ಶುಕ್ರವಾರ, ಜನವರಿ 27, 2023
17 °C
ಎನ್‌ಡಿಟಿವಿ ಎನ್ನುವ ಮಾಧ್ಯಮ ದೈತ್ಯನ ಕೆಡವಲು 2008ರಲ್ಲೇ ಮುಹೂರ್ತ ಇಡಲಾಗಿತ್ತು

NDTV Takeover- ಎನ್‌ಡಿಟಿವಿ ಅದಾನಿ ತೆಕ್ಕೆಗೆ ಬಿದ್ದಿದ್ದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ದೇಶದ ವಿಶ್ವಾಸಾರ್ಹ ಹಾಗೂ ಒಂದು ಕಾಲದ ‍ಪ್ರಭಾವಿ ಮಾಧ್ಯಮ ಸಂಸ್ಥೆ ನ್ಯೂಡೆಲ್ಲಿ ಟೆಲಿವಿಷನ್‌ ಲಿಮಿಟೆಡ್‌ ಅರ್ಥಾತ್‌ ‘ಎನ್‌ಡಿಟಿವಿ‘ ಏಷ್ಯಾದ ನಂಬರ್‌ 1 ಶ್ರೀಮಂತ ಗೌತಮ್‌ ಅದಾನಿಯ ತೆಕ್ಕೆಗೆ ಬೀಳಲು ದಿನಗಣನೆ ಆರಂಭವಾಗಿದೆ. ಎನ್‌ಡಿಟಿವಿಯ ಪ್ರವರ್ತಕ ಕಂಪನಿ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ನ ನಿರ್ದೇಶಕ ಸ್ಥಾನಕ್ಕೆ ಪ್ರಣಯ್‌ ರಾಯ್‌ ಹಾಗೂ ರಾಧಿಕಾ ರಾಯ್‌ ರಾಜೀನಾಮೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಚಾನೆಲ್‌ನ ‍ವಿಶ್ವಾಸಾರ್ಹ ಮುಖವಾಗಿದ್ದ ಹಿರಿಯ ಪತ್ರಕರ್ತ ರವೀಶ್‌ ಕುಮಾರ್ ಕೂಡ ಚಾನೆಲ್‌ ತೊರೆದಿದ್ದಾರೆ. ಅಲ್ಲಿಗೆ ಎನ್‌ಡಿಟಿವಿ ಎನ್ನುವ ದೈತ್ಯ ಮಾಧ್ಯಮ ಸಂಸ್ಥೆಯನ್ನು ಕಬಳಿಸಲು 14 ವರ್ಷಗಳ ಹಿಂದೆ ಹಾಕಲಾಗಿದ್ದ ಬೀಜ ಫಲ ಕೊಟ್ಟಿದೆ.

ಇದನ್ನೂ ಓದಿ: 

2008ರಲ್ಲೇ ಶುರುವಾಗಿತ್ತು ಮಿಷನ್‌ ಎನ್‌ಡಿಟಿವಿ

ಪ್ರಬಲ ಮಾಧ್ಯಮ ಸಂಸ್ಥೆಯಾಗಿದ್ದ ಎನ್‌ಡಿಟಿವಿಯನ್ನು ಕುಟ್ಟಿ ಕೆಡವಿ ಹಾಕಲು 2008ರಲ್ಲಿ ಪ್ರಯತ್ನಗಳು ಆರಂಭವಾಗಿದ್ದವು. ಆ ವೇಳೆ ಜಾಗತಿಕ ಆರ್ಥಿಕ ಹಿಂಜರಿತದಿಂದ ಜರ್ಜರಿತವಾಗಿದ್ದ ಎನ್‌ಡಿಟಿವಿ, ಆಗತಾನೆ ಹುಟ್ಟಿಕೊಂಡಿದ್ದ ವಿಶ್ವಪ್ರಧಾನ್ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ₹403.85 ಕೋಟಿ ‘ಬಡ್ಡಿ ರಹಿತ‘ ಸಾಲ ಪಡೆದುಕೊಂಡಿತ್ತು. ಈ ಬಡ್ಡಿ ರಹಿತ ಸಾಲವೇ ಈಗ ಎನ್‌ಡಿಟಿವಿಯ ಮಾಲೀಕರನ್ನು ಬದಲಾಯಿಸುವ ಮಟ್ಟಿಗೆ ಬಂದು ನಿಂತಿದೆ.

ಈ ಸಾಲ ಪಡೆಯಲು ‘ಆರ್‌ಆರ್‌ಪಿಆರ್‌ ಹೋಲ್ಡಿಂಗ್‌‘ ಎನ್ನುವ ಹೊಸ ಕಂಪನಿಯನ್ನು ಹುಟ್ಟು ಹಾಕಿದ್ದ ರಾಯ್‌ ದಂಪತಿಗಳು, ಎನ್‌ಡಿಟಿವಿಯ ಶೇ 29.18 ಷೇರುಗಳನ್ನು ಅದಕ್ಕೆ ವರ್ಗಾವಣೆ ಮಾಡಿದ್ದರು. ಆರ್‌ಆರ್‌ಆರ್‌ಆರ್‌ಪಿಎಲ್‌ ಎಂದರೆ ‘ರಾಧಿಕಾ ರಾಯ್‌ ಪ್ರಣಯ್‌ ರಾಯ್‌ ಪ್ರೈವೇಟ್‌ ಲಿಮಿಟೆಡ್‌’.

10 ವರ್ಷಗಳ ಒಳಗಾಗಿ ಸಾಲ ಮಾರುಪಾವತಿ ಮಾಡಬೇಕು, ಇಲ್ಲದಿದ್ದರೆ ಆರ್‌ಆರ್‌ಪಿಆರ್‌ನ ಶೇ.99.99 ರಷ್ಟು ಷೇರುಗಳನ್ನು ವಿಶ್ವಪ್ರಧಾನ್‌ಗೆ ಸಾಲದ ಬದಲಾಗಿ ನೀಡಬೇಕು ಎನ್ನುವ ಒಪ್ಪಂದ ಮಾಡಲಾಗಿತ್ತು. ರಾಯ್ ದಂಪತಿ ಸಾಲ ಮಾರುಪಾವತಿ ಮಾಡಲು ವಿಫಲರಾದ ಕಾರಣ ಆರ್‌ಆರ್‌ಪಿಆರ್‌ನ ಅಷ್ಟೂ ಷೇರುಗಳು ವಿಶ್ವಪ್ರಧಾನ್‌ಗೆ ಸೇರಿತ್ತು. ಅಂದರೆ ಎನ್‌ಡಿಟಿವಿಯ ಪ್ರವರ್ತಕ ಕಂಪನಿ ವಿಶ್ವಪ್ರಧಾನ್‌ ಪಾಲಾಯ್ತು.

ಇದನ್ನೂ ಓದಿ: 

ಈ ವಿಶ್ವಪ್ರಧಾನ್‌ ಅನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಅದಾನಿ ಖರೀದಿ ಮಾಡಿದರು. ವಿಶ್ವಪ್ರಧಾನ್‌ ಅನ್ನು ಖರೀದಿ ಮಾಡುವ ಮೂಲಕ ಎನ್‌ಡಿಟಿವಿಯ ಶೇ 29.18 ರಷ್ಟು ಷೇರುಗಳು ಅದಾನಿ ಕೈ ಸೇರಿತು. ಅಲ್ಲಿಗೆ ಎನ್‌ಡಿಟಿವಿ ಬಹುತೇಕವಾಗಿ ಅದಾನಿ ತೆಕ್ಕೆಗೆ ಜಾರಿತು.

ಏನಿದು ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್‌?

‘ಸಗಟು ವ್ಯಾಪಾರ‘ ಕಂಪನಿ ಎಂದು ಕೈಯಲ್ಲಿ ಬಿಡಿಗಾಸು ಇಲ್ಲದೆ 2008ರಲ್ಲಿ ರಂಗ ಪ್ರವೇಶ ಮಾಡಿದ್ದ ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್, ಅದೇ ವರ್ಷ ₹403 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಎನ್‌ಡಿಟಿವಿಗೆ ಸಾಲವಾಗಿ ನೀಡಿತ್ತು. ಚಿಗುರೊಡೆಯುವ ಮುನ್ನವೇ ಎನ್‌ಡಿಟಿವಿಯಂಥ ಸಂಸ್ಥೆಗೆ ಇಷ್ಟು ದೊಡ್ಡ ಮೊತ್ತ ಸಾಲವನ್ನು ನೀಡಿತ್ತು. ಈ ಸಾಲ ನೀಡಲು ಹೊಸದಾಗಿ ಮಾರುಕಟ್ಟೆಗೆ ಆಗತಾನೆ ಪ್ರವೇಶಿಸಿದ ‘ಶಿಶು‘ಗೆ ಹೇಗೆ ಸಾಧ್ಯ? ಅಸಲಿ ವಿಚಾರ ಇರುವುದೇ ಅಲ್ಲಿ.

ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್ ಎನ್‌ಡಿಟಿವಿಗೆ ಸಾಲ ನೀಡಲು, ಶಿನಾನೊ ರಿಟೇಲ್‌ ಪ್ರೈವೇಟ್‌ ಲಿಮಿಡೆಟ್‌ ಎನ್ನುವ ಕಂಪನಿಯಿಂದ ಸಾಲ ಪಡೆದಿತ್ತು. ಯಾವುದೇ ಭದ್ರತೆಗಳು ಇಲ್ಲದೇ ಶಿನಾನೋ, ವಿಶ್ವಪ್ರಧಾನ್‌ಗೆ ಭಾರಿ ಮೊತ್ತದ ಸಾಲ ನೀಡಿತ್ತು. ಈ ಶಿನಾನೋಗೆ ಹಣ ನೀಡಿದ್ದು ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರಿಯಲ್‌ ಇನ್ವೆಸ್ಟ್‌ಮೆಂಟ್ಸ್‌ ಆ್ಯಂಡ್ ಹೋಲ್ಡಿಂಗ್ಸ್‌ ಲಿಮಿಟೆಡ್‌ ಎನ್ನುವುದು ಈ ‘ಮಿಷನ್ ಎನ್‌ಡಿಟಿವಿ‘ಯ ಇನ್ನೊಂದು ಕುತೂಹಲಕಾರಿ ಸಂಗತಿ. ಅಂದರೆ ಎನ್‌ಡಿಟಿವಿಯ ಈಗಿನ ಈ ‍ಪರಿಸ್ಥಿತಿಗೆ ಮುನ್ನುಡಿ ಬರೆದಿದ್ದೇ ಮುಕೇಶ್‌ ಅಂಬಾನಿ. ತನ್ನ ಪ್ರತಿಸ್ಪರ್ಧಿ ಅಂಬಾನಿ ಆರಂಭಿಸಿದ್ದ ‌ಮಿಷನ್‌ ಎನ್‌ಡಿಟಿವಿಯನ್ನು ಈಗ ಅದಾನಿ ಪೂರ್ತಿಗೊಳಿಸಿದ್ದಾರೆ.

ಇದನ್ನೂ ಓದಿ:

2012ರಲ್ಲಿ ವಿಶ್ವಪ್ರಧಾನ್‌ನ ಮಾಲಿಕತ್ವ ಬದಲಾಯಿತು. ನೆಕ್ಸ್‌ವೇವ್‌ ಟೆಲಿವೆಂಚರ್ಸ್‌ ಪ್ರೈವೇಟ್‌ ಲಿ. ಹಾಗೂ ಸ್ಕೈಬ್ಲ್ಯೂ ಬಿಲ್ಡ್‌ವೆಲ್‌ ಪ್ರೈ. ಲಿ. ತನ್ನ ಮಾಲೀಕರು ಎಂದು ವಿಶ್ವ‍ಪ್ರಧಾನ್‌ ಘೋಷಣೆ ಮಾಡಿಕೊಂಡಿತು. ವಿಶೇಷ ಎಂದರೆ ಈ ಎರಡೂ ಕಂಪನಿಗಗಳು ರಿಲಯನ್ಸ್‌ ಜಿಯೋ ನಿರ್ದೇಶಕರಾಗಿದ್ದ ಮಹೇಂದ್ರಾ ನಹತಾ ಅವರಿಗೆ ಸೇರಿದ ಕಂಪನಿಗಳು. ಈ ನಡುವೆ ಶಿನಾನೋಗೆ, ವಿಶ್ವಪ್ರಧಾನ್‌ ನೀಡಬೇಕಿದ್ದ ಸಾಲವೂ ಚುಕ್ತವಾಯ್ತು.

2022ರ ಆಗಸ್ಟ್‌ನಲ್ಲಿ ನೆಕ್ಸ್‌ವೇವ್‌ ಟೆಲಿವೆಂಚರ್ಸ್‌ ಅನ್ನು ಗೌತಮ್‌ ಅದಾನಿ ಖರೀದಿ ಮಾಡಿದರು. ಸಹಜವಾಗಿಯೇ ನೆಕ್ಸ್‌ವೇವ್‌ ಒಡೆತನದ ವಿಶ್ವಪ್ರಧಾನ್‌ ಹಾಗೂ ವಿಶ್ವಪ್ರಧಾನ್‌ ಒಡೆತನದ ಆರ್‌ಆರ್‌ಪಿಆರ್‌ ಅದಾನಿ ಪಾಲಾಯ್ತು. ಎನ್‌ಡಿಟಿವಿಯಲ್ಲಿ, ಆರ್‌ಆರ್‌ಪಿಆರ್‌ನ ಶೇ 29.18ರಷ್ಟು ಶೇರುಗಳಿವೆ. ಅಲ್ಲಿಗೆ ಬೆಣ್ಣೆಯಿಂದ ಕೂದಲು ತೆಗೆದಷ್ಟೇ ಸುಲಭವಾಗಿ ಎನ್‌ಡಿಟಿವಿ ಅದಾನಿ ತೆಕ್ಕೆಗೆ ಬಿತ್ತು.

ಇದಾಗಿಯೂ ಪ್ರಣಯ್ ಮತ್ತು ರಾಧಿಕಾ ಅವರು ಎನ್‌ಡಿಟಿವಿ ವಾಹಿನಿಯಲ್ಲಿ ಪ್ರವರ್ತಕರಾಗಿ ಈಗ ಶೇ 32.26ರಷ್ಟು ಪಾಲು ಹೊಂದಿದ್ದಾರೆ.

ಇದನ್ನೂ ಓದಿ:

ಈಗ ಅದಾನಿ ಸಮೂಹವು ಎನ್‌ಡಿಟಿವಿ ಲಿಮಿಟೆಡ್‌ನ ಶೇ 26ರಷ್ಟು ಷೇರುಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಗೆ ಮುಂದಾಗಿದೆ. ಷೇರುದಾರರು ತಮ್ಮ ಷೇರುಗಳನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡಲು ಡಿಸೆಂಬರ್ 5ರವರೆಗೆ ಅವಕಾಶ ನೀಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಷೇರು ಖರೀದಿ ಪೂರ್ಣಗೊಂಡರೆ ಏಷ್ಯಾದ ನಂಬರ್ 1 ಶ್ರೀಮಂತನ ಕೈಗೆ ಎನ್‌ಡಿಟಿವಿ ಅಧಿಕೃತವಾಗಿ ‘ಹಸ್ತಾಂತರ‘ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು