ಶನಿವಾರ, ಮೇ 28, 2022
26 °C

ಯುಗ ಯುಗಗಳೇ ಸಾಗಿದರೂ ಯುಗಾದಿಯ ನೆನಪೇ ಸುಂದರ...

ಡಾ.‌ಮಂಜುಳಾ ಹುಲ್ಲಹಳ್ಳಿ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಯುಗಾದಿಯ ಸಮಯದಲ್ಲಿ ವಸಂತ ತುಂಬಿಕೊಡುವ ಸೊಗಸನ್ನು, ಸಂತಸವನ್ನು ಆಸ್ವಾದಿಸುವಾಗ ಬಾಲ್ಯದ ನೆನಪುಗಳು ಮೆರವಣಿಗೆ ಹೊರಡುತ್ತವೆ. ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಅಂಥ ನೆನಪುಗಳ ‘ಬೇವು–ಬೆಲ್ಲ’ವನ್ನು ಸವಿಯೋಣ ಬನ್ನಿ...

ಮಾಗಿಯ ಚಳಿಯನ್ನು ಸಂಪೂರ್ಣವಾಗಿ ನಿವಾರಿಸಿ, ಗಿಡ–ಮರ–ಬಳ್ಳಿಗಳಿಗೆ ಚಿಗುರಿನ ನವಿರಂಗಿ ತೊಡಿಸಿ, ಗಿಳಿ–ಕೋಗಿಲೆ–ಗೊರವಂಕದಂತಹ ನೂರಾರು ಹಕ್ಕಿಗಳ ಕಲರವಕ್ಕೆ ಹೊಸ ಭಾಷ್ಯ ಬರೆಯುತ್ತ; ಬೇವಿನ ಹೂಗಳ ಪರಿಮಳಕ್ಕೆ ಮಾವಿನ ಸೊಂಪು, ಮಲ್ಲಿಗೆ ಬಯಲಿನ ಕಂಪು, ಗಾಳಿಯ ತಂಪು ಎಲ್ಲವೂ ಒಟ್ಟಾಗಿ ಒದಗಿಬರುವ ಅಪೂರ್ವ ದಿನವೇ ಯುಗಾದಿ ಹಬ್ಬ.

ಯುಗಾದಿ ಹಬ್ಬವನ್ನು ನೆನೆದಾಗಲೆಲ್ಲ ಮನಸ್ಸು ಬಾಲ್ಯದಂಗಳಕ್ಕೆ ಜಿಗಿಯುತ್ತದೆ. ಈ ಹಬ್ಬದ ದಿನ ಮುಂಜಾನೆ ಬೇಗನೆ ಎದ್ದು, ಎಣ್ಣೆ ಸ್ನಾನ ಮಾಡಿ, ತೋಯ್ದ ಉದ್ದ ಕೂದಲನ್ನು ಬೆನ್ನ ತುಂಬೆಲ್ಲಾ ಹರಡಿಕೊಂಡು, ಹೊಸ ಬಟ್ಟೆ ಧರಿಸಿ ತುಂಬು ಆನಂದವನ್ನು ಮನದಾಳದಿಂದ ಅನುಭವಿಸುತ್ತಾ ನೆರಿಗೆ ಲಂಗಗಳನ್ನು ಕಾಲುಗಳಿಂದ ಚಿಮ್ಮಿಸುತ್ತಾ ನಡೆಯುವುದೆಂದರೆ ಜಗವನ್ನೇ ಗೆದ್ದ ಸಂಭ್ರಮ. ಹಬ್ಬದ ಹೆಸರಿನಲ್ಲಿ ಊರಿನ ಮನೆ ಮನೆಗೂ ಹೊಕ್ಕು ಹಿರಿಯರಿಗೆ ಬೇವು–ಬೆಲ್ಲ ನೀಡಿ ಅವರ ಪಾದಗಳಿಗೆ ನಮಿಸಿ ಆಶೀರ್ವಾದ ಪಡೆಯುತ್ತಿದ್ದದ್ದು ಅಪರೂಪದ ಸವಿನೆನಪು. ಆ ಹಿರಿಯರ ಮುಖಗಳನ್ನೆಲ್ಲಾ ಈ ನೆನಪುಗಳಲ್ಲೇ ಅವಲೋಕಿಸಬೇಕು.

ಈ ಹಬ್ಬದಲ್ಲಿ ಗಿಡ–ಮರಗಳಲ್ಲಿ ಚಿಗುರಿನ ಸಂಭ್ರಮವಿದ್ದರೆ, ನಮ್ಮೂರಿನ ದೇವಾಲಯಗಳ ಮಹಾದ್ವಾರಗಳು ಮಾವು–ಬೇವು ತೋರಣಗಳಿಂದ ಕಂಗೊಳಿಸುತ್ತಿದ್ದವು. ದೇಗುಲದ ಒಳಗೆಲ್ಲ ಥರಥರದ ಹೂಮಾಲೆಗಳ ತೋರಣಗಳು. ಗರ್ಭಗುಡಿಯ ಮಂದಾರತಿ, ಅರ್ಚಕರ ಮಂತ್ರ ಘೋಷಗಳು, ಕರ್ಪೂರ ಸುಗಂಧ ಕಡ್ಡಿಗಳ ಪರಿಮಳ, ದೇಗುಲದ ಒಳಹೊರಗೆಲ್ಲ ಅಡ್ಡಾಡುವ ಜನರು, ಅಂಗಳದ ತುಂಬೆಲ್ಲ ರಾರಾಜಿಸುತ್ತಿದ್ದ ರಂಗವಲ್ಲಿಗಳು, ಇವುಗಳ ಮದ್ಯೆ ಎಲ್ಲರ ಕೇಂದ್ರ ಬಿಂದುವಾಗಿ ಹೊಳೆದು ಮೆರೆಯುತ್ತಿದ್ದ ಮಲ್ಲಿಕಾರ್ಜುನ ಮತ್ತು ವರದರಾಜರು ಈಗಲೂ ಕಣ್ತುಂಬಿ ಬರುತ್ತಾರೆ.

ಹೀಗೆ ಯುಗಾದಿ ಹಬ್ಬದ ರಂಗಿನ ಸಂಭ್ರಮ ಮೆಲುಕು ಹಾಕುವಾಗ, ಇದೇ ಹಬ್ಬದ ದಿನ ಬೆಳ್ಳಂಬೆಳಗ್ಗೆಯೇ ಹೊನ್ನೇರು ಕಟ್ಟುತ್ತಿದ್ದ ಅಪ್ಪ ನೆನಪಾಗುತ್ತಾರೆ. ಹೊನ್ನೇರು ಕಟ್ಟುವುದೆಂದರೆ ಏನೆಂಬ ನನ್ನ ಪ್ರಶ್ನೆಗೆ ಅಮ್ಮ ‘ಚಿನ್ನದ ಉಂಗುರವನ್ನು ನೇಗಿಲಿನ ಮೊನೆಗೆ ಕಟ್ಟಿ ಮೊದಲ ಉಳುಮೆ ಮಾಡುವುದು’ ಎಂದಳು. ಅಷ್ಟಕ್ಕೆ ನನ್ನ ಕಲ್ಪನೆಯ ರಮ್ಯತೆ ಮುಗಿಲು ಮುಟ್ಟಿಯೇ ಬಿಟ್ಟಿತ್ತು! ಅಲ್ಲಿಂದ ಮುಂದೆ ‘ನನ್ನ ಅಪ್ಪ ಚಿನ್ನದ ಉಂಗುರ ಬಿತ್ತಿ ಅನ್ನ ಬೆಳೆಯುತ್ತಾರೆ’ ಎಂದು ಹೇಳಿಕೊಂಡೇ ತಿರುಗುತ್ತಿದ್ದೆ!

ಊರಿನ ಬೀದಿ ಬೀದಿಗಳಲ್ಲಿ ದೊಡ್ಡವರು ಮಕ್ಕಳೆನ್ನದೆ ಪಂಥ ಕಟ್ಟಿಕೊಂಡು ಆಡುತ್ತಿದ್ದ ಕವಡೆ, ಪಂಜ, ಇಸ್ಪೀಟು ಮತ್ತಿತರ ಸೋಲು–ಗೆಲುವು ನಿರ್ಧರಿಸುವ ಆಟಗಳು ಎಲ್ಲೆಂದರಲ್ಲಿ, ಸ್ಥಳ ಸಿಕ್ಕಲ್ಲೆಲ್ಲ ನಡೆಯುತ್ತಿದ್ದವು. ಕುತೂಹಲ ತಡೆಯಲಾರದೆ ಅವನ್ನು ನೋಡಲು ನಾನೂ ನಿಂತೆ. ನಂತರದ ಹಬ್ಬವನ್ನು ಹೇಗೆ ಹೇಳುವುದು! ಮನೆಗೆ ಹೋದ ಕೂಡಲೇ ಕಂಡಲ್ಲೆಲ್ಲ ನಿಲ್ಲುವೆಯಾ ಎಂದು ಅಮ್ಮ ಕೊಟ್ಟ ‘ಕಜ್ಜಾಯ’ಗಳನ್ನು(ಏಟು) ತಿಂದು ಹಬ್ಬದೂಟವನ್ನೂ ಮಾಡದೆ ಅಳುತ್ತಾ ಮಲಗಿದುದು ಪ್ರತಿ ಹಬ್ಬದಲ್ಲೂ ಧುತ್ತೆಂದು ಎದುರು ನಿಲ್ಲುತ್ತದೆ.

ನನ್ನ ಬಾಲ್ಯ ಹಳ್ಳಿಯ ಊರೊಟ್ಟಿನ ಯುಗಾದಿ ಹಬ್ಬದ ಸ್ಮರಣೆಯೋಕುಳಿ. ಆದರೆ, ಈಗಿನ ನಮ್ಮ ನಗರಗಳಲ್ಲಿ ಯುಗಾದಿ ಹಬ್ಬದ ಆಚರಣೆ ಮನೆ ಮನೆಗೂ ಭಿನ್ನವಾಗಿರುತ್ತದೆ. ಆಗ ಯುಗಾದಿ ಹಬ್ಬದ ಆಚರಣೆಗೆ ಅದೆಷ್ಟು ನೀತಿ ನಿಯಮಗಳು. ಎಲ್ಲವನ್ನೂ ಪರಿಪಾಲಿಸಿ, ತಂಗಿ ತಮ್ಮಂದಿರನ್ನು ಸುಧಾರಿಸಿ ಅಮ್ಮನಿಂದ ಸೈ ಅನ್ನಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಆದರೀಗ ಆ ರೀತಿಯ ತೊಡಕುಗಳೇ ಇಲ್ಲ. ಇಂದಿನ ನಮ್ಮ ಯುಗಾದಿ ಬೇರೆ ಹಬ್ಬಗಳಂತೆ ನೀತಿ ನಿಯಮಾವಳಿಗಳ ಪ್ರಭು ಸಂಹಿತೆಯದಲ್ಲ. ಮನೆಮನೆಯ ತಪಸ್ವಿನಿಯರಾದ ಗೃಹಿಣಿಯರಿಗೆ ‘ನಿಮಗೆ ಸರಿ ಅನಿಸಿದ್ದನ್ನು ಸರಿಯಾದ ರೀತಿಯಲ್ಲಿ ಮಾಡಿ’ ಎನ್ನುವ ಮಿತ್ರ ಸಂಹಿತೆ. ಉದ್ಯೋಗಸ್ಥ ಮಹಿಳೆಯರ ಪಾಲಿಗಂತೂ ಅವರ ಮನ ಬಯಸಿದಂತೆ ಆಚರಿಸಲು ಅವಕಾಶ ನೀಡುವ ಕಾಂತಾಸಂಹಿತೆಯೇ!

ಈಗಿನ ಯುಗಾದಿಯಲ್ಲಿ ಬಾಲ್ಯದಲ್ಲಿದ್ದ ಸಂಭ್ರಮವಿಲ್ಲ. ಆದರೆ, ಬೆಳಿಗ್ಗೆ ಎದ್ದು, ಮನೆ ಗುಡಿಸಿ, ಸಾರಿಸಿ, ರಂಗವಲ್ಲಿ ಇರಿಸಿ, ಮಿಂದು ಮಡಿಯುಟ್ಟು, ಮನೆದೇವರನ್ನು ಪೂಜಿಸಿ, ಬೇವು ಬೆಲ್ಲ ಮಿಶ್ರಣದ ನೈವೇದ್ಯವನ್ನು ಸಲ್ಲಿಸಿದರೆ ಒಂದು ಹಂತ ಮುಗಿದಂತೆ. ಒಬ್ಬಟ್ಟು, ಚಿತ್ರಾನ್ನ, ಹೆಸರುಬೇಳೆ ಕೋಸಂಬರಿ, ಒಬ್ಬಟ್ಟಿನ ಸಾರು, ಮೊಸರನ್ನ ಮಾಡಿ ಮನೆ ಜನರನ್ನು ಸಂತೃಪ್ತಗೊಳಿಸಿದರೆ ಮತ್ತೊಂದು ಪ್ರಧಾನ ಹಂತದ ಸಮಾಪ್ತಿ!

ಹಬ್ಬದ ಕಾರ್ಯವನ್ನು ಪೂರೈಸಿ, ಸಮೀಪದ ದೇವಾಲಯಕ್ಕೆ ಭೇಟಿ ಕೊಟ್ಟು, ಬೇವು–ಬೆಲ್ಲ ಸವಿದು ಸಾಧ್ಯವಾದರೆ ಪಂಚಾಂಗ ಶ್ರವಣ ಕೇಳಿ ಉಳಿದಂತೆ ನೆಮ್ಮದಿಯ ವಿಶ್ರಾಂತಿ ಪಡೆಯಲು ಸಾಧ್ಯ ಮಾಡಿಕೊಡುವ ಈ ಹಬ್ಬವೆಂದರೆ ಈಗಲೂ ನಿಜಕ್ಕೂ ಮನದ‌ ಮೆಚ್ಚು!

ಇಂಥ ಯುಗಾದಿಯ ಸಂಭ್ರಮದಲ್ಲಿ ‘ವಸಂತ’ ತುಂಬಿಕೊಡುವ ಸೊಗಸನ್ನು ಆಸ್ವಾದಿಸುವ ದಾಹ ಜನ್ಮಜನ್ಮಾಂತರಗಳನ್ನು ಎತ್ತಿ ಬಂದರೂ ತೀರುವುದಿಲ್ಲ ಎನ್ನುವುದೇ ಸತ್ಯ. ಅದಕ್ಕೇ ನಮ್ಮ ಯುಗದ ಆದಿಯ ಬಂಧು ಸನತ್ಕುಮಾರದೇವನನ್ನು ಕವಿ ಬೇಂದ್ರೆ ಕೇಳಿದ್ದು, ‘ನಮಗೆ ಒಂದೇ ಒಂದು ಜನ್ಮವನ್ನು, ಒಂದೇ ಬಾಲ್ಯ, ಒಂದೇ ಹರೆಯವನ್ನು ಕೊಟ್ಟು ಸುಮ್ಮನಾದೆಯಲ್ಲ ಮಹಾನುಭಾವ, ನಮಗೂ ವರುಷ ವರುಷಕ್ಕೂ ಹೊಸತು ಜನ್ಮ, ಹರುಷಕೊಂದು ಹೊಸತಿನ ನೆಲೆಯನ್ನು ನೀಡಬಾರದಿತ್ತಾ’ ಎಂದು!

ಅದಾಗುವುದಿಲ್ಲವಲ್ಲ! ಹೋಗಲಿ ಬಿಡಿ. ಇರುವುದನ್ನು ಇರುವಂತೆಯೇ ಒಪ್ಪಿಕೊಂಡು, ಅಪ್ಪಿಕೊಂಡು ಬೇವು–ಬೆಲ್ಲದಂತೆ ನೋವು-ನಲಿವುಗಳನ್ನು ಮೆಲ್ಲುತ್ತಾ  ಮುಂದೆ ಸಾಗುವ, ಸಾಗುತ್ತಲೇ ಇರುವ!

ಈ ಯುಗಾದಿ ಮತ್ತೇ ಬರುತ್ತದೆ!!!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು