ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯ | ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ‘ಕೈ’–‘ಕಮಲ’ ನೇರ ಹಣಾಹಣಿ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ
Last Updated 16 ಅಕ್ಟೋಬರ್ 2022, 23:00 IST
ಅಕ್ಷರ ಗಾತ್ರ

ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಚುನಾವಣಾ ಕಣಕ್ಕೆ ಇಳಿದು ಹಲವು ತಿಂಗಳೇ ಕಳೆದಿವೆ. ಎಎಪಿ ಸಹ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಪಂಜಾಬ್‌ನಲ್ಲಿ ಅಚ್ಚರಿ ಮೂಡಿಸಿದ್ದ ಎಎಪಿ, ಇಲ್ಲಿಯೂ ಅದೇ ಮಾಂತ್ರಿಕತೆ ತೋರಲಿದೆ ಎಂದು ಆ ‍ಪಕ್ಷದ ಮುಖಂಡರು ನಿರೀಕ್ಷಿಸುತ್ತಿದ್ದಾರೆ. ಆದರೆ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಮಾತ್ರ ಎನ್ನುತ್ತವೆ ಸಮೀಕ್ಷೆಗಳು...

ಮೋದಿಯನ್ನೇ ನೆಚ್ಚಿಕೊಂಡಿರುವ ಬಿಜೆಪಿ

ಹಿಮಾಚಲ ಪ್ರದೇಶದಲ್ಲಿ 1985ರಿಂದಲೂ ಒಂದು ಅವಧಿಗೆ ಕಾಂಗ್ರೆಸ್‌, ಮತ್ತೊಂದು ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿವೆ. ಪ್ರತಿ ಚುನಾವಣೆಯಲ್ಲೂ ವಿರೋಧ ಪಕ್ಷ ಅಧಿಕಾರಕ್ಕೆ ಬರುತ್ತಿದೆ. ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿಯಲಿದ್ದೇವೆ. ರಾಜ್ಯದಲ್ಲಿ ಬಿಜೆಪಿಯು ಸತತ ಎರಡನೇ ಬಾರಿಗೆ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪದೇ ಇರುವುದು, ಒಂದು ಹುದ್ದೆ–ಒಂದು ಪಿಂಚಣಿ ಯೋಜನೆ ಅರ್ಹರಿಗೆ ದೊರೆಯದೇ ಇರುವುದು ಮತ್ತು ಭ್ರಷ್ಟಾಚಾರದ ಆರೋಪಗಳು ಸರ್ಕಾರದ ಕುರಿತು ಜನರ ಅಸಮಾಧಾನವನ್ನು ಹೆಚ್ಚಿಸಿವೆ ಎನ್ನಲಾಗುತ್ತಿದೆ. ಸರ್ಕಾರದ ಮೇಲಿನ ಈ ಅಸಮಾಧಾನವನ್ನೇ ಕಾಂಗ್ರೆಸ್‌ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದೆ. ಆದರೆ, ಈ ಬಾರಿಯೂ ತಾವೇ ಸರ್ಕಾರ ರಚಿಸುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ರಾಜ್ಯ ಬಿಜೆಪಿ ಇದೆ. ರಾಜ್ಯ ಬಿಜೆಪಿಯು ಈಗಾಗಲೇ ಮಾಡಹೊರಟಿರುವ ಹೊಸ ಜಾತಿ ಸಮೀಕರಣವೂ ಈ ಆತ್ಮವಿಶ್ವಾಸಕ್ಕೆಕಾರಣವಾಗಿದೆ.

2011ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರ ಪ್ರಮಾಣ ಶೇ 27ರಷ್ಟಿದೆ.ಪರಿಶಿಷ್ಟ ಜಾತಿಯ ಜನರು ಬಿಜೆಪಿಯ ಮೇಲೆ ಅಸಮಾಧಾನಗೊಂಡಿದ್ದಾರೆ ಎಂದು ಹಲವು ಸಮೀಕ್ಷಾ ವರದಿಗಳು ಹೇಳಿವೆ. ಈ ಜನರ ಅಸಮಾಧಾನವನ್ನು ಹೋಗಲಾಡಿಸಿದರೆ, ಬಿಜೆಪಿಗೆ ನಿರೀಕ್ಷಿತ ಜಯ ದೊರೆಯಲಿದೆ.ರಾಜ್ಯದ ಮೂರನೇ ಒಂದರಷ್ಟಿರುವ ಈ ವರ್ಗವನ್ನು ಓಲೈಸಿದರೆ, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸುಲಭವಾಗಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ಪರಿಶಿಷ್ಟ ಜಾತಿಯ ಜನರನ್ನು ಓಲೈಸುವ ಉದ್ದೇಶದಿಂದಲೇ, ಈ ಸಮುದಾಯದ ನಾಯಕ ಮತ್ತು ಶಿಕ್ಷಣ ತಜ್ಞ ಡಾ.ಸಿಕಂದರ್‌ ಕುಮಾರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಇದರ ಆಚೆಗೆ ಎಂದಿನಂತೆ, ಪ್ರಧಾನಿ ನರೇಂದ್ರ ಮೋದಿ ಅವರನ್ನೇಪ್ರಚಾರಕ್ಕೆ ಬಿಜೆಪಿ ನೆಚ್ಚಿಕೊಂಡಿದೆ.

ಇದರ ಜತೆಯಲ್ಲಿಯೇ ರಾಜ್ಯ ಬಿಜೆಪಿ ಎಸ್‌ಸಿ– ಎಸ್‌ಟಿ ಮೋರ್ಚಾದ ಸದಸ್ಯರು ಮತ್ತು ಪದಾಧಿಕಾರಿಗಳ ಸಮ್ಮೇಳನವನ್ನು ಈಚೆಗೆ ಬಿಜೆಪಿ ಆಯೋಜಿಸಿದೆ. ಸರ್ಕಾರ ಮತ್ತು ಬಿಜೆಪಿ ಬಗ್ಗೆ ಇರುವ ಅಸಮಾಧಾನವನ್ನು ಹೋಗಲಾಡಿಸಲು, ಈ ಸಮುದಾಯದ ಪ್ರತಿಯೊಬ್ಬ ಮತದಾರರನ್ನೂ ಭೇಟಿ ಮಾಡಿ, ಮಾತನಾಡಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಮ್ಮೇಳನದಲ್ಲಿ ಸೂಚಿಸಲಾಗಿದೆ. ಇದು ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಚಾರ ತಂತ್ರ ಬದಲಿಸಿದ ಕಾಂಗ್ರೆಸ್‌

‘ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಸುಳಿವೇ ಇಲ್ಲ. ಕಾಂಗ್ರೆಸ್‌ಗೆ ನಾಯಕತ್ವವೂ ಇಲ್ಲ. ಎಎಪಿಯನ್ನು ಪರಿಗಣಿಸಲೇಬೇಕಿಲ್ಲ. ಹೀಗಾಗಿ ಈ ಬಾರಿಯದ್ದು ಏಕಪಕ್ಷೀಯ ಚುನಾವಣೆ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ಕೆ.ಕಶ್ಯಪ್‌ ಅವರು ಈಚೆಗೆ ಹೇಳಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್‌ ನಿಷ್ಕ್ರಿಯವಾದಂತೆಯೇ ಕಾಣುತ್ತಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ವರ್ಷಾಂತ್ಯಕ್ಕೆ ನಡೆಯಬೇಕಿರುವ ಚುನಾವಣೆಗೆ ತಯಾರಿಯನ್ನು ಏಪ್ರಿಲ್‌ನಲ್ಲಿಯೇ ಕಾಂಗ್ರೆಸ್‌ ಆರಂಭಿಸಿತ್ತು.

ರಾಜ್ಯದ ಎಲ್ಲಾ ಮತಗಟ್ಟೆಗಳಿಗೆ, ಮತಗಟ್ಟೆ ಮಟ್ಟದ ಮುಖಂಡರನ್ನು ಮೇನಲ್ಲಿಯೇ ನೇಮಕ ಮಾಡಲಾಗಿತ್ತು. ರಾಜ್ಯ ಚುನಾವಣೆಯ ತಂತ್ರ ಮತ್ತು ಪ್ರಚಾರದ ಹೊಣೆಯನ್ನು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿತ್ತು. ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡಿದ್ದರೂ, ಕಾಂಗ್ರೆಸ್‌ನ ಪ್ರಚಾರ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಹೀಗಾಗಿಯೇ ಕಾಂಗ್ರೆಸ್‌ ಏನೂ ಮಾಡುತ್ತಿಲ್ಲ ಎಂದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ, ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ, ಮತದಾರರೊಂದಿಗೆ ಮಾತನಾಡುತ್ತಿದ್ದಾರೆ. ಇನ್ನೊಂದೆಡೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ರಾಜ್ಯದಾದ್ಯಂತ ಮನೆಮನೆ ಭೇಟಿ, ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ನಿಧನರಾದ ನಂತರ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಹುದ್ದೆ ನೀಡಲಾಗಿದೆ. ಸಂಸದೆಯಾಗಿರುವ ಪ್ರತಿಭಾ ಸಿಂಗ್‌ ಸಹ ಬೀದಿಗಳಿದು ಪ್ರಚಾರ ಮಾಡುತ್ತಿದ್ದಾರೆ. ಒಟ್ಟು ಪ್ರಚಾರದಲ್ಲಿ, ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಸರ್ಕಾರದ ನೀತಿಗಳಿಂದ ಜನಜೀವನದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ವಿವರಿಸಲು ಒತ್ತು ನೀಡಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ಜತೆಗೆ ಹಿಂದೂ ಮತದಾರರ ಓಲೈಕೆಗೂ ಕಾಂಗ್ರೆಸ್‌ ಕೈ ಇಟ್ಟಿದೆ. ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿರುವ ಪ್ರಮುಖ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಈಚೆಗೆ ಗೋವುಗಳ ರಕ್ಷಣೆ ಮತ್ತು ಚರ್ಮಗಂಟು ರೋಗದ ಬಗ್ಗೆ ಪಶುಪಾಲಕರಲ್ಲಿ ಅರಿವು ಮೂಡಿಸಲು ‘ಗೋಗೌರವ ಯಾತ್ರೆ’ಯನ್ನು ಕಾಂಗ್ರೆಸ್‌ ಆರಂಭಿಸಿದೆ. ಈ ಯಾತ್ರೆಗೆ ನಿರೀಕ್ಷೆಗಿಂತಲೂ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಇಷ್ಟು ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದ್ದರೂ, ಮಾಧ್ಯಮಗಳಿಂದ ಕಾಂಗ್ರೆಸ್‌ ದೂರವಿದೆ. ಇದು ಅದರ ಪ್ರಚಾರ ತಂತ್ರದ ಭಾಗವೇ ಆಗಿದೆ. ಈ ತಂತ್ರವು ಕಾಂಗ್ರೆಸ್‌ಗೆ ಹೆಚ್ಚು ಮತಗಳನ್ನು ತಂದುಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಪ‍ಕ್ಷದ ಉಪಾಧ್ಯಕ್ಷರಾಗಿದ್ದ ರಾಮ್‌ಲಾಲ್‌ ಠಾಕೂರ್‌ ಅವರು ಅತೃಪ್ತಿಯ ಕಾರಣಕ್ಕೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು, ಹಲವು ಮುಖಂಡರು ಪಕ್ಷ ಬಿಟ್ಟಿರುವುದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ.

ರಾಷ್ಟ್ರೀಯ ಪಕ್ಷವಾಗುವ ಯತ್ನದಲ್ಲಿ ಎಎಪಿ

ರಾಜ್ಯದಲ್ಲಿ ಎಎಪಿ ದೊಡ್ಡಮಟ್ಟದಲ್ಲೇ ಪ್ರಚಾರಕ್ಕೆ ಇಳಿದಿದೆ. ಎಎಪಿ ನಾಯಕರು ಈ ಬಾರಿ ತಾವೇ ಸರ್ಕಾರ ರಚಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಸರ್ಕಾರ ರಚಿಸುವ ಉದ್ದೇಶ ಎಎಪಿಗೆ ಇಲ್ಲ ಎಂದು ವಿಶ್ಲೇಷಿಸಲಾಗಿದೆ. ಈಚೆಗೆ ನಡೆದಿದ್ದ ಪ್ರಚಾರ ರ‍್ಯಾಲಿಯಲ್ಲಿ ಎಎಪಿ ಸಂಚಾಲಕ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ದೆಹಲಿ, ಪಂಜಾಬ್‌ ಮತ್ತು ಗೋವಾದಲ್ಲಿ ಎಎಪಿ ರಾಜ್ಯ ಪಕ್ಷದ ಮಾನ್ಯತೆ ಪಡೆದಿದೆ. ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನಾದರೂ ಗೆದ್ದು, ರಾಜ್ಯ ಪಕ್ಷ ಎಂದು ಮಾನ್ಯತೆ ಪಡೆದೇ ಪಡೆಯುತ್ತೇವೆ. ಇದರಿಂದ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದರು. ಈ ಚುನಾವಣೆಯಲ್ಲಿ ಎಎಪಿಯ ಗುರಿ ಏನು ಎಂಬುದನ್ನು ಕೇಜ್ರಿವಾಲ್‌ ಅವರ ಮಾತುಗಳು ಸ್ಪಷ್ಟಪಡಿಸುತ್ತವೆ. ಆದರೂ, ಈ ಚುನಾವಣೆಯಲ್ಲಿ ಎಎಪಿ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅಚ್ಚರಿಪಡಬೇಕಿಲ್ಲ.

ಉಚಿತ ಕೊಡುಗೆಗಳ ಸುತ್ತ ಗಿರಕಿ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುವ ಮುನ್ನವೇ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ‘ಉಚಿತ ಕೊಡುಗೆ’ಗಳ ಕಸರತ್ತು ಆರಂಭವಾಗಿತ್ತು. ಉಚಿತ ಕೊಡುಗೆಗಳನ್ನು ಪ್ರಕಟಿಸಿ ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದ ಗದ್ದುಗೆಗೆ ಏರಿರುವ ಎಎಪಿ, ಇದನ್ನು ಚುನಾವಣಾ ಮಾದರಿ ಎಂದೇ ಪರಿಗಣಿಸಿದಂತೆ ತೋರುತ್ತದೆ. ಎಎಪಿ ತುಳಿದಿರುವ ಹಾದಿಯಲ್ಲೇ ನಡೆದಂತೆ ಕಾಣುತ್ತಿರುವ ಕಾಂಗ್ರೆಸ್, ತಾನೂ ಉಚಿತ ಕೊಡುಗೆಗಳ ಮೊರೆ ಹೊಕ್ಕಿದೆ. ಆದರೆ, ಉಚಿತ ಕೊಡುಗೆಗಳು ರಾಷ್ಟ್ರ ವಿರೋಧಿ ಎಂಬ ಧೋರಣೆಯಲ್ಲಿರುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಹೀಗಾಗಿ ಈ ಬಾರಿಯ ಚುನಾವಣೆಯು ಉಚಿತ ಕೊಡುಗೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ.

ಹಿಮಾಚಲ ಪ್ರದೇಶದ ಜನರಿಗೆ ಆಮ್ ಆದ್ಮಿ ಪಕ್ಷವು ನಾಲ್ಕು ಪ್ರಮುಖ ಭರವಸೆಗಳನ್ನು ನೀಡಿದೆ. ಪ್ರತೀ ಮನೆಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ವಾಗ್ದಾನ ಪ್ರಮುಖವಾದುದು. ದೆಹಲಿಯಲ್ಲಿ ಯಶಸ್ವಿಯಾಗಿರುವ ಉಚಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ಸೇವೆ ಯೋಜನೆಗಳನ್ನು ಹಿಮಾಚಲ ಪ್ರದೇಶಕ್ಕೂ ವಿಸ್ತರಿಸುವ ಭರವಸೆಯನ್ನು ಪಕ್ಷ ನೀಡಿದೆ. ರಾಜ್ಯದ ಮತದಾರರ ಪೈಕಿ ಶೇ 49ರಷ್ಟು ಮಹಿಳೆಯರೇ ಇದ್ದು, ಅವರ ಮನಗೆಲ್ಲಲು ಮುಂದಾಗಿರುವ ಎಎಪಿ, ಪ್ರತಿ ಮಹಿಳೆಗೆ ₹1,000 ಭತ್ಯೆ ನೀಡುವ ಮಾತು ಕೊಟ್ಟಿದೆ.

ರಾಜ್ಯದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನೀಡಿರುವ 10 ಭರವಸೆಗಳಲ್ಲಿ, ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್, 18 ವರ್ಷ ದಾಟಿದ ಪ್ರತಿ ಮಹಿಳೆಗೆ ₹1,500 ಭತ್ಯೆ ಅಂಶಗಳು ಪ್ರಮುಖ. ಹಳೆಯ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೆ ತರುವುದಾಗಿಯೂ ಪಕ್ಷ ಘೋಷಿಸಿದೆ.

ಚುನಾವಣಾ ಪ್ರಚಾರದಲ್ಲಿ ಎದುರಾಳಿಗಳ ಉಚಿತ ಕೊಡುಗೆಗಳ ಘೋಷಣೆಯನ್ನು ವಿರೋಧಿಸುತ್ತಿರುವ ಬಿಜೆಪಿಯು, ಹಲವು ತಿಂಗಳ ಹಿಂದೆಯೇ ಅಂತಹ ಉಚಿತ ಕೊಡುಗೆಗಳನ್ನು ಜನರಿಗೆ ನೀಡಿಬಿಟ್ಟಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು, ಪ್ರತಿ ಮನೆಗೆ 125 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಿದರು. ಬಸ್‌ ಪ್ರಯಾಣ ದರದಲ್ಲಿ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿ ಪ್ರಕಟಿಸಿದರು. ಬಿಜೆಪಿ ತೆಗೆದುಕೊಂಡ ಉಚಿತ ಕೊಡುಗೆಗಳ ನಿರ್ಧಾರಗಳನ್ನು ಎಎಪಿ ಲೇವಡಿ ಮಾಡಿದೆ. ಎಎಪಿಯ ಉಚಿತ ಕೊಡುಗೆಗಳ ಘೋಷಣೆ ಚುನಾವಣಾ ಮಾದರಿ ಯನ್ನು ಬಿಜೆಪಿ ‘ನಕಲು’ ಮಾಡಿದೆ ಎಂದು ಮನೀಷ್ ಸಿಸೋಡಿಯಾ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗೆ ಉಚಿತ ಕೊಡುಗೆ ನೀಡುವ ಉದ್ದೇಶವಿದ್ದಿದ್ದರೆ, ಅದು ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳನ್ನು ಬಿಟ್ಟು, ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ಮಾತ್ರವೇ ಏಕೆ ಕೊಟ್ಟಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ದಿನಾಂಕ ಘೋಷಣೆ ಮುನ್ನಾದಿನ ರಾಜ್ಯದಲ್ಲಿ ವಂದೇ ಭಾರತ್ ರೈಲು ಉದ್ಘಾಟಿಸಿ, ಹತ್ತಾರು ಯೋಜನೆಗಳಿಗೆ ಅಂದೇ ಚಾಲನೆ ನೀಡಿದರು.

ಹಣ ಎಲ್ಲಿದೆ?:

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ಎಲ್ಲ ಪಕ್ಷಗಳೂ ಉಚಿತ ಘೋಷಣೆಗಳ ಹಿಂದೆ ಬಿದ್ದಿವೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ರಾಜ್ಯ ಬಜೆಟ್ ಗಾತ್ರ ₹51,752 ಕೋಟಿ. ಇದರಲ್ಲಿ ₹12,530 ಕೋಟಿ ಸಾಲವಿದೆ. ಅಂದರೆ ಸರ್ಕಾರ ಈಗಾಗಲೇ ಬಜೆಟ್‌ನ ಶೇ 25ರಷ್ಟು ಹಣದ ಕೊರತೆ ಎದುರಿಸುತ್ತಿದೆ. ಉಚಿತ ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಹಾಗೂ ಭತ್ಯೆ ನೀಡಲು ಮುಂದಾದರೆ, ಸರ್ಕಾರ ಮತ್ತಷ್ಟು ಸಾಲ ಮಾಡಬೇಕಾಗುತ್ತದೆ. ಪ್ರತೀ ತಿಂಗಳು, ಮಹಿಳೆಯರಿಗೆ ಸಾವಿರ ರೂಪಾಯಿ ಭತ್ಯೆ ನೀಡುವುದರಿಂದ ₹3,000 ಕೋಟಿ, ಉಚಿತ ವಿದ್ಯುತ್‌ನಿಂದ ₹400 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ತಜ್ಞರು ಹೇಳಿದ್ದಾರೆ.

ಸಮೀಕ್ಷೆ ಏನು ಹೇಳುತ್ತದೆ?

ಚುನಾವಣೆ ಹೊಸ್ತಿಲಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಮುಂದೆ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂದು ಸಿ–ವೋಟರ್ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ಬಿಜೆಪಿ 38ರಿಂದ 46 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ, 2017ರ ಚುನಾವಣೆಗೆ ಹೋಲಿಸಿದರೆ, ಪಕ್ಷದ ಮತ ಪ್ರಮಾಣವು ಶೇ 48.8ರಿಂದ ಶೇ 46ಕ್ಕೆ ಕುಸಿಯಲಿದೆ.
ಪ್ರತಿಪಕ್ಷ ಕಾಂಗ್ರೆಸ್‌ನ ಮತ ಪ್ರಮಾಣವೂ ಈ ಬಾರಿ ಶೇ 41.7ರಿಂದ ಶೇ 35ಕ್ಕೆ ಕುಸಿಯಲಿದೆ. ಪಕ್ಷವು 20ರಿಂದ 28 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದಿದೆ. ಈ ಎರಡೂ ಪಕ್ಷಗಳು ಕಳೆದುಕೊಳ್ಳುವ ಮತಗಳು ಎಎಪಿಗೆ ಸಿಗಲಿವೆ. ಆಮ್ ಆದ್ಮಿ ಪಕ್ಷವು ಈ ಬಾರಿ ಮೋಡಿ ಮಾಡಲು ಸಾಧ್ಯವಾಗದಿದ್ದರೂ, ಶೇ 6.3ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಪ್ರಯಾಸಪಟ್ಟರೆ ಒಂದು ಕ್ಷೇತ್ರ ಗೆಲ್ಲಬಹುದು ಎಂದು ವರದಿ ನೀಡಿದೆ.

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT