ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ | ಕೋವಿಡ್ ಆಘಾತ; ಮಕ್ಕಳು, ಸರ್ಕಾರಿ ಶಾಲೆಯತ್ತ

Last Updated 29 ನವೆಂಬರ್ 2021, 19:30 IST
ಅಕ್ಷರ ಗಾತ್ರ

ದೇಶದ ಗ್ರಾಮೀಣ ಪ್ರದೇಶದಲ್ಲಿ, ಕೋವಿಡ್‌ ಲಾಕ್‌ಡೌನ್‌ನ ನಂತರ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಏರಿಕೆಯಾಗಿದೆ. ಖಾಸಗಿ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಶಾಲೆ ತೊರೆದ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿಲ್ಲ. ಬದಲಿಗೆ ಹಲವು ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ಶಾಲೆಯನ್ನು ಸೇರದ ಮಕ್ಕಳ ಸಂಖ್ಯೆಯು ಒಂದು ಪಟ್ಟು ಹೆಚ್ಚಾಗಿದೆ. ಕೋವಿಡ್‌ ಲಾಕ್‌ಡೌನ್‌ನಿಂದ ದೇಶದ ಜನರ ಆರ್ಥಿಕ ಸ್ಥಿತಿಯಲ್ಲಿ ವ್ಯಾಪಕ ಬದಲಾವಣೆಯಾಗಿದೆ. ಇದು ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ ಎಂದು ‘ಶಿಕ್ಷಣದ ಸ್ಥಿತಿಗತಿ ವಾರ್ಷಿಕ ವರದಿ (ಗ್ರಾಮೀಣ)– 2021’ರಲ್ಲಿ ವಿವರಿಸಲಾಗಿದೆ.

* ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣವು2018ಕ್ಕೆ ಹೋಲಿಸಿದರೆ 2021ರಲ್ಲಿ ಶೇ 64.3ರಿಂದ ಶೇ 70.3ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣವು 6 ಶೇಕಡಾವಾರು ಅಂಶಗಳಷ್ಟು ಏರಿಕೆಯಾಗಿದೆ

* ಖಾಸಗಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣವು2018ಕ್ಕೆ ಹೋಲಿಸಿದರೆ 2021ರಲ್ಲಿ ಶೇ 32.5ರಿಂದ ಶೇ 24.4ಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಖಾಸಗಿ ಶಾಲೆ ಸೇರುವ ಮಕ್ಕಳ ಪ್ರಮಾಣವು 8.1 ಶೇಕಡಾವಾರು ಅಂಶಗಳಷ್ಟು ಇಳಿಕೆಯಾಗಿದೆ

* ಸರ್ಕಾರಿ ಶಾಲೆ ಸೇರಿದ ಮಕ್ಕಳ ಪ್ರಮಾಣದಲ್ಲಿ ಆದ ಏರಿಕೆಗಿಂತ, ಖಾಸಗಿ ಶಾಲೆ ಸೇರುವ ಮಕ್ಕಳ ಪ್ರಮಾಣದಲ್ಲಿ ಆದ ಇಳಿಕೆಯು ಹೆಚ್ಚು

ಶಾಲೆ ತೊರೆದವರು ಒಂದು ಪಟ್ಟು ಹೆಚ್ಚು

ಶಾಲೆ ಸೇರದ ಮಕ್ಕಳ ಪ್ರಮಾಣವು2018ರಲ್ಲಿ ಕಡಿಮೆ ಇತ್ತು. ಆದರೆ ಆ ಪ್ರಮಾಣವು2020ರಲ್ಲಿ ಒಂದು ಪಟ್ಟು ಹೆಚ್ಚಾಗಿದೆ. ಶಾಲೆ ಸೇರದ ಮಕ್ಕಳ ಪ್ರಮಾಣವು2021ರಲ್ಲೂ ಅದೇ ಮಟ್ಟದಲ್ಲಿ ಉಳಿದಿದೆ. ಹಣಕಾಸಿನ ಸಮಸ್ಯೆ ಮತ್ತು ದುಡಿಮೆಯ ಕಾರಣದಿಂದ ಮಕ್ಕಳು ಶಾಲೆ ಸೇರಲು ಸಾಧ್ಯವಾಗಿಲ್ಲ. ಜತೆಗೆ ಕೋವಿಡ್‌ ಹರಡುತ್ತದೆ ಎಂಬ ಭಯವೂ ಮಕ್ಕಳು ಶಾಲೆಗೆ ಸೇರದೇ ಇರಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಸರ್ಕಾರಿ ಶಾಲೆಗೆ ನೋಂದಣಿ: ಲಿಂಗ ತಾರತಮ್ಯ ಇಳಿಕೆ

2018ರಲ್ಲಿ, ಸರ್ಕಾರಿ ಶಾಲೆಗೆ ಸೇರುವ ಹೆಣ್ಣುಮಕ್ಕಳ ಪ್ರಮಾಣವು ಸರ್ಕಾರಿ ಶಾಲೆ ಸೇರುವ ಗಂಡುಮಕ್ಕಳ ಪ್ರಮಾಣಕ್ಕಿಂತ ಹೆಚ್ಚು ಇತ್ತು. 2018ರಲ್ಲಿ, ಸರ್ಕಾರಿ ಶಾಲೆ ಸೇರುವ ಹೆಣ್ಣು ಮತ್ತು ಗಂಡು ಮಕ್ಕಳ ಪ್ರಮಾಣದಲ್ಲಿನ ಅಂತರವು 7.2 ಶೇಕಡಾವಾರು ಅಂಶಗಳಷ್ಟು ಇತ್ತು. 2020ರಲ್ಲಿ ಇದು 5.3 ಶೇಕಡಾವಾರು ಅಂಶಗಳಿಗೆ ಇಳಿಕೆಯಾಗಿತ್ತು. 2021ರಲ್ಲಿ ಈ ಅಂತರದ ಪ್ರಮಾಣವು 4.5 ಶೇಕಡಾವಾರು್ ಅಂಶಗಳಿಗೆ ಇಳಿಕೆಯಾಗಿದೆ.

ಕೋವಿಡ್‌ಪೂರ್ವ ಕಾಲದಲ್ಲಿ ಹೆಣ್ಣುಮಕ್ಕಳನ್ನು ಸರ್ಕಾರಿ ಶಾಲೆಗೆ ಮತ್ತು ಗಂಡು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪರಿಪಾಟವಿತ್ತು. ಕೋವಿಡ್‌ನಿಂದ ಆರ್ಥಿಕ ಸ್ಥಿತಿ ಕುಸಿದಿರುವ ಕಾರಣ, ಅನಿವಾರ್ಯವಾಗಿ ತಮ್ಮ ಗಂಡುಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಪೋಷಕರ ಪ್ರಮಾಣ ಏರಿಕೆಯಾಗಿದೆ. ಪರಿಣಾಮವಾಗಿ ಶಿಕ್ಷಣ ನೀಡುವಲ್ಲಿ ಇದ್ದ ಲಿಂಗ ತಾರತಮ್ಯವು ಇಳಿಕೆಯಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಟ್ಯೂಷನ್‌ಗೆ ಬೇಡಿಕೆ ಹೆಚ್ಚಳ

ಶಾಲೆಗೆ ದಾಖಲಾಗಿರುವ ಮಕ್ಕಳು ಟ್ಯೂಷನ್‌ಗೆ ಸೇರುವ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಏರಿಕೆಯಾಗಿದೆ. 1ನೇ ತರಗತಿಯಿಂದ ಹಿಡಿದು 10ನೇ ತರಗತಿವರೆಗೂ ಈ ಪ್ರವೃತ್ತಿ ಕಂಡುಬಂದಿದೆ. 2018ಕ್ಕೆ ಹೋಲಿಸಿದರೆ, 2021ರಲ್ಲಿ ಟ್ಯೂಷನ್‌ಗೆ ದಾಖಲಾದ ಮಕ್ಕಳ ಪ್ರಮಾಣ ಸರಿಸುಮಾರು ಶೇ 10ರಿಂದ ಶೇ 12ರಷ್ಟು ಅಧಿಕವಾಗಿದೆ. ಕೋವಿಡ್ ಕಾರಣದಿಂದ ಭೌತಿಕ ತರಗತಿಗಳು ನಿಗದಿಯಂತೆ ನಡೆದಿಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಆರಂಭಿಸಿದ ಆನ್‌ಲೈನ್ ಕಲಿಕೆ ಪರಿಣಾಮಕಾರಿ ಬೀರಿಲ್ಲ ಎಂಬ ಅಂಶವು ಟ್ಯೂಷನ್‌ ದಾಖಲಾತಿ ಹೆಚ್ಚಳವಾಗಿರುವ ಈ ಪ್ರವೃತ್ತಿಯಿಂದ ತಿಳಿಯುತ್ತದೆ.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳೆನ್ನದೆ ಎಲ್ಲೆಡೆಯೂ ಈ ಟ್ಯೂಷನ್‌ ಪ್ರವೃತ್ತಿ ಬೆಳೆದಿದೆ. 2018ರಲ್ಲಿ ಸರ್ಕಾರಿ ಶಾಲೆಯ ಶೇ 29.6ರಷ್ಟು ಮಕ್ಕಳು ಮನೆಪಾಠಕ್ಕೆ ಹೋಗುತ್ತಿದ್ದರು, ಅವರ ಪ್ರಮಾಣ 2021ರಲ್ಲಿ ಶೇ 39.5ಕ್ಕೆ ಏರಿಕೆ ಕಂಡಿದೆ. ಅಂತೆಯೇ ಖಾಸಗಿ ಶಾಲೆಗಳ ಶೇ 26.7ರಷ್ಟು ಮಕ್ಕಳು ಟ್ಯೂಷನ್‌ಗೆ ದಾಖಲಾಗಿದ್ದರು. ಇವರ ಪ್ರಮಾಣ 2021ರಲ್ಲಿ ಶೇ 38.2ಕ್ಕೆ ಏರಿಕೆಯಾಗಿದೆ.

ಸ್ಮಾರ್ಟ್‌ಫೋನ್‌ ಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದ ಸಾಂಕ್ರಾಮಿಕ

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಅಡಿಯಿಡುತ್ತಿದ್ದಂತೆಯೇ ಭೌತಿಕ ಶಾಲಾ ತರಗತಿಗಳು ಬಂದ್ ಆದವು. ಆನ್‌ಲೈನ್‌ ತರಗತಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಎದುರಾಯಿತು. ಆದರೆ ಅದಕ್ಕೆ ಅಗತ್ಯವಾಗಿ ಬೇಕಿದ್ದ ಸ್ಮಾರ್ಟ್‌ಫೋನ್‌ ಲಭ್ಯತೆ ಆ ವೇಳೆ ಅಷ್ಟಾಗಿ ಇರಲಿಲ್ಲ. 2018ರಲ್ಲಿ ಅಂದರೆ ಕೋವಿಡ್‌ಗೂ ಮೊದಲು, ಶೇ 36.5ರಷ್ಟು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಮನೆಗಳಲ್ಲಿ ಸ್ಮಾರ್ಟ್‌ಫೋನ್ ಇತ್ತು. 2021ರ ವೇಳೆಗೆ ಈ ಪ್ರಮಾಣ ಶೇ 67.6ಕ್ಕೆ ಏರಿಕೆಯಾಯಿತು. ಆನ್‌ಲೈನ್ ತರಗತಿ ಕಾರಣಕ್ಕೆ ಮೂರು ವರ್ಷಗಳಲ್ಲಿ ಈ ಪ್ರಮಾಣವು ಬಹುತೇಕ ದುಪ್ಪಟ್ಟಾಗಿದೆ.

ಆಧಾರ:ಶಿಕ್ಷಣದ ಸ್ಥಿತಿಗತಿ ವಾರ್ಷಿಕ ವರದಿ (ಗ್ರಾಮೀಣ)– 2021

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT