ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ| ಏರೊ ಇಂಡಿಯಾ–2023 ವೈಮಾನಿಕ ಪ್ರದರ್ಶನಕ್ಕೆ ಭರದ ಸಿದ್ಧತೆ

Last Updated 26 ಜನವರಿ 2023, 21:21 IST
ಅಕ್ಷರ ಗಾತ್ರ

ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ಇದೇ ಫೆಬ್ರುವರಿ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ದೇಶದಲ್ಲಿ ಈವರೆಗೆ ನಡೆದ ವೈಮಾನಿಕ ಪ್ರದರ್ಶನಗಳಲ್ಲೇ ಈ ಸಾಲಿನದ್ದು ಅತ್ಯಂತ ದೊಡ್ಡ ಪ್ರದರ್ಶನ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಕೋವಿಡ್‌ ತೀವ್ರವಾಗಿದ್ದ ಕಾಲದಲ್ಲಿ 2021ರಲ್ಲಿ ನಡೆದಿದ್ದ ಪ್ರದರ್ಶನಕ್ಕೆ ವಿದೇಶಿ ಕಂಪನಿಗಳ ಪ್ರತಿಕ್ರಿಯೆ ನೀರಸವಾಗಿತ್ತು. ಆದರೆ ಈ ಬಾರಿ ದೇಶೀಯ ಸಂಸ್ಥೆಗಳು, ವಿದೇಶಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಭಾಗಿಯಾಗುತ್ತಿವೆ. ಈವರೆಗಿನ ಪ್ರದರ್ಶನಗಳಲ್ಲಿ ಭಾರತವು ವಿದೇಶಿ ವಿಮಾನಗಳು, ವಿದೇಶಿ ತಂತ್ರಜ್ಞಾನಗಳನ್ನು ಎದುರು ನೋಡುತ್ತಿತ್ತು. ಈ ಪ್ರದರ್ಶನದಲ್ಲಿ ಭಾರತವು ತನ್ನದೇ ಸಾಧನೆಗಳನ್ನು ಜಗತ್ತಿನೆದುರು ಇಡಲು ಸಿದ್ಧವಾಗಿದೆ

ಬೆಂಗಳೂರಿನ ಯಲಹಂಕದಲ್ಲಿನ ವಾಯುನೆಲೆಯ ಆವರಣದಲ್ಲಿ ಇದೇ ಫೆಬ್ರುವರಿ 13–17ರವರೆಗೆ ಏರೊ ಇಂಡಿಯಾ–2023 ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ಮಳಿಗೆ ಹಾಕಲು, ಮಳಿಗೆಗಳು ಮತ್ತು ವೈಮಾನಿಕ ಪ್ರದರ್ಶನ ವೀಕ್ಷಿಸಲು ಈಗಾಗಲೇ ಟಿಕೆಟ್‌ ನೀಡಲಾಗುತ್ತಿದೆ. 2019ರ ವೈಮಾನಿಕ ಪ್ರದರ್ಶನದ ವೇಳೆ ನಿಲುಗಡೆ ಪ್ರದೇಶ ದಲ್ಲಿದ್ದ 100ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ಆ ಕಹಿ ನೆನಪನ್ನು ಮರೆಸಬೇಕಿದ್ದ 2021ರ ವೈಮಾನಿಕ ಪ್ರದರ್ಶಕ್ಕೆ ಕೋವಿಡ್‌ ಕಾರಣದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಈ ಬಾರಿಯ ಪ್ರದರ್ಶನವು ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ.

1996ರಲ್ಲಿ ಆರಂಭವಾದ ಈ ಪ್ರದರ್ಶನವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸುತ್ತಾ ಬರಲಾಗಿದೆ. 2023ರದ್ದು 14ನೇ ಪ್ರದರ್ಶನ. ಒಟ್ಟು 35,000 ಚದರ ಅಡಿ ಪ್ರದೇಶದಲ್ಲಿ ಈ ಬಾರಿಯ ಪ್ರದರ್ಶನ ನಡೆಯಲಿದೆ. 731 ಕಂಪನಿಗಳು ಮತ್ತು ಸಂಸ್ಥೆಗಳು ಈಗಾಗಲೇ ಪ್ರದರ್ಶನದಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಂಡಿವೆ. ಇವುಗಳಲ್ಲಿ ಭಾರತದ 633 ಕಂಪನಿಗಳು ಮತ್ತು 98 ವಿದೇಶಿ ಕಂಪನಿಗಳು ಸೇರಿವೆ. ‘ಇದು ಕೇವಲ ವೈಮಾನಿಕ ಪ್ರದರ್ಶನವಲ್ಲ. ಬದಲಿಗೆ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಭಾರತವು ಎಷ್ಟು ಬಲಿಷ್ಠವಾಗಿದೆ ಮತ್ತು ಸ್ವಾವಲಂಬಿಯಾಗಿದೆ ಎಂಬುದನ್ನು ತೋರಿಸುವ ವೇದಿಕೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಭಾರತ ಸರ್ಕಾರದ ಅಧೀನ ಸಂಸ್ಥೆಗಳಾದ ಎಚ್‌ಎಎಲ್‌, ಬಿಇಎಲ್‌, ಡಿಆರ್‌ಡಿಒ ಅಧೀನದಲ್ಲಿರುವ ಹಲವು ಸಂಸ್ಥೆಗಳು ಈ ಪ್ರದರ್ಶನದ ಕೇಂದ್ರ ಬಿಂದುಗಳಾಗಿವೆ. ಈ ಮೂರೂ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಉಪಕರಣಗಳು, ವೈಮಾನಿಕ ತಂತ್ರಜ್ಞಾನಗಳು ಈ ಪ್ರದರ್ಶನದಲ್ಲಿ ಇರಲಿವೆ. ಇವುಗಳ ಜತೆಯಲ್ಲಿ ಭಾರತದ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಭಾಗವಹಿಸುವಿಕೆಯ ಪ್ರಮಾಣ ಮತ್ತು ಸ್ವರೂಪ ಎಂಥದ್ದು ಎಂಬುದನ್ನು ತೋರಿಸಲು ಈ ಪ್ರದರ್ಶನವು ವೇದಿಕೆಯಾಗಲಿದೆ. ವಿದೇಶಿ ರಕ್ಷಣಾ ಕಾರ್ಯಕ್ರಮಗಳಲ್ಲಿ ಭಾರತದ ಕಂಪನಿಗಳು ಭಾಗಿಯಾಗುವ ಅವಕಾಶವನ್ನು ಈ ಪ್ರದರ್ಶನವು ನೀಡಲಿದೆ.

ತಪಸ್‌ನತ್ತ ಎಲ್ಲರ ಚಿತ್ತ

ರಕ್ಷಣಾ ತಂತ್ರಜ್ಞಾನ ಮತ್ತು ಸಾಮಗ್ರಿಗಳಿಗಾಗಿ ಭಾರತವು ವಿದೇಶಗಳನ್ನೇ ಹೆಚ್ಚು ಅವಲಂಬಿಸಿದೆ. ಸೇನಾ
ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುವ ಡ್ರೋನ್‌ಗಳನ್ನು ಭಾರತದ ಸೇನಾಪಡೆಗಳ ಎಲ್ಲಾ ಚಟುವಟಿಕೆಗಳಲ್ಲಿ ನಿಯೋಜಿಸಲು ಸಾಧ್ಯವಾಗಿಲ್ಲ. ಇಂತಹ ನಿಯೋಜನೆಯ ಭಾಗವಾಗಿಯೇ ಭಾರತವು ಬಾಂಬರ್ ಡ್ರೋನ್‌ಗಳನ್ನು ವಿದೇಶಗಳಿಂದ ಖರೀದಿಸಲು ಆಸಕ್ತಿ ತೋರಿತ್ತು. ಇದರ ಭಾಗವಾಗಿ, ಅಮೆರಿಕದ ಬಾಂಬರ್‌ ಡ್ರೋನ್‌ಗಳನ್ನು ಖರೀದಿಸಲು ರೂಪಿಸಿದ ಕಾರ್ಯಕ್ರಮವು ನನೆಗುದಿಗೆ ಬಿದ್ದಿದೆ. ಆದರೆ, ಇದರ ಮಧ್ಯೆಯೇ ಭಾರತದ ಕಂಪನಿಗಳು ಸೇನಾ ಬಳಕೆಗಾಗಿ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿವೆ. ಅಂತಹ
ಡ್ರೋನ್‌ಗಳಲ್ಲಿ ತಪಸ್‌ ಸಹ ಒಂದು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಎಚ್‌ಎಎಲ್‌ ಮತ್ತು ಬಿಇಎಲ್‌ ಸಂಸ್ಥೆಗಳ ಸಹಕಾರದೊಂದಿಗೆ ಅಭಿವೃದ್ಧಿ‍ಡಿಸಲಾಗಿದ್ದ ರುಸ್ತುಂ–1 ಡ್ರೋನ್‌ನ ಪ್ಲಾಟ್‌ಫಾರಂ ಅನ್ನೇ ಬಳಸಿಕೊಂಡು ‘ತಪಸ್‌’ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹಲವು ಹಂತದ ಪರೀಕ್ಷೆ ಮತ್ತು ಪರೀಕ್ಷಾರ್ಥ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ‍ಪೂರೈಸಿರುವ ‘ತಪಸ್‌’, ಏರೊ ಇಂಡಿಯಾ–2023ರಲ್ಲಿ ಪ್ರದರ್ಶನವಾಗಲಿದೆ ಎಂದು ಮೂಲಗಳು ಹೇಳಿವೆ. ಭಾರತೀಯ ಸೇನಾಪಡೆಗಳ ಬಳಕೆಗೆ ಮಾತ್ರವಲ್ಲ, ಜತೆಗೆ ವಿದೇಶಿ ಸೇನೆಗಳಿಗೂ ಈ ಡ್ರೋನ್‌ಗಳನ್ನು ಪೂರೈಕೆ ಮಾಡಲು ಒತ್ತು ನೀಡುವ ಸಾಧ್ಯತೆ ಇದೆ. ಈ ಕಾರಣದಿಂದಲೂ ಈ ಪ್ರದರ್ಶನವು ಮಹತ್ವ ಪಡೆದಿದೆ.

1,800 ಕೆ.ಜಿ.ತೂಕದ ಈ ಡ್ರೋನ್‌ನ ಪರೀಕ್ಷಾರ್ಥ ಹಾರಾಟವನ್ನು ಕರ್ನಾಟಕದ ಚಿತ್ರದುರ್ಗದ ಚಳ್ಳೆಕೆರೆ ಬಳಿಯ ವೈಮಾನಿಕ ಪರೀಕ್ಷಾ ವಲಯದಲ್ಲಿ ನಡೆಸಲಾಗಿತ್ತು. ಸತತ 24 ಗಂಟೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಇರುವ ಈ ಡ್ರೋನ್‌, ಗರಿಷ್ಠ 250 ಕಿ.ಮೀ. ದೂರದಷ್ಟು ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ. ಮೂರು ಸ್ವರೂಪದ ಮಾನವರಹಿತ ಚಾಲನಾ ತಂತ್ರಜ್ಞಾನವನ್ನು ತಪಸ್‌ ಹೊಂದಿದೆ. ತಂತಿರಹಿತ ರಿಮೋಟ್‌ನಿಂದ ನಿಯಂತ್ರಿಸಬಹುದಾದ ತಂತ್ರಜ್ಞಾನವು ಇದರ ಪ್ರಾಥಮಿಕ ಕಾರ್ಯಾಚರಣಾ ವ್ಯವಸ್ಥೆಯಾಗಿದೆ. ಪೂರ್ವಸೂಚಿತ ಕಾರ್ಯಾಚರಣೆಗಳನ್ನು, ತುರ್ತು ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ನಡೆಸುವ ಸವಲತ್ತೂ ಇದರಲ್ಲಿದೆ. ಜತೆಗೆ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಂಡರೆ, ಸ್ವಯಂಚಾಲಿತವಾಗಿ ವಾಪಸಾಗುವ ಸಾಮರ್ಥ್ಯವೂ ಈ ಡ್ರೋನ್‌ಗೆ ಇದೆ.

ದೇಶದ ಗಡಿ ಪ್ರದೇಶಗಳಲ್ಲಿ ಗಸ್ತು ನಡೆಸಲು ಅನುಕೂಲವಾಗುವಂತೆ ಈ ಡ್ರೋನ್‌ ಅನ್ನು ರೂಪಿಸಲಾಗಿದೆ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಗಡಿ ನಿಯಂತ್ರಣಾ ರೇಖೆಯಲ್ಲಿ (ಎಲ್‌ಒಸಿ) ಸತತ ಕಣ್ಗಾವಲು ನಡೆಸಲು ಈ ಡ್ರೋನ್‌ನಿಂದ ಅನುಕೂಲವಾಗಲಿದೆ. ಅಲ್ಲದೆ ಈ ಡ್ರೋನ್‌ ಗರಿಷ್ಠ 350 ಕೆ.ಜಿ. ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದ್ದು, ತುರ್ತು ಸಂದರ್ಭದಲ್ಲಿ ಸೇನಾ ಸಾಮಗ್ರಿಗಳನ್ನು ರವಾನಿಸಲೂ ಬಳಕೆಯಾಗಲಿದೆ.

ವಿಸ್ತೃತ ಹಂದರದ ‘ಮೇಕ್ ಫಾರ್ ವರ್ಲ್ಡ್’: ರಾಜನಾಥ್ ವ್ಯಾಖ್ಯಾನ

‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಕೇವಲ ಸ್ವಾವಲಂಬನೆ ಸಾಧಿಸುವ ಧ್ಯೇಯ ಹೊಂದಿದೆ ಎಂದು ಸೀಮಿತ ಅರ್ಥ ಕಲ್ಪಿಸಬೇಕಿಲ್ಲ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ಪಾಲುದಾರಿಕೆಯನ್ನು ಒಳಗೊಂಡ ‘ಮೇಕ್ ಫಾರ್ ವರ್ಲ್ಡ್’ ಎಂಬ ಅರ್ಥದಲ್ಲಿ ವಿಸ್ತೃತ ಹಂದರದಲ್ಲಿ ಕೆಲಸ ಮಾಡುತ್ತದೆ ಎಂಬ ವ್ಯಾಖ್ಯಾನವನ್ನು ಮುಂದಿಟ್ಟಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್. ಏರೊ ಇಂಡಿಯಾ–2023 ಇದೇ ಸ್ವರೂಪದಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಏರೊ ಇಂಡಿಯಾ–2023ರ ಅಂಗವಾಗಿ, 80ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಹಾಗೂ ಹೈಕಮಿಷನರ್‌ಗಳ ಜೊತೆಗಿನ ದುಂಡುಮೇಜಿನ ಸಭೆಯಲ್ಲಿ ರಾಜನಾಥ್ ಅವರು, ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಭಾರತದ ಮುನ್ನೋಟವನ್ನು ಮುಂದಿಟ್ಟರು. ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ಸಲಕರಣೆ ತಯಾರಿಕೆ ಉದ್ಯಮವು ಎಂಟು ಪಟ್ಟು ವೃದ್ಧಿಯಾಗಿದೆ. ಭಾರತದಲ್ಲಿ ತಯಾರಾದ ರಕ್ಷಣಾ ಸಾಮಗ್ರಿಗಳು 75ಕ್ಕೂ ಹೆಚ್ಚು ದೇಶಗಳಿಗೆ ರವಾನೆಯಾಗುತ್ತಿವೆ. ಭಾರತದ ಜೊತೆ ರಕ್ಷಣಾ ಬಾಂಧವ್ಯ ಹೊಂದಿರುವ ದೇಶಗಳ ಜೊತೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಪಾಲುದಾರಿಕೆ ಒಪ್ಪಂದಗಳು ಹಾಗೂ ದೇಶದಲ್ಲಿ ಖಾಸಗಿಯವರನ್ನು ಒಳಗೊಂಡಂತೆ ರಕ್ಷಣಾ ಉದ್ಯಮದ ಬೆಳವಣಿಗೆಗೆ ಕಲ್ಪಿಸಿರುವ ಪೂರಕ ವಾತಾವರಣವೇ ಈ ಬೆಳವಣಿಗೆಗೆ ಕಾರಣ ಎಂಬುದು ಅವರ ಮಾತು.

ಶಸ್ತ್ರಾಸ್ತ್ರ ಹೊಂದುವ ವಿಚಾರದಲ್ಲಿ ವಿಶ್ವದಲ್ಲಿ ಕೆಲವೇ ದೇಶಗಳು ಬಲಿಷ್ಠ ಎಂದು ಪರಿಗಣಿಸುವುದರಲ್ಲಿ ಭಾರತಕ್ಕೆ ನಂಬಿಕೆಯಿಲ್ಲ. ಕೇವಲ ಒಂದು ದೇಶದ ಗ್ರಾಹಕನಾಗಿಯೇ ಉಳಿಯುವುದು ಅಥವಾ ಪೂರೈಕೆದಾರ ದೇಶವಾಗಿಯೇ ಗುರುತಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಪರಸ್ಪರ ಗೌರವ ಹಾಗೂ ಸೌರ್ವಭೌಮತೆಯಲ್ಲಿ ನಂಬಿಕೆ ಇರಿಸಿರುವ ಭಾರತವು, ರಕ್ಷಣಾ ಉದ್ಯಮದಲ್ಲಿ ಪಾಲುದಾರಿಕೆಯನ್ನು ಬಯಸುತ್ತದೆ ಎಂಬುದು ರಾಜನಾಥ್ ಅವರ ಪ್ರತಿಪಾದನೆ. ‘ಖರೀದಿದಾರ’ ಮತ್ತು ‘ಮಾರಾಟಗಾರ’ ಎಂಬ ಪರಿಕಲ್ಪನೆಗಳನ್ನು ‘ಸಹ–ಅಭಿವೃದ್ಧಿಪಡಿಸುವವ’ ಮತ್ತು ‘ಸಹ–ತಯಾರಕ’ ಎಂಬ ದೃಷ್ಟಿಕೋನದಲ್ಲಿ ನೋಡಲು ಭಾರತ ಬಯಸುತ್ತಿದೆ. ಇದನ್ನೇ ಮೇಕ್ ಫಾರ್ ವರ್ಲ್ಡ್ ಎಂಬುದಾಗಿ ಅವರು ಕರೆದಿದ್ದಾರೆ.

‘ನಾವು ಪ್ರಮುಖ ರಕ್ಷಣಾ ಸಾಮಗ್ರಿ ಖರೀದಿದಾರರು. ಹಾಗೆಯೇ ಮಹತ್ವದ ರಕ್ಷಣಾ ಉಪಕರಣಗಳ ರಫ್ತುದಾರರೂ ಆಗಿದ್ದೇವೆ. ಖರೀದಿಸುವಾಗ ಕೆಲವರು ಮಾತ್ರ ತಂತ್ರಜ್ಞಾನ ಹಂಚಿಕೊಳ್ಳುತ್ತಾರೆ ಹಾಗೂ ಭಾರತದಲ್ಲಿ ಘಟಕಗಳನ್ನು ತೆರೆದು ಸ್ಥಳೀಯ ತಯಾರಕರ ಜೊತೆಯಾಗಿ ಕೆಲಸ ಮಾಡಲು ಸಿದ್ಧರಿರುತ್ತಾರೆ. ಆದರೆ, ನಾವು ನಮ್ಮ ರಕ್ಷಣಾ ಸಲಕರಣೆಗಳನ್ನು ಮಾರಾಟ ಮಾಡುವಾಗ, ಆ ದೇಶಗಳಿಗೆ ಸಂಪೂರ್ಣ ರಕ್ಷಣಾ ಸಹಕಾರ ನೀಡುತ್ತೇವೆ. ರಕ್ಷಣಾ ತಂತ್ರಜ್ಞಾನ ಹಂಚಿಕೆ, ತರಬೇತಿ ನೀಡಿಕೆ ಹಾಗೂ ಜಂಟಿ ತಯಾರಿಕೆಗೆ ನಾವು ಮುಂದಾಗುತ್ತೇವೆ. ವಸುಧೈವ ಕುಟುಂಬಕಂ ಹಾಗೂ ಇಡೀ ಜಗತ್ತೇ ಒಂದು ಕುಟುಂಬ ಎಂಬ ಪರಿಕಲ್ಪನೆಗಳು ಭಾರತದ ನಿಲುವಿನಲ್ಲಿ ಅಡಕವಾಗಿವೆ’ ಎಂದು ಹೇಳಿದ್ದಾರೆ.

ಸವಾಲು ಎದುರಿಸಲು ಸನ್ನದ್ಧ: ಭಾರತದಲ್ಲಿ ಅಭಿವೃದ್ಧಿ ಪಥದಲ್ಲಿರುವ ರಕ್ಷಣಾ ಉದ್ಯಮದ ಸಾಮರ್ಥ್ಯಗಳನ್ನು ರಕ್ಷಣಾ ಸಚಿವರು ವಿವರಿಸಿದ್ದಾರೆ.

ಡ್ರೋನ್, ಸೈಬರ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರೇಡಾರ್ ಮೊದಲಾದ ಕ್ಷೇತ್ರಗಳನ್ನೂ ಒಳಗೊಂಡ ತಯಾರಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೆಚ್ಚುತ್ತಿರುವ ಬೇಡಿಕೆ ಸವಾಲುಗಳನ್ನು ಎದುರಿಸಲು ಭಾರತದ ರಕ್ಷಣಾ ತಯಾರಿಕೆ ವಲಯ ಸನ್ನದ್ಧವಾಗಿದೆ. ಸವಾಲುಗಳನ್ನು ಸ್ವೀಕರಿಸಿಯೇ, ಲಘು ಯುದ್ಧವಿಮಾನ ಹಾಗೂ ಲಘು ಬಹೂಪಯೋಗಿ ಹೆಲಿಕಾಪ್ಟರ್‌ಗಳನ್ನು ನಿರ್ಮಿಸಲಾಗಿದೆ ಎಂದು ರಾಜನಾಥ್ ಅವರು ನಿದರ್ಶನಗಳನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ರಕ್ಷಣಾ ಸಾಮಗ್ರಿ ತಯಾರಿಕೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ವಲಯದಲ್ಲಿ ಇನ್ನಷ್ಟು ಹೂಡಿಕೆ ಮತ್ತು ಪಾಲುದಾರಿಕೆಗೆ ಮುಕ್ತ ಆಹ್ವಾನ ನೀಡಿದ್ದಾರೆ.

ಆಧಾರ: ಏರೊ ಇಂಡಿಯಾ–2023, ಪಿಐಬಿ, ಪಿಟಿಐ, ಡಿಆರ್‌ಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT