ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬಾಬರಿ ಮಸೀದಿ–ರಾಮ ಮಂದಿರ ವಿವಾದದ ಹಾದಿ

Last Updated 16 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಬಾಬರನು 1528ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡಿದಾಗ, 20ನೇ ಶತಮಾನದಲ್ಲಿ ಭಾರತದ ಒಟ್ಟಾರೆ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡಬಲ್ಲಂಥ ವಿವಾದದ ಬೀಜವೊಂದು ಅದರೊಳಗೆ ಹುದುಗಿದೆ ಎಂಬುದನ್ನು ಯಾರೂ ನಿರೀಕ್ಷಿಸಿರಲಾರರು.

ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ ಎಂಬುದು ಹಿಂದೂಗಳ ನಂಬಿಕೆ. ಅಲ್ಲಿದ್ದ ರಾಮ ಮಂದಿರವನ್ನು ಕೆಡವಿ ಅದರ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಹಿಂದೂಗಳ ವಾದವಾಗಿತ್ತು. ರಾಮ ಜನ್ಮಭೂಮಿಯ ಜಾಗ ಹಾಗೂ ವಿವಾದಿತ ಕಟ್ಟಡಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮೂಲಕ 2019ರಲ್ಲಿ ಸುಪ್ರೀಂ ಕೋರ್ಟ್‌ ಈ ವಿವಾದಕ್ಕೆ ತೆರೆ ಎಳೆದಿದೆ. ಆದರೆ ಮಸೀದಿ ನಿರ್ಮಾಣದಿಂದ ಆರಂಭಿಸಿ ಅದನ್ನು ಕೆಡವಿದ ಘಟನೆಯವರೆಗೆ ಅನೇಕ ಉಲ್ಲೇಖಾರ್ಹ ಬೆಳವಣಿಗೆಗಳು ನಡೆದಿವೆ. ಬ್ರಿಟಿಷ್‌ ಆಡಳಿತಕ್ಕೂ ಈ ವಿವಾದ ತಲೆನೋವಾದದ್ದಿದೆ.

–1859

ವಿವಾದಿತ ಕಟ್ಟಡದಲ್ಲಿ ಬೇಲಿಯೊಂದನ್ನು ನಿರ್ಮಿಸಿದ ಬ್ರಿಟಿಷ್‌ ಅಧಿಕಾರಿಗಳಿಂದ ಒಳಭಾಗದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಹಾಗೂ ಹೊರಭಾಗದಲ್ಲಿ ಹಿಂದೂಗಳಿಗೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ

–1885

ರಾಮಚಬೂತ್ರಾದಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ಮಹಾಂತ ರಘುವೀರ ದಾಸ್‌ ಎಂಬುವರಿಂದ ಕೋರ್ಟ್‌ಗೆ ಅರ್ಜಿ ಸಲ್ಲಿಕೆ. ಮರುವರ್ಷ, ಫೈಜಾಬಾದ್‌ ಜಿಲ್ಲಾ ನ್ಯಾಯಾಲಯದಿಂದ ಆ ಅರ್ಜಿಯ ತಿರಸ್ಕಾರ

–1949 ಡಿಸೆಂಬರ್‌ 23

ಬಾಬರಿ ಮಸೀದಿಯೊಳಗೆ ರಾಮನ ವಿಗ್ರಹ ಪತ್ತೆ. ‘ರಾತ್ರಿ ವೇಳೆಯಲ್ಲಿ ಹಿಂದೂಗಳೇ ಮೂರ್ತಿಯನ್ನು ಇಟ್ಟಿದ್ದಾರೆ’ ಎಂದು ಮುಸ್ಲಿಮರ ವಾದ. ಎರಡೂ ಕಡೆಯವರಿಂದ ಪರಸ್ಪರರ ವಿರುದ್ಧ ದೂರು. ಇಡೀ ಪ್ರದೇಶವನ್ನು ‘ವಿವಾದಿತ ಪ್ರದೇಶ’ ಎಂದು ಘೋಷಿಸಿ ಮುಖ್ಯದ್ವಾರವನ್ನು ಮುಚ್ಚಿ, ಎಲ್ಲರಿಗೂ ಪ್ರವೇಶ ನಿರಾಕರಿಸಿದ ಸರ್ಕಾರ

–1950, ಜನವರಿ 16

‘ಆಸ್ತಾನ ಜನ್ಮಭೂಮಿ’ಯಲ್ಲಿ ಸ್ಥಾಪಿಸಲಾಗಿರುವ ರಾಮನ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿಗೋಪಾಲ್‌ಸಿಂಗ್‌ ವಿಶಾರದ ಎಂಬುವರಿಂದ ವಿವಾದಿತ ಭೂಮಿಗೆ ಸಂಬಂಧಿಸಿ ಮೊದಲ ಮಾಲೀಕತ್ವ ಅರ್ಜಿ ಸಲ್ಲಿಕೆ

–1959

ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಮೂಲಕ ವಿವಾದದ ಕಣಕ್ಕೆ ಇಳಿದ ನಿರ್ಮೋಹಿ ಅಖಾಡ. ಈ ಜಾಗವನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಒತ್ತಾಯ

–1961 ಡಿಸೆಂಬರ್‌ 18

ಮಸೀದಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾಗವನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಉತ್ತರಪ್ರದೇಶದ ವಕ್ಫ್‌ ಸುನ್ನಿ ಕೇಂದ್ರೀಯ ಮಂಡಳಿಯಿಂದ ಅರ್ಜಿ ಸಲ್ಲಿಕೆ

–1983

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವ ರಾಷ್ಟ್ರವ್ಯಾಪಿ ಆಂದೋಲನವಕ್ಕೆ ವಿಶ್ವಹಿಂದೂ ಪರಿಷತ್‌ನಿಂದ ಚಾಲನೆ

–1986, ಫೆಬ್ರುವರಿ 1

ಹರಿಶಂಕರ್‌ ದುಬೆ ಎಂಬುವರ ಅರ್ಜಿಯನ್ನು ಪರಿಗಣಿಸಿ ಹಿಂದೂಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಮುಖ್ಯದ್ವಾರದ ಬೀಗವನ್ನು ತೆರೆಯುವಂತೆ ಜಿಲ್ಲಾ ನ್ಯಾಯಾಲಯದಿಂದ ಆದೇಶ. ‘ಬಾಬರಿ ಮಸೀದಿ ಕ್ರಿಯಾ ಸಮಿತಿ’ ಹುಟ್ಟುಹಾಕಿದ ಮುಸ್ಲಿಮರು

–1989

ವಿವಾದಿತ ಪ್ರದೇಶದ ಮಾಲೀಕತ್ವ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ತಿನ ಉಪಾಧ್ಯಕ್ಷ ದೇವಕಿನಂದನ ಅಗರ್ವಾಲ್‌ ಎಂಬುವರಿಂದ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿಕೆ

–1989, ಅಕ್ಟೋಬರ್‌ 23

ಫೈಜಾಬಾದ್‌ ಕೋರ್ಟ್‌ನಲ್ಲಿ ದಾಖಲಾಗಿದ್ದ ನಾಲ್ಕೂ ಪ್ರಕರಣಗಳು ಹೈಕೋರ್ಟ್‌ನ ವಿಶೇಷ ಪೀಠಕ್ಕೆ ವರ್ಗಾವಣೆ

–1989 ನವೆಂಬರ್‌

ವಿಶ್ವಹಿಂದೂ ಪರಿಷತ್‌ನಿಂದ ಅಯೋಧ್ಯೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ. ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರ ಸಮ್ಮತಿ

–1990 ಸೆಪ್ಟೆಂಬರ್‌

ಗುಜರಾತ್‌ನ ಸೋಮನಾಥ್‌ನಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ. ಮಾರ್ಗಮಧ್ಯೆ, ಬಿಹಾರದಲ್ಲಿ ಬಂಧನ

–1990 ನವೆಂಬರ್‌

ವಿಶ್ವಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಅಯೋಧ್ಯೆಗೆ ಬಂದಿದ್ದ ಕರಸೇವಕರು ಹಾಗೂ ಪೊಲೀಸರ ಮಧ್ಯೆ ಸಂಘರ್ಷ. ಕರಸೇವಕರನ್ನು ನಿಯಂತ್ರಿಸಲು ಗುಂಡುಹಾರಿಸಿದ ಪೊಲೀಸರು. ಹಲವು ಕರಸೇವಕರ ಸಾವು

–1991

ಲೋಕಸಭಾ ಚುನಾವಣೆಯಲ್ಲಿ 120 ಸ್ಥಾನ ಪಡೆದು ಅತಿದೊಡ್ಡ ವಿರೋಧಪಕ್ಷವೆನಿಸಿದ ಬಿಜೆಪಿ

–1991 ಜೂನ್‌

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಧಿಕಾರ, ಕಲ್ಯಾಣ್‌ಸಿಂಗ್‌ ಮುಖ್ಯಮಂತ್ರಿ

–1992 ಡಿಸೆಂಬರ್‌ 6

ಒಟ್ಟಾರೆ ವಿವಾದಕ್ಕೆ ಮಹತ್ವದ ತಿರುವು ನೀಡಿದ ದಿನ. ವಿಶ್ವಹಿಂದೂ ಪರಿಷತ್‌, ಬಿಜೆಪಿ ಹಾಗೂ ಶಿವಸೇನಾದ ಕಾರ್ಯಕರ್ತರಿಂದ ಬಾಬರಿ ಮಸೀದಿ ನೆಲಸಮ. ರಾಷ್ಟ್ರವ್ಯಾಪಿ ಕೋಮು ಗಲಭೆ ಆರಂಭ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು.

ಎರಡು ಎಫ್‌ಐಆರ್‌ ದಾಖಲು. ಒಂದು ಕರಸೇವಕರ ವಿರು, ಇನ್ನೊಂದು ಎಲ್‌.ಕೆ. ಅಡ್ವಾಣಿ, ಅಶೋಕ್‌ ಸಿಂಘಲ್‌, ವಿನಯ್‌ ಕಟಿಯಾರ್‌, ಉಮಾಭಾರತಿ, ಸಾಧ್ವಿ ಋತಂಬರಾ, ಮುರಳಿಮನೋಹರ ಜೋಶಿ, ಗಿರಿರಾಜ್‌ ಕಿಶೋರ್‌ ಹಾಗೂ ವಿಷ್ಣು ಹರಿ ದಾಲ್ಮಿಯಾ ಅವರ ವಿರುದ್ದ. ಎಂಟು ಮಂದಿಯ ವಿರುದ್ಧ ರಾಮಕಥಾಕುಂಜ ಸಭಾ ಮಂಚ್‌ದಲ್ಲಿ ದ್ವೇಷ ಭಾಷಣ ಮಾಡಿದ ಆರೋಪ (ಇವರಲ್ಲಿ ಅಶೋಕ್‌ ಸಿಂಘಲ್‌ ಹಾಗೂ ಗಿರಿರಾಜ್‌ ಕಿಶೋರ್‌ ಅವರು ನಿಧನರಾಗಿದ್ದಾರೆ)

ಡಿಸೆಂಬರ್‌ 6ರ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಮಸೀದಿ ಕೆಡವಿದ 10 ದಿನಗಳ ಬಳಿಕ (ಡಿ.16ರಂದು) ಪಂಜಾಬ್‌ ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಎಂ.ಎಸ್‌. ಲಿಬರ್‍ಹಾನ್‌ ಆಯೋಗ ರಚನೆ. ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚನೆ (ಆದರೆ ಈ ಅವಧಿಯನ್ನು 48 ಬಾರಿ ವಿಸ್ತರಿಸಲಾಯಿತು ಮತ್ತು ಇದಕ್ಕಾಗಿ ಸುಮಾರು ₹ 8 ಕೋಟಿ ವ್ಯಯಿಸಲಾಗಿತ್ತು. ಸುಮಾರು 15 ವರ್ಷಗಳ ನಂತರ ವರದಿ ಸಲ್ಲಿಕೆಯಾಯಿತು)

–1996 ಮೇ

ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ. ಅಟಲ್‌ಬಿಹಾರಿ ವಾಜಪೇಯಿ 13 ದಿನಗಳ ಅವಧಿಗೆ ಪ್ರಧಾನಿ. 1998ರಲ್ಲಿ ಪುನಃ ಸರ್ಕಾರ ರಚಿಸಿದ ಬಿಜೆಪಿ. 13 ತಿಂಗಳಿಗೆ ಸರ್ಕಾರ ಉರುಳಿತು. 1999 ಅಕ್ಟೋಬರ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ

–2002 ಏಪ್ರಿಲ್‌

ಅಲಹಾಬಾದ್‌ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠದಿಂದ ವಿವಾದಿತ ಧಾರ್ಮಿಕ ಸ್ಥಳದ ಮಾಲೀಕತ್ವವನ್ನು ಕುರಿತ ಅರ್ಜಿಯ ವಿಚಾರಣೆ ಆರಂಭ

–2010 ಸೆಪ್ಟೆಂಬರ್‌ 30

2.77 ಎಕರೆ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಿ, ಎರಡನ್ನು ಹಿಂದೂಗಳಿಗೆ ಹಾಗೂ ಒಂದನ್ನು ಮುಸ್ಲಿಮರಿಗೆ ನೀಡುವ ತೀರ್ಪು ಅಲಹಾಬಾದ್‌ ಹೈಕೋರ್ಟ್‌ನಿಂದ ಪ್ರಕಟ

–2011 ಮೇ 9

ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಡೆನೀಡಿದ ಸುಪ್ರೀಂ ಕೋರ್ಟ್‌, ಯಥಾಸ್ಥಿತಿ ಕಾಪಾಡುವಂತೆ ಸೂಚನೆ

–2019 ಆಗಸ್ಟ್‌ 6

ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್‌.ಎ ಬೊಬ್ಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಹಾಗೂ ಅಬ್ದುಲ್ ನಜೀರ್‌ ಅವರನ್ನೊಳಗೊಂಡ ಪೀಠದಿಂದ ಪ್ರಕರಣದ ಪ್ರತಿನಿತ್ಯ ವಿಚಾರಣೆ ಆರಂಭ

–2019 ನವೆಂಬರ್‌ 9

ವಿವಾದಿತ ಭೂಮಿ ಹಾಗೂ ಕಟ್ಟಡದ ಮಾಲೀಕತ್ವದ ಬಗ್ಗೆ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು

ಆಧಾರ: ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT