವೇದ’ವಾಗಿ ನಮಗಿಂದು ಲಭ್ಯವಿದೆ. ಇಂದು ರಾಮಕೃಷ್ಣ ಪರಮಹಂಸರ ಜಯಂತಿ. ವಚನವೇದದ ತತ್ತ್ವಗಳನ್ನು ಅಧ್ಯಯನ ಮಾಡಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT