ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ಪುಷ್ಪಾರ್ಚನೆ ವಿಧಾನ

ಭಾಗ 102
Last Updated 24 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಋಷಿಮುನಿಗಳು ಶಿವನನ್ನು ಯಾವ ಹೂವುಗಳಿಂದ ಅರ್ಚಿಸಿದರೆ ಯಾವ ಯಾವ ಫಲಗಳು ಸಿಗುತ್ತವೆ ಎಂದು ಕೇಳುತ್ತಾರೆ. ಸೂತಮುನಿಯು ‘ಎಲೈ ಶೌನಕಾದಿ ಋಷಿಗಳೇ, ಹಿಂದೆ ನಾರದನಿಗೆ ಶಿವನ ಪುಷ್ಪಾರ್ಚನೆಯ ವಿಧಿಯನ್ನು ಬ್ರಹ್ಮ ಹೇಳಿದ್ದ. ಅದನ್ನು ನಿಮಗೆ ಹೇಳುವೆನು,ಕೇಳಿ’ ಎಂದು ಬ್ರಹ್ಮನು ನಾರದನಿಗೆ ಹೇಳಿದ್ದನ್ನು ವಿವರಿಸತೊಡಗುತ್ತಾನೆ.

ಸಂಪತ್ತನ್ನು ಅಪೇಕ್ಷಿಸುವವರು ಕಮಲಗಳಿಂದ, ಬಿಲ್ವಪತ್ರಗಳಿಂದ, ಶತಪತ್ರಗಳೆಂಬ ಕಮಲವಿಶೇಷಗಳಿಂದ ಮತ್ತು ಶಂಖಪುಷ್ಪಗಳಿಂದ ಶಿವನನ್ನು ಅರ್ಚಿಸಬೇಕು. ಪತ್ರ ಮತ್ತು ಪುಷ್ಪಗಳನ್ನು ಲಕ್ಷಸಂಖ್ಯೆಯಿಂದ ಪೂಜಿಸಬೇಕು. ಹಾಗೆ ಪೂಜಿಸಿದರೆ, ಪಾಪ ಪರಿಹಾರವಾಗಿ ಸಂಪತ್ತು ಅಭಿವೃದ್ಧಿಯಾಗುವುದು. ಇಪ್ಪತ್ತು ಕಮಲಗಳಿಗೆ ಒಂದು ಪ್ರಸ್ಥವೆಂದು ಹೆಸರು. ಸಾವಿರ ಬಿಲ್ವಪತ್ರಗಳಿಗೆ ಅರ್ಧಪ್ರಸ್ಥವಾಗುವುದು. ಸಾವಿರ ಶತಪತ್ರಪುಷ್ಪಗಳಿಗೂ ಅರ್ಧಪ್ರಸ್ಥವಾಗುತ್ತೆ. ಹತ್ತು ಟಂಕಗಳಿಗೆ ಒಂದು ಪಲವು. ಇಂತಹ ಹದಿನಾರು ಪಲಗಳಿಗೆ ಒಂದು ಪ್ರಸ್ಥ. ಈ ತೂಕದಂತೆ ಕಮಲ ಮುಂತಾದವುಗಳನ್ನು ಸಂಗ್ರಹಿಸಿ ಶಿವನನ್ನು ಫಲೇಚ್ಛೆಯಿಂದ ಅರ್ಚಿಸಿದರೆ ಸಕಲ ಇಷ್ಟಾರ್ಥಗಳೂ ಲಭಿಸುವುದು. ಫಲಕಾಮನೆಯಿಲ್ಲದೆ ಅರ್ಚಿಸಿದರೆ ಸಾಕ್ಷಚ್ಛಿವರೂಪವನ್ನೇ ಹೊಂದುವರು.

ರಾಜ್ಯವನ್ನು ಪಡೆಯಬೇಕೆಂದಿರುವವರು ಹತ್ತುಕೋಟಿ ಪಾರ್ಥಿವ ಲಿಂಗಗಳನ್ನು ಪುಷ್ಪಗಳಿಂದ ಅರ್ಚಿಸಿ ಮಹಾದೇವನನ್ನು ಸಂತೋಷ ಗೊಳಿಸಬೇಕು. ಶಿವನನ್ನು ಲಿಂಗ ಅಥವಾ ಅಖಂಡವಾದ ಪುಷ್ಪ, ತಂಡುಲ ರಾಶಿ, ಅಥವಾ ವಿಗ್ರಹ ಇವುಗಳಲ್ಲಿ ಮಂತ್ರಪೂರ್ವಕವಾಗಿ ಆವಾಹನೆ ಮಾಡಿ, ಗಂಧೋದಕ ಸ್ನಾನ, ಬಿಲ್ವಾರ್ಚನೆ, ಕಮಲಾರ್ಚನೆಗಳಿಂದ ಶತಪತ್ರಪೂಜೆ ಮಾಡಬೇಕು. ಅಲ್ಲದೆ, ಶಂಖಪುಷ್ಪಗಳು ಶಿವಪೂಜೆಗೆ ಪ್ರಶಸ್ತವಾದುವು. ಅವುಗಳನ್ನರ್ಪಿಸಿದರೆ ಇಹಪರಗಳೆರಡರಲ್ಲೂ ಇಷ್ಟಸಿದ್ಧಿಯಾಗುವುದು.

ಪುಷ್ಪಾರ್ಚನೆ ಮಾಡಿದ ಮೇಲೆ ಧೂಪ ದೀಪ ನೈವೇದ್ಯ ಅರ್ಘ್ಯ ಮಂಗಳಾರತಿ ಪ್ರದಕ್ಷಿಣೆ ನಮಸ್ಕಾರ ಕ್ಷಮಾಪಣೆ ಮತ್ತು ವಿಸರ್ಜನೆಗಳನ್ನು ಮಾಡಿ, ಸಾಂಗವಾಗಿ ಶಿವನನ್ನು ಪೂಜಿಸಬೇಕು. ಕೊನೆಯಲ್ಲಿ ಸದ್ಭಕ್ತರಿಗೆ ಮೃಷ್ಟಾನ್ನ ಭೋಜನ ಮಾಡಿಸಬೇಕು. ಹಾಗೆ ಮಾಡಿದರೆ ಶಂಕರನು ರಾಜ್ಯವನ್ನು ಕೊಡುವನು. ಗೌರವ-ಪ್ರತಿಷ್ಠಾದಿಗಳನ್ನು ಅಪೇಕ್ಷಿಸುವವರು ಐವತ್ತುಲಕ್ಷ ಶಂಖಪುಷ್ಪಗಳಿಂದ ಶಿವನನ್ನು ಅರ್ಚಿಸಬೇಕು.

ಬಂಧನದಲ್ಲಿರುವವರು ಕಾರಾಗೃಹ ನಿವೃತ್ತಿಗಾಗಿ ಲಕ್ಷ ಹೂವುಗಳಿಂದ ಶಿವನನ್ನು ಅರ್ಚಿಸಬೇಕು ಎನ್ನುತ್ತಾನೆ ಬ್ರಹ್ಮ.

ರೋಗದಿಂದ ನರಳುತ್ತಿರುವವರು ಐವತ್ತು ಸಾವಿರ ಪುಷ್ಪಗಳಿಂದ ಶಿವನನ್ನು ಅರ್ಚಿಸಬೇಕು. ಕನ್ಯೆಯನ್ನ ಅಪೇಕ್ಷಿಸುವವರು ಇಪ್ಪತ್ತೈದು ಸಾವಿರ ಪುಷ್ಪಗಳಿಂದ, ವಿದ್ಯೆಯನ್ನ ಅಪೇಕ್ಷಿಸುವವರು ಹದಿಮೂರು ಸಾವಿರ ಪುಷ್ಪಗಳಿಂದ, ಭಾಷಣಾ ಶಕ್ತಿಯನ್ನಪೇಕ್ಷಿಸುವವರು ತುಪ್ಪದಿಂದ ಶಿವನನ್ನು ಅರ್ಚಿಸಬೇಕು. ಶತ್ರುಗಳನ್ನು ಓಡಿಸಲು ಹದಿಮೂರುಸಾವಿರ ಪುಷ್ಪಗಳಿಂದ ಅರ್ಚಿಸಬೇಕು. ಶತ್ರುನಾಶಕ್ಕಾಗಿ ಲಕ್ಷ ಪುಷ್ಪಪೂಜೆಯನ್ನೂ, ಮೋಹಗೊಳಿಸುವುದಕ್ಕಾಗಿ ಅರ್ಧಲಕ್ಷ ಪುಷ್ಪ ಪೂಜೆಯನ್ನೂ, ಸಾಮಂತರಾಜರನ್ನು ಜಯಿಸಲು ಕೋಟಿ ಪುಷ್ಪಪೂಜೆಗಳನ್ನೂ ಮಾಡಬೇಕು. ರಾಜರನ್ನು ವಶಮಾಡಿಕೊಳ್ಳಲು ಹತ್ತುಸಾವಿರ ಪುಷ್ಪಪೂಜೆಗಳಿಂದಲೂ, ವಾಹನ ಮತ್ತು ಯಶಸ್ಸು ಮುಂತಾದುವುಗಳನ್ನು ಪಡೆಯಲು ಸಾವಿರ ಪೂಜೆಗಳಿಂದ ಶಿವನನ್ನರ್ಚಿಸಬೇಕು. ಮುಕ್ತಿಯನ್ನ ಅಪೇಕ್ಷಿಸುವವರು ಭಕ್ತಿಯಿಂದ ಐದುಕೋಟಿ ಪುಷ್ಪಾರ್ಚನೆಗಳನ್ನು ಮಾಡಬೇಕು.

ಜ್ಞಾನವನ್ನ ಅಪೇಕ್ಷಿಸುವವರು ಕೋಟಿ ಪುಷ್ಪಗಳಿಂದ ಶಿವನನ್ನು ಅರ್ಚಿಸಬೇಕು. ಶಿವನ ದರ್ಶನವನ್ನ ಅಪೇಕ್ಷಿಸುವವರು ಅರ್ಧಕೋಟಿ ಪುಷ್ಪಾರ್ಚನೆಗಳಿಂದ ಸುಖದಾಯಕನಾದ ಶಿವನನ್ನು ಆರಾಧಿಸಬೇಕು. ಮೃತ್ಯುಂಜಯ ಮಂತ್ರವನ್ನು ಐದುಲಕ್ಷ ಬಾರಿ ಜಪಿಸಿದರೆ ಶಿವನು ಪ್ರತ್ಯಕ್ಷನಾಗುವನು. ಮೃತ್ಯುಂಜಯ ಮಂತ್ರವನ್ನು ಒಂದು ಲಕ್ಷಬಾರಿ ಜಪಿಸಿದರೆ ಸಕಲ ಇಷ್ಟಸಿದ್ಧಿಯಾಗುವುದು. ಎರಡುಲಕ್ಷ ಜಪಿಸಿದರೆ ಉತ್ತಮ ದರ್ಜೆ ಲಭಿಸುವುದು. ಮೂರುಲಕ್ಷ ಜಪಿಸಿದರೆ ಅಲಭ್ಯವಾದ ವಸ್ತುಗಳು ಸಿದ್ಧಿಸುವುವು. ನಾಲ್ಕುಲಕ್ಷ ಜಪಿಸಿದರೆ ಶಿವನ ಸಾಕ್ಷಾತ್ಕಾರವಾಗುವುದು. ಐದುಲಕ್ಷ ಬಾರಿ ಮೃತ್ಯುಂಜಯ ಮಂತ್ರ ಜಪಿಸಿದರೆ ಶಿವನು ಬೇಕಾದ ಫಲವನ್ನು ಕೊಡುವನು. ಹತ್ತು ಲಕ್ಷ ಪರ್ಯಂತ ಜಪಿಸಿದರೆ, ಇವೆಲ್ಲಕ್ಕಿಂತ ಹೆಚ್ಚಾದ ಫಲ ಲಭಿಸುವುದು.

ಮುಕ್ತಿಯನ್ನ ಅಪೇಕ್ಷಿಸುವವರು ದರ್ಭೆಗಳಿಂದ ಶಿವನನ್ನು ಅರ್ಚಿಸಬೇಕು. ಆಯುಸ್ಸನ್ನು ಅಪೇಕ್ಷಿಸುವವರು ದೂರ್ವಗಳಿಂದ ಶಿವನನ್ನು ಪೂಜಿಸಬೇಕು. ಪುತ್ರರನ್ನ ಅಪೇಕ್ಷಿಸುವವರು ಧತ್ತೂರ ಪುಷ್ಪಗಳಿಂದ ಅರ್ಚಿಸಬೇಕು. ಕೆಂಪು ನಾಳವುಳ್ಳ ಧತ್ತೂರ ಪುಷ್ಪವು ಶಿವಪೂಜೆಗೆ ಪ್ರಶಸ್ತವಾದುದು, ಅಗಸ್ತ್ಯ ಕುಸುಮದಿಂದ ಅರ್ಚಿಸಿದರೆ ಯಶಸ್ಸು ಲಭಿಸುವುದು. ತುಳಸಿಯಿಂದ ಪೂಜಿಸಿದರೆ ಭೋಗ-ಮುಕ್ತಿಗಳೆರಡೂ ಲಭಿಸುವುವು. ಅರ್ಕಪುಷ್ಪ, ಕುಬ್ಜಪುಷ್ಪ, ಕಲ್ಹಾರಪುಷ್ಪಗಳಿಂದ ಶಿವನನ್ನು ಅರ್ಚಿಸಿದರೆ ಪರಾಕ್ರಮ ಹೆಚ್ಚಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT