ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ತಪ್ಪಿತೇ ಕೋವಿಡ್‌ ಸಾವಿನ ಲೆಕ್ಕ?

Last Updated 22 ಜೂನ್ 2021, 1:57 IST
ಅಕ್ಷರ ಗಾತ್ರ

ಭಾರತದಲ್ಲಿ ಕೋವಿಡ್ ಸಾವುಗಳ ಲೆಕ್ಕವನ್ನು ಕಡಿಮೆ ತೋರಿಸಲಾಗುತ್ತಿದೆ ಎಂದು ಹಲವು ಅಧ್ಯಯನ ಸಂಸ್ಥೆಗಳು ವರದಿ ಪ್ರಕಟಿಸುತ್ತಲೇ ಇವೆ. ಕೋವಿಡ್‌ ಎರಡನೇ ಅಲೆಯಲ್ಲಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ, ಇವುಗಳನ್ನು ಕೋವಿಡ್‌ ಸಾವು ನೋಂದಣಿ ಮಾರ್ಗಸೂಚಿಯ ಅನ್ವಯ ನೋಂದಣಿ ಮಾಡದೇ ಇರುವ ಕಾರಣ ಎಲ್ಲಾ ಕೋವಿಡ್‌ ಸಾವುಗಳು ಲೆಕ್ಕಕ್ಕೇ ಸಿಕ್ಕಿಲ್ಲ ಎಂದು ‘ದಿ ಎಕನಾಮಿಸ್ಟ್’ ಜೂನ್‌ ಮೊದಲ ವಾರದಲ್ಲಿ ವರದಿ ಪ್ರಕಟಿಸಿತ್ತು.

ಈ ವರದಿಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿತ್ತು. ‘ಈ ವರದಿ ಸತ್ಯಾಂಶವನ್ನು ಆಧರಿಸಿ ಬರೆದಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿತ್ತು. ಆದರೆ, ಭಾರತದ ಕೆಲವು ಪ್ರಾದೇಶಿಕ ಮಾಧ್ಯಮಗಳು ತಮ್ಮ ರಾಜ್ಯಗಳಲ್ಲಿ ಕೋವಿಡ್‌ ಸಾವನ್ನು ಕಡಿಮೆ ತೋರಿಸ ಲಾಗುತ್ತಿದೆ ಎಂದು ವರದಿ ಪ್ರಕಟಿಸುತ್ತಲೇ ಇವೆ.

ಪ್ರತಿದಿನ ಕೋವಿಡ್‌ನಿಂದ ಸಾಯುವವರ ಮಾಹಿತಿಯನ್ನು ಜಿಲ್ಲಾಡಳಿತ, ರಾಜ್ಯಗಳು ಮತ್ತು ಅಂತಿಮವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸುತ್ತವೆ. ‘ಜಿಲ್ಲಾಡಳಿತಗಳು ನೀಡುತ್ತಿರುವ ಸಾವಿನ ಲೆಕ್ಕಕ್ಕೂ, ಚಿತಾಗಾರ ಮತ್ತು ಸ್ಮಶಾನಗಳಲ್ಲಿ ನಡೆದ ಅಂತ್ಯಕ್ರಿಯೆಗಳ ಸಂಖ್ಯೆಗೂ ಭಾರಿ ಅಂತರವಿದೆ’ ಎಂದು ಇಂತಹ ವರದಿ ಪ್ರಕಟಿಸಿರುವ ಹಲವು ಮಾಧ್ಯಮಗಳು ಉಲ್ಲೇಖಿಸಿವೆ. ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ದೆಹಲಿ, ಬಿಹಾರ ಮತ್ತು ಮಹಾರಾಷ್ಟ್ರದಲ್ಲೂ ಈ ರೀತಿ ಲೆಕ್ಕ ತಪ್ಪಿಸಲಾಗಿದೆ ಎಂದು ವರದಿಗಳಲ್ಲಿ ಆರೋಪಿಸಲಾಗಿದೆ. ದಿ ಎಕನಾಮಿಸ್ಟ್ ಪ್ರಕಟಿಸಿದ್ದ ವರದಿಯಲ್ಲೂ ಇದೇ ಮಾಹಿತಿ ಇದೆ.

ಚಿತಾಗಾರ ಮತ್ತು ಸ್ಮಶಾನಗಳಲ್ಲಿ ಕೋವಿಡೇತರ ಸಾವಿನ ಶವಗಳ ಅಂತ್ಯ ಸಂಸ್ಕಾರಗಳೂ ನಡೆಯುತ್ತವೆ. ಹೀಗಾಗಿ ಕೋವಿಡ್‌ ಸಾವಿಗೂ ಅಂತ್ಯಕ್ರಿಯೆಯಾದ ಶವಗಳ ಸಂಖ್ಯೆಗೂ ಭಾರಿ ವ್ಯತ್ಯಾಸವಿರುತ್ತದೆ ಎಂದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳು ಸ್ಪಷ್ಟನೆ ನೀಡಿವೆ. ಆದರೆ ಕೋವಿಡ್‌ ಎರಡನೇ ಅವಧಿಯಲ್ಲಿ ಸಂಭವಿಸಿದ ಅಂತ್ಯಕ್ರಿಯೆಗಳು, 2020ರಲ್ಲಿ ಅದೇ ಅವಧಿಯಲ್ಲಿ ಸಂಭವಿಸಿದ್ದ ಅಂತ್ಯಕ್ರಿಯೆಗಳಿಗಿಂತ ದುಪ್ಪಟ್ಟು ಎಂದು ಮಾಧ್ಯಮಗಳು ವರದಿ ಮಾಡಿವೆ.

ಗುಜರಾತ್‌ನ ಸೂರತ್ ನಗರದಲ್ಲಿ ನಡೆದ ಅಂತ್ಯಕ್ರಿಯೆಗಳು ಮತ್ತು ಸಂಭವಿಸಿದ ಕೋವಿಡ್ ಸಾವುಗಳ ಬಗ್ಗೆ ರಾಯಿಟರ್ಸ್‌ ಸುದೀರ್ಘ ವರದಿ ಪ್ರಕಟಿಸಿದೆ. ಸೂರತ್‌ನ ಎಲ್ಲಾ ಚಿತಾಗಾರಗಳು, ಸ್ಮಶಾನ ಮತ್ತು ಖಬರಸ್ತಾನಗಳಿಗೆ ಭೇಟಿ ನೀಡಿ, ಅಲ್ಲಿ ನಡೆದ ಅಂತ್ಯಕ್ರಿಯೆಗಳ ಮಾಹಿತಿಯನ್ನು ರಾಯಿಟರ್ಸ್ ಪ್ರಕಟಿಸಿದೆ. ‘2020ರ ಏಪ್ರಿಲ್‌ನಲ್ಲಿ ಸೂರತ್‌ನ ಎಲ್ಲಾ ಚಿತಾಗಾರ, ಸ್ಮಶಾನ ಮತ್ತು ಖಬರಸ್ತಾನಗಳಲ್ಲಿ 1,980 ಅಂತ್ಯಕ್ರಿಯೆಗಳನ್ನು ನಡೆಸಲಾಗಿತ್ತು. ಆದರೆ, 2021ರ ಏಪ್ರಿಲ್‌ನಲ್ಲಿ 6,520 ಅಂತ್ಯಕ್ರಿಯೆಗಳು ನಡೆದಿವೆ. 2021ರ ಏಪ್ರಿಲ್‌ನಲ್ಲಿ ಸೂರತ್ ನಗರ ಮತ್ತು ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳು 585 ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ಈ ಎಲ್ಲಾ ಚಿತಾಗಾರಗಳಲ್ಲಿ ಸಂಭವಿಸಿದ ಹೆಚ್ಚುವರಿ ಅಂತ್ಯಕ್ರಿಯೆಗಳೆಲ್ಲವೂ ಕೋವಿಡ್‌ ಸಾವಿಗೆ ಸಂಭವಿಸಿದ್ದೇ ಆಗಿರಬೇಕಿಲ್ಲ. ಆದರೆ, ಈ ಹೆಚ್ಚುವರಿ ಸಾವುಗಳಲ್ಲಿ ಕೋವಿಡ್‌ ಸಾವುಗಳೂ ಸೇರಿವೆ ಎಂಬುದರಲ್ಲಿ ಅನುಮಾನವಿಲ್ಲ’ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮಧ್ಯಪ್ರದೇಶ, ಬಿಹಾರ ಮತ್ತು ತಮಿಳು ನಾಡಿನ ಕೋವಿಡ್‌ ಸಾವುಗಳಿಗೆ ಸಂಬಂಧಿಸಿದಂತೆ ಇಂಥದ್ದೇ ವರದಿಗಳು ಪ್ರಕಟವಾಗಿವೆ. ಕೋವಿಡ್‌ ಸಾವುಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ಕೋರಿ ಗುಜರಾತ್ ಹೈಕೋರ್ಟ್‌, ಬಾಂಬೆ ಹೈಕೋರ್ಟ್, ಮದ್ರಾಸ್ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆ ಆರಂಭವಾದ ಬೆನ್ನಲ್ಲೇ ಹಲವು ರಾಜ್ಯಗಳು ತಮ್ಮಲ್ಲಿನ ಕೋವಿಡ್ ಸಾವುಗಳ ಪರಿಷ್ಕೃತ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿವೆ. ಕೋವಿಡ್‌ ಸಾವಿನ ನಿಖರ ಮಾಹಿತಿ ನೀಡಿ ಎಂದು ಹಲವು ರಾಜ್ಯ ಸರ್ಕಾರಗಳು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿವೆ.

ಬಿಡುಗಡೆಯಾಗದ ವರದಿಗಳು...

ದೇಶದಲ್ಲಿ ಜನನ ಮತ್ತು ಮರಣ ನೋಂದಣಿಯನ್ನು ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್‌) ಅಡಿ ಮಾಡಲಾಗುತ್ತದೆ. ಪ್ರಧಾನ ನೋಂದಣಿ ಅಧಿಕಾರಿ ಮತ್ತು ಜನಗಣತಿ ಆಯುಕ್ತರ ಕಚೇರಿ ಈ ವ್ಯವಸ್ಥೆಯನ್ನು ನಿರ್ವಹಿಸುತ್ತವೆ. ಜಿಲ್ಲಾಡಳಿತಗಳು ಮರಣ ನೋಂದಣಿಯನ್ನು ದಾಖಲಿಸುತ್ತವೆ. ಅದನ್ನು ಪ್ರತಿ ತಿಂಗಳು ಸಿಆರ್‌ಎಸ್‌ ಕಲೆಹಾಕುತ್ತದೆ. ಒಂದು ವರ್ಷಕ್ಕೆ ಸಂಬಂಧಿಸಿದ ಈ ಸಮಗ್ರ ಮಾಹಿತಿಯನ್ನು, ಆ ವರ್ಷ ಮುಗಿದ ಕೆಲವು ತಿಂಗಳ ನಂತರ ಬಿಡುಗಡೆ ಮಾಡಲಾಗುತ್ತದೆ.

ಕೋವಿಡ್‌ ಸಾವುಗಳಿಗೆ ಸಂಬಂಧಿಸಿದ ಮಾಹಿತಿಯೂ ಸಿಆರ್‌ಎಸ್‌ ಬಳಿ ಇರುತ್ತದೆ. ಆದರೆ ಈಗ 2019ರ ಸಾವುಗಳು ಮಾತ್ರವೇ ಬಹಿರಂಗವಾಗಿವೆ. ದೇಶದಲ್ಲಿ ಪ್ರತಿವರ್ಷ 95 ಲಕ್ಷ ಸಾವು ಸಂಭವಿಸುತ್ತವೆ. ಅವುಗಳಲ್ಲಿ 80-85 ಲಕ್ಷದಷ್ಟು ಸಾವುಗಳು ಮಾತ್ರ ನೋಂದಣಿಯಾಗುತ್ತವೆ. ಸಾವಿನ ಸಂಖ್ಯೆಯೂ ಪ್ರತಿವರ್ಷ ಶೇ 1- 1.3ರಷ್ಟು ಏರಿಕೆಯಾಗುತ್ತವೆ ಎಂದು ಸಿಆರ್‌ಎಸ್ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

2020ರ ವಾರ್ಷಿಕ ಸಿಆರ್‌ಎಸ್ ವರದಿ ಬಿಡಿಗಡೆಯಾದರೆ, 2019ರ ಹೋಲಿಕೆಯಲ್ಲಿ 2020ರಲ್ಲಿ ಸಾವಿನ ಸಂಖ್ಯೆ ಎಷ್ಟು ಏರಿಕೆಯಾಗಿದೆ ಎಂಬುದನ್ನು ಅಂದಾಜಿಸಬಹುದು. ಆ ಹೆಚ್ಚುವರಿ ಸಾವುಗಳಲ್ಲಿ ಕೋವಿಡ್‌ ಸಾವಿನ ಸಂಖ್ಯೆಯೂ ಸಿಗುವ ಸಾಧ್ಯತೆ ಇರುತ್ತದೆ. ಪ್ರತಿ ತಿಂಗಳು ಕಲೆ ಹಾಕುವ ಮಾಹಿತಿಯನ್ನು ಬಿಡುಗಡೆ ಮಾಡಿದರೂ, ಕೋವಿಡ್‌ ಸಾವುಗಳ ಅಂದಾಜು ಸಂಖ್ಯೆ ಸಿಗುವ ಸಾಧ್ಯತೆ ಇದೆ. ಆದರೆ ಸಿಆರ್‌ಎಸ್‌ 2020ರ ವಾರ್ಷಿಕ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸುವ ಕೋವಿಡ್‌ ಸಾವುಗಳ ವಿವರವನ್ನು ಕಲೆಹಾಕುತ್ತದೆ. ರಾಜ್ಯ ಸರ್ಕಾರಗಳು ನೀಡುವ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸುತ್ತದೆ. ಈ ಎರಡೂ ಮಾಹಿತಿಯನ್ನು ಬಹಿರಂಗಪಡಿಸಿದರೆ, ಕೋವಿಡ್‌ ಸಾವುಗಳ ಸಂಖ್ಯೆಗೆ ಸಂಬಂಧಿಸಿದ ಗೊಂದಲಗಳು ಪರಿಹಾರವಾಗುತ್ತವೆ.

ರಾಜಸ್ಥಾನ: ಲೆಕ್ಕಪರಿಶೋಧನೆಗೆ ಆದೇಶ

ರಾಜಸ್ಥಾನದಲ್ಲಿ 2021ರ ಏಪ್ರಿಲ್‌ 1ರಿಂದ ಮೇ 20ರ ಮಧ್ಯೆ ಒಟ್ಟು 3,900 ಕೋವಿಡ್‌ ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರದ ದಾಖಲೆಗಳು ಹೇಳುತ್ತವೆ. ಆದರೆ ಇದೇ ಅವಧಿಯಲ್ಲಿ ರಾಜ್ಯದಾದ್ಯಂತ 14,400 ಕೋವಿಡ್‌ ಸಾವುಗಳು ಸಂಭವಿಸಿವೆ.

ಚಿತಾಗಾರಗಳು ಮತ್ತು ಸ್ಮಶಾನಗಳಲ್ಲಿ ನಮೂದಿಸಲಾಗಿರುವ ಅಂತ್ಯಕ್ರಿಯೆಯ ಮಾಹಿತಿಯನ್ನು ಲೆಕ್ಕಹಾಕಿ ಮಾಧ್ಯಮಗಳು ಇಷ್ಟು ಸಾವು ಸಂಭವಿಸಿವೆ ಎಂದು ವರದಿ ಮಾಡಿದ್ದವು. ‘ಈ ಬಗ್ಗೆ ಲೆಕ್ಕಪರಿಶೋಧನೆ ನಡೆಸಿ, ವರದಿ ನೀಡಿ. ಸಾವಿನ ಸಂಖ್ಯೆಯ ಮಾಹಿತಿ ತಪ್ಪಾಗಿದ್ದರೆ, ಅದನ್ನು ಸರಿಪಡಿಸಿ’ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಆದೇಶಿಸಿದ್ದಾರೆ.

ಕೋವಿಡ್ ಸಾವಿನ ವರದಿ ಮಾರ್ಗಸೂಚಿಗಳು

ಸಾವಿಗೆ ಕಾರಣವನ್ನು ಪತ್ತೆಹಚ್ಚುವ ಹಾಗೂ ಕೊರೊನಾ ವೈರಸ್‌ನಿಂದ ಸಾವು ಸಂಭವಿಸಿದೆ ಎಂದು ಘೋಷಿಸುವ ಕುರಿತಂತೆ ಗೊಂದಲಗಳು ಇರುವುದರಿಂದಲೇ ಕೊರೊನಾ ಸಾವಿನ ಲೆಕ್ಕಾಚಾರ ಏರುಪೇರಾಗಿದೆ. ಕೊರೊನಾ ಸಮಯದಲ್ಲಿ ಸಂಭವಿಸುವ ಸಾವುಗಳನ್ನು ಹೇಗೆ ವರ್ಗೀಕರಿಸಬಹುದು ಎಂಬುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಮಾರ್ಗಸೂಚಿ ಹೊರತಂದಿವೆ. ಎರಡೂ ಸಂಸ್ಥೆಗಳ ಮಾರ್ಗಸೂಚಿಗಳು ಬಹುತೇಕ ಹೋಲಿಕೆಯಾಗುತ್ತವೆ.

* ಕೋವಿಡ್ ಲಕ್ಷಣವಿದ್ದು ಪರೀಕ್ಷಾ ವರದಿಯಲ್ಲಿ ವೈರಾಣು ಇರುವುದು ದೃಢಪಟ್ಟಿದ್ದರೆ ಅದು ಕೋವಿಡ್‌ನಿಂದಾದ ಸಾವು ಎಂದು ಘೋಷಿಸಬಹುದು.

*ಲಕ್ಷಣ ಇರದಿದ್ದರೂ, ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದರೆ ಅದೂ ಕೋವಿಡ್‌ನಿಂದಾದ ಸಾವು ಎಂದು ಪರಿಗಣಿತವಾಗುತ್ತದೆ.

*ಸತ್ತ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ನಿಖರ ಪರೀಕ್ಷಾ ಫಲಿತಾಂಶಗಳು ಲಭ್ಯವಿಲ್ಲದಿದ್ದರೆ, ಅಂತಹ ಸಾವನ್ನು ಸಂಭವನೀಯ ಕೋವಿಡ್ ಸಾವು ಎಂದು ವರ್ಗೀಕರಿಸಬಹುದು ಎಂದು ಐಸಿಎಂಆರ್ ಹೊರಡಿಸಿರುವ ಮಾರ್ಗಸೂಚಿ ಹೇಳುತ್ತದೆ.

*ಕೋವಿಡ್‌ ಇದ್ದು, ನ್ಯುಮೋನಿಯಾ, ಹೃದಯದ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ ಮೊದಲಾದ ಸಮಸ್ಯೆಗಳು ಕಂಡುಬಂದರೆ, ಈ ಸಾವುಗಳಿಗೆ ಕೋವಿಡ್ ಮೂಲ ಕಾರಣ ಎಂದು ದಾಖಲಿಸಲಾಗುತ್ತದೆ ಎಂದು ಐಸಿಎಂಆರ್ ಹೇಳಿದೆ.

*ರೋಗಲಕ್ಷಣಗಳು ಇದ್ದು, ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಸಾವುಗಳನ್ನು ಶಂಕಿತ ಸಾವು ಎಂದು ದಾಖಲಿಸಲಾಗುತ್ತದೆ.

*ಪರೀಕ್ಷಾ ಫಲಿತಾಂಶದಲ್ಲಿ ನೆಗೆಟಿವ್ ಎಂದು ಕಂಡುಬಂದರೂ, ರೋಗಲಕ್ಷಣಗಳನ್ನು ಹೊಂದಿರುವವರನ್ನು ‘ಸಾಂಕ್ರಾಮಿಕ ರೋಗಶಾಸ್ತ್ರೀಯವಾಗಿ’ ಕೋವಿಡ್ ಸಾವು ಎಂದು ಉಲ್ಲೇಖಿಸಲಾಗುತ್ತದೆ ಎಂದು ಮಾರ್ಗಸೂಚಿ ತಿಳಿಸಿದೆ.

*ಆಸ್ತಮಾ, ದೀರ್ಘಕಾಲದ ಬ್ರಾಂಕೈಟಿಸ್, ಇಸ್ಕೆಮಿಕ್ ಹೃದ್ರೋಗ, ಕ್ಯಾನ್ಸರ್ ಮತ್ತು ಡಯಾಬಿಟಿಸ್ ಮೆಲ್ಲಿಟಸ್‌ನಂತಹ ಕಾಯಿಲೆಗಳು ರೋಗಿಗಳಿಗೆ ಈ ಮೊದಲೇ ಇರಬಹುದು. ಇವು ಕೋವಿಡ್ ರೋಗಿಯಲ್ಲಿ ಉಸಿರಾಟ ಸಮಸ್ಯೆಯನ್ನು ತಂದೊಡ್ಡಿ, ತೀವ್ರ ಕಾಯಿಲೆ ತರಬಲ್ಲವು. ಆದರೆ ಕೋವಿಡ್ ಇಲ್ಲಿ ನೇರ ಕಾರಣ ಆಗಿರುವುದಿಲ್ಲ. ರೋಗಿಯು ಅನೇಕ ಕಾಯಿಲೆಗಳನ್ನು ಹೊಂದಿದ್ದಾಗ, ಸಾವಿಗೆ ಕಾರಣವಾದವುಗಳನ್ನು ಮಾತ್ರ ದಾಖಲಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

ಕೇಂದ್ರದ ಪ್ರಮಾಣಪತ್ರ:
ಗಂಭೀರ ಅನಾರೋಗ್ಯ ಇರುವ ವ್ಯಕ್ತಿ ಕೋವಿಡ್‌ ದೃಢಪಟ್ಟ ಬಳಿಕ ಮೃತಪಟ್ಟರೆ ಇದನ್ನು ಕೋವಿಡ್‌ನಿಂದ ಆಗಿರುವ ಸಾವು ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಸಾವಿಗೆ ಅತ್ಯಂತ ಸ್ಪಷ್ಟವಾದ ಬೇರೆ ಕಾರಣ ಇದ್ದಾಗ ಮತ್ತು ಸಾವಿನ ಕಾರಣ ಕೋವಿಡ್‌ ಅಲ್ಲ ಎಂಬುದು ದೃಢಪಟ್ಟಾಗ ಮಾತ್ರ ಅಂಥ ಪ್ರಕರಣವನ್ನು ಕೋವಿಡ್‌ನಿಂದಾದ ಸಾವು ಎಂದು ಪರಿಗಣಿಸಬೇಕಿಲ್ಲ. ಉದಾಹರಣೆಗೆ ಅಪಘಾತ, ವಿಷ ಸೇವನೆ, ಹೃದಯಾಘಾತದಿಂದ ಮೃತಪಟ್ಟರೆ ಅದನ್ನು ಕೋವಿಡ್‌ ಸಾವು ಎಂದು ಪರಿಗಣಿಸಬೇಕಿಲ್ಲ ಎಂದು ತಿಳಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ 2020ರ ಮೇ 10ರಂದು ಸಿದ್ಧಪಡಿಸಿದ ಮಾರ್ಗಸೂಚಿಯನ್ನು ಅನುಸರಿಸಬೇಕು. ಅದರ ಉಲ್ಲಂಘನೆಯನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 188ರ ಅಡಿಯಲ್ಲಿ ಅಪರಾಧ ಕೃತ್ಯ ಎಂದು ಪರಿಗಣಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಕೋವಿಡ್‌ನಿಂದಾದ ಮರಣಕ್ಕೆ ಅದೇ ಕಾರಣದ ಪ್ರಮಾಣಪತ್ರ ನೀಡದೇ ಇದ್ದರೆ ಸಂಬಂಧಪ‍ಟ್ಟ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರವು ತಿಳಿಸಿದೆ. ಕೋವಿಡ್‌ ಸಾವಿನ ವರದಿ ಕುರಿತು ಹೊರಡಿಸಿರುವ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಆಧಾರ: ರಾಯಿಟರ್ಸ್, ಪಿಟಿಐ, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT