ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ ವಿದೇಶಿ ವಿದ್ಯಾಸಂಸ್ಥೆಗಳಿಗೆ ಕೆಂಪು ಹಾಸು

ಯುಜಿಸಿ (ವಿದೇಶಿ ಉನ್ನತ ವಿದ್ಯಾಸಂಸ್ಥೆಗಳನ್ನು ಭಾರತದಲ್ಲಿ ಸ್ಥಾಪಿಸಿ ನಡೆಸುವುದು) ನಿಯಮಗಳು–2023 ಕರಡು ಸಿದ್ಧ
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ವಿದೇಶಿ ವಿದ್ಯಾಸಂಸ್ಥೆಗಳು ಭಾರತದಲ್ಲಿ ಕ್ಯಾಂಪಸ್‌ ಆರಂಭಿಸುವುದಕ್ಕಾಗಿ ಕರಡು ನಿಯಮಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ರೂಪಿಸಿದೆ. ಸರ್ಕಾರವು ಅಧಿಸೂಚನೆ ಹೊರಡಿಸುವ ಮೂಲಕ ಇದು ಶೀಘ್ರವೇ ಜಾರಿಗೆ ಬರುವ ಸಾಧ್ಯತೆ ಇದೆ. ಆದರೆ, ಈ ನಿಯಮಗಳ ಕುರಿತಂತೆ ಹಲವು ಆಕ್ಷೇಪಗಳನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ವಿದೇಶಿ ವಿದ್ಯಾಸಂಸ್ಥೆಗಳನ್ನು ಆರಂಭಿಸಲು ಅನುವು ಮಾಡಿ ಕೊಡುವುದು ಕಳವಳಕಾರಿ ಬೆಳವಣಿಗೆ ಎಂದು ಹಲವರು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಕಾಯ್ದೆ ಇಲ್ಲ

ಇಂತಹುದೊಂದು ಮಹತ್ವದ ನಿರ್ಧಾರವನ್ನು ಸಂಸತ್ತಿನಲ್ಲಿ ಕಾಯ್ದೆ ರೂಪಿಸುವ ಮೂಲಕ ಜಾರಿಗೆ ತರಲಾಗಿಲ್ಲ. ಬದಲಿಗೆ ಯುಜಿಸಿ ನಿಯಮಗಳನ್ನು ರೂಪಿಸಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದರೆ ಅದು ಜಾರಿಗೆ ಬಂದು ಬಿಡುತ್ತದೆ. ಇದು ಸರಿಯಾದ ಕ್ರಮ ಅಲ್ಲ ಎಂದು ಶಿಕ್ಷಣ ತಜ್ಞರಲ್ಲಿ ಹಲವರು ಪ್ರತಿಪಾದಿಸಿದ್ದಾರೆ. ಇಂತಹ ಪ್ರಮುಖ ನಿರ್ಧಾರದ ಸಾಧಕ–ಬಾಧಕಗಳ ಕುರಿತು ಸಂಸತ್ತಿನಲ್ಲಿ ಆಮೂಲಾಗ್ರ ಚರ್ಚೆ ಆಗಬೇಕಾದುದು ಅಗತ್ಯವಾಗಿತ್ತು. ರಾಜ್ಯ ಸರ್ಕಾರಗಳು ಕೂಡ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವಾಗ ಮಸೂದೆ ರೂಪಿಸಿ, ವಿಧಾನಮಂಡಲದಲ್ಲಿ ಅದನ್ನು ಚರ್ಚಿಸಿ ಜಾರಿಗೆ ತರುತ್ತವೆ. ಬೀದರ್‌, ಹಾವೇರಿ, ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೆ ಕರ್ನಾಟಕ ಸರ್ಕಾರವು ಮುಂದಾಗಿತ್ತು. ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕವೇ ಈ ನಿರ್ಧಾರವನ್ನು ಇತ್ತೀಚೆಗೆ ಕೈಗೊಳ್ಳಲಾಗಿದೆ.

ನಿಯಮಗಳನ್ನು ರೂಪಿಸುವುದರ ಮೂಲಕ ಕೈಗೊಳ್ಳುವ ನಿರ್ಧಾರಗಳು ದುರ್ಬಳಕೆ ಆಗುವ ಅಪಾಯ ಹೆಚ್ಚು. ಏಕೆಂದರೆ, ಯಾವುದೇ ಸಂದರ್ಭದಲ್ಲಿ ಈ ನಿಯಮಗಳನ್ನು ಬದಲಾಯಿಸುವ ಅವಕಾಶ ಇರುತ್ತದೆ. ಆದರೆ, ಕಾಯ್ದೆಯ ಮೂಲಕ ಇದು ಜಾರಿಗೆ ಬಂದಿದ್ದರೆ ಬದಲಾವಣೆಯನ್ನು ಕೂಡ ಸಂಸತ್ತಿನಲ್ಲಿ ಚರ್ಚಿಸಿಯೇ ಮಾಡಬೇಕಾಗುತ್ತದೆ.

ಅಸ್ಪಷ್ಟ ನಿಯಮಗಳು

ಕರಡು ನಿಯಮಗಳು ಅಸ್ಪಷ್ಟವಾಗಿವೆ ಮತ್ತು ನಿಖರತೆ ಇಲ್ಲ ಎಂಬುದು ಈ ನಿಯಮಗಳ ಕುರಿತು ಇರುವ ಇನ್ನೊಂದು ಆಪಾದನೆ. ವಿದೇಶಿ ವಿದ್ಯಾಸಂಸ್ಥೆಗಳಿಗೆ ತಮ್ಮ ಶುಲ್ಕವನ್ನು ನಿರ್ಧರಿಸುವ ಹಕ್ಕನ್ನು ನೀಡಲಾಗಿದೆ. ಆದರೆ, ಈ ವಿದ್ಯಾಸಂಸ್ಥೆಗಳು ನಿಗದಿ ಮಾಡುವ ಶುಲ್ಕವು ‘ನ್ಯಾಯಯುತವಾಗಿರಬೇಕು’ ಎಂದು ನಿಯಮವು ಹೇಳುತ್ತದೆ. ಈ ‘ನ್ಯಾಯಯುತ’ ಎಂಬುದಕ್ಕೆ ಯಾವುದೇ ವ್ಯಾಖ್ಯಾನ ಇಲ್ಲ. ಹಾಗಾದರೆ, ಶುಲ್ಕವು ನ್ಯಾಯಯುತ ಎಂದು ತೀರ್ಮಾನಿಸುವುದು ಹೇಗೆ?

ವಿದೇಶಿ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದ ರ್‍ಯಾಂಕಿಂಗ್‌–500ರ ಒಳಗೆ ಇರಬೇಕು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಅವು ಇರುವ ದೇಶದಲ್ಲಿ ಪ್ರತಿಷ್ಠಿತವಾಗಿರಬೇಕು ಎಂದು ನಿಯಮದಲ್ಲಿ ಇದೆ. ‘ಪ್ರತಿಷ್ಠಿತ’ ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದನ್ನು ನಿಯಮವು ವಿವರಿಸಿಲ್ಲ. ಭಾರತದಲ್ಲಿ ಕ್ಯಾಂಪಸ್‌ ಆರಂಭಿಸುವ ವಿದ್ಯಾಸಂಸ್ಥೆಯು ನೀಡುವ ಶಿಕ್ಷಣದ ಗುಣಮಟ್ಟವು ಆ ಸಂಸ್ಥೆಯು ಮೂಲ ದೇಶದಲ್ಲಿ ನೀಡುವ ಶಿಕ್ಷಣದ ಗುಣಮಟ್ಟಕ್ಕೆ ಸಮಾನವಾಗಿರಬೇಕು ಎಂದು ಹೇಳಲಾಗಿದೆ. ಎರಡೂ ಕಡೆಯಲ್ಲಿ ಗುಣಮಟ್ಟ ಒಂದೇ ರೀತಿ ಇದೆಯೇ ಎಂಬುದನ್ನು ಅಳೆಯುವುದು ಹೇಗೆ ಎಂಬುದರ ಕುರಿತು ನಿಯಮಗಳಲ್ಲಿ ಏನನ್ನೂ ಹೇಳಲಾಗಿಲ್ಲ.

ರಾಷ್ಟ್ರೀಯ ಹಿತಾಸಕ್ತಿ ಅಥವಾ ದೇಶದ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ಆಗುವಂತಹ ಯಾವುದೇ ಕೋರ್ಸ್‌ ಅನ್ನು ಕಲಿಸಬಾರದು ಎಂಬ ನಿಯಮ ಇದೆ. ಆದರೆ, ರಾಷ್ಟ್ರೀಯ ಹಿತಾಸಕ್ತಿ ಎಂದರೆ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿಲ್ಲ. ಜೊತೆಗೆ, ‘ರಾಷ್ಟ್ರೀಯ ಹಿತಾಸಕ್ತಿ’ ಎಂಬ ವಿಚಾರವನ್ನು ವಿದ್ಯಾಸಂಸ್ಥೆಗಳಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆಪಾದನೆಯು ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಕೇಳಿ ಬಂದಿದೆ. ‘ರಾಷ್ಟ್ರೀಯ ಹಿತಾಸಕ್ತಿ’ ಎಂಬುದನ್ನು ಅಸ್ಪ‍ಷ್ಟವಾಗಿ ಉಲ್ಲೇಖಿಸಿದರೆ, ಮುಂದೆ ಅದು ದುರ್ಬಳಕೆಗೆ ಅವಕಾಶ ಉಂಟು ಮಾಡಿಕೊಡಬಹುದು.

ತಾರತಮ್ಯಕ್ಕೆ ದಾರಿ

ವಿದೇಶಿ ವಿದ್ಯಾಸಂಸ್ಥೆಗಳಿಗೆ ತಮ್ಮದೇ ಆದ ಪಠ್ಯಕ್ರಮ ಹೊಂದುವ ಅವಕಾಶ ಕೊಡಲಾಗಿದೆ. ಶುಲ್ಕವನ್ನೂ ಆ ಸಂಸ್ಥೆಗಳೇ ನಿರ್ಧರಿಸಬಹುದು. ಆದರೆ, ದೇಶೀಯ ವಿಶ್ವವಿದ್ಯಾಲಯಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳಿಗೆ ಹಲವು ಹತ್ತು ನಿಯಂತ್ರಣಗಳಿವೆ. ಡೀಮ್ಡ್‌ ಎನಿಸಿಕೊಂಡ ವಿದ್ಯಾಸಂಸ್ಥೆಗಳು ಕೂಡ ಸಂಪೂರ್ಣ ಸ್ವತಂತ್ರವೇನೂ ಅಲ್ಲ. ವಿದೇಶಿ ವಿದ್ಯಾಸಂಸ್ಥೆಗಳು ಇಲ್ಲಿ ಬಂದು ನೆಲೆಯಾದರೆ, ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ. ನಮ್ಮ ದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಎಂಬ ಎರಡು ರೀತಿಯ, ಎರಡು ಗುಣಮಟ್ಟದ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಉನ್ನತ ಶಿಕ್ಷಣದಲ್ಲಿ ವಿದೇಶಿ ವಿದ್ಯಾಸಂಸ್ಥೆಯಲ್ಲಿ ಕಲಿತವರು ಎಂಬ ಮತ್ತೊಂದು ವರ್ಗ ಹುಟ್ಟಿಕೊಳ್ಳಲು ಇದು ಕಾರಣವಾಗುತ್ತದೆ.

ಬೋಧಕರ ವಲಸೆ

ಬೋಧಕ ಹುದ್ದೆಗೆ ವಿದೇಶಿಯರ ಜೊತೆಗೆ ಭಾರತೀಯರನ್ನೂ ನೇಮಿಸಲು ಅವಕಾಶ ಕೊಡಲಾಗಿದೆ. ಸಿಬ್ಬಂದಿಗೆ ನೀಡುವ ವೇತನದ ಕುರಿತೂ ಸಂಸ್ಥೆಯೇ ನಿರ್ಧಾರ ತೆಗೆದುಕೊಳ್ಳಬಹುದು. ಹಾಗಾಗಿ, ಪ್ರತಿಭಾವಂತ ಬೋಧಕರಿಗೆ ಆಕರ್ಷಕವಾದ ವೇತನ ದೊರೆಯಬಹುದು. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ಪ್ರಾಧ್ಯಾಪಕರು ಇದ್ದಾರೆ. ಅಂತಹ ಪ್ರತಿಭೆ ಇರುವ ಇನ್ನಷ್ಟು ಪ್ರಾಧ್ಯಾಪಕರ ಅಗತ್ಯವೂ ಇದೆ. ವಿದೇಶಿ ವಿದ್ಯಾಸಂಸ್ಥೆಗಳು ದೊಡ್ಡ ಮೊತ್ತದ ವೇತನದ ಕೊಡುಗೆ ಮುಂದಿರಿಸಿದರೆ ದೇಶದ ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತರು ವಿದೇಶಿ ಸಂಸ್ಥೆಗಳನ್ನು ಸೇರಿಕೊಳ್ಳಬಹುದು. ಇದರಿಂದಾಗಿ ಭಾರತದ ಸಂಸ್ಥೆಗಳ ಶಿಕ್ಷಣದ ಗುಣಮಟ್ಟ ಇನ್ನಷ್ಟು ಕೆಳಕ್ಕೆ ಕುಸಿಯಬಹುದು.

ಸಮಾನ ಅವಕಾಶಕ್ಕೆ ಕತ್ತರಿ

ದೇಶದ ವಿದ್ಯಾಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗುತ್ತದೆ. ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳು, ಪ್ರಬಲ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ದೊರಕುತ್ತದೆ. ಸರ್ಕಾರ ನಡೆಸುವ ವಿದ್ಯಾಸಂಸ್ಥೆಗಳಲ್ಲಿ ದೊಡ್ಡ ಶುಲ್ಕ ಇರುವುದಿಲ್ಲ. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಕೂಡ ಶಿಷ್ಯವೇತನದಂತಹ ವ್ಯವಸ್ಥೆ ಇದೆ. ವಿದೇಶಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿ ವೇತನ ನೀಡಬಹುದು ಎಂದು ನಿಯಮದಲ್ಲಿ ಇದೆ. ಆದರೆ, ನೀಡುವುದು ಆ ಸಂಸ್ಥೆಯ ನಿರ್ಧಾರಕ್ಕೆ ಬಿಟ್ಟ ವಿಚಾರ. ಹೀಗಾಗಿ, ವಿದೇಶಿ
ವಿದ್ಯಾಸಂಸ್ಥೆಗಳು ವಿಧಿಸುವ ಶುಲ್ಕವನ್ನು ಭರಿಸಬಲ್ಲ ವಿದ್ಯಾರ್ಥಿಗಳಿಗೆ ಮಾತ್ರ ಇಂತಹ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವುದು ಸಾಧ್ಯವಾಗಬಹುದು.

ವಿದೇಶಗಳಲ್ಲಿ 13 ಲಕ್ಷ ವಿದ್ಯಾರ್ಥಿಗಳು

2022ರ ನವೆಂಬರ್ ಅಂತ್ಯದ ವೇಳೆಗೆ 79 ದೇಶಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 13.24 ಲಕ್ಷದಷ್ಟಿದೆ. ಈ ಹಿಂದಿನ ವರ್ಷಗಳಲ್ಲಿ ಅಧ್ಯಯನಕ್ಕೆಂದು ಅಲ್ಲಿಗೆ ಹೋದ ವಿದ್ಯಾರ್ಥಿಗಳ ಸಂಖ್ಯೆಯೂ ಇದರಲ್ಲಿ ಸೇರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. 2018ರಲ್ಲಿ ಈ ಸಂಖ್ಯೆ 7.75 ಲಕ್ಷದಷ್ಟು ಇತ್ತು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಜಾಗತಿಕ ಶ್ರೇಯಾಂಕ 500ರ ಒಳಗಿರಬೇಕು

ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಬಯಸುವ ವಿದೇಶಿ ವಿಶ್ವವಿದ್ಯಾಲಯಗಳು ಜಾಗತಿಕ ವಿವಿ ಶ್ರೇಯಾಂಕದಲ್ಲಿ ಮೊದಲ 500ರ ಒಳಗೆ ಇರಬೇಕು. ಅವು ಭಾರತದಲ್ಲಿ ನೀಡಲು ಬಯಸುವ ಕೋರ್ಸ್‌ಗಳೂ ಜಾಗತಿಕವಾಗಿ ಉತ್ತಮ ಶ್ರೇಯಾಂಕ ಹೊಂದಿರಬೇಕು. ಉನ್ನತ ಶಿಕ್ಷಣ ಸಂಸ್ಥೆಗಳೂ ಭಾರತದಲ್ಲಿ ಕ್ಯಾಂಪಸ್‌ ತೆರೆಯಬಹುದು. ಅಂತಹ ಸಂಸ್ಥೆಗಳ ಮೂಲ ಕ್ಯಾಂಪಸ್‌ಗಳು ತಮ್ಮ ದೇಶದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರಬೇಕು ಎಂದು ಯುಜಿಸಿ ತನ್ನ ಕರಡು ನಿಯಮಗಳಲ್ಲಿ ಷರತ್ತುಗಳನ್ನು ವಿಧಿಸಿದೆ.

ಈ ವಿಶ್ವವಿದ್ಯಾಲಯಗಳು ತಮ್ಮ ಮೂಲ ಕ್ಯಾಂಪಸ್‌ನಲ್ಲಿ ನೀಡುವ ಕೋರ್ಸ್‌ಗಳನ್ನೇ ಭಾರತದಲ್ಲೂ ನೀಡಬೇಕು. ಮೂಲ ಕ್ಯಾಂಪಸ್‌ನಲ್ಲಿ ನೀಡಲಾಗುವ ಶಿಕ್ಷಣದ್ದೇ ಗುಣಮಟ್ಟದ ಶಿಕ್ಷಣವನ್ನು ಭಾರತದ ಕ್ಯಾಂಪಸ್‌ನಲ್ಲೂ ನೀಡಬೇಕು. ಭಾರತದಲ್ಲಿನ ಕ್ಯಾಂಪಸ್‌ನಲ್ಲಿ ನೀಡಲಾಗುವ ಕೋರ್ಸ್‌ಗಳಿಗೆ, ಮೂಲ ಕ್ಯಾಂಪಸ್‌ನಲ್ಲಿನ ಕೋರ್ಸ್‌ಗಳಿಗೆ ಇರುವ ಮಾನ್ಯತೆಯನ್ನೇ ನೀಡಬೇಕು. ಮೂಲ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡಿದ ಕೋರ್ಸ್‌ಗಳಿಗೆ ನೀಡುವ ಪ್ರಮಾಣ ಪತ್ರಕ್ಕೆ ನೀಡುವ ಮಾನ್ಯತೆಯನ್ನೇ, ಭಾರತದಲ್ಲಿನ ಕ್ಯಾಂಪಸ್‌ನಲ್ಲಿ ನೀಡುವ ಕೋರ್ಸ್‌ಗಳ ಪ್ರಮಾಣಪತ್ರಕ್ಕೆ ನೀಡಬೇಕು. ಭಾರತದ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ, ಹೆಚ್ಚಿನ ಅಧ್ಯಯನ ಮತ್ತು ನೇಮಕಾತಿಯಲ್ಲಿ ತೊಡಕಾಗಬಾರದು. ಈ ಎಲ್ಲವನ್ನೂ ಪೂರೈಸುವ ಜವಾಬ್ದಾರಿ ವಿದೇಶಿ ವಿಶ್ವವಿದ್ಯಾಲಯಗಳದ್ದು ಎಂದು ಯುಜಿಸಿ ಹೇಳಿದೆ.

ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸುವಾಗ, ಕ್ಯಾಂಪಸ್‌ ತೆರೆಯಲು ಬಂಡವಾಳವನ್ನು ಹೇಗೆ ಹೊಂದಿಸಿಕೊಳ್ಳಲಾಗುತ್ತದೆ ಎಂಬ ವಿಸ್ತೃತ ಮಾಹಿತಿಯನ್ನು ವಿದೇಶಿ ವಿಶ್ವವಿದ್ಯಾಲಯಗಳು ನೀಡಬೇಕಾಗುತ್ತದೆ. ಬೋಧನೆಗೆ ವಿದೇಶಿ ಸಂಪನ್ಮೂಲ ವ್ಯಕ್ತಿಗಳನ್ನು ಕ್ಯಾಂಪಸ್‌ನಲ್ಲಿ ಇರಿಸುವ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಬೋಧನೆ ಮತ್ತು ಸಂಶೋಧನಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯರನ್ನೂ ನೇಮಕ ಮಾಡಿಕೊಳ್ಳಲು ಅವಕಾಶವಿರಬೇಕು. ಆದರೆ, ಇದಕ್ಕೆ ಸಂಬಂಧಿಸಿದಂತೆ ತನ್ನದೇ ನಿಯಮಗಳನ್ನು ರೂಪಿಸಿಕೊಳ್ಳಲು ವಿದೇಶಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿವೆ ಎಂದು ಕರಡು ನಿಯಮಗಳಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ನೀಡಲಾಗುವ ಅನುಮತಿ 10 ವರ್ಷಗಳ ಅವಧಿಯದ್ದಾಗಿರುತ್ತದೆ. ಅನುಮತಿ ಪಡೆದ ಎರಡು ವರ್ಷಗಳ ಒಳಗೆ ಕ್ಯಾಂಪಸ್‌ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ವಿದೇಶಿ ವಿಶ್ವವಿದ್ಯಾಲಯ
ಗಳು ಭಾರತದಲ್ಲಿ ಕ್ಯಾಂಪಸ್‌ ನಡೆಸಲು, ಎರಡನೇ ವರ್ಷದ ನಂತರ ಯುಜಿಸಿಗೆ ವಾರ್ಷಿಕ ಶುಲ್ಕವನ್ನು ಪಾವತಿಸಬೇಕು. ಶುಲ್ಕದ ಪ್ರಮಾಣವನ್ನು ನಿಗದಿಪಡಿಸುವ ಮತ್ತು ಕಾಲಕಾಲಕ್ಕೆ ಪರಿಷ್ಕರಿಸುವ ಅಧಿಕಾರವನ್ನು ಯುಜಿಸಿ ಕಾಯ್ದಿರಿಸಿಕೊಳ್ಳಲು ಕರಡು ನಿಯಮಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಅನುಮತಿಗೆ ಮುನ್ನ ದಾಖಲಾತಿ ಇಲ್ಲ

l ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಬಯಸುವ ವಿದೇಶಿ ವಿಶ್ವವಿದ್ಯಾಲಯವು, ಅದಕ್ಕಾಗಿ ಯುಜಿಸಿಯಿಂದ ಅನುಮತಿ ಪಡೆದುಕೊಳ್ಳದೇ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುವಂತಿಲ್ಲ, ದಾಖಲಾತಿ ಪ್ರಕ್ರಿಯೆಯನ್ನೂ ಆರಂಭಿಸುವಂತಿಲ್ಲ

l ವಿದೇಶಿ ವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ ತೆರೆದು, ಅಲ್ಲಿ ನೀಡುವ ಕೋರ್ಸ್‌ಗಳನ್ನು ಭೌತಿಕವಾಗಿಯೇ ನಡೆಸಬೇಕು. ಭಾರತೀಯ ಕ್ಯಾಂಪಸ್‌ಗೆ ದಾಖಲಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋರ್ಸ್‌ ನೀಡುವಂತಿಲ್ಲ. ಅಂತಹ ಕೋರ್ಸ್‌ಗಳನ್ನು ‘ದೂರಶಿಕ್ಷಣ’ ಸ್ವರೂಪದಲ್ಲೂ ಒದಗಿಸುವಂತಿಲ್ಲ

l ಭಾರತದ ಉನ್ನತ ಶಿಕ್ಷಣ ಗುಣಮಟ್ಟ ಮಾನದಂಡಗಳಿಗೆ ಧಕ್ಕೆಯಾಗುವಂತಹ ಕೋರ್ಸ್‌ಗಳನ್ನು ನೀಡುವಂತಿಲ್ಲ

l ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಕೋರ್ಸ್‌ಗಳನ್ನು ನೀಡುವಂತಿಲ್ಲ

l ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ, ಭಾರತದ ಮಿತ್ರರಾಷ್ಟ್ರಗಳೊಂದಿಗೆ ಸ್ನೇಹ–ಸಂಬಂಧ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಈ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುವಂತಿಲ್ಲ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಖಾತರಿ

ವಿದೇಶಿ ವಿಶ್ವವಿದ್ಯಾಲಯಗಳ ಭಾರತೀಯ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯದ ಖಾತರಿಗಾಗಿ ಕೆಲವು ಷರತ್ತುಗಳನ್ನು ಕರಡು ನಿಯಮಗಳಲ್ಲಿ ಸೇರಿಸಲಾಗಿದೆ.

ಭಾರತದ ಕ್ಯಾಂಪಸ್‌ನಲ್ಲಿ ಆರಂಭಿಸುವ ಕೋರ್ಸ್‌ಗಳನ್ನು, ಯುಜಿಸಿಯ ಪೂರ್ವಾನುಮತಿ ಪಡೆಯದೆಯೇ ಸ್ಥಗಿತಗೊಳಿಸಬಾರದು. ಕೋರ್ಸ್‌ ಅನ್ನು ಸ್ಥಗಿತಗೊಳಿಸಲೇಬೇಕಾದ ಅನಿವಾರ್ಯ ಎದುರಾದರೆ, ಸಮಾನ ಶೈಕ್ಷಣಿಕ ಮಾನ್ಯತೆ ಇರುವ ಪರ್ಯಾಯ ಕೋರ್ಸ್‌ನ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕು ಎಂದು ಯುಜಿಸಿ ಹೇಳಿದೆ. ಇಂತಹ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಮತ್ತು ಆರ್ಥಿಕ ನಷ್ಟಗಳು ಆಗಬಾರದು ಎಂಬುದು ಈ ಷರತ್ತಿನ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.

ಆಧಾರ: ಯುಜಿಸಿ ಕರಡು ಮಾರ್ಗಸೂಚಿ, ಪಿಟಿಐ, ಲೋಕಸಭೆ ಮತ್ತು ರಾಜ್ಯಸಭೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿದ ಮಾಹಿತಿಗಳು, ಪಿಐಬಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT