ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಪಟಾಕಿ ಪರಿಸರಸ್ನೇಹಿಯೇ?

ಮಾರುಕಟ್ಟೆಯಲ್ಲಿ ದೊರೆಯುವ ಪಟಾಕಿಗಳಲ್ಲಿ ನಿಷೇಧಿತ ರಾಸಾಯನಿಕ ಬೇರಿಯಂ ನೈಟ್ರೇಟ್‌ ಪತ್ತೆ
Last Updated 14 ನವೆಂಬರ್ 2020, 2:55 IST
ಅಕ್ಷರ ಗಾತ್ರ
ADVERTISEMENT
""
""
""

ಸಾಲು ಸಾಲು ಹಬ್ಬಗಳು ಬಂದಿವೆ. ಸಂಭ್ರಮ ಮನೆ ಮಾಡಿದೆ. ಪ್ರತಿ ಬಾರಿ ದೀಪಾವಳಿ ಬಂದಾಗಲೂ ಪಟಾಕಿ ಸಿಡಿಸುವ ವಿಚಾರದ ಚರ್ಚೆ ಸಾಮಾನ್ಯ. ಪರ–ವಿರೋಧ ಚರ್ಚೆಯ ಬಳಿಕ ಪಟಾಕಿ ಸಿಡಿತ ಎಂದಿನಂತೆಯೇ ಸಾಗುತ್ತದೆ. ಪಟಾಕಿ ಸಿಡಿಸುವಾಗ ತೋರುವ ನಿರ್ಲಕ್ಷ್ಯದಿಂದ ಕಣ್ಣಿಗೆ ಹಾನಿಯಾಗಬಹುದು, ಕೈ ಸುಟ್ಟು ಹೋಗಬಹುದು, ಬೆಂಕಿ ಅವಘಡ ಉಂಟಾಗಬಹುದು, ಕಿವಿಗೆ ಹಾನಿಯಾಗಬಹುದು, ಭಾರಿ ಸದ್ದಿನಿಂದ ಸಾಕುಪ್ರಾಣಿಗಳು–ಪಕ್ಷಿಗಳಿಗೆ ತೊಂದರೆಯಾಗುತ್ತದೆ, ವಾಯು ಮಾಲಿನ್ಯವಾಗುತ್ತದೆ ಎಂಬುದು ಪಟಾಕಿ ವಿರೋಧಿಗಳ ವಾದ. ದೊಡ್ಡ ನಗರಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ದೆಹಲಿಯ ಜನರಂತೂ ಚಳಿಗಾಲದ ತಿಂಗಳುಗಳಲ್ಲಿ ಉಸಿರಾಡುವುದಕ್ಕೇ ಸಂಕಷ್ಟ ಅನುಭವಿಸಬೇಕಾಗುತ್ತದೆ.

ಈ ಬಾರಿಯ ಹಬ್ಬದ ಋತು ಎಂದಿನಂತಲ್ಲ. ಕೋವಿಡ್‌–19 ಸಾಂಕ್ರಾಮಿಕ ತಂದೊಡ್ಡಿದ ನಿರ್ಬಂಧಗಳ ನಡುವಲ್ಲಿಯೇ ಹಬ್ಬಗಳು ಬಂದಿವೆ. ಕೋವಿಡ್‌ ಮುಖ್ಯವಾಗಿ ಶ್ವಾಸಕೋಶಕ್ಕೆ ತೊಂದರೆ ಕೊಡುವ ಕಾಯಿಲೆ. ಹಾಗಾಗಿ, ಈ ಬಾರಿಯ ದೀಪಾವಳಿಗೆ ಪಟಾಕಿ ಹಚ್ಚುವುದು ಬೇಡ ಎಂದು ಹಲವು ವೈದ್ಯರು ವಿನಂತಿ ಮಾಡಿಕೊಂಡಿದ್ದಾರೆ. ‌

ಹೀಗಾಗಿಯೇ ಹಲವು ರಾಜ್ಯಗಳು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿವೆ. ಕರ್ನಾಟಕವೂ ಸೇರಿ ಕೆಲವು ರಾಜ್ಯಗಳು ಮಧ್ಯಮ ಮಾರ್ಗವೊಂದನ್ನು ಹುಡುಕುವ ಪ್ರಯತ್ನ ನಡೆಸಿವೆ. ಇಂಥಹ ರಾಜ್ಯಗಳು ಹಸಿರು ಪಟಾಕಿಗೆ ಅವಕಾಶ ನೀಡುವುದಾಗಿ ಹೇಳಿವೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಹಸಿರು ಪಟಾಕಿಯನ್ನು ಕಳೆದ ವರ್ಷ ಪರಿಚಯಿಸಿದ್ದರು. ‘ಇದು ಪರಿಸರಸ್ನೇಹಿ’ ಎಂದು ಆಗ ಅವರು ಹೇಳಿದ್ದರು. ಆದರೆ, ಹಸಿರು ಪಟಾಕಿಯ ಬಗ್ಗೆ ಜನರಲ್ಲಿ ಮತ್ತು ಆಡಳಿತದಲ್ಲಿ ಇರುವವರಲ್ಲಿ ಅಂತಹ ಜ್ಞಾನವೇನೂ ಇಲ್ಲ. ‘ಹಸಿರು ಪಟಾಕಿ ಬಗ್ಗೆ ನನಗೇನೂ ತಿಳಿದಿಲ್ಲ’ ಎಂದು ಕರ್ನಾಟಕದ ಆರೋಗ್ಯ ಸಚಿವ ಕೆ. ಸುಧಾಕರ್ ಅವರೇ‌ ಇತ್ತೀಚೆಗೆ ಹೇಳಿದ್ದಾರೆ.

ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದಕ್ಕಾಗಿಯೇ ಹಸಿರು ಪಟಾಕಿಯ ಪರಿಕಲ್ಪನೆ ರೂಪುಗೊಂಡಿತು. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆಯು (ನೀರಿ) ಹಸಿರು ಪಟಾಕಿ ಎಂದರೆ ಏನು ಎಂಬುದನ್ನು ವಿವರಿಸಿದೆ. ಪಟಾಕಿ ಸಿಡಿಸುವುದರಿಂದ ಆಗುವ ಮಾಲಿನ್ಯ ಕನಿಷ್ಠ ಶೇ 30ರಷ್ಟು ಕಡಿಮೆ ಆಗಬೇಕು ಎಂಬುದು ನೀರಿ ಮಾನದಂಡದಲ್ಲಿ ಇರುವ ಮುಖ್ಯ ಅಂಶ.

ಆದರೆ, ಹಸಿರು ಪಟಾಕಿಗಳಲ್ಲಿಯೂ ಅಪಾಯಕಾರಿಯಾದ ರಾಸಾಯನಿಕಗಳ ಬಳಕೆ ಎಗ್ಗಿಲ್ಲದೆ ಸಾಗಿದೆ ಎಂಬ ಆರೋಪ ಈಗ ಕೇಳಿ ಬಂದಿದೆ. ಆವಾಜ್‌ ಫೌಂಡೇಶನ್‌ ಎಂಬ ಸ್ವಯಂ ಸೇವಾ ಸಂಸ್ಥೆಯು ಮಾರುಕಟ್ಟೆಗಳಲ್ಲಿ ಲಭ್ಯ ಇರುವ ಪಟಾಕಿಗಳ ವಿಶ್ಲೇಷಣೆ ನಡೆಸಿ, ಅವುಗಳಲ್ಲಿ ಬಳಕೆ ಆಗಿರುವ ರಾಸಾಯನಿಕಗಳು ಯಾವುವು ಎಂಬುದನ್ನು ಪಟ್ಟಿ ಮಾಡಿದೆ. ಹೀಗೆ ಮಾಡಲಾದ ಪಟ್ಟಿಯಲ್ಲಿ, ಬೇರಿಯಂ ನೈಟ್ರೇಟ್‌ ಎಂಬನಿಷೇಧಿತ ರಾಸಾಯನಿಕವೂ ಸೇರಿದೆ.ಬಳಕೆ ಆಗಿರುವ ರಾಸಾಯನಿಕಗಳು ಯಾವುವು ಎಂಬುದನ್ನು ಪಟಾಕಿಯ ಪೊಟ್ಟಣದಲ್ಲಿ ನಮೂದಿಸಬೇಕು ಎಂಬ ನಿಯಮ ಇದೆ. ಈ ಪಟಾಕಿಯ ಪೊಟ್ಟಣಗಳಲ್ಲಿ ಬೇರಿಯಂ ನೈಟ್ರೇಟ್‌ ಮತ್ತು ಸಲ್ಫರ್‌ ಬಳಸಲಾಗಿದೆ ಎಂದು ಬರೆಯಲಾಗಿದೆ. ಈ ಎಲ್ಲ ಪೊಟ್ಟಣಗಳಲ್ಲಿ ‘ಹಸಿರು ಪಟಾಕಿ’ ಎಂಬ ನೀರಿಯ ಮೊಹರು ಕೂಡ ಇದೆ ಎಂದು ಆವಾಜ್‌ ಫೌಂಡೇಶನ್‌ ಹೇಳಿದೆ. ಈ ಬಗ್ಗೆ ಈ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದು ಕಳವಳವನ್ನೂ ವ್ಯಕ್ತಪಡಿಸಿದೆ.

‘ಅವಧಿಪೂರ್ವ ಸಾವು ಸಂಭವ’

ಡಾ. ಸುಮಾ ಪಿ. ಕುಮಾರ್

‘ಪಟಾಕಿಯ ಹೊಗೆಯು ನೇರವಾಗಿ ಶ್ವಾಸಕೋಶಕ್ಕೆ ಹಾನಿ ಮಾಡಲಿದೆ. ಮಕ್ಕಳಲ್ಲಿ ಶ್ವಾಸಕೋಶದ ಬೆಳವಣಿಗೆ ಕುಂಟಿತವಾಗುವ ಸಾಧ್ಯತೆ ಕೂಡ ಇರುತ್ತದೆ. ಇದರಿಂದ ಅವರು ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತದೆ. ಅಸ್ತಮಾದಂತಹ ಕಾಯಿಲೆ ಎದುರಿಸುತ್ತಿರುವವರಿಗೆ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಲಿದೆ. ಶಬ್ದ ಮತ್ತು ಬಣ್ಣ ಬರಲು ಪಟಾಕಿಗೆ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ.‌ ಹಸಿರು ಪಟಾಕಿಯಲ್ಲಿ ಈ ಪ್ರಮಾಣ ಕಡಿಮೆ ಇರಲಿದೆ. ಆದರೆ, ವಾಯುಮಾಲಿನ್ಯದ ಪ್ರಮಾಣವು ಅಷ್ಟಾಗಿ ಕಡಿಮೆ ಆಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಕ್ಯಾನ್ಸರ್ ಕಾರಕ ಕಣಗಳು ಕೂಡ ಪಟಾಕಿಯ ಹೊಗೆಯಲ್ಲಿ ಇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಹೃದಯದ ಸಮಸ್ಯೆಗಳು ಕೂಡ ಕಾಣಿಸಿಕೊಂಡು, ಹೃದಯಾಘಾತವಾಗಬಹುದು. ಈ ಹೊಗೆಯ ಸೇವನೆಯಿಂದ ಅವಧಿಪೂರ್ವ ಸಾವುಗಳು ಸಂಭವಿಸುವ ಸಾಧ್ಯತೆ ಇರುತ್ತದೆ’.

–ಡಾ. ಸುಮಾ ಪಿ. ಕುಮಾರ್, ಎಕ್ಸೆಲ್ ಕೇರ್ ಆಸ್ಪತ್ರೆಯ ಶ್ವಾಸಕೋಶ ತಜ್ಞೆ

‘ಕೋವಿಡ್ ಹರಡುವಿಕೆ ಹೆಚ್ಚಳ’

ಡಾ. ಸಚಿನ್ ಡಿ

‘ಪಟಾಕಿಯಿಂದ ಹಲವು ಅಡ್ಡ ಪರಿಣಾಮಗಳು ಉಂಟಾಗಲಿವೆ. ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಪಟಾಕಿಯ ಹೊಗೆ ಅಪಾಯ. ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಸಮಸ್ಯೆ ಉಲ್ಭಣಿಸುವ ಸಾಧ್ಯತೆಯಿರುತ್ತದೆ. ಕೋವಿಡ್‌ ಸಂದರ್ಭದಲ್ಲಿ ಪಟಾಕಿಯನ್ನು ಬಳಸದಿರುವುದು ಉತ್ತಮ. ಪಟಾಕಿ ಹೊಡೆಯುವುದರಿಂದ ಉತ್ಪತ್ತಿಯಾಗುವ ಪಿಎಂ 2.5 ಕಣಗಳು ಗಾಳಿಯಲ್ಲಿ ಹೆಚ್ಚಿನ ಅವಧಿ ಇರಲಿವೆ. ಇದರಿಂದ ವೈರಾಣುಗಳು ಕೂಡ ಗಾಳಿಯಲ್ಲಿ ಹೆಚ್ಚಿನ ಸಮಯ ಇರುತ್ತವೆ. ಪರಿಣಾಮ ಕೋವಿಡ್ ಹರಡುವಿಕೆ ಜಾಸ್ತಿಯಾಗಲಿದೆ. ವಾಯುಮಾಲಿನ್ಯದಿಂದ ಕೋವಿಡ್‌ ಮರಣ ಪ್ರಕರಣಗಳು ಎರಡು ಪಟ್ಟು ಜಾಸ್ತಿಯಾಗಲಿವೆ ಎನ್ನುವುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿದೆ. ಹಸಿರು ಪಟಾಕಿಯಿಂದ ವಾಯುಮಾಲಿನ್ಯದ ಪ್ರಮಾಣ ಶೇ 30ರಷ್ಟು ಕಡಿಮೆ ಆಗಲಿದೆ. ಆದರೆ, ಆರೋಗ್ಯದ ಮೇಲೆ ಆಗುವ ನಕಾರಾತ್ಮಕ ಪರಿಣಾಮಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ’.

–ಡಾ. ಸಚಿನ್ ಡಿ, ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ತಜ್ಞ

‘ಆವಾಜ್‌’ ವರದಿಯಲ್ಲಿ ಏನಿದೆ?

‘ನೀರಿ’ಯ ಹಸಿರು ಪಟಾಕಿ ಚಿಹ್ನೆಯನ್ನು ಹೊಂದಿರುವ ಹಲವು ಪಟಾಕಿಗಳಲ್ಲಿ ನಿಷೇಧಿತ ರಾಸಾಯನಿಕಗಳನ್ನು ಬಳಸಿರುವುದನ್ನು ‘ಆವಾಜ್ ಫೌಂಡೇಶನ್‌’ ಸ್ವಯಂಸೇವಾ ಸಂಸ್ಥೆ ಪತ್ತೆ ಮಾಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕಂಪನಿಗಳ ಪಟಾಕಿ ಗಳನ್ನು ಖರೀದಿಸಿ, ಅವು ಗಳಲ್ಲಿ ಇರುವ ರಾಸಾಯನಿಕಗಳು ಯಾವುವು ಎಂಬುದನ್ನು ಪರಿಶೀಲಿಸಿ ದಾಗ ಇದು ಪತ್ತೆಯಾಗಿದೆ. ಇಂತಹ ಪಟಾಕಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ‘ಆವಾಜ್‌’ ಬಿಡುಗಡೆ ಮಾಡಿದೆ.

ಪಟಾಕಿಗಳಲ್ಲಿ ಯಾವ ರಾಸಾಯನಿಕಗಳನ್ನು ಬಳಸಲಾಗಿದೆ ಎಂಬು ದನ್ನು ಅವುಗಳ ಬಾಕ್ಸ್‌ಗಳ ಮೇಲೆ ಮುದ್ರಿಸಿಲ್ಲ. ಕೆಲವು ಪಟಾಕಿಗಳಲ್ಲಿ ಬಳಸಿರುವ ರಾಸಾಯನಿಕಗಳು ಒಂದಾದರೆ, ಬಾಕ್ಸ್‌ ಮೇಲೆ ಘೋಷಿಸಿರುವ ರಾಸಾಯನಿಕಗಳು ಬೇರೆಯಾಗಿದೆ. ಹಲವು ಪಟಾಕಿಗಳಲ್ಲಿ ಹಲವಾರು ರಾಸಾಯನಿಕ ವಸ್ತುಗಳನ್ನು ಬಳಸಲಾಗಿದೆ. ಆದರೆ, ಬಾಕ್ಸ್‌ನ ಮೇಲೆ ಒಂದು ಅಥವಾ ಎರಡು ರಾಸಾಯನಿಕಗಳು ಹೆಸರನ್ನಷ್ಟೇ ಘೋಷಿಸಲಾಗಿದೆ. ಕೆಲವು ಕಂಪನಿಯ ಪಟಾಕಿ ಬಾಕ್ಸ್‌ಗಳ ಮೇಲೆ, ಪಟಾಕಿಗಳಲ್ಲಿ ಬಳಕೆಯಾಗಿರುವ ರಾಸಾಯನಿಕಗಳು ಮಾಹಿತಿಯನ್ನು ಘೋಷಿಸಿಯೇ ಇಲ್ಲ.

ಹಸಿರು ಪಟಾಕಿಯೆಂದರೆ...

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಹೊಗೆ ಉಗುಳುವ ಮತ್ತು ಕಡಿಮೆ ಪ್ರಮಾಣದ ಮಾಲಿನ್ಯಕಾರಕ ಕಣಗಳನ್ನು ಹೊರಹಾಕುವ ಪಟಾಕಿಗಳನ್ನು ಹಸಿರು ಪಟಾಕಿಗಳು ಎನ್ನಲಾಗುತ್ತದೆ. ಮಾಲಿನ್ಯ ಮತ್ತು ಹೊಗೆಯು ಎಷ್ಟು ಪ್ರಮಾಣದಲ್ಲಿ ಕಡಿಮೆ ಇರಬೇಕು ಎಂಬುದನ್ನು ‘ನೀರಿ’ ಸ್ಪಷ್ಟಪಡಿಸಿದೆ

* ಪಟಾಕಿಗಳ ಹೊರಕವಚದ ಗಾತ್ರ ಕಡಿಮೆ ಇರಬೇಕು. ಬೂದಿಯ ಬಳಕೆ ಕಡಿಮೆ ಇರಬೇಕು. ರಾಸಾಯನಿಕ ಗಳನ್ನು ಮೂಲ ರೂಪದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬಳಸಬಾರದು

* ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ, ಹಸಿರು ಪಟಾಕಿಗಳು ಶೇ 30ರಷ್ಟು ಕಡಿಮೆ ಮಾಲಿನ್ಯಕಾರಕ ಕಣಗಳನ್ನು ಹೊರಸೂಸಬೇಕು

ಬೇರಿಯಂ ಸಂಪರ್ಕದ ಅಪಾಯ

ಬೇರಿಯಂ ನೈಟ್ರೇಟ್‌ ಸಂಪರ್ಕಕ್ಕೆ ಬಂದರೆ ವಾಕರಿಕೆ, ವಾಂತಿಯಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅತಿಸಾರವೂ ಆಗುತ್ತದೆ. ಬೇರಿಯಂ ನೈಟ್ರೇಟ್‌ನ ಸಂಪರ್ಕ ಅತಿಯಾದರೆ ಅದರಿಂದ ಹೃದಯ ಬಡಿತದಲ್ಲಿ ಏರುಪೇರಾಗುತ್ತದೆ. ಮಾಂಸಖಂಡಗಳು ದುರ್ಬಲವಾಗುತ್ತವೆ. ಪಾರ್ಶ್ವವಾಯು ಆಗುವ ಸಾಧ್ಯತೆ ಇರುತ್ತದೆ. ಅಪರೂಪದ ಪ್ರಕರಣಗಳಲ್ಲಿ ಸಾವು ಸಂಭವಿಸುವ ಅಪಾಯವೂ ಇದೆ.

ಬೇರಿಯಂನ ಸಂಪರ್ಕಕ್ಕೆ ಬಂದರೆ ಹೃದಯ ಬಡಿತದಲ್ಲಿ ಏರುಪೇರು, ಮೂತ್ರಪಿಂಡ ಮತ್ತು ಜಠರಕ್ಕೆ ಹಾನಿಯಾಗುವ ಅಪಾಯವಿದೆ. ನರಮಂಡಲ ಮತ್ತು ಮಿದುಳಿನಲ್ಲಿ ಊತ ಉಂಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT