ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಆಳ–ಅಗಲ: ವಿದ್ಯುತ್ ವಿತರಣೆ ಆಮೂಲಾಗ್ರ ಬದಲಾವಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣೆಯಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು, ಅದಕ್ಕಾಗಿ ವಿದ್ಯುಚ್ಛಕ್ತಿ(ತಿದ್ದುಪಡಿ) ಮಸೂದೆ-2021 ಅನ್ನು ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಈ ಹಿಂದೆಯೂ ಇದೇ ಮಸೂದೆಯನ್ನು ಸಂಸತ್ತಿನಲ್ಲಿ ಸರ್ಕಾರವು ಮಂಡಿಸಿತ್ತು. ಆದರೆ ಮಸೂದೆ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಈಗ ಮತ್ತೆ ಮಂಡನೆಗೆ ಸಿದ್ಧತೆ ನಡೆಸಿದೆ.

'ಈ ತಿದ್ದುಪಡಿ ಮಸೂದೆಯು ದೇಶದ ವಿದ್ಯುತ್ ವಿತರಣೆ ಜಾಲದಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ. ಗ್ರಾಹಕರಿಗೆ ಇದರಿಂದ ಲಾಭವಾಗಲಿದೆ. ಖಾಸಗಿ ಕಂಪನಿಗಳು ಈ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ದೊರೆಯುವುದರಿಂದ ವಿದ್ಯುತ್ ವಿತರಣೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಲಿದೆ' ಎಂದು ಸರ್ಕಾರವು ಈ ಮಸೂದೆಯನ್ನು ಸಮರ್ಥಿಸಿಕೊಂಡಿದೆ.

ಆದರೆ, ಇದು ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ದಾರಿಮಾಡಿಕೊಡಲಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟ ಅನುಭವಿಸಬೇಕಾಗುತ್ತದೆ. ಕೃಷಿ, ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳು ತಮಗೆ ದೊರೆಯುತ್ತಿರುವ ಸಹಾಯಧನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆಕ್ಷೇಪ ದೇಶದಾದ್ಯಂತ ವ್ಯಕ್ತವಾಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳ ನೌಕರರು ಈ ಮಸೂದೆ ವಿರುದ್ಧ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಮಸೂದೆಯ ವಿರುದ್ಧ ದೇಶದ ಹಲವೆಡೆ ರೈತರೂ ಪ್ರತಿಭಟನೆ ನಡೆಸಿದ್ದಾರೆ.

ಈ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಸರ್ಕಾರಿ ಸ್ವಾಮ್ಯದ ಕಂಪನಿಗಳು ವಿದ್ಯುತ್ ವಿತರಣೆ ಮಾಡುತ್ತವೆ. ಸರ್ಕಾರಿ ಸ್ವಾಮ್ಯದ ಕಂಪನಿಗಳೇ ಆದರೂ ಈ ಸೇವೆ ನೀಡಲು ವಿದ್ಯುಚ್ಛಕ್ತಿ ಆಯೋಗದಿಂದ ಪರವಾನಗಿ ಪಡೆಯಬೇಕು. ಒಂದು ಕಂಪನಿಯ ವಿತರಣಾ ಕ್ಷೇತ್ರದಲ್ಲಿ ಬೇರೊಂದು ಕಂಪನಿ ಸೇವೆ ಒದಗಿಸಲು ಅವಕಾಶವಿಲ್ಲ. ಆದರೆ ಸರ್ಕಾರ ಈಗ ಮಂಡಿಸಲು ಹೊರಟಿರುವ ಮಸೂದೆಯಲ್ಲಿ ಪರವಾನಗಿ ಪದ್ಧತಿ ಮತ್ತು ವಿತರಣಾ ಕ್ಷೇತ್ರ ನಿಗದಿ ಪದ್ಧತಿಯನ್ನು ಕೈಬಿಡಲಾಗಿದೆ. ಈ ಮಸೂದೆಯಲ್ಲಿರುವ ಪ್ರಮುಖ ಬದಲಾವಣೆಗಳು ಈ ಮುಂದಿನಂತಿವೆ.

l ಖಾಸಗಿ ಕಂಪನಿಗಳೂ ವಿದ್ಯುತ್ ಪೂರೈಕೆ ಸೇವೆ ನೀಡಬಹುದು. ಇದಕ್ಕಾಗಿ ವಿದ್ಯುಚ್ಛಕ್ತಿ ಆಯೋಗವು ನಿಗದಿ ಮಾಡುವ ಅರ್ಹತೆಗಳನ್ನು ಪೂರೈಸಿದರೆ ಸಾಕು. ವಿದ್ಯುತ್ ಪೂರೈಕೆ ಕಂಪನಿಯು ಯಾವುದೇ ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ. ಆಯೋಗದಲ್ಲಿ ಕಂಪನಿಯನ್ನು ನೋಂದಣಿ ಮಾಡಿಸಿದರೆ ಸಾಕು, ವಿತರಣೆ ಸೇವೆ ಆರಂಭಿಸಬಹುದು

l ಒಂದೇ ಸೇವಾ ಕ್ಷೇತ್ರ/ಪ್ರದೇಶದಲ್ಲಿ ಹಲವು ಕಂಪನಿಗಳು ತಮ್ಮ ಸೇವೆಯನ್ನು ನೀಡಬಹುದು. ಆ ಪ್ರದೇಶದಲ್ಲಿರುವ ಎಲ್ಲಾ ಗ್ರಾಹಕರು ಮತ್ತು ಎಲ್ಲಾ ಸ್ವರೂಪದ ಗ್ರಾಹಕರಿಗೆ ಸೇವೆ ಒದಗಿಸಬೇಕು ಎಂಬ ಷರತ್ತು ಇಲ್ಲ. ಕಂಪನಿಗಳು ತಮ್ಮ ಗ್ರಾಹಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ಸೇವಾ ಕ್ಷೇತ್ರದಲ್ಲಿ ಪ್ರತಿ ಯುನಿಟ್‌ಗೆ ವಿಧಿಸಬಹುದಾದ ಗರಿಷ್ಠ ದರವನ್ನು ಸಂಬಂಧಿತ ವಿದ್ಯುಚ್ಛಕ್ತಿ ಆಯೋಗವು ನಿಗದಿ ಮಾಡಲಿದೆ

l ಒಂದು ಕ್ಷೇತ್ರ/ಪ್ರದೇಶದಲ್ಲಿ ಈಗಾಗಲೇ ಅಳವಡಿಸಲಾಗಿರುವ ವಿತರಣಾ ಜಾಲವನ್ನು ಕಂಪನಿಗಳು ಬಳಸಿಕೊಳ್ಳಬಹುದು. ತಮ್ಮದೇ ಪ್ರತ್ಯೇಕ ವಿತರಣಾ ಜಾಲವನ್ನು ಅಳವಡಿಸಿಕೊಳ್ಳಲೂ ಅವಕಾಶವಿದೆ. ಈಗಾಗಲೇ ಸೇವೆ ನೀಡುತ್ತಿರುವ ಕಂಪನಿಗಳು, ಬೇರೆ ಕಂಪನಿಗಳಿಗೆ ತಮ್ಮ ವಿತರಣಾ ಜಾಲವನ್ನು ಬಳಸಿಕೊಳ್ಳಲು ಅಡ್ಡಿಪಡಿಸಬಾರದು

l ರಾಷ್ಟ್ರೀಯ ಲೋಡ್‌ ರವಾನೆ ಕೇಂದ್ರಕ್ಕೆ (ಎನ್‌ಎಲ್‌ಡಿಸಿ) ಹೆಚ್ಚಿನ ಅಧಿಕಾರ ನೀಡಲಾಗಿದೆ. ಖರೀದಿ ಒಪ್ಪಂದಗಳ ಪ್ರಕಾರ ರಾಜ್ಯಗಳ ಮಧ್ಯೆ ವಿದ್ಯುತ್ ಹಂಚಿಕೆಯ ಮೇಲ್ವಿಚಾರಣೆಯನ್ನು ಎನ್‌ಎಲ್‌ಡಿಸಿ ನೋಡಿಕೊಳ್ಳಲಿದೆ. ರಾಷ್ಟ್ರೀಯ ಭದ್ರತೆ ಸಲುವಾಗಿ ವಿದ್ಯುತ್ ಹಂಚಿಕೆ ಮತ್ತು ಪೂರೈಕೆ ಜಾಲದ ಮೇಲ್ವಿಚಾರಣೆಯನ್ನು ಎನ್‌ಎಲ್‌ಡಿಸಿಗೆ ವಹಿಸಲಾಗಿದೆ. ಗ್ರಿಡ್ ನಿರ್ವಹಣೆ, ವಿದ್ಯುತ್ ಹಂಚಿಕೆ ಸಂಬಂಧ ಎನ್‌ಎಲ್‌ಡಿಸಿಯು ಕಾಲಕಾಲಕ್ಕೆ ಪ್ರಾದೇಶಿಕ ಲೋಡ್ ರವಾನೆ ಕೇಂದ್ರಗಳು ಮತ್ತು ರಾಜ್ಯ ಲೋಡ್ ರವಾನೆ ಕೇಂದ್ರಗಳಿಗೆ ನಿರ್ದೇಶನ ನೀಡಲಿದೆ

l ಜಾಗತಿಕ ಮಟ್ಟದಲ್ಲಿ ವಿದ್ಯುತ್ ಖರೀದಿ, ಉತ್ಪಾದನೆ ಮತ್ತು ವಿತರಣೆಗೆ ಅವಕಾಶ ನೀಡಲಾಗಿದೆ. ಖಾಸಗಿ ಕಂಪನಿಗಳೂ ಇದರಲ್ಲಿ ಭಾಗಿಯಾಗಬಹುದು. ಬೇರೆ ದೇಶಗಳಿಂದ ವಿದ್ಯುತ್ ಖರೀದಿಸಿ, ಅದನ್ನು ದೇಶದಲ್ಲಿ ವಿತರಣೆ ಮಾಡಬಹುದು. ಬೇರೊಂದು ದೇಶದಿಂದ ವಿದ್ಯುತ್ ಖರೀದಿಸಿ, ಭಾರತದ ಗ್ರಿಡ್ ಬಳಸಿಕೊಂಡು ಇನ್ನೊಂದು ದೇಶಕ್ಕೆ ವಿದ್ಯುತ್ ರವಾನೆ ಮಾಡಬಹುದು.

ಆಕ್ಷೇಪಗಳು

l ವಿದ್ಯುತ್ ಕ್ಷೇತ್ರವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳ ಜತೆ ಚರ್ಚಿಸಿ ಸಮ್ಮತಿ ಪಡೆಯಬೇಕು. ಆದರೆ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ ಸಿದ್ಧಪಡಿಸುವಲ್ಲಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಪಕ್ಷೀಯವಾಗಿ ಈ ಮಸೂದೆಯನ್ನು ಸಿದ್ಧಪಡಿಸಿದೆ

l ಕೇಂದ್ರ ಸರ್ಕಾರವು ಈಗ ಮಂಡಿಸಲು ಮುಂದಾಗಿರುವ ಮಸೂದೆಯಲ್ಲಿ ರಾಷ್ಟ್ರೀಯ ಲೋಡ್ ರವಾನೆ ಕೇಂದ್ರಕ್ಕೆ (ಎನ್‌ಎಲ್‌ಡಿಸಿ) ಹೆಚ್ಚಿನ ಅಧಿಕಾರ ಕೊಡಲಾಗಿದೆ. ಪ್ರಮುಖ ನಿರ್ದೇಶನಗಳನ್ನು ಎನ್‌ಎಲ್‌ಡಿಸಿಯು ಪ್ರಾದೇಶಿಕ ಲೋಡ್ ರವಾನೆ ಕೇಂದ್ರಗಳ ಮೂಲಕ ಜಾರಿಗೆ ತರುತ್ತದೆ. ರಾಜ್ಯ ಲೋಡ್ ರವಾನೆ ಕೇಂದ್ರಗಳ ಅಧಿಕಾರವನ್ನು ಮೊಟಕು ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ

l ವಿವಿಧ ಯೋಜನೆಗಳ ಬಳಕೆದಾರರು ಮತ್ತು ಫಲಾನುಭವಿಗಳಿಗೆ ಈಗ ನೀಡಲಾಗುತ್ತಿರುವ ಸಹಾಯಧನ ಮತ್ತು ಉಚಿತ ವಿದ್ಯುತ್ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ

l ಒಂದು ಸೇವಾ ಕ್ಷೇತ್ರದಲ್ಲಿರುವ ಎಲ್ಲಾ ಗ್ರಾಹಕರಿಗೂ ವಿದ್ಯುತ್ ಪೂರೈಸಬೇಕು ಎಂಬ ಷರತ್ತನ್ನು ತೆಗೆದುಹಾಕಲಾಗಿದೆ. ಖಾಸಗಿ ಕಂಪನಿಗಳು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಮಾತ್ರವೇ ವಿದ್ಯುತ್ ಪೂರೈಸುವ ಸಾಧ್ಯತೆ ಇದ್ದು, ಮನೆ ಬಳಕೆ ಮತ್ತು ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳನ್ನು ಕಡೆಗಣಿಸುವ ಸಾಧ್ಯತೆ ಇದೆ. ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರು ಇಲ್ಲದೆ, ಸೇವೆ ಮುಂದುವರಿಸುವುದು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೊರೆಯಾಗಲಿದೆ

l ಸರ್ಕಾರಿ ಸ್ವಾಮ್ಯದ ಕಂಪನಿಗಳ ವಿತರಣಾ ಜಾಲವನ್ನು ಖಾಸಗಿ ಕಂಪನಿಗಳ ಬಳಕೆಗೆ ಕಡ್ಡಾಯವಾಗಿ ಬಿಟ್ಟುಕೊಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಆದರೆ, ವಿತರಣಾ ಜಾಲದ ಬಳಕೆಗೆ ಶುಲ್ಕ, ನಿರ್ವಹಣಾ ಶುಲ್ಕವನ್ನು ನಿಗದಿ ಮಾಡಿಲ್ಲ. ಖಾಸಗಿ ಕಂಪನಿಗಳು ಈ ಶುಲ್ಕವನ್ನು ಪಾವತಿಸಬೇಕು ಎಂಬುದನ್ನೂ ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಿಲ್ಲ. ಸರ್ಕಾರಿ ಸ್ವಾಮ್ಯದ ಕಂಪನಿಗಳು ವಿತರಣಾ ಜಾಲ ಅಳವಡಿಕೆಗೆ ಹೂಡಿರುವ ಬಂಡವಾಳದ ಮೇಲೆ ಆದಾಯ ಪಡೆಯಲು ಅವಕಾಶವಿಲ್ಲ. ಅಲ್ಲದೆ ನಿರ್ವಹಣಾ ವೆಚ್ಚದ ಹೊರೆಯೂ ಹೆಚ್ಚಲಿದೆ

l ವಿತರಣಾ ಜಾಲದ ಅಳವಡಿಕೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಖಾಸಗಿ ಕಂಪನಿಗಳನ್ನೂ ಹೊಣೆಯಾಗಿಸುವ ಯಾವುದೇ ಸ್ಪಷ್ಟ ನಿಯಮಗಳು ಇಲ್ಲದೇ ಇರುವ ಕಾರಣ, ಇದು ಖಾಸಗಿ ಕಂಪನಿಗಳಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಡುತ್ತದೆ

ರಾಷ್ಟ್ರವ್ಯಾಪಿ ಮುಷ್ಕರ ಮುಂದೂಡಿಕೆ

ಕೇಂದ್ರದ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಖಂಡಿಸಿ, ಸರ್ಕಾರಿ ಸ್ವಾಮ್ಯದ ವಿದ್ಯುತ್ ಪೂರೈಕೆ ಕಂಪನಿಗಳ ನೌಕರರು ಸಂಘಟನೆ ಮಂಗಳವಾರ ಕರೆನೀಡಿದ್ದ ಒಂದು ದಿನದ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಮುಂದೂಡಲಾಗಿದೆ. 

ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್ ಅವರು ನೀಡಿದ ಅಧಿಕೃತ ಹೇಳಿಕೆ ಆಧರಿಸಿ, ನೌಕರರು ಮತ್ತು ಎಂಜಿನಿಯರ್‌ಗಳ ರಾಷ್ಟ್ರೀಯ ಮಟ್ಟದ ಸಮನ್ವಯ ಸಮಿತಿಯು (ಎನ್‌ಸಿಸಿಒಇಇಇ) ಮುಷ್ಕರ ಮುಂದೂಡುವ ನಿರ್ಧಾರ ತೆಗೆದುಕೊಂಡಿದೆ. 

ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ–2021 ಅನ್ನು ಸಂಸತ್ತಿನಲ್ಲಿ ಮಂಡಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಇನ್ನೂ ಅನುಮೋದನೆ ನೀಡಿಲ್ಲ ಎಂದು ಸಚಿವ ಸಿಂಗ್ ತಿಳಿಸಿದ್ದಾರೆ. ‘ಒಂದು ವೇಳೆ ಇದೇ ಅಧಿವೇಶನದಲ್ಲಿ ಸರ್ಕಾರವು ಮಸೂದೆ ಮಂಡನೆಗೆ ಮುಂದಾದರೆ, ಅದೇ ದಿನ ನೌಕರರು ಬೃಹತ್ ಪ್ರತಿಭಟನೆಗೆ ಇಳಿಯಲಿದ್ದಾರೆ’ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.  ಈ ಅಸಾಂವಿಧಾನಿಕ ಮಸೂದೆಯನ್ನು ಮಂಡಿಸುವ ಸರ್ಕಾರದ ಮುಂದಿನ ಪ್ರಯತ್ನದವರೆಗೆ ಮುಷ್ಕರ ಮುಂದೂಡಲಾಗಿದೆ. ಈ ಬಗ್ಗೆ ಇಂಧನ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಖಿಲ ಭಾರತ ವಿದ್ಯುಚ್ಛಕ್ತಿ ಎಂಜಿನಿಯರ್‌ಗಳ ಒಕ್ಕೂಟದ (ಎಐಪಿಇಎಫ್‌) ಅಧ್ಯಕ್ಷ ಶೈಲೇಂದ್ರ ದುಬೆ ತಿಳಿಸಿದ್ದಾರೆ.

ಪ್ರತಿಭಟನೆ ಕೈಬಿಟ್ಟ ವಿದ್ಯುತ್ ನೌಕರರು

ಬೆಂಗಳೂರು: ‘ವಿದ್ಯುಚ್ಛಕ್ತಿ ಕಾಯ್ದೆ (ತಿದ್ದುಪಡಿ) ಮಸೂದೆ-2021 ವಿರೋಧಿಸಿ ಆ.10ರಂದು ಹಮ್ಮಿಕೊಂಡಿದ್ದ ವಿದ್ಯುತ್ ನೌಕರರು ಹಾಗೂ ಅಧಿಕಾರಿಗಳಿಂದ ಕರ್ತವ್ಯ ಬಹಿಷ್ಕಾರ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನೌಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ತಿಳಿಸಿದರು.

‘ಸಂಸತ್‌ನಲ್ಲಿ ಮಸೂದೆ ಮಂಡನೆಯಾಗುವ ಸೂಚನೆ ಇದ್ದಿದ್ದರಿಂದ ಪ್ರತಿಭಟಿಸಲು ತೀರ್ಮಾನಿಸಿದ್ದೆವು. ಆದರೆ, ಸದ್ಯ ಮಸೂದೆ ಮಂಡನೆ ಆಗುವುದಿಲ್ಲ ಎಂಬ ಮಾಹಿತಿ ಇದೆ. ರಾಜ್ಯ ಮತ್ತು ಕೇಂದ್ರ ಸಚಿವರೂ ಸ್ಪಷ್ಟಪಡಿಸಿದ್ದಾರೆ’ ಎಂದರು.

ನಿರ್ಣಯ ಅಂಗೀಕರಿಸಿದ ಕೇರಳ

ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ಕೇರಳ ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.

ವಿದ್ಯುತ್ ಸಚಿವ ಕೆ. ಕೃಷ್ಣನ್‌ ಕುಟ್ಟಿ ಮಂಡಿಸಿದ ನಿರ್ಣಯಕ್ಕೆ ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು. ಪ್ರಸ್ತಾಪಿತ ತಿದ್ದುಪಡಿಗಳು ರೈತರಿಗೆ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿದ್ಯುತ್‌ ಸಿಗದಂತೆ ಮಾಡುತ್ತವೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಪ್ರಧಾನಿಗೆ ಮಮತಾ ಪತ್ರ

ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಲು ಮುಂದಾಗಿದ್ದ ಕೇಂದ್ರದ ನಿರ್ಧಾರ ಪ್ರಶ್ನಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಮಂಡಿಸಲು ಉದ್ದೇಶಿಸಲಾಗಿದ್ದ ಮಸೂದೆಯನ್ನು ತೃಣಮೂಲ ಕಾಂಗ್ರೆಸ್ ಆಕ್ಷೇಪದ ಕಾರಣ ಅಂಗೀಕರಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. 2020ರ ಜೂನ್ 12ರಂದು ತಾವು ಪ್ರಧಾನಿ ಅವರಿಗೆ ಬರೆದಿದ್ದ ಪತ್ರವನ್ನು ಮಮತಾ ನೆನಪಿಸಿದ್ದಾರೆ. ಮಸೂದೆಯು ಎಲ್ಲಾ ಪ್ರಮುಖ ಅಪಾಯಗಳನ್ನು ಹೊಂದಿದ್ದು, ಜನವಿರೋಧಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು