ಮಂಗಳವಾರ, ಮಾರ್ಚ್ 28, 2023
33 °C

ಆಳ–ಅಗಲ | ಕೊರೊನಾ ‘ಟೆಸ್ಟ್‌’: ಯಾರು ಪಾಸು, ಯಾರು ಫೇಲು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರೆಜಿಲ್‌ನಲ್ಲಿ ಶವ ಪೆಟ್ಟಿಗೆ ತಯಾರಿಕೆ ನಡೆಸುತ್ತಿರುವುದು–ಎಎಫ್‌ಪಿ ಚಿತ್ರ

ಎಡವಿ ಬಿದ್ದವರು

‘ಜಗತ್ತಿನ ದೈತ್ಯ ಶಕ್ತಿಗಳು ನಾವು’ ಎಂದು ಎದೆಯುಬ್ಬಿಸಿ ನಡೆದ ರಾಷ್ಟ್ರಗಳು ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿ ಎಡವಿ ಬಿದ್ದ ಕಥೆ ಇದು. ಆ ದೇಶಗಳ ಆಡಳಿತ ಯಂತ್ರದ ವೈಫಲ್ಯವನ್ನೂ, ಆರೋಗ್ಯ ವ್ಯವಸ್ಥೆಯ ಹುಳುಕುಗಳನ್ನೂ ಈ ಕಥೆ ತೆರೆದಿಡುತ್ತದೆ...

ಅಮೆರಿಕ

ಅಮೆರಿಕಕ್ಕೆ ಇದುವರೆಗೆ ಇದ್ದ ‘ಎಲ್ಲವನ್ನೂ ಗೆಲ್ಲಬಲ್ಲ ಬಲಶಾಲಿ ದೊಡ್ಡಣ್ಣ’ ಎಂಬ ಹಣೆಪಟ್ಟಿಯನ್ನು ಅನಾಮತ್ತಾಗಿ ಅಳಿಸಿಹಾಕಿದೆ ಕೊರೊನಾ ಸೋಂಕು. ಅಮೆರಿಕದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು, ಹೊಣೆಗೇಡಿ ಅಧಿಕಾರಶಾಹಿಯನ್ನು, ಅಮಾನವೀಯ ಆರ್ಥಿಕ ನೀತಿಯನ್ನೂ ಅದು ಬಟಾಬಯಲು ಮಾಡಿದೆ ಎನ್ನುವುದು ಅಲ್ಲಿನ ಬೆಳವಣಿಗೆಗಳನ್ನು ಬಲ್ಲವರ ವಿಶ್ಲೇಷಣೆ. ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದ್ದ ಆರಂಭಿಕ ಎರಡು ತಿಂಗಳ ಅವಧಿಯನ್ನು ವ್ಯರ್ಥವಾಗಿ ಕಳೆದ ಈ ದೇಶ, ಕಾಯಿಲೆ ವಿರುದ್ಧ ಹೋರಾಡಲು ಅಗತ್ಯವಾದ ರಾಷ್ಟ್ರೀಯ ನೀತಿಯನ್ನು ರೂಪಿಸಲು ನಿರ್ಲಕ್ಷ್ಯ ತೋರಿತು. ಕಚೇರಿಗಳನ್ನು ಮುಚ್ಚಬೇಕೋ ಬೇಡವೋ ಎಂಬ ವಿಷಯವಾಗಿ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಬಿಟ್ಟುಕೊಡಲಾಯಿತು. ಮುಖಗವಸುಗಳು, ಪರೀಕ್ಷಾ ಕಿಟ್‌ಗಳ ತೀವ್ರ ಕೊರತೆಯನ್ನು ಆ ದೇಶ ಅನುಭವಿಸಿತು. ಜಗತ್ತಿನ ಈ ಸಿರಿವಂತ ದೇಶ ರಷ್ಯಾ, ತೈವಾನ್‌ ಸೇರಿದಂತೆ ಹಲವು ದೇಶಗಳ ಮುಂದೆ ನೆರವಿಗಾಗಿ ಕೈಚಾಚಿ ನಿಲ್ಲಬೇಕಾಯಿತು. ಸಾಂಕ್ರಾಮಿಕ ಸೋಂಕಿನಂತಹ ವಿಪತ್ತಿನ ಸನ್ನಿವೇಶವನ್ನು ನಿಭಾಯಿಸುವಲ್ಲಿ ಡೊನಾಲ್ಡ್‌ ಟ್ರಂಪ್‌ ನಾಯಕತ್ವ ಸಂಪೂರ್ಣ ವಿಫಲವಾಗಿದ್ದರಿಂದ ಅಲ್ಲಿ ಸಾವಿನ ಸರಣಿ ಮುಂದುವರಿಯಿತು ಎಂದು ಆ ದೇಶದ ಬಹುತೇಕ ಮುಂಚೂಣಿ ಮಾಧ್ಯಮಗಳು ವರದಿ ಮಾಡಿವೆ.

ಸ್ಪೇನ್‌

ಜನವರಿಯಲ್ಲಿ ಸೋಂಕಿನ ಆಗಮನದ ಮುನ್ಸೂಚನೆ ಸಿಕ್ಕರೂ ನಿರ್ಲಕ್ಷ್ಯ ವಹಿಸಿದ ಸ್ಪೇನ್‌, ಅದಕ್ಕಾಗಿ ದೊಡ್ಡ ಬೆಲೆಯನ್ನೇ ತೆತ್ತಿದೆ. ಜಗತ್ತಿನಲ್ಲಿ ಅತ್ಯಧಿಕ ‘ಕೋವಿಡ್‌ ಸಾವು’ಗಳನ್ನು ಕಂಡ ದೇಶಗಳಲ್ಲಿ ಇದೂ ಒಂದು. ಆರೋಗ್ಯ ಕಾರ್ಯಕರ್ತರೇ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರಾಗಿರುವುದು ಇನ್ನೂ ಕಳವಳ ಮೂಡಿಸಿದೆ. ವೈಯಕ್ತಿಕ ಸುರಕ್ಷಾ ಗೌನು ಲಭ್ಯವಿಲ್ಲದ ಕಾರಣ ಕಸ ತುಂಬುವ ಪ್ಲಾಸ್ಟಿಕ್‌ ಚೀಲವನ್ನೇ ಗೌನಿನಂತೆ ವೈದ್ಯರು ಬಳಸುವುದು ಅನಿವಾರ್ಯವಾಗಿದೆ ಎಂದು ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ. ಸೋಂಕು ಹರಡುತ್ತಿದ್ದರೂ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮ್ಯಾಡ್ರಿಡ್‌ನಲ್ಲಿ ಬೃಹತ್‌ ರ‍್ಯಾಲಿ ಸಂಘಟಿಸಲು ಅನುವು ಮಾಡಿಕೊಟ್ಟಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್‌ಡೌನ್‌ ಘೋಷಣೆಯಲ್ಲಿ ವಿಳಂಬ ಮಾಡಿದ್ದೂ ಸೋಂಕು ಹರಡಲು ಕಾರಣವಾಗಿದೆ. ಈ ದೇಶದ ಜನಸಂಖ್ಯೆಯ ಐದನೇ ಒಂದರಷ್ಟು ಮಂದಿ 65 ವರ್ಷ ವಯಸ್ಸು ಮೀರಿದವರು. ಅಲ್ಲಿನ ಸಮಸ್ಯೆ ತೀವ್ರತರದಲ್ಲಿ ಹೆಚ್ಚಲೂ ಇದೂ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಇಟಲಿ

ಚೀನಾದಿಂದ ಯುರೋಪಿಗೆ ಹಾರಿಬಂದ ಸೋಂಕಿನ ಮೊದಲ ಫಲಾನುಭವಿ ಇಟಲಿ. ಆರಂಭಿಕ ಹಂತದಲ್ಲಿ ನಾಗರಿಕರಲ್ಲಿ ಜಾಗೃತಿ ಉಂಟುಮಾಡುವಲ್ಲಿ ಇಟಲಿ ವಿಫಲವಾಯಿತು. ಸೋಂಕಿತರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸುವಲ್ಲಿ ವಿಳಂಬ ಮಾಡಿತು. ಲಾಕ್‌ಡೌನ್‌ ಘೋಷಣೆಗೂ ಮೀನಮೇಷ ಎಣಿಸಿತು. ಅಷ್ಟರಲ್ಲಿ ದೇಶದ ತುಂಬಾ ಸೋಂಕು ನಾಗಾಲೋಟದಲ್ಲಿ ವ್ಯಾಪಿಸಿತು. ಇಟಲಿಯ ಒಟ್ಟು ಜನಸಂಖ್ಯೆಯಲ್ಲಿ ಶೇ 23ರಷ್ಟು ಮಂದಿ 65 ವರ್ಷಕ್ಕೂ ಮೀರಿದವರು. ವಯೋಸಹಜವಾಗಿ ಅವರಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆ ಆಗಿದ್ದರಿಂದ ಕೊರೊನಾದ ತೀವ್ರ ದಾಳಿಗೆ ತುತ್ತಾಗಬೇಕಾಯಿತು. ಸಾವನ್ನಪ್ಪಿದವರಲ್ಲಿ ಇವರ ಪ್ರಮಾಣವೇ ಹೆಚ್ಚು. ಔಷಧಿಗಿಂತ ಹೆಚ್ಚಿನ ವೇಗದಲ್ಲಿ ಶವಪೆಟ್ಟಿಗೆಗಳ ಅಗತ್ಯ ಕಾಡಿ, ಈ ದೇಶದ ಜನ ಹೌಹಾರಿ ಕುಳಿತುಕೊಳ್ಳಬೇಕಾಯಿತು.

ಇಂಗ್ಲೆಂಡ್‌

ಯುರೋಪ್‌ ಒಕ್ಕೂಟ ಕೊರೊನಾ ಸೋಂಕಿನ ಕುರಿತು ಯೋಚಿಸಲು ಶುರು ಮಾಡಿದಾಗ, ಇಂಗ್ಲೆಂಡ್‌ ‘ಬ್ರೆಕ್ಸಿಟ್‌’ ಸಂಭ್ರಮಾಚರಣೆ ಮೂಡ್‌ನಲ್ಲಿತ್ತು. ಯುರೋಪ್‌ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ಎದುರಾದದ್ದನ್ನೂ ಮೈಮರೆಯುವಂತೆ ಮಾಡಿತ್ತು. ಸೋಂಕಿನ ಬ್ರಿಟನ್‌ ಸರ್ಕಾರದ ನಿಲುವು ಆ ದೇಶಕ್ಕೆ ಬಹುದೊಡ್ಡ ಹೊಡೆತ ನೀಡಿತು. ‘ಒಂದಷ್ಟು ಜನರನ್ನು ಸೋಂಕಿಗೆ ಒಳಗಾಗುವಂತೆ ಮಾಡಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು’ ಎಂಬ ಸಲಹೆಯನ್ನು ಅಲ್ಲಿನ ಕೆಲವು ವಿಜ್ಞಾನಿಗಳು ಸರ್ಕಾರಕ್ಕೆ ನೀಡಿದ್ದರು. ಸರ್ಕಾರ ಆ ಸಲಹೆಯನ್ನು ಪಾಲಿಸಿತು. ಇಟಲಿಯ ಸ್ಥಿತಿಯನ್ನು ಗಮನಸಿದ ನಂತರ ಬ್ರಿಟನ್‌ಗೆ ತನ್ನ ತಪ್ಪಿನ ಅರಿವಾಗಿ, ಕೆಲವು ವಾರಗಳ ನಂತರ ಲಾಕ್‌ಡೌನ್‌ ಘೋಷಿಸಿತು. ಅಷ್ಟರಲ್ಲಾಗಲೇ ತುಂಬಾ ತಡವಾಗಿತ್ತು. ಸಾವುಗಳ ಮೇಲೆ ಸಾವುಗಳು ಸಂಭವಿಸಿದವು.

ಫ್ರಾನ್ಸ್‌

ಜಗತ್ತಿನಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಇರುವ ದೇಶಗಳಲ್ಲಿ ಫ್ರಾನ್ಸ್‌ ಕೂಡ ಒಂದು. ಅಲ್ಲಿಯೂ ಕೊರೊನಾ ಸೋಂಕು ಮರಣ ಮೃದಂಗ ಬಾರಿಸಿದೆ. ಆರಂಭಿಕ ಹಂತದ ಮೈಮರೆವು ದೊಡ್ಡ ಹೊಡೆತ ನೀಡಿದೆ ಎನ್ನುವುದು ಆ ದೇಶದ ಸನ್ನಿವೇಶದ ವಿಶ್ಲೇಷಕರ ಮಾತು. ಜನವರಿಯಲ್ಲೇ ಸೋಂಕು ಯುರೋಪ್‌ನಲ್ಲಿ ಕಾಣಿಸಿಕೊಂಡರೂ ಮಾರ್ಚ್‌ವರೆಗೆ ಫ್ರಾನ್ಸ್‌ನಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿರಲಿಲ್ಲ. ಸೋಂಕು ಪರೀಕ್ಷೆ ಮಾಡುವ ಪ್ರಕ್ರಿಯೆಯಲ್ಲೂ ದೇಶ ಹಿಂದೆ ಬಿತ್ತು. ಫೆಬ್ರುವರಿಯಲ್ಲಿ ನಡೆದ ಧಾರ್ಮಿಕ ಸಭೆಗಳನ್ನು ತಡೆಯಲಿಲ್ಲ. ಪರಿಸ್ಥಿತಿ ಕೈಮೀರಿ ಹೋದಾಗ ಸರ್ಕಾರ ಎಚ್ಚೆತ್ತುಕೊಂಡಿತು.

ಭಾರತದ ಸ್ಥಿತಿ ಹೇಗಿದೆ?

ಭಾರತದಂತಹ ಅತ್ಯಧಿಕ ಜನಸಾಂದ್ರತೆಯುಳ್ಳ ದೇಶದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವುದು ದೊಡ್ಡ ಸವಾಲೇ ಸರಿ. ಅಮೆರಿಕ ಹಾಗೂ ಯುರೋಪ್‌ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕು ಅಷ್ಟೇನೂ ತೀವ್ರವಾಗಿ ಹರಡಿಲ್ಲ. ಆದರೆ, ಬೇರೆ ದೇಶಗಳಷ್ಟು ಇಲ್ಲಿ ಸೋಂಕು ಪತ್ತೆ ಪರೀಕ್ಷೆಗಳು ನಡೆಯದಿರುವುದು ಕೂಡ ಅಷ್ಟೇ ನಿಜ. ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುವ ಭೀತಿ ಇದೆ. ಲಾಕ್‌ಡೌನ್‌ ಹೊಡೆತವನ್ನು ತಡೆಯಲಾಗದೆ ದೇಶದ ಕಾರ್ಮಿಕ ವರ್ಗ ಒದ್ದಾಡುತ್ತಿರುವುದು ಕೊರೊನಾ ಸೃಷ್ಟಿಸಿರುವ ಬಹುದೊಡ್ಡ ಬಿಕ್ಕಟ್ಟು.

ಗೆದ್ದು ಬೀಗಿದವರು

ಇದು ಕೋವಿಡ್ ಕಾಯಿಲೆ ವಿರುದ್ಧ ದಿಟ್ಟತನದಿಂದ ಹೋರಾಡಿದ ದೇಶಗಳ ಕಥೆ. ಈ ದೇಶಗಳು ಗಾತ್ರದಲ್ಲಿ ಚಿಕ್ಕದಾಗಿರುವುದೂ ಒಂದು ವರದಾನ. ಶೀಘ್ರವಾಗಿ ಕ್ರಮಕ್ಕೆ ಮುಂದಾಗಿದ್ದು ಮತ್ತೊಂದು ಜಾಣ್ಮೆಯ ನಡೆ. ಸೋಂಕಿನ ಸರಪಳಿ ತುಂಡರಿಸಲು ಈ ದೇಶಗಳ ಮಾಡಿದ ಸಾಹಸಗಳು ಇಲ್ಲಿವೆ...

ದಕ್ಷಿಣ ಕೊರಿಯಾ

ಫೆಬ್ರುವರಿ ತಿಂಗಳ ಮಧ್ಯದ ವೇಳೆಗೆ ಚೀನಾ ದೇಶವನ್ನು ಹೊರತುಪಡಿಸಿದರೆ ಅತಿ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ದಕ್ಷಿಣ ಕೊರಿಯಾದಲ್ಲಿ. ಆದರೆ, ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸಾಧನಗಳ ಗರಿಷ್ಠ ಬಳಕೆ ಹಾಗೂ ಅತ್ಯಂತ ಸಶಕ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಸೋಂಕಿನ ಪ್ರಭಾವವನ್ನು ಬಲುಬೇಗ ಕುಗ್ಗುವಂತೆ ಮಾಡಿತು ಈ ಪುಟ್ಟ ದೇಶ. ತಪಾಸಣಾ ಸೌಲಭ್ಯ ದೇಶದ ಮೂಲೆ–ಮೂಲೆಯಲ್ಲೂ ಸಿಗುವಂತೆ ಮಾಡಿ, ಸೋಂಕು ಪತ್ತೆಗೆ ವಿಶೇಷ ಅಭಿಯಾನವನ್ನೇ ನಡೆಸಲಾಯಿತು. ಇಡೀ ದೇಶವನ್ನು ಲಾಕ್‌ಡೌನ್‌ಗೆ ಒಪ್ಪಿಸದೆ ಸೋಂಕು ಪತ್ತೆಯಾದ ಪ್ರದೇಶದಲ್ಲಿ ಮಾತ್ರ ಕ್ವಾರಂಟೈನ್ ವ್ಯವಸ್ಥೆಯನ್ನು ಜಾರಿಗೊಳಿಸಿತು. ಕ್ವಾರಂಟೈನ್‌ನ ನಿಯಮ ಉಲ್ಲಂಘನೆ ಮಾಡಿದವರಿಗೆ ಲೊಕೇಶನ್‌ ಟ್ರ್ಯಾಕಿಂಗ್‌ ಬ್ರೇಸ್ಲೆಟ್‌ಗಳನ್ನು ತೊಡಿಸಲಾಯಿತು. ಸೋಂಕಿನ ಹಾವಳಿ ಮಧ್ಯೆಯೇ ಸಂಸತ್ತಿನ ಚುನಾವಣೆಯನ್ನೂ ಯಶಸ್ವಿಯಾಗಿ ನಡೆಸಿತು.

ನ್ಯೂಜಿಲೆಂಡ್

ಸೋಂಕಿನ ತೀವ್ರತೆಯನ್ನು ಬಹುಬೇಗ ಅರಿತುಕೊಂಡ ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಆರ್ಡೆನ್, ಚೀನಾ ಸೇರಿ ಸೋಂಕುಪೀಡಿತ ದೇಶಗಳಿಂದ ಬಂದವರನ್ನು 14 ದಿನಗಳವರೆಗೆ ಪ್ರತ್ಯೇಕವಾಸದಲ್ಲಿ ಇರಿಸುವಂತೆ ಆದೇಶಿಸಿದರು. ಮಾ. 19ರಿಂದ ದೇಶದ ಎಲ್ಲ ಗಡಿಗಳನ್ನು ಮುಚ್ಚಲು ಆದೇಶಿಸಿ, ಕಠಿಣ ಲಾಕ್‌ಡೌನ್ ಹೇರಿದರು. ಕೆಲಸವಿಲ್ಲದೆ ಮನೆಯಲ್ಲಿಯೇ ಉಳಿಯಬೇಕಾದ ಎಲ್ಲ ನಾಗರಿಕರಿಗೆ ನೆರವಿನ ರೂಪದಲ್ಲಿ ಸರ್ಕಾರವೇ ಅವರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಿತು. ಉಳಿದ ದೇಶಗಳು ಅರ್ಥವ್ಯವಸ್ಥೆ ಕುರಿತು ತಲೆ ಕೆಡಿಸಿಕೊಳ್ಳುತ್ತಿದ್ದರೆ, ನ್ಯೂಜಿಲೆಂಡ್‌ ಸರ್ಕಾರ, ಜನರ ಆರೋಗ್ಯವೇ ನಮ್ಮ ಮೊದಲ ಆದ್ಯತೆ ಎಂದು ಘೋಷಿಸಿ, ಅದಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾ ಹೋಯಿತು.

ತೈವಾನ್

ವಿಮಾನಯಾನವಾದರೆ ಚೀನಾಕ್ಕೆ ಕೇವಲ ಒಂದು ಗಂಟೆ ಪ್ರಯಾಣದ ಅವಧಿಯನ್ನು ಹೊಂದಿರುವ ತೈವಾನ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟವರು ಆರು ಜನ ಮಾತ್ರ. ಸೋಂಕಿತರ ಸಂಖ್ಯೆ 500 ದಾಟಿಲ್ಲ. ಈ ಪೈಕಿ ಅರ್ಧದಷ್ಟು ಜನ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಹೋಗಿದ್ದಾರೆ. ಚೀನಾದಿಂದ ವಾಪಸಾದವರಿಗೆ ಡಿಸೆಂಬರ್ 31ರಿಂದಲೇ ತಪಾಸಣೆ ಆರಂಭಿಸಿತು ಈ ದೇಶ. ಚೀನಾದ ಹಡಗುಗಳು ತೈವಾನ್‌ ಬಂದರುಗಳಿಗೆ ಬರದಂತೆ ನಿರ್ಬಂಧ ವಿಧಿಸಲಾಯಿತು. ಜನವರಿಯಿಂದಲೇ ಇಲ್ಲಿನ ಜನ ಮುಖಗವಸು ಧರಿಸಿ ಓಡಾಡತೊಡಗಿದರು. ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಜಾರಿಗೆ ತರಲಾಯಿತು. ಸೋಂಕಿನ ಕುರಿತ ಎಲ್ಲ ಬೆಳವಣಿಗೆಗಳನ್ನು ನಾಗರಿಕರ ಗಮನಕ್ಕೆ ನಿತ್ಯವೂ ತರುವ ವ್ಯವಸ್ಥೆ ಮಾಡಲಾಯಿತು.

ವಿಯೆಟ್ನಾಂ

ಚೀನಾ ಜೊತೆ 1,100 ಕಿ.ಮೀ. ಗಡಿ ಹಂಚಿಕೊಂಡಿರುವ ವಿಯೆಟ್ನಾಂ‌ನಲ್ಲಿ ಕೋವಿಡ್‌ನಿಂದಾದ ಸಾವಿನ ಸಂಖ್ಯೆ ಶೂನ್ಯ. ಮೊದಲ ಪ್ರಕರಣ ವರದಿಯಾಗುವ ಮುನ್ನವೇ ಎಲ್ಲ ಆಸ್ಪತ್ರೆಗಳು, ಪ್ರಾಂತೀಯ ಆಡಳಿತಗಳಿಗೆ ಮಾರ್ಗದರ್ಶಿ ಸೂತ್ರ ರವಾನೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ದೇಶದ 700 ಆಸ್ಪತ್ರೆಗಳ ನಡುವೆ ಟೆಲಿಕಾನ್ಫರೆನ್ಸ್ ಏರ್ಪಡಿಸಲಾಗಿತ್ತು. ದೇಶದ ಪ್ರತಿಯೊಂದು ಪ್ರದೇಶದಲ್ಲೂ ತಪಾಸಣೆ ಪ್ರಮಾಣವನ್ನು ಸಮರೋಪಾದಿಯಲ್ಲಿ ನಡೆಸಲಾಯಿತು. ಪ್ರಕರಣ ವರದಿಯಾದ ಪ್ರದೇಶದ ಎಲ್ಲ ಜನರನ್ನು ಕ್ವಾರಂಟೈನ್ ಮಾಡಿ, ಸೋಂಕು ಹರಡದಂತೆ ತಡೆಯಲಾಯಿತು. ವೈದ್ಯಕೀಯ ತಂತ್ರಜ್ಞಾನ ಹಾಗೂ ಔಷಧಿ ಮೇಲೆ ಹೆಚ್ಚು ಅವಲಂಬನೆಯಾಗದೆ ಸೋಂಕುಪೀಡಿತರ ಸರ್ವೇಕ್ಷಣೆಯಲ್ಲಿ ಅತಿ ಹೆಚ್ಚು ಗಮನಹರಿಸಿದ್ದು ಈ ದೇಶದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿತು.

ಸಿಂಗಪುರ

ಕೊರೊನಾ ಸೋಂಕು ಎದುರಿಸಲು ಸಿಂಗಪುರ, ಇತರ ದೇಶಗಳಂತೆ ಲೌಕ್‌ಡೌನ್‌ಗೆ ಮೊರೆ ಹೋಗಲಿಲ್ಲ. ಅದರ ಬದಲು ಅಂತರ ಕಾಯ್ದುಕೊಳ್ಳುವ ಕುರಿತು ನಾಗರಿಕರಲ್ಲಿ ಜಾಗೃತಿ ಉಂಟು ಮಾಡಿತು. ಈ ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಿಲ್ಲ. ಕಚೇರಿಗಳು ಸಹ ಎಂದಿನಂತೆಯೇ ಕಾರ್ಯ ನಿರ್ವಹಿಸಿದವು. ಹೋಟೆಲ್‌ಗಳು ತೆರೆದಿದ್ದವು. ಆರೋಗ್ಯ ಇಲಾಖೆಯನ್ನೇ ಕೇಂದ್ರವಾಗಿ ಇರಿಸಿಕೊಂಡು ಉಳಿದ ಇಲಾಖೆಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಿದವು. ನಾಗರಿಕರ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ವಿಧಿಸಲಿಲ್ಲ. ಆದರೆ, ಅಂತರ ಕಾಯ್ದುಕೊಳ್ಳದಿದ್ದರೆ ಶಿಕ್ಷೆ ಎದುರಿಸಬೇಕಾದೀತು ಎಂಬ ಭೀತಿಯನ್ನು ಸಹ ಮೂಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು