ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ವಿರಾಟ್ ಕೊಹ್ಲಿ ಪಟ್ಟಕ್ಕೆ ಸಂಚಕಾರ?

ಅವಕಾಶ ಕೈಚೆಲ್ಲಿದ ಭಾರತ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಸೋಲು
Last Updated 24 ಜೂನ್ 2021, 19:45 IST
ಅಕ್ಷರ ಗಾತ್ರ

ಆಡಿದ ಹದಿನಾಲ್ಕು ಟೆಸ್ಟ್‌ಗಳಲ್ಲಿಯೇ ಒಂದು ಸಾವಿರಕ್ಕೂ ಹೆಚ್ಚು ರನ್ ಪೇರಿಸಿದ ಮಯಂಕ್ ಅಗರವಾಲ್, 36 ಟೆಸ್ಟ್‌ಗಳಲ್ಲಿ ಎರಡು ಸಾವಿರಕ್ಕಿಂತ ಜಾಸ್ತಿ ರನ್‌ಗಳನ್ನು ಸಿಡಿಸಿದ ಕೆ.ಎಲ್. ರಾಹುಲ್ ಮತ್ತು ಗಾಯಗೊಂಡರೂ ಆರು ತಿಂಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ದಿಟ್ಟೆದೆಯಿಂದ ಹೋರಾಡಿ ತಂಡದ ಸೋಲು ತಪ್ಪಿಸಿದ್ದ ಹನುಮವಿಹಾರಿ...

ಈ ಮೂವರು ಪ್ರತಿಭಾವಂತ ಆಟಗಾರರು ಬುಧವಾರ ಸೌತಾಂಪ್ಟನ್‌ನ ಏಜಿಸ್ ಬೌಲ್ ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ ಮುಖ ಬಾಡಿಸಿಕೊಂಡು ಕುಳಿತಿದ್ದರು. ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತ ತಂಡದ ಸೋಲಿಗೆ ಮೂಕ ಪ್ರೇಕ್ಷಕರಾಗಿದ್ದರು.

ಮಳೆಯಿಂದಾಗಿ ಎರಡು ದಿನಗಳ ಆಟ ನಡೆಯದ ಟೆಸ್ಟ್‌ನಲ್ಲಿ ಉಭಯ ತಂಡಗಳಿಗೂ ಗೆಲುವಿನ ಸಮಾನ ಅವಕಾಶ ಇದ್ದಿದ್ದಂತೂ ದಿಟ. ಕೊನೆಯ ದಿನ ಭಾರತಕ್ಕೆ ಸೋಲು ತಪ್ಪಿಸಿಕೊಂಡು ಡ್ರಾ ಮಾಡಿಕೊಳ್ಳುವ ಅವಕಾಶ ಇತ್ತು. ಆದರೆ, ಅತಿಯಾದ ರಕ್ಷಣಾತ್ಮಕ ಬ್ಯಾಟಿಂಗ್ ಮಾಡಲು ಹೋಗಿ ಎಡವಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟ್ರೋಲ್‌ಗಳ ಮಹಾಪೂರವೇ ಉಕ್ಕಿ ಹರಿಯುತ್ತಿದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬ್ರ್ಯಾಂಡ್ ಮೌಲ್ಯವುಳ್ಳ ಕ್ರಿಕೆಟಿಗನೆಂಬ ಖ್ಯಾತಿಯ ಕೊಹ್ಲಿ, ಹಿಂದೆಂದೂ ಕಾಣದಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ.

‘ಕ್ರೀಡಾಂಗಣದಲ್ಲಿ ನೃತ್ಯದ ಹೆಜ್ಜೆಗಳನ್ನು ಹಾಕುವುದರಿಂದ ಮತ್ತು ಕಿಡಿನುಡಿಗಳನ್ನು ಕೂಗುವುದರಿಂದ ಐಸಿಸಿ ಟ್ರೋಫಿ ಜಯಿಸುವುದು ಸಾಧ್ಯವಿಲ್ಲ’ ಎಂದು ಮಹೇಂದ್ರಸಿಂಗ್ ಧೋನಿಯ ಐಸಿಸಿ ಟ್ರೋಫಿ ವಿಜಯಗಳು ಮತ್ತು ಕೊಹ್ಲಿಯ ಹಾವಭಾವ, ನೃತ್ಯದ ಝಲಕ್‌ಗಳ ಚಿತ್ರಗಳನ್ನು ಹಾಕಲಾಗಿದೆ. ಇದಷ್ಟೇ ಅಲ್ಲ. ಫೈನಲ್ ಸೋಲಿಗೆ ವಿರಾಟ್ ಮತ್ತು ರವಿಶಾಸ್ತ್ರಿಯೇ ಹೊಣೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ತಂಡವು ಸೋತಿತ್ತು. ಆಗ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ಕೊಹ್ಲಿ ನಡುವಿನ ವಿರಸವೇ ದೊಡ್ಡ ಸುದ್ದಿಯಾಗಿತ್ತು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪರಾಭವಗೊಂಡಾಗ ಧೋನಿ ರನೌಟ್ ಹೆಚ್ಚು ಸದ್ದು ಮಾಡಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಇದುವರೆಗೂ ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿಲ್ಲ. ಆಗೆಲ್ಲ ಕೇಳಿಬರದಷ್ಟು ಟೀಕೆಗಳು ಈ ಸಲ ಸಿಡಿದಿವೆ. ಅದಕ್ಕೆ ಕಾರಣಗಳೂ ಇವೆ.

ಅಪಕ್ವ ನಾಯಕತ್ವ

ಭಾರತ ತಂಡದ ನಾಯಕತ್ವ ಬದಲಾವಣೆಯ ಕುರಿತ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ.

ಮೈದಾನದಲ್ಲಿ ದೊಡ್ಡ ಜಯ ಸಾಧನೆಗೆ ಸ್ಥಿತಪ್ರಜ್ಞೆ, ತಾಳ್ಮೆ, ಶಾಂತಚಿತ್ತತೆ ಮತ್ತು ತೀಕ್ಷ್ಣವಾದ ಬುದ್ಧಿಮತ್ತೆ ಇರಬೇಕು. ಧೋನಿ, ಕೇನ್ ವಿಲಿಯಮ್ಸನ್ ಇದಕ್ಕೆ ಉತ್ತಮ ಉದಾಹರಣೆ ಎಂಬ ಟ್ವೀಟ್‌ಗಳೂ ಓಡಾಡುತ್ತಿವೆ. ಸಂದರ್ಭಕ್ಕೆ ತಕ್ಕಂತೆ ಬೌಲರ್‌ಗಳನ್ನು ನಿಯೋಜಿಸುವುದು, ಫೀಲ್ಡಿಂಗ್ ಪ್ಲೇಸ್‌ಮೆಂಟ್ ಮಾಡುವುದು ಒಂದು ಕಲೆ.ಡಿಆರ್‌ಎಸ್ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿಯೂ ಕೊಹ್ಲಿ ಪರಿಣತಿ ಸಾಧಿಸಿಲ್ಲವೆನ್ನುವುದೂ ಸುಳ್ಳಲ್ಲ.

ಬುಧವಾರದ ಆಟದಲ್ಲಿ ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ(ಯುಡಿಆರ್‌ಎಸ್) ಪರಿಶೀಲನೆಯಲ್ಲಿ ನ್ಯೂಜಿಲೆಂಡ್ ಆಟಗಾರ ನಾಟೌಟ್ ಆಗಿರುವುದು ಸ್ಪಷ್ಟವಾದಾಗಲೂ ಕೊಹ್ಲಿ ಸಿಡಿಮಿಡಿಗೊಂಡಿದ್ದು ಟಿವಿಯಲ್ಲಿ ಕಂಡಿತ್ತು. ಮೂರನೇ ಅಂಪೈರ್ ತೀರ್ಪು ಸರಿ ಇತ್ತು!

ಈ ಎಲ್ಲ ಕಾರಣಗಳಿಂದಾಗಿ ಈಗ ನಾಯಕತ್ವದ ಬದಲಾವಣೆಯ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕನ್ನಡಿಗ ಕೆ.ಎಲ್. ರಾಹುಲ್, ಆಸ್ಟ್ರೇಲಿಯಾದಲ್ಲಿ ಸರಣಿ ಜಯದ ರೂವಾರಿ ಅಜಿಂಕ್ಯ ರಹಾನೆ ಮತ್ತು ಐಪಿಎಲ್‌ನ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರ ಹೆಸರುಗಳು ಕೇಳಿಬರುತ್ತಿವೆ. ಈ ಮೂವರಲ್ಲೂ ಒಂದು ಸಾಮ್ಯತೆ ಇದೆ. ಶಾಂತಚಿತ್ತದ ನಡವಳಿಕೆ ಇವರಿಗೆ ಸಿದ್ಧಿಸಿದೆ. ‌

ನಾಯಕನಾದವನು ಒಂದೊಮ್ಮೆ ಬ್ಯಾಟಿಂಗ್‌ನಲ್ಲಿ ದೊಡ್ಡ ಸಾಧನೆ ಮಾಡದಿದ್ದರೂ ಪಂದ್ಯದ ಫಲಿತಾಂಶ, ತತ್‌ಕ್ಷಣದ ನಿರ್ಣಯಗಳನ್ನು ತೆಗೆದುಕೊಳ್ಳುವ ಚಾಕಚಕ್ಯತೆ ಮತ್ತು ಒತ್ತಡ ನಿರ್ವಹಣೆಯ ತಂತ್ರಗಾರಿಕೆ ಮಾಡುವಂತಿರಬೇಕು. ಸಹಆಟಗಾರರ ಸಾಮರ್ಥ್ಯ ಅರಿತಿರಬೇಕು. ಅವರನ್ನು ಸಂದರ್ಭಕ್ಕೆ ತಕ್ಕಂತೆ ದುಡಿಸಿಕೊಳ್ಳಬೇಕು. ಜೊತೆಗೆ ಎಲ್ಲರನ್ನೂ ಹುರಿದುಂಬಿಸುವ ಕಲೆಯೂ ಇರಬೇಕು ಎಂಬುದು ಯಾವುದೇ ತಂಡ ಕ್ರೀಡೆಯಲ್ಲಿರುವ ಅಲಿಖಿತ ನಿಯಮ.

ಆದರೆ, ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆ. ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಉಳಿದಿರುವ ಹೊತ್ತಿನಲ್ಲಿ ಅಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದೇ ಕಾದು ನೋಡಬೇಕು.

ಆಯ್ಕೆಯಲ್ಲಿ ಎಡವಿದರೆ?

ಕೋವಿಡ್ ಕಾಲದ ಬಯೋಬಬಲ್ ವ್ಯವಸ್ಥೆ ಯಲ್ಲಿ ಆಡುವ ಸವಾಲನ್ನು ನಿಭಾಯಿಸಲು ದೊಡ್ಡ ಬಳಗವನ್ನೇ ಫೈನಲ್‌ಗೆ ಆಯ್ಕೆ ಮಾಡಲಾಗಿತ್ತು. ಡಬ್ಲ್ಯುಟಿಸಿಯ ಭಾಗವೇ ಆಗಿದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದ ಯುವ ಆಟಗಾರರೂ ಇದ್ದರು. ಅನುಭವಿಗಳೂ ಇದ್ದರು. ಆದರೆ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಅವರಂತಹ ಹೋರಾಟ ಮನೋಭಾವದ ಮಧ್ಯಮ ವೇಗಿಗಳಿಗೆ ಆದ್ಯತೆ ಕೊಡಲಿಲ್ಲ. ಇಶಾಂತ್ ಶರ್ಮಾ ಅವರ ಅನುಭವಕ್ಕೆ ಮಣೆ ಹಾಕಲಾಯಿತು.

ಇನ್ನು ಬ್ಯಾಟಿಂಗ್‌ನಲ್ಲಿ ಎಳೆಯ ಹುಡುಗ ಶುಭಮನ್ ಗಿಲ್ ಅವರಿಗೆ ಅವಕಾಶ ನೀಡಿ, ಕರ್ನಾಟಕದ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಬೆಂಚ್‌ನಲ್ಲಿ ಕೂರಿಸಲಾಯಿತು. 2019ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ನಂತರ ರಾಹುಲ್‌ಗೆ ಟೆಸ್ಟ್‌ನಲ್ಲಿ ಆಡುವ ಅವಕಾಶ ವನ್ನೇ ನೀಡಿಲ್ಲ. ಆಸ್ಟ್ರೇಲಿಯಾದ ಸರಣಿಯಲ್ಲಿ ಹೆಚ್ಚು ರನ್ ಗಳಿಸದ ಕಾರಣಕ್ಕೆ ಮಯಂಕ್ ಕೂಡ ಅವಕಾಶವಂಚಿತರಾದರು. ಆದರೆ, ರೋಹಿತ್ ಶರ್ಮಾ ಮತ್ತು ಗಿಲ್ ಎರಡೂ ಇನಿಂಗ್ಸ್‌ಗಳಲ್ಲಿ ವಿಫಲರಾದರು. ರೋಹಿತ್ ಜೊತೆಗೆ ಗಿಲ್‌ಗಿಂತ ಹೆಚ್ಚು ಅನುಭವಿ ಗಳಾಗಿರುವ ರಾಹುಲ್ ಅಥವಾ ಮಯಂಕ್ ಉತ್ತಮ ಜೊತೆಯಾಗುವ ಸಾಧ್ಯತೆ ಇತ್ತು.

ಸುಮಾರು ಒಂದೂವರೆ ವರ್ಷದಿಂದ ಶತಕವನ್ನೇ ಸಿಡಿಸದ ವಿರಾಟ್ ಕೊಹ್ಲಿ, ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕದ ಸಮೀಪ ತಲುಪಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಅವರ ಆಟದ ಅಗತ್ಯವಿತ್ತು. ಅವರು ಮತ್ತು ಪೂಜಾರ ಆರನೇ ದಿನದಂದು ಹೆಚ್ಚು ಓವರ್‌ಗಳನ್ನು ಆಡಿದ್ದರೆ, ತಂಡವನ್ನು ಸೋಲಿನಿಂದ ಪಾರು ಮಾಡ ಬಹುದಿತ್ತು.

ರಿಷಭ್ ಪಂತ್ 41ರನ್‌ಗಳನ್ನು ಗಳಿಸಿದ್ದು ದಿಟ್ಟ ಆಟವಾಗಿತ್ತು. ಆದರೆ ‘ನಿರ್ಭಿಡೆ ಮತ್ತು ನಿಷ್ಕಾಳಜಿ ನಡುವೆ ಇರುವ ತೆಳುವಾದ ಗೆರೆಯನ್ನು ಅರಿಯಬೇಕು. ರಿಷಭ್ ಈ ಗೆರೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಚಾಟಿ ಬೀಸಿದ್ದಾರೆ. ಕಿವೀಸ್ ಬೌಲರ್‌ಗಳ ಶಿಸ್ತಿನ ದಾಳಿಯನ್ನು ರಿಷಭ್ ಜವಾಬ್ದಾರಿಯುತವಾಗಿ ಆಡಬೇಕಿತ್ತು. ಸಂದರ್ಭಕ್ಕೆ ಅಗತ್ಯವಾಗಿದ್ದನ್ನು ತಂಡಕ್ಕೆ ನೀಡಬೇಕಿತ್ತು ಎಂಬುದು ಅವರ ಮಾತಿನ ತಾತ್ಪರ್ಯ.

ರವೀಂದ್ರ ಜಡೇಜ ಕೂಡ ತಮ್ಮ ನೈಜ ಆಟದೊಂದಿಗೆ ರಾಜಿ ಮಾಡಿಕೊಂಡು ತಳವೂರಲು ಪ್ರಯತ್ನಿಸಿದರು. ಅಶ್ವಿನ್ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ಇದ್ದುದರಲ್ಲಿ ಬೌಲಿಂಗ್ ಪಡೆಯೇ ಪರವಾಗಿಲ್ಲವೆನ್ನುವಂತೆ ಆಡಿತು.

ಐಸಿಸಿ ಟ್ರೋಫಿಗೆ ಬರ?

ಭಾರತ ತಂಡವು 2014ರಿಂದ ಇಲ್ಲಿಯವರೆಗೆ ಒಂದೂ ಐಸಿಸಿ ಟ್ರೋಫಿಯನ್ನು ಜಯಿಸಿಲ್ಲ. 2013ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು.

2015ರಲ್ಲಿ ಏಕದಿನ ವಿಶ್ವಕಪ್ ಮತ್ತು 2016ರಲ್ಲಿ ವಿಶ್ವ ಟಿ20 ಚಾಂಪಿಯನ್‌ಷಿಪ್‌ನಲ್ಲಿ ಭಾರತವು ಸೋತಿತ್ತು. ಆ ಎರಡೂ ಟೂರ್ನಿಗಳಲ್ಲಿ ತಂಡವನ್ನು ಧೋನಿ ಮುನ್ನಡೆಸಿದ್ದರು.

ಕೊಹ್ಲಿ ಪೂರ್ಣಾವಧಿ ನಾಯಕರಾದ ನಂತರ 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಸೋತಿದೆ. ಇದೀಗ ಡಬ್ಲ್ಯುಟಿಸಿ ಫೈನಲ್‌ ನಲ್ಲಿಯೂ ನಿರಾಶೆ ಅನುಭವಿಸಿದೆ.

ಅಂಕಿ ಅಂಶ:ಡಬ್ಲ್ಯುಟಿಸಿಯಲ್ಲಿ ಭಾರತೀಯರ ಸಾಧನೆಗಳು (2019–2021)

ಅಂಕಿಅಂಶ
ಅಂಕಿಅಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT