ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಕರ್ನಾಟಕ ಹಾಕಿ ಮಸುಕಾದ ಹೊಳಪು

Last Updated 28 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಆಗಸ್ಟ್‌ 29–ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಜನ್ಮದಿನ. ಅವರ ನೆನಪಿನಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಹಾಕಿ ಇಂಡಿಯಾ ಹಾಗೂ ಹಾಕಿ ಕರ್ನಾಟಕದ ಚುನಾವಣೆಗೂ ಸಿದ್ಧತೆಗಳು ನಡೆದಿವೆ. ಈ ಹೊತ್ತಿನಲ್ಲಿ ಕರ್ನಾಟಕದ ಹಾಕಿ ಕ್ರೀಡೆಯ ಅಂದು, ಇಂದು ಮತ್ತೆ ಮುಂದಿನ ಕುರಿತು...

ಭಾರತದ ಹಾಕಿ ಕ್ರೀಡೆ ಎಂದಾಕ್ಷಣ ಪಂಜಾಬ್, ಹರಿಯಾಣದ ಕ್ರೀಡಾಳುಗಳ ಹೆಸರುಗಳೇ ಮುಂಚೂಣಿಯಲ್ಲಿ ಕಾಣುತ್ತವೆ. ಆದರೆ, ಹಾಕಿಗೆ ಕನ್ನಡಿಗರ ಕಾಣಿಕೆಯೇನೂ ಕಮ್ಮಿಯಲ್ಲ. ಭಾರತದ ಹಾಕಿ ಕಂಡ ಸುವರ್ಣಯುಗದಲ್ಲಿ ಕನ್ನಡಿಗರ ಕಾಣಿಕೆಯೂ ಮಹತ್ವದ್ದು.

1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಆಟಗಾರ ಬಂಡು ಪಾಟೀಲ. ಬೆಳಗಾವಿಯ ಕಂಟೋನ್ಮೆಂಟ್ ಪ್ರದೇಶದಿಂದ ಹೊರಹೊಮ್ಮಿದ ಪ್ರತಿಭಾನ್ವಿತ ಆಟಗಾರ. 1972ರಲ್ಲಿ ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಭಾರತ ತಂಡದಲ್ಲಿದ್ದವರು ಎಂ.ಪಿ. ಗಣೇಶ್. ಕೊಡಗಿನ ಹಾಕಿ ಪರಂಪರೆಯ ಮಹತ್ವದ ಕೊಂಡಿ ಇವರು. ಅವರೊಂದಿಗೆ ಆಗ ಎಂ.ಪಿ. ಗೋವಿಂದ ಕೂಡ ಇದ್ದರು.1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ ಚಿನ್ನ ಗೆದ್ದ ಭಾರತ ತಂಡ ದಲ್ಲಿಯೂ ಕನ್ನಡಿಗ ಎಂ.ಎಂ. ಸೋಮಯ್ಯ ಇದ್ದರು.

ನಂತರದ ನಾಲ್ಕು ದಶಕಗಳ ಕಾಲ ಒಲಿಂಪಿಕ್ಸ್‌ನಲ್ಲಿ ಭಾರತವು ಪದಕ ಬರ ಎದುರಿಸಿದೆ. ಆದರೆ, ಪ್ರತಿಬಾರಿಯೂ ತಂಡದ ಆತ್ಮಬಲವನ್ನು ಹೆಚ್ಚಿಸುವಲ್ಲಿ ಕರ್ನಾಟಕದ ಕೊಡುಗೆ ಇದ್ದೇ ಇದೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಭಾರತ ತಂಡದಲ್ಲಿ ಕೊಡಗಿನ ಎ.ಬಿ. ಸುಬ್ಬಯ್ಯ, ಸಿ. ಪೂಣಚ್ಚ, ಬಾಗಲಕೋಟೆಯ ರವಿ ನಾಯ್ಕರ್ ಹಾಗೂ ಉಡುಪಿ ಜಿಲ್ಲೆಯ ಆಶಿಶ್ ಬಲ್ಲಾಳ ಇದ್ದರು. ಭಾರತವು 2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರಲಿಲ್ಲ. ಆದರೆ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ಎಸ್‌.ವಿ.ಸುನೀಲ್, ವಿ.ಅರ್. ರಘುನಾಥ್, ಭರತ್ ಚೆಟ್ರಿ ಅವರ ಯೋಗದಾನವೇ ಪ್ರಮುಖವಾಗಿತ್ತು. ಅಂದು ಆರಂಭವಾದ ಪುನುರುತ್ಥಾನದ ಫಲ ಹೋದ ವರ್ಷ ಟೋಕಿಯೊದಲ್ಲಿ ಲಭಿಸಿತು. ಭಾರತ ಪುರುಷರ ತಂಡವು ಕಂಚಿನ ಪದಕ ಜಯಿಸಿ ಒಲಿಂಪಿಕ್ಸ್‌ ಪದಕ ಬರವನ್ನು ನೀಗಿಸಿತು. ಇತ್ತೀಚೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಹಾಕಿಯಲ್ಲಿಯೂ ಪದಕ ಸಾಧನೆ ಮಾಡಿತು. ಆದರೆ, ಈ ಸಾಧನೆಯ ಸಾಲಿನಲ್ಲಿ ನಿಂತ ಆಟಗಾರರಲ್ಲಿ ಕನ್ನಡದ ಕಲಿಗಳಿರಲಿಲ್ಲ!

ಹರೀಶ ಮುತಗಾರ (ಎಡ)
ಹರೀಶ ಮುತಗಾರ (ಎಡ)

ಕರ್ನಾಟಕದ ಹಾಕಿಗೆ ಏನಾಯಿತು?: ಕಳೆದ ಐದಾರು ವರ್ಷಗಳಲ್ಲಿ ಜಿಲ್ಲಾವಾರು ಹಾಕಿ ಕ್ರೀಡೆಗಳ ಚಟುವಟಿಕೆಗಳಿಗೆ ಪ್ರಾಮುಖ್ಯ ಸಿಗದಿರುವುದು ರಾಜ್ಯದಲ್ಲಿ ಹಾಕಿ ಕುರಿತ ಉತ್ಸಾಹ ಕುಂಠಿತವಾಗಲು ಪ್ರಮುಖ ಕಾರಣವೆನ್ನಲಾಗಿದೆ.

ಹೋದ ವರ್ಷ ಬೆಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಆಗಿನ ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರಾ ಕೂಡ ಈ ಕುರಿತು ಮಾತನಾಡಿದ್ದರು. ಕರ್ನಾಟಕದ ಹಾಕಿ ಕಣಜ ಕೊಡಗಿನಿಂದ ಹೊಸ ಆಟಗಾರರೇ ಬರುತ್ತಿಲ್ಲ. ಕರ್ನಾಟಕದ ಕಾಣಿಕೆ ಕಡಿಮೆಯಾಗಿದೆ ಎಂದು ಹೇಳಿದ್ದರು.

ಈಚೆಗೆ, ಒಲಿಂಪಿಯನ್ ಆಶಿಶ್ ಬಲ್ಲಾಳ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.

ಬಿ.ಪಿ. ಗೋವಿಂದ
ಬಿ.ಪಿ. ಗೋವಿಂದ

‘ಗದಗ, ಬಳ್ಳಾರಿ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಾಕಿ ಆಟದ ಬೆಳವಣಿಗೆ ಕುಂಠಿತವಾಗಿದೆ. ಜಿಲ್ಲೆ, ಅಂತರ ಜಿಲ್ಲೆ ಹಾಗೂ ರಾಜ್ಯಮಟ್ಟದ ಟೂರ್ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಕೇವಲ ಒಂದು ಜಿಲ್ಲೆಗೆ ಕ್ರೀಡೆ ಸೀಮಿತವಾಗಬಾರದು’ ಎಂದು ಬಲ್ಲಾಳ ಹೇಳಿದ್ದರು.

ಅವರ ಮಾತುಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ. ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಗದುಗಿನ ಸೆಟ್ಲ್‌ಮೆಂಟ್‌ಗಳು ಹಾಕಿ ಕ್ರೀಡೆಗೆ ಹಲವಾರು ಆಟಗಾರರನ್ನು ಕಾಣಿಕೆಯಾಗಿ ನೀಡಿವೆ. ಗದುಗಿನ ಬೇನು ಭಾಟ್, ಎಚ್‌.ವೈ ಸಿದ್ಲಿಂಗ್, ರಾಚಯ್ಯ, ರಾಜು ಬಾಗಡೆ ಅವರು ದೊಡ್ಡಮಟ್ಟದಲ್ಲಿ ಗಮನ ಸೆಳೆದವರು. ಮಾಣಿಕ್ ಭಾಟ್, ಸಿದ್ಧಪ್ಪ ಬಾಲೆ ಹೊಸೂರು, ಎಚ್‌.ಬಿ. ವೀರಾಪುರ, ಜಾಕ್ಸನ್ ಭಾಟ್, ಕೆ.ಆರ್. ಹಬೀಬ್, ಕಾರ್ಲಟನ್ ಗೋಮ್ಸ್‌ ರಾಷ್ಟ್ರಮಟ್ಟದಲ್ಲಿ ಆಡಿ ಗಮನ ಸೆಳೆದಿದ್ದರು. ರಾಜು ಬಾಗಡೆ 90ರ ದಶಕದಲ್ಲಿ ಬೆಂಗಳೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಕೆಲವು ವರ್ಷ ಆಡಿದ್ದರು.

ವಿಪರ್ಯಾಸವೆಂದರೆ, ಇಡೀ ಉತ್ತರ ಕರ್ನಾಟಕದಲ್ಲಿ ಒಂದೂ ಹಾಕಿ ಕ್ರೀಡಾ ಹಾಸ್ಟೆಲ್ ಇಲ್ಲ. ಗದಗಿನಲ್ಲಿ ಮಾತ್ರ ಆಸ್ಟ್ರೋ ಟರ್ಫ್‌ ಮೈದಾನ ನಿರ್ಮಾಣವಾಗಿದೆ. ಬಳ್ಳಾರಿಯಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿಗಳಲ್ಲಿ ಇಲ್ಲ ಎಂಬುದು ಇಲ್ಲಿಯ ಹಾಕಿ ಆಟಗಾರರ ಕೊರಗು. ಇನ್ನು ಕರಾವಳಿ ಭಾಗದಲ್ಲಿಯೂ ಇದೇ ಕಥೆ. ಅಲ್ಲಿಯೂ ಸೂಕ್ತ ಸೌಲಭ್ಯಗಳಿಲ್ಲ. ಜೊತೆಗೆ ಟೂರ್ನಿಗಳ ಕೊರತೆಯೂ ಇದೆ.

ಮೇಜರ್ ಧ್ಯಾನಚಂದ್
ಮೇಜರ್ ಧ್ಯಾನಚಂದ್

ಭರವಸೆಯ ಬೆಳಕು:ಈಗಲೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಾಕಿ ಪ್ರತಿಭೆಗಳಿವೆ. ಕೆಲವು ವರ್ಷಗಳ ಹಿಂದಷ್ಟೇ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿದ್ದ ಹರೀಶ ಮುತಗಾರ ಗದಗಿನವರು. ಈಗ ಅವರು ರಾಜ್ಯ ತಂಡ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪ್ರಮುಖ ಆಟಗಾರ. ಭಾರತ ತಂಡದಲ್ಲಿ ಸ್ಥಾನ ಪಡೆಯುವ ಛಲದಲ್ಲಿದ್ದಾರೆ.

ಬಿಸಿಲುನಾಡು ಬಳ್ಳಾರಿಯಲ್ಲಿ ಬೆಸ್ಟ್ ಶಾಲೆಯು ಸದ್ದಿಲ್ಲದೇ ಹಾಕಿ ಕ್ರೀಡೆಗೆ ಕಾಣಿಕೆ ನೀಡುತ್ತಿದೆ. ಹರೀಶ ಪ್ರತಿಭೆಗೆ ಸಾಣೆ ಹಿಡಿದಿದ್ದು ಕೂಡ ಇದೇ ಶಾಲೆ. ಇಲ್ಲಿಯ ಹಾಕಿ ತಂಡವು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಆಟವಾಡುತ್ತಿದೆ. ಆದರೆ, ಉನ್ನತ ಮಟ್ಟದ ತರಬೇತಿ ಪಡೆಯಲು ಈ ಭಾಗದಲ್ಲಿ ಅಕಾಡೆಮಿಗಳು, ವಸತಿನಿಲಯಗಳು ಇಲ್ಲ. ಸರ್ಕಾರಗಳಿಗೆ ಮಾಡಿದ ಮನವಿಗಳಿಗೆ ಸ್ಪಂದನೆ ಲಭಿಸಿಲ್ಲ.

**

‘ಹಾಸ್ಟೆಲ್‌ ಆರಂಭಿಸಿ’
ಉತ್ತರ ಕರ್ನಾಟಕ ಭಾಗದ ಗ್ರಾಮಗಳಲ್ಲಿ ಬಹಳಷ್ಟು ಪ್ರತಿಭೆಗಳಿವೆ. ನಾವು ರೂರಲ್ ಸ್ಪೋರ್ಟ್ಸ್ ಟ್ರೇನಿಂಗ್ ಸೆಂಟರ್‌ ರಚಿಸಿಕೊಂಡಿದ್ದೇವೆ. ಆ ಮೂಲಕ ಅಣ್ಣಿಗೇರಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕ್ಯಾಂಪ್ ಮಾಡುತ್ತಿದ್ದೇವೆ. 100–150 ಮಕ್ಕಳು ಆಡಲು ಬರುತ್ತಿದ್ದಾರೆ. ಅವರಿಗೆ ಉಚಿತ ತರಬೇತಿ, ಸಲಕರಣೆಗಳನ್ನು ಒದಗಿಸುತ್ತಿದ್ದೇವೆ. ರಾಜ್ಯ ಹಾಕಿ ಸಂಸ್ಥೆಯ ಆಡಳಿತದಲ್ಲಿ ಎಲ್ಲ ಭಾಗದವರಿಗೂ ಪ್ರಾತಿನಿಧ್ಯ ಸಿಗಬೇಕು. ಹಾಕಿ ಅಕಾಡೆಮಿ ಹಾಗೂ ವಸತಿನಿಲಯಗಳನ್ನು ಈ ಭಾಗದಲ್ಲಿಯೂ ಸ್ಥಾಪಿಸಬೇಕು. ಸೌಲಭ್ಯಗಳನ್ನು ನೀಡಿದರೆ ಮತ್ತೆ ರಾಜ್ಯದ ಹಾಕಿ ಬಲಿಷ್ಠವಾಗಲಿದೆ. ಅದಕ್ಕಾಗಿ ಹಾಕಿ ಕರ್ನಾಟಕದ ಆಡಳಿತದಲ್ಲಿ ಪಾರದರ್ಶಕತೆ ತರಬೇಕು ಹಾಗೂ ಎಲ್ಲ ಜಿಲ್ಲೆಗಳಿಗೂ ಸಮಾನ ಪ್ರಾತಿನಿಧ್ಯ ಸಿಗುವಂತಾಗಬೇಕು.
–ಪುಲಿಕೇಶಿ ಶೆಟ್ಟೆಪ್ಪನವರ, ಹಾಕಿ ಕೋಚ್

**

ಬೆಳವಣಿಗೆ ನಿರಂತರ
ರಾಜ್ಯದಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದೆ. ಕೋವಿಡ್‌ನಿಂದಾಗಿ ಎರಡು ವರ್ಷ ಟೂರ್ನಿಗಳು ನಡೆದಿರಲಿಲ್ಲ. ಎಲ್ಲ ಟೂರ್ನಿಗಳನ್ನು ಈಗ ಆಯೋಜಿಸಲಾಗುತ್ತಿದೆ. ಹಾಕಿ ಚಟುವಟಿಕೆ ಹಳೆಯ ಟ್ರ್ಯಾಕ್‌ಗೆ ಮರಳಿದೆ.

ಅಂತರ ಜಿಲ್ಲಾ, ಜೂನಿಯರ್‌ ಟೂರ್ನಿ ಮತ್ತು ಹಾಕಿ ಕರ್ನಾಟಕ ಲೀಗ್‌ ನಡೆಸುತ್ತಿದ್ದೇವೆ. ಶಾಲಾ ಮಟ್ಟದ ಟೂರ್ನಿಗಳ ಆಯೋಜನೆಗೂ ಒತ್ತು ನೀಡಲಾಗುತ್ತದೆ.

ರಾಷ್ಟ್ರೀಯ ತಂಡದಲ್ಲಿ ಈಗ ಕರ್ನಾಟಕದ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ ನಿಜ. ರಾಜ್ಯದಲ್ಲಿ ಹಾಕಿ ಬೆಳವಣಿಗೆ ನಿಂತಿದೆ ಎಂಬುದು ಅದರ ಅರ್ಥವಲ್ಲ. ಇಲ್ಲಿನ 6–7 ಆಟಗಾರರು ರಾಷ್ಟ್ರೀಯ ತಂಡದ ತರಬೇತಿ ಶಿಬಿರದಲ್ಲಿ ಇದ್ದಾರೆ. ಅವರ ಪ್ರದರ್ಶನವನ್ನು ನಾವು ಗಮನಿಸುತ್ತಿದ್ದೇವೆ. ರಾಷ್ಟ್ರೀಯ ಜೂನಿಯರ್‌ ತಂಡದ ಶಿಬಿರದಲ್ಲಿ ರಾಜ್ಯದ ನಾಲ್ವರು ಇದ್ದಾರೆ. ಅವರು ನಮ್ಮ ಭವಿಷ್ಯದ ಆಟಗಾರರು ಆಗಿರುವುದರಿಂದ ಹಾಕಿ ಕರ್ನಾಟಕ ಎಲ್ಲ ನೆರವು ನೀಡುತ್ತಿದೆ.

ಈಗಿನ ರಾಷ್ಟ್ರೀಯ ತಂಡದಲ್ಲಿ ನಿರಂತರ 6–7 ವರ್ಷಗಳಿಂದ ಆಡುತ್ತಿರುವವರೇ ಇದ್ದಾರೆ. ನಿಕಿನ್‌ ತಿಮ್ಮಯ್ಯ ಸೇರಿದಂತೆ ಕರ್ನಾಟಕದ 2–3 ಆಟಗಾರರು ಕೋರ್‌ ಗ್ರೂಪ್‌ನಲ್ಲಿ ಇದ್ದರೂ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಹೆಚ್ಚಿನ ಶ್ರಮ ಹಾಕಬೇಕು. ನಾವು ಅವರಿಗೆ ಬೆಂಬಲ ಕೊಡುತ್ತೇವೆ. ಅವರಾಗಿಯೇ ಉತ್ತಮವಾಗಿ ಆಡಿ ತಂಡದಲ್ಲಿ ಸ್ಥಾನ ಪಡೆಯಬೇಕಿದೆ.

ಮುಂದಿನ ತಿಂಗಳ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದ ಹಾಕಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿ. ಅದಕ್ಕಾಗಿ ರಾಜ್ಯ ತಂಡಕ್ಕೆ ಒಂದೂವರೆ ತಿಂಗಳ ತರಬೇತಿ ಆಯೋಜಿಸಲಾಗಿದೆ.

ಹೊಸ ಪ್ರತಿಭೆಗಳ ಶೋಧಕ್ಕೂ ವಿಶೇಷ ಗಮನಹರಿಸಲಾಗಿದೆ. ಅಂತರ ಜಿಲ್ಲಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆಯಿದೆ. ಭಾರತ ತಂಡಕ್ಕೆ ಆಡಿದ್ದ ವಿನಯ್‌, ರಘುನಾಥ್‌ ಅವರಿಂದ ತರಬೇತಿ ನೀಡಲಾಗುತ್ತಿದೆ. ಇದರಿಂದ ಯುವ ಪ್ರತಿಭೆಗಳ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ.

ಉತ್ತರ ಕರ್ನಾಟಕ ಭಾಗದಿಂದ ಹೆಚ್ಚೆಚ್ಚು ಮಕ್ಕಳು ಹಾಕಿ ಕ್ರೀಡೆಯತ್ತ ಒಲವು ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ರಾಜ್ಯ ಜೂನಿಯರ್‌, ಸೀನಿಯರ್‌ ತಂಡಗಳಲ್ಲಿ 10–12 ಆಟಗಾರರು ಉತ್ತರ ಕರ್ನಾಟಕದವರೇ ಇದ್ದಾರೆ. ಅಲ್ಲಿನ ಮಕ್ಕಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಆ ಭಾಗದಲ್ಲಿ ಒಂದು ಟರ್ಫ್‌ ಮೈದಾನ ಆಗಬೇಕು. ಅದಕ್ಕಾಗಿ ಕ್ರೀಡಾ ಇಲಾಖೆಗೆ ಶಿಫಾರಸು ಮಾಡಿದ್ದೇವೆ.

ಕಳೆದ 10 ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ನಾವು ಐದರಲ್ಲಿ ಪದಕ ಗೆದ್ದಿದ್ದೇವೆ. ಖೇಲೊ ಇಂಡಿಯಾ ಕ್ರೀಡಾಕೂಟದಲ್ಲೂ ಯಶಸ್ಸು ಲಭಿಸಿದೆ. ಇವೆಲ್ಲವೂ ರಾಜ್ಯದ ಹಾಕಿ ಕ್ರೀಡೆಯ ಮಟ್ಟಿಗೆ ಸಕಾರಾತ್ಮಕ ಬೆಳವಣಿಗೆಗಳು.

- ಎ.ಬಿ.ಸುಬ್ಬಯ್ಯ, ಹಾಕಿ ಕರ್ನಾಟಕ ಮಹಾ ಪ್ರಧಾನ ಕಾರ್ಯದರ್ಶಿ

**

ನಿರೂಪಣೆ: ಮಹಮ್ಮದ್‌ ನೂಮಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT