ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಭುವನ ಸುಂದರಿಯರ ಸೇವಾಭಾವ

Last Updated 14 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಅಮೆರಿಕದ ಮಿಸ್‌ ಯೂನಿವರ್ಸ್‌ ಆರ್ಗನೈಸೇಷನ್‌ (ಎಂಯುಒ) ಪ್ರತಿ ವರ್ಷ ಭುವನ ಸುಂದರಿ ಸ್ಪರ್ಧೆಯನ್ನು ನಡೆಸುತ್ತದೆ. ಇದು ಮಹಿಳೆಯರಿಗಾಗಿ ಮಹಿಳೆಯರೇ ಸ್ಥಾಪಿಸಿ, ಮಹಿಳೆಯರೇ ನಡೆಸುತ್ತಿರುವ ಸಂಘಟನೆಯಾಗಿದೆ. ಭುವನ ಸುಂದರಿ ಸ್ಪರ್ಧೆ ಮತ್ತು ವಿಜೇತರನ್ನು ಬಳಸಿಕೊಂಡು, ವಿಶ್ವದ ಹಲವೆಡೆ ಸಾಮಾಜಿಕ ಕಾರ್ಯಗಳನ್ನು ನಡೆಸುವ ಕೆಲಸವನ್ನು ಎಂಯುಒ ಮಾಡುತ್ತಿದೆ. ಈ ಕಾರಣದಿಂದಲೇ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರೇ ಹೆಚ್ಚಿನ ಸಂದರ್ಭದಲ್ಲಿಸ್ಪರ್ಧೆಗಳಲ್ಲಿ ವಿಜೇತರಾಗುತ್ತಾರೆ.

ವಿಶ್ವದ ಎಲ್ಲಾ ಸಂಸ್ಕೃತಿಯ ಮತ್ತು ಎಲ್ಲಾ ಹಿನ್ನೆಲೆಯ ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಈ ಸಂಘಟನೆಯು ಭುವನ ಸುಂದರಿ ಸ್ಪರ್ಧೆಯನ್ನು ನಡೆಸುತ್ತಾ ಬರುತ್ತಿದೆ. ಈ ಸ್ಪರ್ಧೆಯ ಮೂಲಕ ಮಹಿಳೆಯರಲ್ಲಿ ವಿಶ್ವಾಸ ವೃದ್ಧಿಸುವ ಕೆಲಸ ಮಾಡಲಾಗುತ್ತದೆ ಎಂದು ಎಂಯುಒ ಹೇಳಿಕೊಂಡಿದೆ.ಭುವನ ಸುಂದರಿ ಮಾತ್ರವಲ್ಲದೆ ‘ಮಿಸ್‌ ಯುಎಸ್‌ಎ’ ಮತ್ತು ‘ಮಿಸ್‌ ಟೀನ್‌ ಯುಎಸ್‌ಎ’ಸ್ಪರ್ಧೆಗಳನ್ನೂ ಎಂಯುಒ ಆಯೋಜಿಸುತ್ತದೆ. ಪ್ರತಿ ವರ್ಷ ಈ ಮೂರೂ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು 10,000 ಯುವತಿಯರಿಗೆ ಅವಕಾಶ ನೀಡಲಾಗುತ್ತದೆ.

ವಿಶ್ವದಾದ್ಯಂತ ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ನಿಧಿ ಸಂಗ್ರಹ ಮತ್ತು ಸೇವೆ ನೀಡುವಲ್ಲಿ ಎಂಒಯು ಹಲವು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಈ ಎಲ್ಲಾ ಕಾರ್ಯಗಳಲ್ಲಿ ಆ ವರ್ಷದ ವಿಜೇತರು ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಾರೆ. ವಿಶ್ವದ 85 ಅಭಿವೃದ್ಧಿಶೀಲ ದೇಶಗಳಲ್ಲಿ ಸೀಳುತುಟಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಎಂಒಯು ‘ಸ್ಮೈಲ್ ಟ್ರೈನ್‌’ ಎಂಬ ಕಾರ್ಯಕ್ರಮ ವನ್ನು ನಡೆಸುತ್ತಿದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಚಿಕಿತ್ಸೆ ನಂತರದ ಆರೈಕೆಯನ್ನು ಸ್ಮೈಲ್‌ ಟ್ರೈನ್‌ ಕಾರ್ಯಕ್ರಮದ ಅಡಿ ನೀಡಲಾಗುತ್ತಿದೆ.

ವಿಶ್ವದಾದ್ಯಂತ ಅಂಗವೈಕಲ್ಯದಿಂದ ಬಳಲುತ್ತಿರುವ ಜನರನ್ನು ಒಟ್ಟುಗೂಡಿಸುವ, ಅವರಿಗೆ ಔದ್ಯೋಗಿಕ ತರಬೇತಿ ನೀಡುವ ಮತ್ತು ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ‘ಬೆಸ್ಟ್‌ ಬಡೀಸ್‌’ ಸ್ವಯಂಸೇವಾ ಸಂಘಟನೆ ದುಡಿಯುತ್ತಿದೆ. ಈ ಕಾರ್ಯದಲ್ಲಿ ನೆರವಾಗಲು ಎಂಯುಒ, ಬೆಸ್ಟ್‌ ಬಡೀಸ್‌ ಜತೆಗೆ ಕೈಜೋಡಿಸಿದೆ. ಈ ಸಂಘಟನೆಯು 50 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1,400ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಈವರೆಗೆ 7 ಲಕ್ಷ ಜನರು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ.

ವಿಶ್ವದ ಹಲವು ದೇಶಗಳಲ್ಲಿ ಎಚ್‌ಐವಿ ಮತ್ತು ಏಡ್ಸ್‌, ಕ್ಯಾನ್ಸರ್‌ ಹಾಗೂ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತವಾಗಿ ಊಟವನ್ನು ಪೂರೈಸಲು ‘ಗಾಡ್ಸ್‌ ಲವ್, ವಿ ಡೆಲಿವರ್’ ಸಂಘಟನೆ ದುಡಿಯುತ್ತಿದೆ. ತಮಗಾಗಿ ಆಹಾರ ಸಿದ್ಧಪಡಿಸಿಕೊಳ್ಳಲು ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಮರ್ಥರಲ್ಲದ ರೋಗಿಗಳು, ಪಥ್ಯದ ಆಹಾರವನ್ನು ಈ ಕಾರ್ಯಕ್ರಮದ ಅಡಿ ನೀಡಲಾಗುತ್ತಿದೆ. ಈ ಕಾರ್ಯದಲ್ಲಿ, ‘ಗಾಡ್ಸ್‌ ಲವ್‌, ವಿ ಡೆಲಿವರ್‌’ ಜತೆಗೆ ಎಂಯುಒ ಕೈಜೋಡಿಸಿದೆ.

ಅಮೆರಿಕ, ವೆನಿಜುವೆಲಾ ಪಾರಮ್ಯ
ಮಿಸ್‌ ಯೂನಿವರ್ಸ್‌ ಸಂಘಟನೆ ಪ್ರತಿ ವರ್ಷ ನಡೆಸುವ ಭುವನ ಸುಂದರಿ ಸ್ಪರ್ಧೆಯು ಈವರೆಗೆ 70 ಆವೃತ್ತಿಗಳನ್ನು ಪೂರೈಸಿದೆ. ಈವರೆಗೆ ವಿಶ್ವದ ಹಲವು ರಾಷ್ಟ್ರಗಳ ಸಾವಿರಾರು ಪ್ರತಿನಿಧಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಕೆಲವೇ ರಾಷ್ಟ್ರಗಳ ಪ್ರತಿನಿಧಿಗಳು ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಹೆಚ್ಚು ಬಾರಿ ಈ ಕಿರೀಟವನ್ನು ಗೆದ್ದ ಸ್ಪರ್ಧಿಗಳ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲು ನಿಲ್ಲುತ್ತದೆ. ಅಮೆರಿಕದ ಸ್ಪರ್ಧಿಗಳು ಈವರೆಗೆ 8 ಬಾರಿ ಈ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೆನಿಜುವೆಲಾ ದೇಶದ ಸ್ಪರ್ಧಿಗಳು ಈವರೆಗೆ 7 ಬಾರಿ ಕಿರೀಟವನ್ನುಮುಡಿಗೇರಿಸಿಕೊಂಡಿದ್ದಾರೆ.

ಕಿರೀಟ ಗೆದ್ದ ಕಪ್ಪು ವರ್ಣೀಯರು ವಿರಳ
ಈವರೆಗೆ, ಸ್ಪರ್ಧೆಯ 70 ಆವೃತ್ತಿಗಳು ಮುಗಿದಿದ್ದರೂ, ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಕಪ್ಪು ವರ್ಣೀಯರ ಸಂಖ್ಯೆ ಎರಡಂಕಿಯನ್ನೂ ಮುಟ್ಟುವುದಿಲ್ಲ. ಆಫ್ರಿಕಾದ ಬೋಟ್ಸ್‌ವಾನಾ (1999) ಮತ್ತು ಅಂಗೋಲಾದ (2011) ಸ್ಪರ್ಧಿಗಳು ಎರಡು ಬಾರಿ ಈ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಕೆರೆಬಿಯನ್‌ ರಾಷ್ಟ್ರವಾದ ಟ್ರಿನಿಡಾಡ್‌ ಅಂಡ್ ಟೊಬ್ಯಾಗೊವಿನ ಸ್ಪರ್ಧಿಗಳು 1977ರಲ್ಲಿ ಮತ್ತು 1998ರಲ್ಲಿ ಎರಡು ಬಾರಿ ಭುವನ ಸುಂದರಿ ಪಟ್ಟ ಗೆದ್ದಿದ್ದಾರೆ. ಅಮೆರಿಕದಿಂದ ಸ್ಪರ್ಧಿಸಿದ್ದ ಕಪ್ಪು ವರ್ಣೀಯ ಸ್ಪರ್ಧಿಯೊಬ್ಬರು 1995ರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

ಉಳಿದಂತೆ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್‌ ಮತ್ತು ಆಗ್ನೇಯ ಏಷ್ಯಾದ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯನ್ನು ಗೆದ್ದಿದ್ದಾರೆ. ಮಧ್ಯಪ್ರಾಚ್ಯ, ಮಧ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ಮಧ್ಯ ಏಷ್ಯಾದ ದೇಶಗಳ ಸ್ಪರ್ಧಿಗಳು ಒಮ್ಮೆಯೂ ಈ ಸ್ಪರ್ಧೆಯಲ್ಲಿ ಗೆದ್ದಿಲ್ಲ.

ದಿಟ್ಟ ಮನದ ಸುಂದರಿ
‘ಒಂದು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ನಾನು ಬೆಳೆಯುತ್ತಾ ಅಂತರ್ಮುಖಿಯಾದೆ. ಸರ್ಕಾರಿ ಕಾಲೇಜಿನಲ್ಲಿ ಓದಿದೆ. ನನ್ನ ದೇಹದ ಕುರಿತು ಅವಹೇಳನ (ಬಾಡಿ ಶೇಮಿಂಗ್) ಮಾಡಲಾಯಿತು. ಹಲವು ಬಾರಿ ಇದು ಪುನರಾವರ್ತನೆಯಾಯಿತು. ಮಾನಸಿಕ ಗೊಂದಲದಲ್ಲಿದ್ದ ನಾನು, ಬದಲಾಗಬೇಕು ಎಂದು ನಿರ್ಧರಿಸಿದೆ. ನನ್ನೊಳಗಿನ ಸಾಮರ್ಥ್ಯವನ್ನು ಅರಿತುಕೊಂಡೆ. ರೂಪದರ್ಶಿಯಾಗುವ ನನ್ನ ಕನಸನ್ನ ಜನರು ಮೂದಲಿಸಿದರು, ಆದರೆ ಅಮ್ಮ ನನ್ನ ಬೆನ್ನಿಗೆ ನಿಂತರು. ನನ್ನೊಳಗಿದ್ದ ಆತ್ಮವಿಶ್ವಾಸವೇ ಇಂದು ಜಗತ್ತು ನನ್ನತ್ತ ತಿರುಗಿ ನೋಡುವಂತೆ ಮಾಡಿದೆ...’

ಹರ್ನಾಜ್ ಕೌರ್ ಸಂಧು ಅವರು ‘ಭುವನ ಸುಂದರಿ’ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಜಾಣ್ಮೆಯ ಹಾಗೂ ದಿಟ್ಟತನದ ಉತ್ತರಗಳನ್ನು ನೀಡಿ, ಪ್ರಶಸ್ತಿ ಮುಡಿಗೇರಿಸಿಕೊಂಡದ್ದರ ಹಿಂದೆ ಇಂತಹ ಸಾಕಷ್ಟು ದಿಟ್ಟ ಕಥನಗಳಿವೆ.

ಗುರುದಾಸ್‌ಪುರ ಸಮೀಪದ ಕೊಹಲಿ ಎಂಬ ಗ್ರಾಮದಲ್ಲಿ ಜನಿಸಿದ ಅವರು, ಚಂಡೀಗಡದಲ್ಲಿ ಬೆಳೆದರು. ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದ ಅವರು ತಮ್ಮ 17ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾವಹಿಸಲು ಶುರು ಮಾಡಿದರು. ನಿಂದಕರೂ ಮೆಚ್ಚುವ ರೀತಿಯಲ್ಲಿ, ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ, ಫೆಮಿನಾ ಮಿಸ್ ಇಂಡಿಯಾ ಪಂಜಾಬ್, ಮಿಸ್ ದಿವಾ ಯೂನಿವರ್ಸ್‌ ಪ್ರಶಸ್ತಿಗಳನ್ನು ಅವರು ಬಾಚಿಕೊಂಡರು.

ಭುವನ ಸುಂದರಿ ಸ್ಪರ್ಧೆಯು ಅವರೊಳಗಿದ್ದ ಆತ್ಮವಿಶ್ವಾಸ ಹಾಗೂ ಜಾಣ್ಮೆಗೆ ಕನ್ನಡಿ ಹಿಡಿಯಿತು. ತೀರ್ಪುಗಾರರು ಕೇಳಿದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳೇ ಇದಕ್ಕೆ ಸಾಕ್ಷಿ. ‘ಹವಾಮಾನ ವೈಪರೀತ್ಯ ಎಂಬುದು ತಮಾಷೆಯಷ್ಟೇ ಎಂದು ಹಲವರು ಭಾವಿಸಿದ್ದಾರೆ. ಅಂತಹ ಜನರಿಗೆ ನೀವು ಹೇಗೆ ಮನವರಿಕೆ ಮಾಡಿಕೊಡುತ್ತೀರಿ’ ಎಂಬ ಪ್ರಶ್ನೆ ಎದುರಾಯಿತು. ‘ನಮ್ಮ ಬೇಜವಾಬ್ದಾರಿ ವರ್ತನೆಗಳಿಂದ ಪರಿಸರ ಯಾವ ಮಟ್ಟಕ್ಕೆ ಹಾಳಾಗುತ್ತಿದೆ ಎಂಬುದನ್ನು ನೆನಪಿಸಿಕೊಂಡರೆ ಸಾಕು ನನ್ನ ಹೃದಯಕ್ಕೆ ಕಸಿವಿಸಿಯಾಗುತ್ತದೆ. ನಾವೀಗ ಮಾತು ಕಡಿತಗೊಳಿಸಿ, ದಿಟ್ಟ ಕ್ರಮಕ್ಕೆ ಮುಂದಾಗಬೇಕು. ನಮ್ಮ ಪ್ರತಿಯೊಂದು ಹೆಜ್ಜೆಯೂ ಪರಿಸರ ನಾಶ ಮಾಡಲಿದೆ ಅಥವಾ ಉಳಿಸಲಿದೆ. ಹಾಳಾದ ಮೇಲೆ ಸರಿಪಡಿಸುವುದಕ್ಕಿಂತ ಮೊದಲೇ ರಕ್ಷಣೆಗೆ ಮುಂದಾಗುವುದು ಬುದ್ಧಿವಂತಿಕೆ’ ಎಂದು ಹರ್ನಾಜ್ ನೀಡಿದ ಉತ್ತರಕ್ಕೆ, ತೀರ್ಪುಗಾರರು ಅವರನ್ನು ಅಂತಿಮ ಸುತ್ತಿಗೆ (ಟಾಪ್ 3) ಆಯ್ಕೆ ಮಾಡಿದರು.

ಹರ್ನಾಜ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಬೇಕಿದ್ದುದು ಇಂತಹದ್ದೇ ಮತ್ತೊಂದು ಉತ್ತರ. ‘ಯುವತಿಯರು ಇಂದು ಎದುರಿಸುತ್ತಿರುವ ಒತ್ತಡಗಳಿಂದ ಹೊರಬರಲು ಏನು ಸಲಹೆ ನೀಡುತ್ತೀರಿ’ ಎಂಬ ಅಂತಿಮ ಪ್ರಶ್ನೆಗೆ, ‘ಸ್ವ ಸಾಮರ್ಥ್ಯದಲ್ಲಿ ನಂಬಿಕೆಯಿಲ್ಲದಿರುವುದರಿಂದ ಇಂದಿನ ಯುವಜನರು ಒತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನನ್ಯ ವ್ಯಕ್ತಿತ್ವವಿದೆ ಎಂಬುದು ಅರಿವಿಗೆ ಬಂದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ಇತರರ ಜೊತೆ ಹೋಲಿಸಿಕೊಳ್ಳುವುದನ್ನು ಬಿಟ್ಟು, ಜಗತ್ತಿನಲ್ಲಿ ನಡೆಯುತ್ತಿರುವ ಮಹತ್ವದ ಸಂಗತಿಗಳ ಬಗ್ಗೆ ಹೆಚ್ಚು ಮಾತನಾಡಬೇಕು. ನೀವು ಅರ್ಥಮಾಡಿಕೊಳ್ಳಬೇಕಾದುದು ಇದನ್ನೇ. ನಿಮ್ಮ ಜೀವನಕ್ಕೆ ನೀವೇ ನಾಯಕ, ನೀವೇ ದನಿ. ನನ್ನಲ್ಲಿ ನಾನು ಇರಿಸಿದ್ದ ನಂಬಿಕೆಯಿಂದಲೇ ಇಂದು ಈ ಜಾಗತಿಕ ವೇದಿಕೆಯ ಮೇಲೆ ಇದ್ದೇನೆ’ ಎಂದು ಹರ್ನಾಜ್ ಅರಳು ಹುರಿದಂತೆ ಮಾತನಾಡಿದರು.

ತಾಯಿಯ ಪ್ರೇರಣೆ: ಹರ್ನಾಜ್ ಅವರ ತಾಯಿ ವೈದ್ಯೆ. ತಾಯಿ ನಡೆಸುತ್ತಿದ್ದ ಆರೋಗ್ಯ ಶಿಬಿರಗಳಲ್ಲಿ ಅವರು ಭಾಗಿಯಾಗುತ್ತಿದ್ದರು. ಮಹಿಳೆಯರ ಆರೋಗ್ಯ ಸಮಸ್ಯೆಗಳು ಹಾಗೂ ಮುಟ್ಟಿನ ನೈರ್ಮಲ್ಯದ ಬಗ್ಗೆ ಅವರು ಕಾಳಜಿ ವಹಿಸುತ್ತಿದ್ದರು. ತಾಯಿಯ ಸಾಮಾಜಿಕ ಸೇವೆಗಳು ಹರ್ನಾಜ್ ಅವರಲ್ಲಿ ಪ್ರೇರಣೆ ಮೂಡಿಸಿದವು.‘ಮಗಳನ್ನು ಡಾಕ್ಟರ್ ಆಗು, ಎಂಜಿನಿಯರ್ ಆಗು ಎಂದು ಎಂದೂ ಒತ್ತಾಯಿಸಲಿಲ್ಲ. ನಿನ್ನ ಹೃದಯದ ಮಾತು ಕೇಳು ಎಂದು ಹೇಳಿದ್ದೆ. ನಮ್ಮ ಕುಟುಂಬದ ಯಾರಿಗೂ ರೂಪದರ್ಶಿ ವೃತ್ತಿಯ ಬಗ್ಗೆ ಗೊತ್ತಿರಲಿಲ್ಲ. ಯೂಟ್ಯೂಬ್‌ ನೋಡಿಕೊಂಡು ಆಕೆ ರ್‍ಯಾಂಪ್‌ವಾಕ್ ಕಲಿತಳು’ ಎನ್ನುತ್ತಾರೆಹರ್ನಾಜ್ ತಾಯಿ ಡಾ. ಬರೀಂದರ್ ಕೌರ್ ಸಂಧು.

ಮಹಿಳಾ ಸಬಲೀಕರಣ, ಶಿಕ್ಷಣ, ಮಹಿಳೆಯರ ಸಾಂವಿಧಾನಿಕ ಹಕ್ಕುಗಳು, ವೃತ್ತಿ, ಆಯ್ಕೆಯ ಸ್ವಾತಂತ್ರ್ಯ ವಿಚಾರಗಳಲ್ಲಿ ಹರ್ನಾಜ್ ಅವರಿಗೆ ಒಲವಿದೆ. ಮಹಿಳೆಯರು ಇಂಥದ್ದಕ್ಕೇ ಅಂಟಿಕೊಂಡು ಬದುಕಬೇಕು ಎಂಬ ಸಿದ್ಧಸೂತ್ರಗಳನ್ನು ಅವರು ಒಪ್ಪುವುದಿಲ್ಲ. ಎರಡು ಪಂಜಾಬಿ ಸಿನಿಮಾಗಳಲ್ಲಿ ಅವರು ನಟಿಸಿದ್ದು, ಒಂದು ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸರ್ಕಾರಿ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಎಂ.ಎ ಅಂತಿಮ ವರ್ಷದಲ್ಲಿ ಅವರು ಓದುತ್ತಿದ್ದಾರೆ.

ಪ್ರಶಸ್ತಿ ಪಡೆಯುವಾಗ ಹರ್ನಾಜ್ ಧರಿಸಿದ್ದ ದಿರಿಸು ವಿನ್ಯಾಸ ಮಾಡಿದ್ದ ಶಿಶಾ ಶಿಂಧೆ ಅವರು ಲಿಂಗಪರಿವರ್ತಿತೆ. ತಮ್ಮ ಐತಿಹಾಸಿಕ ಕ್ಷಣಕ್ಕೆ ಶಿಶಾ ವಿನ್ಯಾಸ ಮಾಡಿದ್ದ ಉಡುಗೆ ಹಾಗೂ ಆಭರಣಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಹರ್ನಾಜ್ ಪ್ರಶಂಸಿಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ತಮ್ಮ ಸ್ಫೂರ್ತಿ ಎಂದು ಹರ್ನಾಜ್ ಹೇಳಿಕೊಳ್ಳುತ್ತಾರೆ. ಯೋಗ, ನೃತ್ಯ, ಅಡುಗೆ, ಕುದುರೆ ಸವಾರಿ, ಸ್ನೇಹಿತರ ಭೇಟಿ, ಚೆಸ್ ಆಡುವುದು ಅವರ ಮೆಚ್ಚಿನ ಹವ್ಯಾಸಗಳು.

ಸುಷ್ಮಿತಾ ಸೇನ್
ಭಾರತದ ಮೊದಲ ‘ಭುವನ ಸುಂದರಿ’ ಎಂಬ ಶ್ರೇಯಕ್ಕೆ ಪಾತ್ರರಾದವರು ಸುಷ್ಮಿತಾ ಸೇನ್‌. ಹೈದರಾಬಾದ್‌ನಲ್ಲಿ ನೆಲೆಸಿದ್ದ ಬಂಗಾಳಿ ಕುಟುಂಬದಲ್ಲಿ ಜನಿಸಿದ ಅವರು, 1994ರಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಜಗತ್ತಿನ ಗಮನ ಸೆಳೆದಿದ್ದರು. ಆಗ ಅವರ ವಯಸ್ಸು 18 ವರ್ಷ.

ದೆಹಲಿಯ ಏರ್‌ಫೋರ್ಸ್ ಗೋಲ್ಡನ್‌ ಜ್ಯುಬಿಲಿ ಇನ್‌ಸ್ಟಿಟ್ಯೂಟ್ ಹಾಗೂ ಸಿಕಂದರಾಬಾದ್‌ನ ಸೇಂಟ್ ಆ್ಯನ್‌ ಶಾಲೆಯಲ್ಲಿ ಓದಿದ್ದಾರೆ. ಆದರೆ, ಉನ್ನತ ಶಿಕ್ಷಣ ಪಡೆಯಲು ಅವರಿಗೆಸಾಧ್ಯವಾಗಲಿಲ್ಲ.

ಲಾರಾ ದತ್ತಾ
2000ನೇ ಇಸ್ವಿಯಲ್ಲಿ ಲಾರಾ ದತ್ತಾ ಅವರು ಭುವನ ಸುಂದರಿ ಕಿರೀಟ ಧರಿಸಿದ್ದರು. ಗಾಜಿಯಾಬಾದ್‌ನಲ್ಲಿ ಹುಟ್ಟಿದ ಇವರು 1981ರಲ್ಲಿ ಬೆಂಗಳೂರಿಗೆ ಸ್ಥಳಾಂತರವಾದರು. ತಂದೆ ಪಂಬಾಬಿ ಕುಟುಂಬಕ್ಕೆ ಸೇರಿದವರು. ತಾಯಿ ಆಂಗ್ಲೊ–ಇಂಡಿಯನ್.

ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಾಲಕಿಯರ ಪ್ರೌಢಶಾಲೆ ಹಾಗೂ ಫ್ರಾಂಕ್ ಆ್ಯಂಟನಿ ಶಾಲೆಯಲ್ಲಿ ಓದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಇಂಗ್ಲಿಷ್, ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಲಾರಾ ದತ್ತ, ಕನ್ನಡ, ಪಂಜಾಬಿಯನ್ನೂ ಬಲ್ಲರು. ಭುವನ ಸುಂದರಿ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕೂ ಮುನ್ನ, 1997ರಲ್ಲಿ ಮಿಸ್ ಇಂಟರ್‌ಕಾಂಟಿನೆಂಟಲ್ ಕಿರೀಟ ಧರಿಸಿದ್ದರು.

*

ನಂಬುವುದನ್ನು, ಪ್ರಯತ್ನ ಮಾಡುವುದನ್ನು, ಕಲಿಯುವುದನ್ನು ಯಾರು ನಿಲ್ಲಿಸುವುದಿಲ್ಲವೋ ಅವರ ಜೀವನದಲ್ಲಿ ದೊಡ್ಡ ಸಂಗತಿಗಳು ನಡೆಯುತ್ತವೆ.
-ಹರ್ನಾಜ್‌ ಕೌರ್‌ ಸಂಧು, ಭುವನ ಸುಂದರಿ ಸೌಂದರ್ಯ ಸ್ಪರ್ಧೆ ವಿಜೇತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT