ಸೋಮವಾರ, ಮಾರ್ಚ್ 1, 2021
29 °C

ಆಳ-ಅಗಲ| ವರಮಾನ ಹಂಚಿಕೆ: ಆಸ್ಟ್ರೇಲಿಯಾ–ಗೂಗಲ್‌ ಕುಸ್ತಿ

ಉದಯ ಯು./ಜಯಸಿಂಹ ಆರ್./ಅಮೃತ ಕಿರಣ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಅಧಿಕಾರ

ಆಸ್ಟ್ರೇಲಿಯಾದ ಸುದ್ದಿಸಂಸ್ಥೆಗಳ ಸುದ್ದಿಗಳನ್ನು ತಮ್ಮ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಪ್ರದರ್ಶಿಸುವ ಕಂಪನಿಗಳು, ಹೀಗೆ ಪ್ರದರ್ಶಿಸಿದ ಸುದ್ದಿಗಳಿಗೆ ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯಾದ ‘ನ್ಯೂಸ್ ಮೀಡಿಯಾ ಮ್ಯಾಂಡೆಟರಿ ಬಾರ್ಗೇನಿಂಗ್ ಕೋಡ್-2020’ ಹೇಳುತ್ತದೆ.

ಈವರೆಗೆ ಹೀಗೆ ಪ್ರದರ್ಶಿಸಲಾದ/ಪ್ರಕಟಿಸಲಾದ/ಪ್ರಸಾರ ಮಾಡಲಾದ ಸುದ್ದಿಗಳಿಗೆ ಪ್ರತಿಯಾಗಿ ಸುದ್ದಿಸಂಸ್ಥೆಗಳಿಗೆ ಡಿಜಿಟಲ್ ಪ್ಲಾಟ್‌ಫಾರಂಗಳು ಯಾವುದೇ ಶುಲ್ಕ ಪಾವತಿಸುತ್ತಿಲ್ಲ. ಸುದ್ದಿಗಳಿಗಾಗಿ ಹಣ ಪಾವತಿಸುವಂತೆ ಸುದ್ದಿಸಂಸ್ಥೆಗಳು ಡಿಜಿಟಲ್ ಪ್ಲಾಟ್‌ಫಾರಂಗಳ ಜತೆ ಚೌಕಾಸಿ ನಡೆಸಲು ಕಾನೂನಾತ್ಮಕ ಬೆಂಬಲವಿರಲಿಲ್ಲ. ಚೌಕಾಸಿ ನಡೆಸುವ ಅಧಿಕಾರವನ್ನು ಮಾಧ್ಯಮಸಂಸ್ಥೆಗಳಿಗೆ ನೀಡುವ ಉದ್ದೇಶದಿಂದ ಈ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಚೌಕಾಸಿ ನಡೆಸುವಲ್ಲಿ ಗೂಗಲ್, ಫೇಸ್‌ಬುಕ್‌ನಂತಹ ದೊಡ್ಡ ದೊಡ್ಡ ಡಿಜಿಟಲ್ ಪ್ಲಾಟ್‌ಫಾರಂಗಳು ಹಾಗೂ ಮಾಧ್ಯಮಸಂಸ್ಥೆಗಳ ನಡುವೆ ಇರುವ ಅಧಿಕಾರದ ಅಸಮತೋಲನವನ್ನು ಈ ಕಾನೂನು ಹೋಗಲಾಡಿಸುತ್ತದೆ ಎಂದು ಕೋಡ್‌ನಲ್ಲಿ ವಿವರಿಸಲಾಗಿದೆ.

ಫೇಸ್‌ಬುಕ್ ನ್ಯೂಸ್‌ಫೀಡ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ನ್ಯೂಸ್ ಟ್ಯಾಬ್, ಗೂಗಲ್ ಸರ್ಚ್, ಗೂಗಲ್ ನ್ಯೂಸ್ ಮತ್ತು ಗೂಗಲ್ ಡಿಸ್ಕವರ್‌ ಪ್ಲಾಟ್‌ಫಾರಂಗಳಿಗೆ ಇದು ಅನ್ವಯವಾಗುತ್ತದೆ. ಸುದ್ದಿಗಳಿಂದ ಲಭ್ಯವಾಗುವ ವರಮಾನವನ್ನು ಸುದ್ದಿ ಒದಗಿಸುವವರ ಜತೆ ಹಂಚಿಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದ ಡಿಜಿಟಲ್ ಪ್ಲಾಟ್‌ಫಾರಂಗಳನ್ನು ಮಾತ್ರ ಈ ನಿಯಮಗಳಿಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಎಲ್ಲಾ ಸ್ವರೂಪದ ಡಿಜಿಟಲ್ ಪ್ಲಾಟ್‌ಫಾರಂಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ ಎಂದು ಕೋಡ್‌ನಲ್ಲಿ ವಿವರಿಸಲಾಗಿದೆ.

ಹಣ ಪಾವತಿಗಾಗಿ ಈವರೆಗೆ ನಡೆದ ಹೋರಾಟ

ಗೂಗಲ್‌ ಮತ್ತು ಅಂತಹ ಇತರ ತಂತ್ರಜ್ಞಾನ ಕಂಪನಿಗಳ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳಿಗೆ ಪ್ರಕಾಶನ ಸಂಸ್ಥೆಗಳಿಗೆ ಹಣ ಪಾವತಿಸಲು ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದಕ್ಕೆ ಕಾನೂನೊಂದನ್ನು ಮೊದಲು ಜಾರಿಗೆ ತಂದಿದ್ದು ಫ್ರಾನ್ಸ್‌. ಆದರೆ ಪ್ರಕಾಶಕರಿಗೆ ಹಣ ಪಾವತಿಸಲು ಗೂಗಲ್ ಒಪ್ಪಲಿಲ್ಲ. ಬದಲಾಗಿ ಸುದ್ದಿಗಳ ಥಂಬ್‌ನೇಲ್‌ಗಳನ್ನು ಉಚಿತವಾಗಿ ನೀಡಿದರೆ ಮಾತ್ರ ವೇದಿಕೆಯಲ್ಲಿ ಪ್ರಕಟಿಸುವುದಾಗಿ ಹೇಳಿತು. ಪ್ರಕಾಶಕರು ಪರವಾನಗಿ ಶುಲ್ಕ ನೀಡದಿದ್ದಲ್ಲಿ, ಸುದ್ದಿ ತುಣುಕುಗಳನ್ನು ತನ್ನ ವೇದಿಕೆಯಲ್ಲಿ ಪ್ರಕಟಿಸುವುದಿಲ್ಲ ಎಂದು ಗೂಗಲ್ ಸಂಸ್ಥೆಯು ಫ್ರಾನ್ಸ್ ಸರ್ಕಾರದೊಂದಿಗೆ ಜಟಾಪಟಿಗೆ ಇಳಿದಿತ್ತು. 

ಫ್ರಾನ್ಸ್‌ನಲ್ಲಿ ತಳೆದ ನಿಲುವನ್ನು ಜರ್ಮನಿಯಲ್ಲಿಯೂ ಗೂಗಲ್ ಅಳವಡಿಸಿಕೊಂಡಿತು.

ಜರ್ಮನಿಯ ಪ್ರಕಾಶಕ ಆಕ್ಸೆಲ್ ಸ್ಪ್ರಿಂಗರ್, ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್ ಅವರ ನ್ಯೂಸ್ ಕಾರ್ಪ್‌ ಹೋರಾಟದ ಮುಂಚೂಣಿಯಲ್ಲಿದ್ದವು. ಸುದ್ದಿಸಂಸ್ಥೆಗಳು ಪರವಾನಗಿ ಪಡೆಯಬೇಕು ಎಂದು ತಂತ್ರಜ್ಞಾನ ಸಂಸ್ಥೆಗಳು ತಂದಿರುವ ನಿಯಮವು ಹಣ ಪಾವತಿಯಿಂದ ತಪ್ಪಿಸಿಕೊಳ್ಳುವ ಯತ್ನ ಎಂದು ಐರೋಪ್ಯ ಪ್ರಕಾಶಕರ ಒಕ್ಕೂಟ ಅಭಿಪ್ರಾಯಪಟ್ಟಿತು.

ಕಳೆದ ವರ್ಷ ಐರೋಪ್ಯ ಒಕ್ಕೂಟವು ಹೊಸ ಆನ್‌ಲೈನ್ ಹಕ್ಕುಸ್ವಾಮ್ಯ ನಿಯಮಗಳನ್ನು ಪರಿಚಯಿಸಿತು. ಪ್ರಕಾಶಕರು ಮತ್ತು ತಂತ್ರಜ್ಞಾನ ಸಂಸ್ಥೆಗಳು ಸುದ್ದಿ ಹಂಚಿಕೆಗೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳಲು ನೆರವಾಗುವುದು ಇದರ ಉದ್ದೇಶವಾಗಿತ್ತು.

ಸ್ಪೇನ್ ದೇಶವು 2014ರಲ್ಲಿ ‘ಸ್ನಿಪ್ಪೆಟ್ ಟ್ಯಾಕ್ಸ್’ ಜಾರಿಗೆ ತಂದಿತು. ಗೂಗಲ್ ನ್ಯೂಸ್‌ನಲ್ಲಿ ಕಾಣಿಸಿಕೊಳ್ಳುವ ‘ಕಂಟೆಂಟ್‌’ಗೆ ಗೂಗಲ್ ಹಣ ಪಾವತಿ ಮಾಡಬೇಕು ಎಂಬುದು ಈ ತೆರಿಗೆಯ ಉದ್ದೇಶ. ಸ್ನಿಪ್ಪೆಟ್ಸ್ ಅಥವಾ ಸುದ್ದಿ ತುಣುಕುಗಳು ಕಾಣಿಸಿಕೊಳ್ಳುವ ಗೂಗಲ್‌ ವೇದಿಕೆಗೆ ಶುಲ್ಕ ವಿಧಿಸಲು ದೇಶದ ಸುದ್ದಿ ಸಂಸ್ಥೆಗಳಿಗೆ ಅಧಿಕಾರ ನೀಡಲಾಯಿತು. ಇದರ ಫಲವಾಗಿ ಈಗಲೂ ಸ್ಪೇನ್‌ನ ಪ್ರಕಾಶಕರ ಸುದ್ದಿಗಳು ಗೂಗಲ್‌ ನ್ಯೂಸ್‌ನಲ್ಲಿ ಕಾಣಸಿಗುವುದಿಲ್ಲ.

2019ರಲ್ಲಿ ‘ಪತ್ರಿಕೋದ್ಯಮ ಸ್ಪರ್ಧೆ ಮತ್ತು ಸಂರಕ್ಷಣಾ ಕಾಯ್ದೆ’ಯನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಲಾಯಿತು. ಆನ್‌ಲೈನ್‌ನಲ್ಲಿ ಸುದ್ದಿ ಪ್ರಕಟಿಸುವ ಪ್ರಕಾಶಕರು ತಮ್ಮ ಕಂಟೆಂಟ್ ಅನ್ನು ನೀಡುವುದಕ್ಕೆ ಸಂಬಂಧಿಸಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ಒದಗಿಸುವುದು ಈ ಕಾಯ್ದೆಯ ಉದ್ದೇಶವಾಗಿತ್ತು. 

ಮಣಿದ ಗೂಗಲ್: ಮಾಧ್ಯಮ ಸಂಸ್ಥೆಗಳು ಹಾಗೂ ವಿವಿಧ ಸರ್ಕಾರಗಳಿಂದ ತೀವ್ರ ಒತ್ತಡ ಎದುರಿಸಿದ ಗೂಗಲ್, ಉದ್ವಿಗ್ನತೆ ತಣಿಸಲು ಮುಂದಾಯಿತು. ಆರು ದೇಶಗಳ ಸುಮಾರು 200 ಸುದ್ದಿ ಸಂಸ್ಥೆಗಳಿಗೆ ಮುಂದಿನ 3 ವರ್ಷಗಳಲ್ಲಿ 100 ಕೋಟಿ ಡಾಲರ್ (₹7,500 ಕೋಟಿ) ಹಣ ಪಾವತಿ ಮಾಡುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಘೋಷಿಸಿತ್ತು.

ಜರ್ಮನಿ, ಬ್ರೆಜಿಲ್, ಅರ್ಜೆಂಟೀನಾ, ಕೆನಡಾ, ಬ್ರಿಟನ್ ಹಾಗೂ ಆಸ್ಟ್ರೇಲಿಯಾ ಜತೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ತಿಳಿಸಿದ್ದರು. ಜರ್ಮನಿಯ ಡೆರ್ ಸ್ಪೀಗೆಲ್ ಮತ್ತು ಸ್ಟರ್ನ್ ಹಾಗೂ ಬ್ರೆಜಿಲ್‌ನ ಫೋಲ್ಹಾ ಡಿ ಎಸ್ ಪಾಲೊ ಸಂಸ್ಥೆಗಳು ಇದರಲ್ಲಿ ಸೇರಿವೆ.

ಫೇಸ್‌ಬುಕ್‌ನಿಂದ ಪಾವತಿ: ಅಮೆರಿಕದ ಮಾಧ್ಯಮ ಸಂಸ್ಥೆಗಳಾದ ವಾಲ್‌ಸ್ಟ್ರೀಟ್ ಜರ್ನಲ್, ವಾಷಿಂಗ್ಟನ್ ಪೋಸ್ಟ್, ಯುಎಸ್‌ಎ ಟುಡೇ ಮೊದಲಾದ ಸಂಸ್ಥೆಗಳಿಗೆ ಹಣ ಪಾವತಿಸುವ ತನ್ನದೇ ಹೊಸ ನಿಯಮವನ್ನು ಫೇಸ್‌ಬುಕ್ ಪ್ರಕಟಿಸಿತ್ತು. ಸ್ಥಳೀಯ ಸುದ್ದಿ ಪಾಲುದಾರಿಕೆ ಮತ್ತು ಥರ್ಡ್ ಪಾರ್ಟಿ ಫ್ಯಾಕ್ಟ್ ಚೆಕಿಂಗ್ ಮೊದಲಾದ ಕಾರ್ಯಕ್ರಮಗಳಿಗಾಗಿ 300 ಮಿಲಿಯನ್ ಡಾಲರ್ (₹2,250 ಕೋಟಿ) ಹೂಡಿಕೆ ಮಾಡುತ್ತಿರುವುದಾಗಿ ಅದು 2019 ರಲ್ಲಿ ತಿಳಿಸಿತ್ತು.

ಗೂಗಲ್‌ನ ನಿಲುವೇನು?

ಸುದ್ದಿಗಾಗಿ ಹಣ ಪಾವತಿ ಮಾಡುವಂತೆ ಪ್ರಕಾಶಕರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ, ಉತ್ತಮ ಗುಣಮಟ್ಟದ ಸುದ್ದಿ, ಲೇಖನ, ವಿಶ್ಲೇಷಣೆಗಳನ್ನು ನೀಡುವ ಕೆಲವು ಸಂಸ್ಥೆಗಳಿಗೆ ಹಣ ಪಾವತಿ ಮಾಡಲು ಗೂಗಲ್‌ ಮುಂದಾಗಿದೆ.

ಪ್ರಕಾಶಕರ ಜತೆಗೆ ಒಪ್ಪಂದ ಮಾಡಿಕೊಂಡು ಸುದ್ದಿಗಳನ್ನು ಪ್ರಸಾರ ಮಾಡುವ ವ್ಯವಸ್ಥೆಯೊಂದಕ್ಕೆ ಗೂಗಲ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ. ದಿನನಿತ್ಯದ ಸಾಮಾನ್ಯ ಸುದ್ದಿಗಳಿಗೆ ಬದಲಾಗಿ, ವಿಶ್ಲೇಷಣೆ, ಉತ್ತಮ ಗುಣಮಟ್ಟದ ಸುದ್ದಿಗಳ ಮೇಲೆ ಗಮನ ಕೇಂದ್ರೀಕರಿಸುವುದಾಗಿ ಸಂಸ್ಥೆ ಹೇಳಿದೆ. ಆರಂಭದಲ್ಲಿ ಬ್ರೆಜಿಲ್‌, ಆಸ್ಟ್ರೇಲಿಯಾ ಹಾಗೂ ಜರ್ಮನಿಯ ಕೆಲವು ಸಂಸ್ಥೆಗಳು ಗೂಗಲ್‌ನ ಈ ಯೋಜನೆಯಲ್ಲಿ ಕೈಜೋಡಿಸಲಿವೆ ಎನ್ನಲಾಗುತ್ತಿದೆ.

ಕೆಲವು ಪ್ರಮುಖ ಸುದ್ದಿ ಸಂಸ್ಥೆಗಳು ಪ್ರಕಟಿಸುವ ಇಂಥ ವಿಶೇಷ ಸುದ್ದಿಗಳನ್ನು ಗ್ರಾಹಕರು ಹಣ ಪಾವತಿಸಿ (ಚಂದಾದಾರರಾಗಿ) ಓದಬೇಕಾಗುತ್ತದೆ. ಗೂಗಲ್‌ ಸಂಸ್ಥೆಯೇ ಹಣ ಪಾವತಿಸಿ ಇಂಥವುಗಳನ್ನು ಗ್ರಾಹಕರಿಗೆ ಒದಗಿಸುತ್ತದೆಯೇ ಎಂಬ ಬಗ್ಗೆ ಇನ್ನೂ ಪೂರ್ಣ ಸ್ಪಷ್ಟತೆ ಇಲ್ಲ. ಒಂದುವೇಳೆ ಹಾಗೇನಾದರೂ ಆದರೆ, ಗೂಗಲ್‌ನಲ್ಲಿ ಉಚಿತವಾಗಿ ಸುದ್ದಿ ಲಭ್ಯವಾಗುವಾಗ ಸುದ್ದಿ ಸಂಸ್ಥೆಗಳಿಗೆ ಚಂದಾದಾರರಾಗುವುದೇಕೆ ಎಂದು ಜನರು ದೂರ ಸರಿಯುವ ಸಾಧ್ಯತೆ ಇದೆ.

ಗೂಗಲ್‌ನ ಭಾಗವಾಗಿರುವ ‘ಗೂಗಲ್‌ ನ್ಯೂಸ್‌’, ಪ್ರಸಕ್ತ ಬೇರೆಬೇರೆ ಸುದ್ದಿ ಸಂಸ್ಥೆಗಳ ಪ್ರಮುಖ ಸುದ್ದಿಗಳ ತುಣುಕುಗಳನ್ನು ಲಿಂಕ್‌ ಜತೆಗೆ ಗ್ರಾಹಕರಿಗೆ ನೀಡುತ್ತಿದೆ. ಆಸಕ್ತರು ಅದರ ಮೇಲೆ ಕ್ಲಿಕ್‌ ಮಾಡಿದಾಗ ಸುದ್ದಿ ಸಂಸ್ಥೆಯ ವೆಬ್‌ಸೈಟ್‌ ತೆರೆದುಕೊಂಡು ಸುದ್ದಿಯನ್ನು ಓದಬಹುದಾಗಿದೆ.

ಈ ರೀತಿ ಸುದ್ದಿ ಹಂಚಿಕೆ ಮಾಡುವ ಮೂಲಕ ಗೂಗಲ್‌ ಸಂಸ್ಥೆ ಜಾಹೀರಾತು ವರಮಾನವನ್ನೂ ಗಳಿಸುತ್ತಿದೆ. ಸುದ್ದಿ ಸಂಸ್ಥೆಗಳಿಗೆ ಈ ಮಾಧ್ಯಮದಲ್ಲಿ ಹೆಚ್ಚಿನ ಓದುಗರೂ ಲಭಿಸುತ್ತಿದ್ದರು. ಆದ್ದರಿಂದ ಅವು ಈ ವ್ಯವಸ್ಥೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಕೊರೊನಾ ಕಾಲದಲ್ಲಿ ಪತ್ರಿಕೆಗಳ ಪ್ರಸರಣ ಸಂಖ್ಯೆ ಮತ್ತು ಜಾಹೀರಾತು ವರಮಾನ ಕಡಿಮೆಯಾದ್ದರಿಂದ ಗೂಗಲ್‌ ಸಂಸ್ಥೆ ಜಾಹೀರಾತಿನ ಮೂಲಕ ಗಳಿಸುವ ಮೊತ್ತದಲ್ಲಿ ಒಂದು ಭಾಗವನ್ನು ಸುದ್ದಿ ಸಂಸ್ಥೆಗಳಿಗೆ ನೀಡಬೇಕೆಂಬ ಒತ್ತಾಯ ಹೆಚ್ಚಿತು. ಕಳೆದ ಏಪ್ರಿಲ್‌ನಲ್ಲಿ ಫ್ರಾನ್ಸ್‌ ದೇಶವು ಇಂಥ ಒಂದು ನಿಯಮವನ್ನೇ ರೂಪಿಸಿತು. ಇದಾದ ನಂತರ ಬೇರೆಬೇರೆ ರಾಷ್ಟ್ರಗಳಲ್ಲೂ ಇಂಥ ಒತ್ತಡ ಹೆಚ್ಚಾಗಿದೆ.

ಭಾರತದಲ್ಲಿ ನಿಯಮಗಳಿಲ್ಲ

ಭಾರತದಲ್ಲಿ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಪ್ರಕಟವಾಗುವ/ಪ್ರದರ್ಶಿತವಾಗುವ/ಪ್ರಸಾರವಾಗುವ ಸುದ್ದಿಗಳಿಗೆ ಪ್ರತಿಯಾಗಿ ಸುದ್ದಿಸಂಸ್ಥೆಗಳಿಗೆ ಹಣ ಪಾವತಿಯಾಗುವುದಿಲ್ಲ. ಸುದ್ದಿಗಳ ಜತೆ ಬಿತ್ತರವಾಗುವ ಜಾಹೀರಾತಿನ ಆದಾಯವು ಗೂಗಲ್‌ ಮತ್ತು ಫೇಸ್‌ಬುಕ್‌ನಂತಹ ಡಿಜಿಟಲ್ ಪ್ಲಾಟ್‌ಫಾರಂಗಳಿಗೆ ಪಾವತಿಯಾಗುತ್ತದೆ. ಈ ಆದಾಯವನ್ನು ಜತೆ ಹಂಚಿಕೊಳ್ಳುವ ಬಗ್ಗೆ ಡಿಜಿಟಲ್ ಪ್ಲಾಟ್‌ಫಾರಂಗಳು ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಇದನ್ನು ಕಡ್ಡಾಯಗೊಳಿಸುವ ಯಾವ ಕಾನೂನು ಅಸ್ತಿತ್ವದಲ್ಲಿ ಇಲ್ಲ.

ಸುದ್ದಿಗಳು ಪ್ರಕಟವಾಗುವ ಜಾಲತಾಣಗಳಿಗೆ ನಿಗದಿತ ಅವಧಿಯಲ್ಲಿ ಲಭ್ಯವಾಗುವ 'ಹಿಟ್‌'ಗಳ ಆಧಾರದಲ್ಲಿ ಡಿಜಿಟಲ್ ಪ್ಲಾಟ್‌ಫಾರಂಗಳು ಸಣ್ಣ ಪ್ರಮಾಣದ ಆದಾಯವನ್ನು ನೀಡುತ್ತವೆ. ಆದರೆ ಎಷ್ಟು ಹಿಟ್‌ಗಳಿಗೆ ಎಷ್ಟು ಹಣ ಪಾವತಿ ಮಾಡಬೇಕು ಎಂಬುದರ ಬಗ್ಗೆ ಯಾವುದೇ ನಿಯಮಗಳು ಇಲ್ಲ. ಈ ಬಗ್ಗೆ ವ್ಯಾಜ್ಯ ತಲೆದೋರಿದರೆ, ಮೊಕದ್ದಮೆ ಹೂಡಲು ಅವಕಾಶವಿಲ್ಲ. ಈ ಕಾರಣದಿಂದ ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿಗಳಿಂದ ಲಭ್ಯವಾಗುವ ಆದಾಯದಲ್ಲಿ ಏಕರೂಪತೆ ಮತ್ತು ನಿರಂತರತೆ ಇಲ್ಲ.

ಫ್ರಾನ್ಸ್‌ ಮತ್ತು ಆಸ್ಟ್ರೇಲಿಯಾದಲ್ಲಿ ಜಾರಿಗೆ ತಂದಿರುವ ಕಾನೂನಿನಂತಹ ನಿಯಮಗಳನ್ನು ಭಾರತದಲ್ಲೂ ಜಾರಿಗೆ ತರಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಹಲವು ದಿನಪತ್ರಿಕೆಗಳು ಈಗಾಗಲೇ ಸಂಪಾದಕೀಯ ಪ್ರಕಟಿಸಿವೆ. ಇಂತಹ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಇಂತಹದ್ದೊಂದು ಬೇಡಿಕೆ ಹರಿದಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು