ಶುಕ್ರವಾರ, ಸೆಪ್ಟೆಂಬರ್ 30, 2022
20 °C

Explainer - ಆಳ ಅಗಲ| ಜೀವರಕ್ಷಕ ಸೀಟ್‌ಬೆಲ್ಟ್‌

ಜಯಸಿಂಹ ಅರ್‌. Updated:

ಅಕ್ಷರ ಗಾತ್ರ : | |

Prajavani

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ಸೈರಸ್‌ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದು ಹಲವು ವಿಷಯಗಳು ಚರ್ಚೆ ಆಗುವಂತೆ ಮಾಡಿದೆ. ಅತಿವೇಗದ ಮತ್ತು ಅಜಾಗರೂಕ ಚಾಲನೆ, ಎಡಭಾಗದಿಂದ ಓವರ್‌ಟೇಕ್‌ ಮಾಡಿದ್ದು ಕಾರಿನ ಅಪಘಾತಕ್ಕೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹೆದ್ದಾರಿಯ ವಿನ್ಯಾಸದಲ್ಲಿನ ದೋಷದಿಂದ ಅಪಘಾತ ಸಂಭವಿಸಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಸೈರಸ್ ಮಿಸ್ತ್ರಿ ಅವರು ಅಪಘಾತದಲ್ಲಿ ಮೃತಪಟ್ಟಿದ್ದು ಹೇಗೆ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸೈರಸ್‌ ಅವರು ಸೀಟ್‌ಬೆಲ್ಟ್‌ ಧರಿಸಿದ್ದಿದ್ದರೆ, ಅಪಘಾತದಲ್ಲಿ ಜೀವಾಪಾಯದಿಂದ ಪಾರಾಗಬಹುದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಉದ್ಯಮಿ ಆನಂದ್‌ ಮಹೀಂದ್ರಾ ಸಹ, ಕಾರಿನ ಎಲ್ಲಾ ಸೀಟಿನಲ್ಲಿ ಕೂತವರು ಸೀಟ್‌ಬೆಲ್ಟ್‌ ಧರಿಸಿ ಎಂದು ಸಲಹೆ ನೀಡಿದ್ದಾರೆ. ಕಾರಿನಲ್ಲಿ ಪ್ರಯಾಣದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸೀಟ್‌ಬೆಲ್ಟ್‌ ಧರಿಸುವುದು ಏಕೆ ಅತ್ಯಗತ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಪ್ರಾಥಮಿಕ ಸುರಕ್ಷತಾ ಸವಲತ್ತು

ಎಲ್ಲಾ ಸ್ವರೂಪದ ಕಾರುಗಳಲ್ಲಿಯೂ ಸೀಟ್‌ಬೆಲ್ಟ್‌ ಇರುವುದು ಈಗ ಕಡ್ಡಾಯವಾಗಿದೆ. ಪ್ರತಿಯೊಂದು ಆಸನದಲ್ಲಿಯೂ ಸೀಟ್‌ಬೆಲ್ಟ್ ಇರುತ್ತದೆ. ಚಾಲಕ ಮಾತ್ರ ಸೀಟ್‌ಬೆಲ್ಟ್‌ ಧರಿಸುವುದು ನಮ್ಮಲ್ಲಿ ಕಡ್ಡಾಯ. ಹೀಗಾಗಿ ಉಳಿದ ಪ್ರಯಾಣಿಕರು ಸೀಟ್‌ಬೆಲ್ಟ್‌ ಧರಿಸುವುದಿಲ್ಲ. ಆದರೆ, ಸೀಟ್‌ಬೆಲ್ಟ್‌ ಯಾವುದೇ ಕಾರಿನ ಪ್ರಾಥಮಿಕ ಸುರಕ್ಷತಾ ಸವಲತ್ತಾಗಿರುತ್ತದೆ.

ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರು ಆಸನದಲ್ಲಿಯೇ ಇರುವಂತೆ ಹಿಡಿದಿಡುವ ಕೆಲಸವನ್ನು ಸೀಟ್‌ಬೆಲ್ಟ್‌ ಮಾಡುತ್ತದೆ. ಸೀಟ್‌ಬೆಲ್ಟ್‌ ಧರಿಸದೇ ಇರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ, ಅಂತಹ ಪ್ರಯಾಣಿಕರು ಕಾರಿನಲ್ಲಿರುವ ಇತರ ಪ್ರಯಾಣಿಕರಿಗೆ ಅಪ್ಪಳಿಸುವ ಅಪಾಯವಿರುತ್ತದೆ. ಜತೆಗೆ ಕಾರಿನ ಮುಂಬದಿ/ಹಿಂಬದಿಯ ಗಾಜಿನಿಂದ ತೂರಿ ಹೊರಗೆ ಚಿಮ್ಮುವ ಅಪಾಯವೂ ಇರುತ್ತದೆ. ಇವೆಲ್ಲವನ್ನೂ ಸೀಟ್‌ಬೆಲ್ಟ್‌ ತಡೆಯುತ್ತದೆ. ಹೀಗಾಗಿ ಕಾರಿನಲ್ಲಿರುವ ಎಲ್ಲರೂ ಸೀಟ್‌ಬೆಲ್ಟ್‌ ಧರಿಸುವುದು ಅತ್ಯಗತ್ಯ.

ತಪ್ಪು ಕಲ್ಪನೆ

‘ನಮ್ಮ ಕಾರಿನಲ್ಲಿ ಏರ್‌ಬ್ಯಾಗ್‌ಗಳಿವೆ. ಹೀಗಾಗಿ ಸೀಟ್‌ಬೆಲ್ಟ್‌ ಧರಿಸಬೇಕಿಲ್ಲ’ ಎಂದು ಹಲವರು ವಾದ ಮಂಡಿಸುತ್ತಾರೆ. ಇದು ತಪ್ಪು ಮತ್ತು ಅಪಾಯಕಾರಿ ಅಭಿಪ್ರಾಯ. 

ಏರ್‌ಬ್ಯಾಗ್‌ಗಳು ಯಾವುದೇ ಕಾರಿನ ಎರಡನೇ ಹಂತದ ರಕ್ಷಣಾ ವ್ಯವಸ್ಥೆಯಾಗಿರುತ್ತದೆ (ಸೆಕೆಂಡರಿ ರಿಸ್ಟ್ರೇನ್‌ ಸಿಸ್ಟಂ–ಎಸ್‌ಆರ್‌ಎಸ್‌). ಹೀಗಾಗಿಯೇ ಏರ್‌ಬ್ಯಾಗ್‌ ಇರುವೆಡೆ  ‘ಎಸ್‌ಆರ್‌ಎಸ್‌ ಏರ್‌ಬ್ಯಾಗ್‌’ ಎಂದು ಬ್ಯಾಡ್ಜ್‌ ಹಾಕಲಾಗಿರುತ್ತದೆ. ಅಪಘಾತದ ಸಂದರ್ಭದಲ್ಲಿ ಚಾಲಕ ಮತ್ತು ಪ್ರಯಾಣಿಕರ ಜೀವ ಉಳಿಸಲು ಏರ್‌ಬ್ಯಾಗ್‌ ಒಂದರಿಂದಲೇ ಸಧ್ಯವಿಲ್ಲ. ಬದಲಿಗೆ ಅವರ ಜೀವಉಳಿಸುವ ಕೆಲಸ ಮಾಡುವುದು ಸೀಟ್‌ಬೆಲ್ಟ್‌.

ಕಾರಿನಲ್ಲಿ ಏರ್‌ಬ್ಯಾಗ್‌ ಇದ್ದರೂ ಸೀಟ್‌ಬೆಲ್ಟ್‌ ಧರಿಸಿದೇ ಇದ್ದರೆ, ಅಪಘಾತದ ಸಂದರ್ಭದಲ್ಲಿ ಅವು ತೆರೆದುಕೊಳ್ಳದೇ ಇರುವ ಸಾಧ್ಯತೆ ಹೆಚ್ಚು. ಏಕೆಂದರೆ, ಸೀಟ್‌ಬೆಲ್ಟ್‌ ಧರಿಸದೇ ಇದ್ದರೆ ಏರ್‌ಬ್ಯಾಗ್‌ ತೆರೆದುಕೊಳ್ಳದೇ ಇರುವ ರೀತಿಯಲ್ಲಿ ಅವುಗಳನ್ನು ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ. 

ಏರ್‌ಬ್ಯಾಗ್‌ಗಳು ಸೂಕ್ಷ್ಮ ಬಾಂಬ್‌ಗಳ ರೀತಿಯಲ್ಲಿ ಕೆಲಸ ಮಾಡುತ್ತವೆ. ಡಿಕ್ಕಿಯಾದ 35 ಮಿಲಿಸೆಕೆಂಡ್‌ ಒಳಗೆ ಅವುಗಳು ತೆರೆದುಕೊಳ್ಳಬೇಕು. ಅಷ್ಟು ವೇಗವಾಗಿ ಏರ್‌ಬ್ಯಾಗ್‌ ಗಾಳಿ ತುಂಬಿಸುವ ಕೆಲಸ ಮಾಡುವುದು ಸೂಕ್ಷ್ಮ ಬಾಂಬ್‌ಗಳು. ಸೀಟ್‌ಬೆಲ್ಟ್‌ ಧರಿಸದೇ ಇದ್ದರೆ, ಚಾಲಕ/ಪ್ರಯಾಣಿಕರು ಏರ್‌ಬ್ಯಾಗ್‌ಗೆ ಅಪ್ಪಳಿಸುವ ಅಪಾಯವಿರುತ್ತದೆ. ಇದರಿಂದ ಡ್ಯಾಶ್‌ಬೋರ್ಡ್‌/ಸ್ಟಿಯರಿಂಗ್‌ನ ತುಣುಕುಗಳು ದೇಹವನ್ನು ಹೊಕ್ಕುವ ಅಪಾಯವಿರುತ್ತದೆ. ಏರ್‌ಬ್ಯಾಗ್‌ನಲ್ಲಿನ ರಾಸಾಯನಿಕಗಳು ಚರ್ಮವನ್ನು ಸುಡುತ್ತವೆ. ಇದರಿಂದ ಪ್ರಾಣಹಾನಿಯೂ ಆಗಬಹುದು. ಈ ಸ್ವರೂಪದ ಅಪಾಯವನ್ನು ತಪ್ಪಿಸುವ ಉದ್ದೇಶದಿಂದಲೇ ಸೀಟ್‌ಬೆಲ್ಟ್‌ ಧರಿಸದೇ ಇದ್ದಾಗ, ಏರ್‌ಬ್ಯಾಗ್‌ ತೆರೆದುಕೊಳ್ಳದೇ ಇರುವಂತೆ ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ.

ಇದರ ಜತೆಯಲ್ಲೇ 30 ಕೆ.ಜಿ.ಗಿಂತ ಕಡಿಮೆ ತೂಕದವರು ಕೂತಿದ್ದರೆ, ಏರ್‌ಬ್ಯಾಗ್‌ ಅನ್ನು ಡಿಆಕ್ಟಿವೇಟ್‌ ಮಾಡುವ ಸೆನ್ಸಾರ್‌ಗಳನ್ನು ಕೆಲವು ಕಂಪನಿಗಳು ತಮ್ಮ ಕಾರಿನಲ್ಲಿ ಅಳವಡಿಸಿರುತ್ತವೆ. ಕಡಿಮೆ ತೂಕದ ವ್ಯಕ್ತಿಗಳು ಅಂದರೆ ಮಕ್ಕಳು ಕೂತಿದ್ದರೂ ಏರ್‌ಬ್ಯಾಗ್‌ಗಳು ತೆರೆದುಕೊಳ್ಳುವುದಿಲ್ಲ. ಹೀಗಾಗಿಯೇ ಮಕ್ಕಳನ್ನು ಹಿಂಬದಿಯಲ್ಲಿ ಚೈಲ್ಡ್‌ಸೀಟ್‌ ಅಳವಡಿಸಿ ಕೂರಿಸಬೇಕು ಎಂದು ಕಾರಿನ ಡ್ಯಾಶ್‌ಬೋರ್ಡ್‌ ಅಥವಾ ಸನ್‌ವೈಸರ್‌ನಲ್ಲಿ ಸೂಚನೆ ನೀಡಲಾಗಿರುತ್ತದೆ. ಸೀಟ್‌ಬೆಲ್ಟ್‌ ಏಕೆ ಧರಿಸಬೇಕು ಎಂಬುದನ್ನೂ ಕಾರಿನ ಬಳಕೆದಾರರ ಕೈಪಿಡಿಯಲ್ಲಿ ವಿವರಿಸಲಾಗಿರುತ್ತದೆ.

ಹಾಗಾಗಿ ಏರ್‌ಬ್ಯಾಗ್‌ಗಳಿವೆ, ಸೀಟ್‌ಬೆಲ್ಟ್‌ ಧರಿಸದೇ ಇದ್ದರೂ ನಡೆಯುತ್ತದೆ ಎಂಬ ಅಭಿಪ್ರಾಯವುಕ್ಕೆ ಬರುವುದು ಹಾಗೂ ಸೀಟ್‌ಬೆಲ್ಟ್‌ ಧರಿಸದೇ ಇರುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.

ಹಿಂಬದಿ ಪ್ರಯಾಣಿಕರೂ ಸೀಟ್‌ಬೆಲ್ಟ್‌ ಏಕೆ ಧರಿಸಬೇಕು...

ಹಿಂಬದಿ ಪ್ರಯಾಣಿಕರೂ ಸೀಟ್‌ಬೆಲ್ಟ್‌ ಏಕೆ ಧರಿಸಬೇಕು ಎಂಬ ಪಾಠವನ್ನು ಸೈರಸ್‌ ಮಿಸ್ತ್ರಿ ಅವರ ಅಪಘಾತವು ನಮಗೆ ಕಲಿಸಿದೆ. ಸೈರಸ್‌ ಅವರು ಪ್ರಯಾಣಿಸುತ್ತಿದ್ದ ಮರ್ಸಿಡೆಸ್‌ ಬೆಂಜ್‌ ಜಿಎಲ್‌ಸಿ 220ಡಿ ಕಾರಿನಲ್ಲಿ ಏಳು ಏರ್‌ಬ್ಯಾಗ್‌ಗಳಿವೆ. ಅಪಘಾತವಾದಾಗ ಅದರಲ್ಲಿನ ನಾಲ್ಕು ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆ. ಹೀಗಿದ್ದೂ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಸೈರಸ್ ಸಹ ಒಬ್ಬರು. ಅವರು ಸೀಟ್‌ಬೆಲ್ಟ್‌ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕ್ರ್ಯಾಶ್‌ಗಾರ್ಡ್‌/ಬುಲ್‌ಬಾರ್‌ಗಳಿಂದ ಅಪಾಯ ಹೆಚ್ಚು

ಕಾರಿನ ಹಿಂಬದಿ ಮತ್ತು ಮುಂಬದಿ ಬಂಪರ್‌ಗಳಿಗೆ ಲೋಹದ ಕ್ರ್ಯಾಶ್‌ಗಾರ್ಡ್‌ ಅಥವಾ ಬುಲ್‌ಬಾರ್‌ ಅಳವಡಿಸುವುದರಿಂದ ಕಾರಿನ ಸುರಕ್ಷತೆ ಹೆಚ್ಚುತ್ತದೆ. ಅಪಘಾತದ ಸಂದರ್ಭದಲ್ಲಿ ಕಾರಿಗೆ ಹಾನಿಯಾಗುವುದನ್ನು ಕ್ರ್ಯಾಶ್‌ಗಾರ್ಡ್‌ ತಪ್ಪಿಸುತ್ತವೆ. ಹೀಗಾಗಿ ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂಬ ವಿವರ ಇರುವ ವಿಡಿಯೊಗಳು ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ ಶಾರ್ಟ್‌ನಲ್ಲಿ ಹರಿದಾಡುತ್ತಿವೆ. ಸಣ್ಣ–ಪುಟ್ಟ ಅಪಘಾತದ ಸಂದರ್ಭದಲ್ಲಿ ಕಾರು ಮತ್ತು ಎಸ್‌ಯುವಿಗಳಿಗೆ ಹಾನಿಯಾಗುವುದನ್ನು ಬುಲ್‌ಬಾರ್‌ಗಳು ತಡೆದಿರುವುದನ್ನೂ ಈ ವಿಡಿಯೊಗಳಲ್ಲಿ ತೋರಿಸಲಾಗಿದೆ. ಹಾಗಾಗಿ ಬುಲ್‌ಬಾರ್‌ಗಳನ್ನು ಅಳವಡಿಸಿಕೊಳ್ಳಿ ಎಂದು ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳು ಈ ವಿಡಿಯೊಗಳಲ್ಲಿ ಹೇಳಿದ್ದಾರೆ.

ಬುಲ್‌ಬಾರ್‌ ಅಥವಾ ಕ್ರ್ಯಾಶ್‌ಗಾರ್ಡ್‌ ಅಳವಡಿಸುವುದರಿಂದ ಅಪಾಯವೇ ಹೆಚ್ಚು. ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್‌ನ  ಸೆನ್ಸರ್‌ಗಳು ಕೆಲಸ ಮಾಡುವುದನ್ನು ಇವು ತಡೆಯುತ್ತವೆ. ಸಾಮಾನ್ಯವಾಗಿ ಹೆಡ್‌ಲ್ಯಾಂಪ್‌ನ ಹಿಂಬದಿಯಲ್ಲಿ ಈ ಸೆನ್ಸರ್‌ಗಳಿರುತ್ತವೆ. ಕ್ರ್ಯಾಶ್‌ಗಾರ್ಡ್‌ಗಳೇ ಅಪಘಾತದ ತೀವ್ರತೆಯನ್ನು ತಡೆದುಕೊಳ್ಳುವುದರಿಂದ ಈ ಸೆನ್ಸರ್‌ಗಳು ಚಾಲನೆ ಆಗುವುದಿಲ್ಲ. ಜತೆಗೆ ಕಾರಿನ ಕ್ರಂಪಲ್‌ ಝೋನ್‌ (ಅಪಘಾತದ ಸಂದರ್ಭದಲ್ಲಿ ಕಾರಿನ ಮುಂಭಾಗ ನುಜ್ಜುಗುಜ್ಜಾಗಿ, ಡಿಕ್ಕಿಯ ತೀವ್ರತೆ ಕಡಿಮೆಯಾಗುವಂತೆ ಮಾಡುವಂತಹ ವಿನ್ಯಾಸ) ಕೆಲಸ ಮಾಡುವುದನ್ನು ಕ್ರ್ಯಾಶ್‌ಗಾರ್ಡ್‌ ತಡೆಯುತ್ತದೆ. ಆದರೆ, ಡಿಕ್ಕಿಯ ತೀವ್ರತೆ ಕ್ರ್ಯಾಶ್‌ಗಾರ್ಡ್‌ನಿಂದ ನೇರವಾಗಿ ಪ್ರಯಾಣಿಕರ ಕ್ಯಾಬಿನ್‌ಗೆ ರವಾನೆಯಾಗುತ್ತದೆ. ಇದು ಪ್ರಯಾಣಿಕರ ದೇಹದೊಳಗೆ ಗಾಯಗಳಾಗುವಂತೆ ಮಾಡುತ್ತವೆ. ಅಂತಹ ಗಾಯಗಳಿಂದ ಪ್ರಯಾಣಿಕರು ಮೃತಪಡುವ ಅಪಾಯವಿರುತ್ತದೆ. ಹೀಗಾಗಿಯೇ ಕ್ರ್ಯಾಶ್‌ಗಾರ್ಡ್‌ಗಳನ್ನು ಅಳವಡಿಸಬಾರದು ಎಂದು ಕಾರಿನ ಬಳಕೆದಾರರ ಕೈ‍‍ಪಿಡಿಯಲ್ಲಿ ಸೂಚಿಸಲಾಗಿರುತ್ತದೆ.

ಸೀಟ್‌ಬೆಲ್ಟ್‌ ಧರಿಸದೇ ಮೃತಪಟ್ಟ ಗಣ್ಯರು...

ಜಸ್ಪಾಲ್‌ ಭಟ್ಟಿ

ಪ್ರಸಿದ್ಧ ನಟ, ನಿರ್ದೇಶಕ ಮತ್ತು ವಿಡಂಬನಕಾರ ಜಸ್ಪಾಲ್‌ ಭಟ್ಟಿ ಅವರು 2012ರ ಅಕ್ಟೋಬರ್‌ 25ರಂದು ಅಪಘಾತದಲ್ಲಿ ಮೃತಪಟ್ಟರು. ಭಟಿಂಡಾದಿಂದ ಜಲಂಧರ್‌ಗೆ ಅವರು ಕಾರಿನಲ್ಲಿ ಹೋಗುತ್ತಿದ್ದರು. ತಿರುವಿನಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆಯಿತು. ಮುಂದಿನ ಆಸನದಲ್ಲಿ ಕುಳಿತಿದ್ದ ನಟಿ ಸುರಿಲಿ ಗೌತಮ್‌ ಮತ್ತು ಕಾರು ಚಲಾಯಿಸುತ್ತಿದ್ದ ಜಸ್‌ರಾಜ್‌ (ಭಟ್ಟಿ ಅವರ ಮಗ) ಅವರು ಬಚಾವಾದರು. ಅವರಿಬ್ಬರೂ ಸೀಟ್‌ ಬೆಲ್ಟ್‌ ಧರಿಸಿದ್ದರು. ಆದರೆ, ಹಿಂದಿನ ಆಸನದಲ್ಲಿ ಕುಳಿತಿದ್ದ ಜಸ್ಪಾಲ್‌ ಅವರು ಸೀಟ್‌ಬೆಲ್ಟ್‌ ಧರಿಸಿರಲಿಲ್ಲ. 

ಗೋಪಿನಾಥ ಮುಂಢೆ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಗೋಪಿನಾಥ ಮುಂಢೆ ಅವರು 2014 ಜೂನ್‌ 3ರಂದು ದೆಹಲಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರು ‍ಪ್ರಯಾಣಿಸುತ್ತಿದ್ದ ಎಸ್‌ಎಕ್ಸ್‌4 ಕಾರಿಗೆ ಇನ್ನೊಂದು ಕಾರು ಡಿಕ್ಕಿಯಾಯಿತು. ಕಾರಿಗೆ ಗಣನೀಯ ಪ್ರಮಾಣದ ಹಾನಿಯಾಗಿರಲಿಲ್ಲ ಕಾರಿನಲ್ಲಿ ಅವರ ಕಾರ್ಯದರ್ಶಿ ಮತ್ತು ಚಾಲಕ ಇದ್ದರು. ಈ ಇಬ್ಬರೂ ಯಾವುದೇ ಗಾಯಗಳಿಲ್ಲದೆ ಬಚಾವಾದರು. ಆದರೆ, ಸೀಟ್‌ಬೆಲ್ಟ್‌ ಧರಿಸಿಲ್ಲದ ಗೋಪಿನಾಥ ಮುಂಢೆ ಅವರು ಮೃತಪಟ್ಟರು.

ಅಮೃತ್‌ಕುಮಾರ್‌ ರಥ್‌

ಬಜಾಜ್‌ ಆಟೊದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಅಮೃತ್‌ಕುಮಾರ್ ರಥ್‌ ಅವರು 2016ರ ಜುಲೈ 11ರಂದು ಅಪಘಾತದಲ್ಲಿ ಮೃತಪಟ್ಟರು. ಅಪಘಾತದಲ್ಲಿ ಅವರ ಹೆಂಡತಿಯೂ ಮೃತಪಟ್ಟರು. ಜತೆಗಿದ್ದ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡರು. ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಈ ಅಪಘಾತ ನಡೆದಿದೆ. ಮುಂದಿನ ಆಸನದಲ್ಲಿ ಕುಳಿತಿದ್ದ ರಥ್‌ ಮತ್ತು ಅವರ ಹೆಂಡತಿ ಸೀಟ್‌ಬೆಲ್ಟ್‌ ಧರಿಸಿದ್ದರು. ಆದರೆ, ಹಿಂದೆ ಕುಳಿತಿದ್ದ ಇಬ್ಬರು ಮಕ್ಕಳು ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ. ಹಾಗಾಗಿ, ಡಿಕ್ಕಿಯ ರಭಸಕ್ಕೆ ಮುಂದಕ್ಕೆ ನುಗ್ಗಿದ ಇಬ್ಬರು ಮಕ್ಕಳು ಮುಂದಿನ ಆಸನದಲ್ಲಿದ್ದವರ ಮೇಲೆ ಬಿದ್ದರು. ಅವರ ಹಲ್ಲುಗಳು ಮುಂದೆ ಕುಳಿತಿದ್ದವರ ತಲೆಗೆ ನಾಟಿತ್ತು. ಈ ಕಾರಣದಿಂದಲೇ ಅವರು ಮೃತಪಟ್ಟರು.  

ವಿನಾಯಕ ಮೆಟೆ

ಮಹಾರಾಷ್ಟ್ರದ ರಾಜಕಾರಣಿ ವಿನಾಯಕ ಮೆಟೆ ಅವರು ಈ ವರ್ಷ ಆಗಸ್ಟ್‌ 15ರಂದು ಪುಣೆ–ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟರು. ಅವರು ಪ‍್ರಯಾಣಿಸುತ್ತಿದ್ದ ಎಸ್‌ಯುವಿ, ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಎಸ್‌ಯುವಿಯಲ್ಲಿ ಇದ್ದ ಏಕನಾಥ ಕದಂ ಅವರಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿವೆ. ಅವರು ಸೀಟ್‌ಬೆಲ್ಟ್‌ ಧರಿಸಿದ್ದರು. ಮೆಟೆ ಅವರು ಸೀಟ್‌ಬೆಲ್ಟ್‌ ಧರಿಸಿರಲಿಲ್ಲ.

ಈ ಎಲ್ಲರೂ ಸೀಟ್‌ಬೆಲ್ಟ್‌ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆ ಹೆಚ್ಚು ಇತ್ತು. 

ಆಧಾರ: ಗ್ಲೋಬಲ್‌ ಎನ್‌ಸಿಎಪಿ, ಇನ್ಸುರೆನ್ಸ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಹೈವೇ ಸೇಫ್ಟಿ (ಐಐಎಚ್‌ಎಸ್‌) ಕ್ರಾಶ್‌ಟೆಸ್ಟ್‌ ವರದಿಗಳು, ರಾಯಿಟರ್ಸ್, ಪಿಟಿಐ

ಚಿತ್ರಕೃಪೆ: ಐಐಎಚ್‌ಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು