ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯ | ‘ಚೇಸಿಂಗ್ ಕಿಂಗ್’ ಕೊಹ್ಲಿ

Last Updated 25 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವ ಆಟವೆಂದರೆ ವಿರಾಟ್ ಕೊಹ್ಲಿಗೆ ಅದೇನೋ ಅಗಾಧ ಪ್ರೀತಿ. ಅವರೊಳಗಿನ ಶಕ್ತಿ ದುಪ್ಪಟ್ಟಾಗಿಬಿಡುತ್ತದೆ. ಚುರುಕು ಬುದ್ಧಿಮತ್ತೆಯ ವೇಗ ಇಮ್ಮಡಿಯಾಗುತ್ತದೆ. ಕೊನೆಯ ಎಸೆತದವರೆಗೂ ಛಲ ಬಿಡದೇ ಮಾಡುವ ಬ್ಯಾಟಿಂಗ್‌ನಲ್ಲಿ ಕ್ರಿಕೆಟ್‌ ಕಾಪಿಬುಕ್ ಹೊಡೆತಗಳು ಲಯ ತಪ್ಪುವುದಿಲ್ಲ.

ಮೆಲ್ಬರ್ನ್‌ನಲ್ಲಿ ಭಾನುವಾರ ರಾತ್ರಿ ಪಾಕಿಸ್ತಾನ ಎದುರಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಅವರ ಬ್ಯಾಟಿಂಗ್ ಕೂಡ ಈ ಮಾತಿಗೆ ಉದಾಹರಣೆ. ಅಲ್ಲಿ ಹೊಡೆದ ಅಜೇಯ 82 ರನ್‌ಗಳ ಬಗ್ಗೆಯೇ ಈಗ ಕ್ರಿಕೆಟ್‌ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ವಿರಾಟ್ ವೃತ್ತಿಜೀವನದಲ್ಲಿಯೇ ಅತ್ಯಂತ ಸುಂದರ ಹಾಗೂ ಶ್ರೇಷ್ಠ ಇನಿಂಗ್ಸ್‌ ಎಂದು ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ದಿಗ್ಗಜರು ಶ್ಲಾಘಿಸಿದ್ದಾರೆ.

ಇದೀಗ ಈ ಸ್ಕೋರ್‌ ಸುತ್ತ ವಿಶ್ವದಾಖಲೆಗಳು ಸಾಲುಗಟ್ಟುತ್ತಿವೆ. ಭಾರತ ತಂಡವು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟಿದ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ 20ನೇ ಅರ್ಧಶತಕ ಇದಾಗಿದೆ. ಎರಡನೇ ಇನಿಂಗ್ಸ್‌ನಲ್ಲಿ ಇಷ್ಟು ಬಾರಿ 50ರ ಗಡಿ ದಾಟಿದವರು ಮತ್ತೊಬ್ಬರಿಲ್ಲ. ಅಲ್ಲದೇ ಅವರು ಚೇಸಿಂಗ್‌ ಇನಿಂಗ್ಸ್‌ಗಳಲ್ಲಿ ಗಳಿಸಿರುವುದು 1983 ರನ್‌ಗಳನ್ನು.ಈ ಪೈಕಿ ಕೊಹ್ಲಿಯವರ 16 ಅರ್ಧಶತಕಗಳು ತಂಡದ ಗೆಲುವಿಗೆ ಕಾರಣವಾಗಿರುವುದು ಕೂಡ ದಾಖಲೆ ಎಂದು ಕ್ರಿಕೆಟ್ ಅಂಕಿ ಸಂಖ್ಯೆ ತಜ್ಞ ಎಚ್‌.ಆರ್. ಗೋಪಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾರತವು ಚೇಸಿಂಗ್‌ನಲ್ಲಿ ಗೆದ್ದ ಪಂದ್ಯಗಳಲ್ಲಿ ಕೊಹ್ಲಿ ಒಟ್ಟು 1621 ರನ್‌ ಗಳಿಸಿದ್ದಾರೆ. ಇದು ಕೂಡ ಶ್ರೇಷ್ಠ ದಾಖಲೆಯೇ ಆಗಿದೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್‌ಗಳಲ್ಲಿ ಕೊಹ್ಲಿ (1974 ರನ್) ಈಗ ಅಗ್ರಸ್ಥಾನದಲ್ಲಿದ್ದಾರೆ. ಇನ್ನು 26 ರನ್‌ ಗಳಿಸಿದರೆ, ಎರಡು ಸಾವಿರ ರನ್‌ ಗಳಿಸಿದ ಮೊದಲ ಬ್ಯಾಟರ್‌ ಆಗುತ್ತಾರೆ. ಈ ಕ್ರಮಾಂಕದಲ್ಲಿ ಅವರು ಒಟ್ಟು 29 ಅರ್ಧಶತಕ ಗಳಿಸಿರುವುದು ವಿಶೇಷ.

ಕೊಹ್ಲಿ ಅಜೇಯ 82 ರನ್‌ ಗಳಿಸಿರುವುದು ಇದು ಎರಡನೇ ಸಲ. 2016ರಲ್ಲಿ ಮೊಹಾಲಿಯಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ 51 ಎಸೆತಗಳಲ್ಲಿ ಇದೇ ಮೊತ್ತ ಗಳಿಸಿದ್ದರು. ಅವತ್ತು 161 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವು 49 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ ತಂಡವನ್ನು ಗೆಲುವಿನ ದಡ ಸೇರಿಸಿದ್ದು ಕೊಹ್ಲಿಯೇ.

‘ಮೊಹಾಲಿಯಲ್ಲಿ ಕೊಹ್ಲಿ ಆಡಿದ್ದ ಆ ಇನಿಂಗ್ಸ್‌ ಶ್ರೇಷ್ಠವಾಗಿತ್ತು. ಆದರೆ ಮೆಲ್ಬರ್ನ್‌ ಇನಿಂಗ್ಸ್‌ ಅದಕ್ಕಿಂತಲೂ ಉತ್ಕೃಷ್ಟವಾಗಿದೆ. ಎರಡು ಬಾರಿಯೂ ತಂಡವನ್ನು ಸೋಲಿನ ದವಡೆಯಿಂದ ಜಯದತ್ತ ಕೊಂಡೊಯ್ದಿದ್ದಾರೆ. ಅದೂ ವಿದೇಶಿ ನೆಲದಲ್ಲಿ ಕೊನೆಯ ಎಸೆತದವರೆಗೂ ಜವಾಬ್ದಾರಿಯುತ ಹಾಗೂ ಚಾಣಾಕ್ಷತನ ಮೇಳೈಸಿದ ಬ್ಯಾಟಿಂಗ್ ಅವರಿಂದ ಮೂಡಿಬಂದಿದೆ’ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.

ಸ್ವತಃ ಕೊಹ್ಲಿ ಕೂಡ ಮೊಹಾಲಿಗಿಂತಲೂ ಮೆಲ್ಬರ್ನ್‌ನ ಆಟ ತೃಪ್ತಿ ನೀಡಿದೆ ಎಂದೂ ಹೇಳಿಕೊಂಡಿದ್ದಾರೆ.

33 ವರ್ಷದ ಕೊಹ್ಲಿ ಈಗ ಇನ್ನೊಂದು ದಾಖಲೆಗೂ ಒಡೆಯರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ (3,794 ರನ್) ಏರಿದ್ದಾರೆ. ರೋಹಿತ್ ಶರ್ಮಾ (3,741) ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (3,531 ರನ್) ಅವರಿಗೆ ನಿಕಟ ಸ್ಪರ್ಧೆ ಒಡ್ಡಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಒಟ್ಟು 22 ಪಂದ್ಯಗಳಲ್ಲಿ ಆಡಿರುವ ಅವರು 927 ರನ್ ಗಳಿಸಿದ್ದಾರೆ. ಒಟ್ಟಾರೆ ಮೂರನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿರುವ ಶ್ರೀಲಂಕಾದ ಮಹೇಲ ಜಯವರ್ಧನೆ (1,016) ಅವರನ್ನು ಹಿಂದಿಕ್ಕಲು 89 ರನ್‌ಗಳ ಅಗತ್ಯವಿದೆ. ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ (965) ಇದ್ದಾರೆ. ಕೊಹ್ಲಿ ಇದೇ ಲಯದಲ್ಲಿ ಮುಂದುವರಿದರೆ ಈ ವಿಶ್ವಕಪ್ ಟೂರ್ನಿಯಲ್ಲಿಯೇ ಈ ದಾಖಲೆ ರಚನೆಯಾಗಬಹುದು!

ಮೂರೂ ಮಾದರಿಗಳಲ್ಲಿ ಸೇರಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿಯೂ ಕೊಹ್ಲಿ (24,212 ರನ್) ಆರನೇ ಸ್ಥಾನಕ್ಕೇರಿದ್ದು, ಸದ್ಯ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಮಾಡಿದ್ದ ದಾಖಲೆ (24,208) ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು (ಸಚಿನ್ ತೆಂಡೂಲ್ಕರ್; 34,357) ಕೊಹ್ಲಿಗೆ ಇನ್ನೂ ಹತ್ತು ಸಾವಿರಕ್ಕಿಂತಲೂ ಹೆಚ್ಚು ರನ್‌ಗಳು ಬೇಕು.

‘ದಾಖಲೆಗಳು ನಿರ್ಮಾಣವಾಗುವುದೇ ಮುರಿಯಲು’ ಎಂಬುದು ಕ್ರೀಡಾಕ್ಷೇತ್ರದಲ್ಲಿನ ಜನಪ್ರಿಯ ಮಾತು. ಆದರೆ ಎಷ್ಟೇ ದಾಖಲೆಗಳ ರಾಶಿ ಹಾಕಿದರೂ ಆಟಗಾರ ನೆನಪಿನಲ್ಲಿ ಉಳಿಯುವುದು ತನ್ನ ತಂಡವನ್ನು ಕಠಿಣ ಪರಿಸ್ಥಿತಿಯಿಂದ ಮೇಲೆತ್ತಿ ಜಯದ ಕಾಣಿಕೆ ನೀಡಿದಾಗ ಮಾತ್ರ. ಅದು 1983ರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಗಳಿಸಿದ ಅಜೇಯ 175 ರನ್‌ ಗಳಿರಬಹುದು. 2007ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಜೋಗಿಂದರ್ ಶರ್ಮಾ ಅವರ ಕೊನೆಯ ಓವರ್‌ ಬೌಲಿಂಗ್ ಆಗಿರಬಹುದು. 2000–01ರ ಕೋಲ್ಕತ್ತಾ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಎದುರು ವಿವಿಎಸ್‌ ಲಕ್ಷ್ಮಣ್ ಮತ್ತು ದ್ರಾವಿಡ್‌ ಅವರ ಅಮೋಘ ಬ್ಯಾಟಿಂಗ್‌ ಇರಬಹುದು. ಅದೇ ಸಾಲಿಗೆ ಕೊಹ್ಲಿಯ ಮೆಲ್ಬರ್ನ್‌ ಇನಿಂಗ್ಸ್‌ ಸೇರುತ್ತದೆ. ಬಹುಕಾಲ ನೆನಪಿನ ಪುಟದಲ್ಲಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT