ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ| ಪೆಗಾಸಸ್‌ ಕಣ್ಗಾವಲು ಕೋಟೆ ಬಯಲು

Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ಭಯೋತ್ಪಾದಕರು ಹಾಗೂ ಕ್ರಿಮಿನಲ್‌ಗಳ ಜಾತಕ ಬಯಲು ಮಾಡಲು ಇಸ್ರೇಲ್‌ ದೇಶದ ಖಾಸಗಿ ಭದ್ರತಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ತಯಾರಿಸಿದ ಪೆಗಾಸಸ್‌ ಕುತಂತ್ರಾಂಶವು ವಿವಿಧ ಸರ್ಕಾರಗಳ ಅಧಿಕೃತ ಗೂಢಚರ್ಯೆ ಸಾಧನವಾಗಿ ಬಳಕೆಯಾಗಿದೆ ಎಂದು ವರದಿ ಆರೋಪಿಸಿದೆ. ಸರ್ಕಾರಗಳಿಗೆ ಮಾತ್ರ ಈ ತಂತ್ರಾಂಶವನ್ನು ಎನ್‌ಎಸ್‌ಒ ಗ್ರೂಪ್‌ ಮಾರಾಟ ಮಾಡುತ್ತದೆ. ಆದರೆ ತನ್ನ ಗ್ರಾಹಕರು ಯಾರು ಎಂದು ಎನ್‌ಎಸ್‌ಒ ಬಹಿರಂಗಪಡಿಸಿಲ್ಲ.

ಜಗತ್ತಿನ 10 ದೇಶಗಳ, 17 ಮಾಧ್ಯಮ ಸಂಸ್ಥೆಗಳಿಗೆ ಸೇರಿದ 80ಕ್ಕೂ ಹೆಚ್ಚು ಪತ್ರಕರ್ತರು ಜತೆಯಾಗಿ ಪ್ರಾಜೆಕ್ಟ್‌ ಪೆಗಾಸಸ್‌ ತನಿಖೆ ನಡೆಸಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು ಯೋಜನೆಯ ಭಾಗವಾಗಿದ್ದು, ತಾಂತ್ರಿಕ ನೆರವು ನೀಡಿದೆ. ಫಾರ್‌ಬಿಡನ್ ಸ್ಟೋರೀಸ್ ಸಂಸ್ಥೆಯು ಸಂಯೋಜನೆ ಕೆಲಸ ಮಾಡಿದೆ. ಅಮ್ನೆಸ್ಟಿಯ ತಾಂತ್ರಿಕ ಪ್ರಯೋಗಾಲಯವು 67 ಫೋನ್‌ಗಳ ವಿಧಿವಿಜ್ಞಾನ ಪರೀಕ್ಷೆ ನಡೆಸಿದೆ. ಅವುಗಳಲ್ಲಿ 37 ಫೋನ್‌ಗಳು ಪೆಗಾಸಸ್‌ನಿಂದ ಹ್ಯಾಕ್ ಆಗಿರುವುದು ದೃಢಪಟ್ಟಿದೆ.

‘ಪೆಗಾಸಸ್ ಪ್ರಾಜೆಕ್ಟ್‌’ ಪ್ರಕಾರ, ಜಗತ್ತಿನ 200ಕ್ಕೂ ಹೆಚ್ಚು ಪತ್ರಕರ್ತರು ಬೇಹುಗಾರಿಕೆಗೆ ಒಳಗಾಗಿದ್ದಾರೆ. 50,000ಕ್ಕೂ ಹೆಚ್ಚು ಫೋನ್ ಸಂಖ್ಯೆಗಳು ಗೂಢಚರ್ಯೆ ಪಟ್ಟಿಯಲ್ಲಿವೆ ಎಂದು ವರದಿ ತಿಳಿಸಿದೆ. ಬಹರೇನ್, ಮೊರಾಕ್ಕೊ, ಸೌದಿ ಅರೇಬಿಯಾ, ಭಾರತ, ಮೆಕ್ಸಿಕೊ, ಹಂಗರಿ, ಅಜರ್‌ಬೈಜಾನ್, ಟೊಗೊ, ರುವಾಂಡ ದೇಶಗಳಲ್ಲಿ ಕುತಂತ್ರಾಂಶದ ಕುರುಹು ಕಾಣಿಸಿದೆ.

ಬಾಯಿ ಬಿಡದ ಎನ್‌ಎಸ್‌ಒ: ಪ್ರತಿಕ್ರಿಯೆ ನೀಡುವಂತೆ ಎನ್‌ಎಸ್‌ಜಿ ಸಂಸ್ಥೆಗೆ ಫಾರ್‌ಬಿಡನ್ ಸ್ಟೋರೀಸ್ ಹಾಗೂ ಅಮ್ನೆಸ್ಟಿ ಮನವಿ ಮಾಡಿದ್ದವು. ಆದರೆ ಅದು ಸರ್ಕಾರಿ ಗ್ರಾಹಕರ ಗುರುತನ್ನು ಖಚಿತಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ. ಪೆಗಾಸಸ್ ಗ್ರಾಹಕರಾಗಿರುವ ದೇಶಗಳನ್ನು ಸಂಪರ್ಕಿಸಲಾಯಿತು. ಕೆಲವು ದೇಶಗಳು ಪ್ರತಿಕ್ರಿಯಿಸಲು ಕೊಟ್ಟಿದ್ದ ಗಡುವನ್ನು ಮೀರುವ ಮೂಲಕ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ. ಇನ್ನೂ ಕೆಲವು ಎನ್ಎಸ್ಒ ಗ್ರೂಪ್‌ನ ಗ್ರಾಹಕರು ಎಂಬುದನ್ನು ನಿರಾಕರಿಸಿವೆ.

ಸೋರಿಕೆಯಾದ ಪಟ್ಟಿ ಎಲ್ಲಿಂದ ಬಂತು ಎಂಬುದು ಸ್ಪಷ್ಟವಾಗಿಲ್ಲ ಅಥವಾ ಎಷ್ಟು ಫೋನ್‌ಗಳನ್ನು ನಿಜವಾಗಿ ಹ್ಯಾಕ್ ಮಾಡಲಾಗಿದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದಿರುವ ಎನ್ಎಸ್ಒ, ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ. ಆದಾಗ್ಯೂ, ಎಲ್ಲ ತನಿಖೆ ಮುಂದುವರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.

ಪರಿಣಾಮಗಳು

ಮೊಬೈಲ್ ಸಂಖ್ಯೆಗಳ ದುರುಪಯೋಗ ವ್ಯಾಪಕವಾಗಿ ಆಗಿದೆ ಎಂದು ವರದಿ ತೋರಿಸಿದೆ. ಪತ್ರಕರ್ತರ ಜೀವನ, ಅವರ ಕುಟುಂಬಗಳು ಮತ್ತು ಸಹವರ್ತಿಗಳ ಜೀವವನ್ನು ಅಪಾಯಕ್ಕೆ ನೂಕಲಾಗಿದೆ. ‘ಪತ್ರಿಕಾ ಸ್ವಾತಂತ್ರ್ಯ ಹಾಳು ಮಾಡುವುದು ಮತ್ತು ಸರ್ಕಾರದ ಟೀಕಾಕಾರ ಮಾಧ್ಯಮಗಳ ಬಾಯಿ ಮುಚ್ಚಿಸುವುದು ಈ ಬೇಹುಗಾರಿಕೆ ಹಿಂದಿನ ಉದ್ದೇಶ’ ಎಂದು ಅಮ್ನೆಸ್ಟಿ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.

ತನಿಖೆಗೆ ಫ್ರಾನ್ಸ್ ಆದೇಶ

ಪೆಗಾಸಸ್ ವರದಿ ಪ್ರಕಟವಾದ 24 ಗಂಟೆಗಳಲ್ಲಿ ಕ್ರಮಕ್ಕೆ ಮುಂದಾಗಿರುವ ಫ್ರಾನ್ಸ್, ಈ ಕುರಿತು ತನಿಖೆಗೆ ಆದೇಶಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್ ಅವರ ಮೊಬೈಲ್ ಸಂಖ್ಯೆಯೂ ಗೂಢಚರ್ಯೆ ಪಟ್ಟಿಯಲ್ಲಿರುವುದರಿಂದ ಅವರು ವಿವರವಾದ ತನಿಖೆಗೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೇಹುಗಾರಿಕೆ ಅಪರಾಧ

ತಜ್ಞರ ಪ್ರಕಾರ, ಭಾರತದಲ್ಲಿ ಬೇಹುಗಾರಿಕೆ ನಡೆಸುವುದು ಕಾನೂನುಬಾಹಿರ. ಕಂಪ್ಯೂಟರ್ ಬಳಕೆದಾರರ ಅಥವಾ ಮಾಲೀಕರ ಅನುಮತಿಯಿಲ್ಲದೆ ಅದನ್ನು ಅನಧಿಕೃತವಾಗಿ ಬಳಸುವುದು ಅಥವಾ ಮೋಸದಿಂದ ಗೂಢಚರ್ಯೆ ನಡೆಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಅಪರಾಧ. ಇದೇ ಕಾಯ್ದೆಯ ಸೆಕ್ಷನ್ 66ರ ಪ್ರಕಾರ, ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಕುತಂತ್ರಾಂಶ ಸೇರಿಸುವುದು ಸೈಬರ್ ಅಪರಾಧವಾಗಿದೆ.

ಸರ್ಕಾರದ ವಿರೋಧಿಗಳೇ ಗುರಿಯೇ?

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರೋಧಿಗಳನ್ನೇ ಪೆಗಾಸಸ್ ಗೂಢಚರ್ಯೆಯ ಗುರಿ ಮಾಡಿಕೊಳ್ಳಲಾಗಿದೆ ಎಂದು ಪ್ರಾಜೆಕ್ಟ್ ಪೆಗಾಸಸ್ ಹೇಳಿದೆ ಎಂದು ‘ದಿ ವೈರ್’ ಪೋರ್ಟಲ್‌ ವರದಿ ಮಾಡಿದೆ. ಪ್ರಾಜೆಕ್ಟ್ ಪೆಗಾಸಸ್ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ 300 ಭಾರತೀಯರ ಫೋನ್‌ ಸಂಖ್ಯೆ ಇದೆ. ಅದರಲ್ಲಿ 115 ಜನರ ಹೆಸರನ್ನು ದಿ ವೈರ್ ಸರಣಿ ವರದಿಗಳ ಮೂಲಕ ಬಹಿರಂಗಪಡಿಸಿದೆ.

ರಾಜಕಾರಣಿಗಳು

ರಾಹುಲ್ ಗಾಂಧಿ: 2018-19ರ ಅವಧಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿ ಇದೆ. ಜತೆಗೆ ರಾಹುಲ್ ಅವರ ಆಪ್ತರಾದ ಅಲಂಕಾರ್ ಸವಾಯಿ ಮತ್ತು ಸಚಿನ್ ರಾವ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. ಈ ಮೂವರ ಫೋನ್‌ಗಳ ವಿಧಿವಿಜ್ಞಾನ ಪರೀಕ್ಷೆ ನಡೆದಿಲ್ಲವಾದ ಕಾರಣ, ಪೆಗಾಸಸ್ ಅನ್ನು ಅದರಲ್ಲಿ ಅಳವಡಿಸಲಾಗಿದೆಯೇ ಎಂಬುದು ದೃಢಪಟ್ಟಿಲ್ಲ.

ಪ್ರಶಾಂತ್ ಕಿಶೋರ್

ಚುನಾವಣಾ ತಂತ್ರ ನಿಪುಣರಾದ ಪ್ರಶಾಂತ್ ಕಿಶೋರ್ ಅವರ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿದೆ. ಅವರ ಫೋನ್‌ನಲ್ಲಿ ಪೆಗಾಸಸ್ ಅನ್ನು ಯಶಸ್ವಿಯಾಗಿ ಅಳವಡಿಸಿ, ಗೂಢಚರ್ಯೆ ನಡೆಸಿರುವುದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ದೃಢಪಟ್ಟಿದೆ. 2019ರಿಂದ 2021ರ ಅವಧಿಯಲ್ಲಿ ಅವರ ಮೇಲೆ ಗೂಢಚರ್ಯೆ ನಡೆಸಲಾಗಿದೆ. ಬಿಜೆಪಿ ವಿರೋಧಿಗಳಿಗೆ ಚುನಾವಣಾ ಕಾರ್ಯತಂತ್ರ ನಿಪುಣರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅವರ ಮೇಲೆ ಗೂಢಚರ್ಯೆ ನಡೆದಿದೆ.

ಅಭಿಷೇಕ್ ಬ್ಯಾನರ್ಜಿ

ಟಿಎಂಸಿ ಸಂಸದ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಅವರ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿದೆ.

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಸಿಂಗ್ ಪಟೇಲ್ ಅವರ ಫೋನ್‌ ಸಂಖ್ಯೆ ಮತ್ತು ಅವರ ಕುಟುಂಬದವರ ಫೋನ್‌ ಸಂಖ್ಯೆ, ಸ್ಮೃತಿ ಇರಾನಿ ಅವರ ಆಪ್ತ ಸಹಾಯಕನ ಫೋನ್‌ ಸಂಖ್ಯೆ, ವಸುಂಧರಾ ರಾಜೆ ಅವರ ಆಪ್ತ ಕಾರ್ಯದರ್ಶಿಯ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿದೆ. ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಫೋನ್‌ ಸಂಖ್ಯೆಯೂ ಈ ಪಟ್ಟಿಯಲ್ಲಿದೆ.

ರಾಜ್ಯದ ನಾಯಕರು

ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಭದ್ರತಾ ಸಿಬ್ಬಂದಿ ಮಂಜುನಾಥ ಮುದ್ದೇಗೌಡ ಅವರ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್, ಅದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಜಿ.ಪರಮೇಶ್ವರ ಅವರ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ.

ಎಲ್ಗರ್ ಪರಿಷತ್‌ ಆರೋಪಿಗಳು...

2018ರ ಜನವರಿಯಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಎಲ್ಗರ್ ಪರಿಷತ್‌ನಲ್ಲಿ ಸಂಚು ರೂಪಿಸಿದ ಮತ್ತು ಕೇಂದ್ರ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧನದಲ್ಲಿರುವ ಅಥವಾ ಜಾಮೀನಿನ ಮೇಲೆ ಬಿಡುಗಡೆಯಾಗಿರುವ 14 ಸಾಮಾಜಿಕ ಕಾರ್ಯಕರ್ತರು ಮತ್ತು ಅವರ ಆಪ್ತರ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ. ಅಲ್ಲದೆ, ಇನ್ನೂ 25 ಸಾಮಾಜಿಕ ಕಾರ್ಯಕರ್ತರ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿ ಇವೆ.

ಅಶೋಕ್ ಲವಾಸಾ

ನಿವೃತ್ತ ಚುನಾವಣಾ ಆಯುಕ್ತರಾದ ಅಶೋಕ್ ಲವಾಸಾ ಅವರ ಹೆಸರೂ ಈ ಪಟ್ಟಿಯಲ್ಲಿದೆ. 2019ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರಿನ ಪರಿಶೀಲನೆ ನಡೆಸಿದ್ದ ಚುನಾವಣಾ ಆಯುಕ್ತರ ಸಮಿತಿಯಲ್ಲಿ ಅಶೋಕ್ ಇದ್ದರು. ಮೂರು ಸದಸ್ಯರ ಈ ಸಮಿತಿಯಲ್ಲಿ ಇಬ್ಬರು, ‘ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ತೀರ್ಪು ನೀಡಿದ್ದರು. ಅಶೋಕ್ ಅವರು, ‘ನೀತಿ ಸಂಹಿತೆ ಉಲ್ಲಂಘಿಸಲಾಗಿದೆ’ ಎಂದು ಭಿನ್ನಮತದ ತೀರ್ಪು ನೀಡಿದ್ದರು.

ಈ ಮೊದಲೂ ಗೂಢಚರ್ಯೆ

ಭಾರತೀಯರ ಮೇಲೆ ಈ ಹಿಂದೆಯೂ ಪೆಗಾಸಸ್ ಮೂಲಕ ಗೂಢಚರ್ಯೆ ನಡೆದಿತ್ತು. ‘ವಾಟ್ಸ್‌ಆ್ಯಪ್‌ ಮೂಲಕ ಭಾರತೀಯರ ಫೋನ್‌ಗಳಿಗೆ ಪೆಗಾಸಸ್ ತಂತ್ರಾಂಶವನ್ನು ಸೇರಿಸಲಾಗಿದೆ. ಆ ಮೂಲಕ ಗೂಢಚರ್ಯೆ ನಡೆಸಲಾಗಿದೆ’ ಎಂದು ವಾಟ್ಸ್ಆ್ಯಪ್‌ ವರದಿ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸಿಇಆರ್‌ಟಿ) ವಾಟ್ಸ್‌ಆ್ಯಪ್‌ಗೆ ಸೂಚನೆ ನೀಡಿತ್ತು. 121 ಭಾರತೀಯರ ಮೇಲೆ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಲು ಯತ್ನಿಸಲಾಗಿದೆ. ಆದರೆ 20 ಜನರ ಮೇಲೆ ಪೆಗಾಸಸ್ ಮೂಲಕ ಯಶಸ್ವಿಯಾಗಿ ಗೂಢಚರ್ಯೆ ನಡೆಸಲಾಗಿದೆ ಎಂದು ವಾಟ್ಸ್‌ಆ್ಯಪ್‌ ವರದಿ ನೀಡಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ವೆಂಕಟೇಶ್ ನಾಯಕ್ ಎಂಬವರು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ವಾಟ್ಸ್‌ಆ್ಯಪ್‌ ನೀಡಿರುವ ವರದಿಯ ಅಂಶಗಳನ್ನು ಸಚಿವಾಲಯವು ಆರ್‌ಟಿಐ ಅರ್ಜಿಯಲ್ಲಿ ಉತ್ತರಿಸಿತ್ತು.

ಗೂಢಚರ್ಯೆ ವಿಧಾನ ಹೇಗೆ?

ಅಂತರ್ಜಾಲಕ್ಕೆ ಸಂಪರ್ಕಿತವಾದ ಯಾವುದೇ ವಿದ್ಯುನ್ಮಾನ ಸಾಧನದೊಳಕ್ಕೆ ನುಸುಳುವ ಸಾಮರ್ಥ್ಯವನ್ನುಪೆಗಾಸಸ್‌ ಕುತಂತ್ರಾಂಶವು ಹೊಂದಿದೆ. ಪೆಗಾಸಸ್‌ನ ಕೆಲವು ಆವೃತ್ತಿಗಳು ಯಾವುದೇ ಸಂದೇಶ ಅಥವಾ ಲಿಂಕ್‌ ಅನ್ನು ತೆರೆಯದೇ ಇದ್ದರೂ ಮೊಬೈಲ್‌ ಫೋನ್‌ನಲ್ಲಿ ಸೇರಿಕೊಳ್ಳುವ ಶಕ್ತಿ ಹೊಂದಿವೆ ಎಂದು ಹೇಳಲಾಗುತ್ತಿದೆ. ವಿದ್ಯುನ್ಮಾನ ಸಾಧನಗಳು ಕಳೆದು ಹೋದರೆ ಪತ್ತೆ ಮಾಡವುದಕ್ಕೆ ಇರುವ ಆ್ಯಪ್‌ಗಳ ರೂಪದಲ್ಲಿ ಈ ಕುತಂತ್ರಾಂಶವು ವೇಷ ಮರೆಸಿಕೊಳ್ಳುತ್ತದೆ. ಉಪಯುಕ್ತ ಆ್ಯಪ್‌ಗಳು ಎಂದು ತಮ್ಮನ್ನು ಬಿಂಬಿಸಿಕೊಳ್ಳುತ್ತವೆ. ಮೊಬೈಲ್‌ ಅಥವಾ ಇತರ ಸಾಧನದೊಳಕ್ಕೆ ಸೇರಿಕೊಳ್ಳುವ ಪೆಗಾಸಸ್‌, ತನಗೆ ಬೇಕಾದ ಎಲ್ಲ ದತ್ತಾಂಶಗಳನ್ನೂ ಪಡೆದುಕೊಳ್ಳುತ್ತದೆ. ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಅನ್ನು ಚಾಲನೆಗೊಳಿಸುತ್ತದೆ. ದೃಶ್ಯಗಳು ಮತ್ತು ಧ್ವನಿಯನ್ನು ಸೆರೆಹಿಡಿಯುತ್ತದೆ. ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು, ಎಸ್‌ಎಂಎಸ್‌ಗಳು, ಇ ಮೇಲ್‌ ಮುಂತಾದ ಎಲ್ಲ ದತ್ತಾಂಶಗಳನ್ನು ತನ್ನನ್ನು ನಿಯಂತ್ರಿಸುವವರಿಗೆ ರವಾನಿಸುತ್ತದೆ.

ನಾಯಕರ ಸುತ್ತ ಕಣ್ಣು

ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನದ ಸಂದರ್ಭದಲ್ಲಿ (2019ರ ಜುಲೈ) ರಾಜ್ಯದ ಹಲವು ನಾಯಕರ ಮೊಬೈಲ್‌ಗಳ ಮೇಲೆಯೂ ಕಣ್ಗಾವಲು ನಡೆಸಲಾಗಿದೆ ಎಂದು ‘ದಿ ವೈರ್‌’ ವರದಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಅವರ ಮೊಬೈಲ್‌ ಮೂಲಕ ಕಣ್ಗಾವಲು ನಡೆಸಲಾಗಿದೆ ಎಂದು ವರದಿಯಲ್ಲಿ ವಿವರ ಇದೆ. ಸಿದ್ದರಾಮಯ್ಯ ಅವರು ಸ್ವಂತ ಮೊಬೈಲ್‌ ಬಳಸುತ್ತಿಲ್ಲ ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ.

ಆದರೆ, ಪ್ರಮುಖ ನಾಯಕರ ಸಂಪರ್ಕದಲ್ಲಿರುವವರ ಮೊಬೈಲ್‌ ಮೇಲೆ ನಿಗಾ ಇರಿಸುವುದನ್ನು ಗೂಢಚರ್ಯೆ ನಡೆಸಿದವರು ಒಂದು ತಂತ್ರವಾಗಿ ಬಳಸಿದ್ದಾರೆ ಎಂದು ಹೇಳುವುದಕ್ಕೆ ಬೇಕಾದಷ್ಟು ಪುರಾವೆಗಳು ‘ದಿ ವೈರ್’ನಲ್ಲಿ ಪ್ರಕಟವಾದ ವರದಿಗಳಲ್ಲಿ ಇವೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ದೂರವಾಣಿ ಸಂಖ್ಯೆಗಳು ಪೆಗಾಸಸ್‌ ಗೂಢಚರ್ಯೆ ಪ್ರಕರಣದಲ್ಲಿ ಪತ್ತೆ ಆಗಿವೆ. ಗೂಢಚರ್ಯೆಗೆ ಒಳಗಾದರು ಎನ್ನಲಾದ ವಿಪಕ್ಷಗಳ ಪ್ರಮುಖ ನಾಯಕರಲ್ಲಿ ಇವರಿಬ್ಬರು ಮಾತ್ರ ಇದ್ದಾರೆ. ಆದರೆ, ನಾಯಕರ ಸಂಪರ್ಕದಲ್ಲಿರುವವರ ಮೊಬೈಲ್‌ ಮೂಲಕವೇ ನಾಯಕರ ಮೇಲೆ ನಿಗಾ ಇರಿಸಲಾಗಿದೆ ಎಂಬ ವಿಶ್ಲೇಷಣೆ ಇದೆ. ಅಲಂಕಾರ್‌ ಸವಾಯ್‌ ಮತ್ತು ಸಚಿನ್‌ ರಾವ್‌ ಅವರ ಮೊಬೈಲ್‌ ಮೇಲೆ ಕಣ್ಗಾವಲು ನಡೆಸಿರಬಹುದು ಎಂದು ವರದಿಗಳು ಹೇಳುತ್ತಿವೆ. ಇವರಿಬ್ಬರೂ ರಾಜಕೀಯ ಕ್ಷೇತ್ರದವರಲ್ಲ, ಸಾರ್ವಜನಿಕ ಜೀವನದಲ್ಲಿ ಇರುವವರೂ ಅಲ್ಲ. ಆದರೆ, ರಾಹುಲ್‌ ಅವರ ಆಪ್ತರು ಎಂಬುದು ಇವರೂ ಗುರಿಯಾಗಲು ಕಾರಣ ಎನ್ನಲಾಗಿದೆ. ಬೇರೆ ನಾಯಕರಿಗೂ ಇದೇ ಮಾದರಿ ಅನ್ವಯಿಸಿರುವ ಸಾಧ್ಯತೆ ಇದೆ.

ಆಧಾರ: ಪಿಟಿಐ, ಬಿಬಿಸಿ, ವಾಷಿಂಗ್ಟನ್ ಪೋಸ್ಟ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್

-----

ಸರ್ಕಾರದ ಮೇಲೆ ಅನುಮಾನ

ಪೆಗಾಸಸ್ ತಂತ್ರಾಂಶದ ಮೂಲಕ ದೇಶದ ನಾಗರಿಕರ ವಿರುದ್ಧ ಗೂಢಚರ್ಯೆ ನಡೆಸುವುದು ಸರಿಯಲ್ಲ. ಭಯೋತ್ಪಾದನೆ ಮಟ್ಟ ಹಾಕಲು ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಮಾತ್ರ ಈ ರೀತಿಯ ಗೂಢಚರ್ಯ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಅದಕ್ಕೆ ಅಗತ್ಯ ಪೂರ್ವಾನುಮತಿ ಮತ್ತು ನಿಯಮಿತ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ವಿರೋಧ ಪಕ್ಷದವರು, ನ್ಯಾಯಮೂರ್ತಿಗಳು, ಮಾಧ್ಯಮ ಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಆದರೆ, ಕೇಂದ್ರ ಸರ್ಕಾರ ಯಾವುದೇ ಗೂಢಚರ್ಯ ನಡೆಸಿಲ್ಲ ಎಂದು ಹೇಳುತ್ತಿದೆ. ಹಾಗಿದ್ದರೆ, ಪೆಗಾಸಸ್ ತಂತ್ರಾಂಶವನ್ನು ಇಸ್ರೇಲ್‌ ಕಂಪನಿಯಿಂದ ಸರ್ಕಾರ ಖರೀದಿಸಿಲ್ಲವೇ, ರಕ್ಷಣಾ ಟ್ರೇಡ್ ಪರವಾನಗಿ ಹೊಂದಿದವರು ಖರೀದಿಸಿದ್ದಾರೆಯೇ ಮತ್ತು ಅದನ್ನು ಬಳಸಲಾಗಿದೆಯೇ ಎಂಬ ಮೂರು ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಬೇಕಾಗುತ್ತದೆ. ಒಂದು ವೇಳೆ ವಿದೇಶಿ ಶಕ್ತಿಗಳು ಈ ಕೆಲಸ ಮಾಡಿದ್ದರೆ, ಅದನ್ನೂ ಕಂಡು ಹಿಡಿಯಬೇಕಾಗುತ್ತದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು, ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗೂಢಚರ್ಯೆ ಮಾಡುವ ಉದ್ದೇಶ ವಿದೇಶಿ ಶಕ್ತಿಗಳಿಗೆ ಇರಲು ಸಾಧ್ಯವಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಮೇಲೆ ಅನುಮಾನ ಮೂಡುತ್ತಿದೆ. ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವ ಮೂಲಕ ದೇಶದ ನಾಗರಿಕರಲ್ಲಿರುವ ಅನುಮಾನ ಪರಿಹರಿಸಬೇಕು.

ಎಚ್.ಎನ್. ನಾಗಮೋಹನದಾಸ್,ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT