ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಮಠ ಸಂನ್ಯಾಸಿಯ ಸಂಸಾರವಾದರೆ...: ವೀಣಾ ಬನ್ನಂಜೆ

ಸಮಾಜಕ್ಕೆ ಇಷ್ಟೊಂದು ಜಗದ್ಗುರುಗಳ ಅಗತ್ಯ ಇದೆಯೇ?
Last Updated 12 ಫೆಬ್ರುವರಿ 2022, 1:22 IST
ಅಕ್ಷರ ಗಾತ್ರ

ಮಠ ಎಂದರೆ ಒಂದು ಆಶ್ರಮ.ಮಠ ಒಂದು ಸಂನ್ಯಾಸಿಯ ವಾಸಸ್ಥಾನ.ಅದು ಮುನಿಯೊಬ್ಬನ ತಾಣ.ಆದ್ದರಿಂದ ಮಠ ಒಂದು ಏಕಾಂತ ಜಾಗ.ಅಲ್ಲಿ ಒಂದು ಪವಿತ್ರ ತಪಸ್ಸು ನಡೆಯುತ್ತದೆ.ತಾನು ಮತ್ತು ಅವನು ಅನುಸಂಧಾನ ಮಾಡುವ ಸ್ಥಳ ಅದು.ಭಕ್ತನೊಬ್ಬ ಭಗವಂತನನ್ನು ಮಾತ್ರ ನಂಬಿ ನಡೆಯುವ ಕ್ಷೇತ್ರ.

ಅಂದರೆ ಅದು ಸಂಸಾರದ ಅಂಗಣವಲ್ಲ.ಸಂಸಾರದಿಂದ ತಪಸ್ವಿ ದೂರವಿರಲು ಹುಟ್ಟಿಕೊಂಡ ವ್ಯವಸ್ಥೆ.ಅದರ ಒಳಗೆ ಅವನು, ತಾನು ಮಾತ್ರ ಇರಬೇಕು. ಅದು ಸೌಕರ್ಯದ, ವ್ಯವಸ್ಥೆಯ ನೆಲೆಯಲ್ಲ.ಇಲ್ಲಿ ಆಸರೆ ಪಡೆಯಬೇಕು, ಊಟಕ್ಕಾಗಿ ಭಿಕ್ಷೆ ಬೇಡಬೇಕು.ಇದು ನಿಜವಾದ ಮಠದ ಅರ್ಥ.

ಹುಟ್ಟುತ್ತಾ ಯಾವುದು ಇದೆಯೋ ಬೆಳೆಯುತ್ತಾ ಅದು ಬೇರೆಯೇ ಆಗುತ್ತದೆ.ಪ್ರತಿಯೊಂದು ವಸ್ತುವೂ ಅರ್ಥ ಪರಿವರ್ತನೆ ಪಡೆಯುತ್ತದೆ.ಹಾಗೆ ಆಗುವುದಕ್ಕೆ ಆ ವಸ್ತುವಿನ ಜೊತೆಗೆ ಇರುವವನು ಕಾರಣ.ಮಠದ ಒಳಗೆ ಸಂನ್ಯಾಸಿ ಇದ್ದ.ನಿಧಾನಕ್ಕೆ ಮಠದ ಒಳಗೆ ಹೊರಗಿನವನನ್ನು ಬಿಟ್ಟ. ಹೊರಗಿದ್ದವರು ಒಳಗಾದರೆ ಒಳಗಿದ್ದವ ಹೊರಗಾದ.ಸಂಸಾರದಿಂದ ದೂರ ಇರಲು ಕಟ್ಟಿದ ಸ್ಥಳದೊಳಗೆ ದೊಡ್ಡ ಸಂಸಾರ ಬೆಳೆಯಿತು.ಕಟ್ಟಿಕೊಂಡ ಸಂಸಾರವಾದರೂ ಆದೀತು.ಇದು ಬೇಡ, ಹಾಗೆ ಬೆಳೆಸಿದ.ಭಿಕ್ಷೆ ಬೇಡಬೇಕಿದ್ದವ ಸಂಪತ್ತನ್ನೇ ಬೇಡಿದ‌.ಇದನ್ನು ಯಾರು ಮಾಡಿದರು, ಯಾರು ಕಾರಣ?ಸಂನ್ಯಾಸಿಯೇ ಮಾಡಿದ ಎಂದರೆ ತಪ್ಪಾದೀತು.

ಭಕ್ತನೂ ಅಷ್ಟೇ ಕಾರಣ.ಒಬ್ಬ ಸಂನ್ಯಾಸಿಯು ಕೆಡಲು ಅವನು ಮಾತ್ರ ಕಾರಣನಲ್ಲ.ಸಂನ್ಯಾಸಿಯೊಬ್ಬನ ಬ್ರಹ್ಮಚರ್ಯ, ಅವನ ನಿಷ್ಠೆ ಕೆಡದಂತೆ ನೋಡುವುದು ಸಮಾಜದ ಜವಾಬ್ದಾರಿ ಕೂಡ.ಇಬ್ಬರೊಳಗೆ ಒಬ್ಬರು ಮರೆತರೂ ಎಡವಿದಂತೆ.ಇಬ್ಬರೂ ಎಡವಿದರಂತೂ ಅಪಚಾರದ ಪರಾಕಾಷ್ಠೆ.

ಮಠದಲ್ಲಿ ತಾನು ಬದುಕುವುದು ಒಂದು ಕ್ರಮ.ಮಠಕ್ಕಾಗಿಯೇ ಬದುಕುವುದು ಇನ್ನೊಂದು ರೀತಿ.ಮಠದ ಒಳಗಿನ ಸಂನ್ಯಾಸಿಗೆ ಭಕ್ತಿ ಅಗತ್ಯ ಗುಣ.ಮಠವೇ ಸಂನ್ಯಾಸಿಗಿಂತ ದೊಡ್ಡದಾದರೆ ಭಕ್ತನು ಸಂಸಾರ ಬೆಳೆಸಿದ ಹಾಗೆ.ಹಾಗಾಗಿಯೇ ಮಠಗಳು ಸ್ವಾಮಿಯ ಮನೆಗಳಾದವು.ಮನೆ ಎಂದ ಮೇಲೆ ಸಂನ್ಯಾಸಿಯ ಸಂಸಾರವಾಯಿತು.ಮನೆಗಾದರೋ ಸಣ್ಣ ಆವಶ್ಯಕತೆ, ಇದಕ್ಕಾದರೋ ಭೀಮನ ಹೊಟ್ಟೆ.ಎಷ್ಟು ತಂದರೂ ಸಾಲದು.ಕಡೆಗೆ ತರುವುದೇ ಸ್ವಾಮಿಯ ಕಾಯಕ.

ಹೀಗೆ ಮಠಗಳೆಲ್ಲ ತಮ್ಮ ಆಕಾರ ಬೆಳೆಸಲು ಒದ್ದಾಡುತ್ತವೆ.ತಾನು ಇನ್ನೊಂದಕ್ಕಿಂತ ದೊಡ್ಡವನಾಗುವ ಪೈಪೋಟಿ.ಎಲ್ಲ ಸಂಸಾರಿಗಳಂತೆ ಸಂಪತ್ತು, ಅಧಿಕಾರ, ಬೆಳವಣಿಗೆಯ ಸ್ಪರ್ಧೆ.ಕಟ್ಟ ಕಡೆಗೆ ವಿರಕ್ತಿ ಕೇವಲ ಖಾವಿಯ ಬಣ್ಣದ ಹೆಸರಿಗೆ ಉಳಿಯಿತು, ಬಟ್ಟೆಗೆಟ್ಟಿತು.ಇದು ಈಗ ಸರ್ವತ್ರ ನಡೆಯುತ್ತಿರುವ ದುರಂತ.ಯಾರನ್ನು ದೂಷಿಸುವುದು?ಸಂನ್ಯಾಸಿಯನ್ನೋ, ಅವರ ಸುತ್ತ ಇರುವ ಭಕ್ತರನ್ನೋ?ಇಬ್ಬರೂ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.ಹಾಗೆ ನೋಡಿದರೆ, ಕಟ್ಟ ಕಡೆಗೆ ಎಲ್ಲ ಮಠಗಳೂ ‘ಬೇಲಿ ಮಠ’ಗಳೇ.ಒಂದಲ್ಲ ಒಂದು ಕಾರಣಕ್ಕೆ ಪ್ರತಿಯೊಬ್ಬರೂ ಆವರಣ ಕಟ್ಟಿಕೊಂಡಿದ್ದಾರೆ.ಇಂತಹ ವೇಳೆಯಲ್ಲಿ ಅಪರೂಪಕ್ಕೆ ಕೆಲವರು ಅಪವಾದ ಇದ್ದಾರೆ.ಈ ನನ್ನ ಮಾತು ಖಂಡಿತ ಅವರ ಕುರಿತಲ್ಲ.ಅಂಥ ಅಪರೂಪದವರನ್ನು ನೆನೆದು ಬಾಗಬೇಕು, ವಂದಿಸಬೇಕು.

ಮಠಗಳು ಅಧಿಕಾರಕ್ಕಾಗಿ, ಹಣಕ್ಕಾಗಿ ಹಪಹಪಿಸುವ ಕೇಂದ್ರಗಳಾದವು. ತಾನಾಗಿಯೇ ರಾಜಕಾರಣ ಅದರೊಳಗೆ ಬಂತು. ರಾಜಕಾರಣಿಗಳಿಗೆ ಆಶ್ರಯ ತಾಣವೂ ಆಯಿತು.ಎಷ್ಟೊಂದು ರಾಜಕಾರಣಿಗಳ ಕಪ್ಪುಹಣ ಬಿಳಿಯಾಯಿತು. ಕಪ್ಪು ಆನೆ ಇಂದ್ರನ ಐರಾವತವಾಯಿತು.ತಾನಾಗಿಯೇ ಮಠಕ್ಕೆ ರಾಜಕಾರಣದ ಅಂಕುಶ ಬಿಗಿಯಿತು.ಮಠಗಳು ರಾಜಕಾರಣಿಗಳನ್ನು ನಡೆಸತೊಡಗಿದವು. ಎಂಥ ಕಣ್ಣುಪಟ್ಟಿಯೂ ಹಣದ ಮುಂದೆ ಕಳಚಿಬಿತ್ತು. ಯಾವ ಭ್ರಷ್ಟನೂ ಮಠದ ಆಸರೆಯಲ್ಲಿ ಸುರಕ್ಷಿತನಾದ. ಪುಟ್ಟ ಮಠವೂ ರಾಜಕಾರಣಿಯ ಬಲದಿಂದ ದೊಡ್ಡದಾಯಿತು. ಒಳಗಿರುವ ಭಗವಂತ ಅಂಥ ರಾಜಕಾರಣಿಯಿಂದ ಚಿಕ್ಕದಾದ.

ಮಠವೇ ಬೇಡ, ದೇವಾಲಯ ಬೇಡ ಎಂದ ಐತಿಹಾಸಿಕ ಸಾಧಕನಂಥವರಿಗೆ ಎಳ್ಳುನೀರು ಬಿಟ್ಟಾಯಿತು.ಒಂದು ಮಠಕ್ಕಿಂತ ಹತ್ತು ಮಠ, ಹತ್ತಕ್ಕಿಂತ ನೂರು.... ಹೀಗೆ ಊರಿಗೆ ಒಂದು ಮಠವಿದ್ದದ್ದು, ಕೇರಿಗೊಂದಾಯಿತು.ಬೆಳೆಯಲಿಕ್ಕೆ ಬೆಳೆಸಲಿಕ್ಕೆ ಬಂದವರು ಬೆಳೆ ತೆಗೆದರು. ಇದು ಈ ಕಾಲದ ಕಣ್ಣ ಮುಂದೆ ಇರುವ ಸತ್ಯ. ಪ್ರತಿಯೊಬ್ಬರಿಗೂ ಜಗದ್ಗುರು ಆಗುವ ಕನಸು. ಅದು ಹಿಂದಿನ ಕಾಲದ ಪರಿಶ್ರಮದ ತಪಸ್ಸಾಗಿದ್ದರೆ ಎಲ್ಲಿರುತ್ತಿತ್ತು ಅದಕ್ಕಾಗಿ ಹೋರಾಟ?ಈ ಜಗದ್ಗುರು ಪಟ್ಟ ಕೊಡುವ ಸಾಮ್ರಾಜ್ಯದ ಆಧಿಪತ್ಯಕ್ಕೆ ನೂರಾರು ಪಾಳಿ.ಯಾರಿಗಾದರೂ ತಾನು ಇನ್ನೊಬ್ಬರ ಪೀಠಕ್ಕಿಂತ ಅರ್ಧ ಇಂಚು ಎತ್ತರದ ಪೀಠ ಇಡುವ ಹಸಿವು.ಎಲ್ಲಿ ಉಳಿಯಿತು ಆಂತರಿಕ ತಪಸ್ಸು?ಉಳಿದೀತು ಹೇಗೆ ಹೊರಗಣ ಆಮಿಷದಲ್ಲಿ? ನಿಜವಾಗಿಯೂ ಬೆಳೆಯುವ, ಭಗವಂತನನ್ನು ಸೇರುವ ಹಸಿವುಳ್ಳ ಒಬ್ಬ ನಿಜ ಸಂನ್ಯಾಸಿ ಬಂದರೂ ಈ ವ್ಯವಸ್ಥೆಯ ಒಳಗೆ ಸತ್ತೇ ಹೋದ.

ಒಳ್ಳೆಯ ಸಂನ್ಯಾಸಿಯ ಗೋರಿಯ ಮೇಲೆ ಮಠ ಬೆಳೆದಿದೆ.ಕೆಟ್ಟ ಸಂನ್ಯಾಸಿಯು ಮಠವನ್ನು ದೊಡ್ಡ ಪೀಠ ಮಾಡಿ ಸಾಮ್ರಾಜ್ಯದ ಅಧಿಪತಿಯಾಗಿದ್ದಾನೆ. ಇದನ್ನು ಯಾರು ಯಾರಿಗೆ ಹೇಳುವುದು?

ಯಾವ ಮಠ ಸ್ಥಾಪಿಸಿದ ಪೂಜ್ಯರೂ ಈ ಅರ್ಥದಲ್ಲಿ ಸ್ಥಾಪಿಸಲಿಲ್ಲ. ಪೂಜ್ಯರಾದ ಯಾವ ಆಚಾರ್ಯರೂ ಇಂಥ ಉದ್ದೇಶ ಇದ್ದವರಲ್ಲ.ಅವರ ಕಣ್ಣಗಳಲ್ಲಿ ತಪ್ಪಸ್ಸಿತ್ತು, ಧರ್ಮವಿತ್ತು, ಭಕ್ತಿಯಿತ್ತು, ನಿಷ್ಠೆ ಇತ್ತು.ಭಗವಂತನ ಕೈಂಕರ್ಯದ ಮಹಾ ಕನಸಿತ್ತು.

ನಮ್ಮ ‍ಪರಂಪರೆಯ ಮೂಲ ಕೆಟ್ಟದಲ್ಲ.ಅದರ ಬೆಳವಣಿಗೆಯನ್ನು ಹೊತ್ತವರು ಹಿಂದಿನವರ ಕನಸನ್ನು ಕೊಂದರು.ಪರಿಸ್ಥಿತಿ, ಪ್ರಭಾವ, ಪರಿಣಾಮಗಳು ಮಠದ ಮೂಲ ಬೇರನ್ನೇ ಹರಿದವು.ಈಗ ಹಿಂದೂ ಧರ್ಮ ಪುನರುತ್ಥಾನದ ಸಮಯ.ಗಂಗೆ ಶುದ್ಧವಾಗುತ್ತಿದ್ದಾಳೆ.ಕಾಶಿಯ ವಿಶ್ವನಾಥನ ಸುತ್ತ ಶುಭ್ರತೆ ಕಾಣಿಸತೊಡಗಿದೆ. ರಾಮನಿಗೆ ಮಂದಿರ ಕಟ್ಟುವ ಸಹಸ್ರ ವರ್ಷದ ಇತಿಹಾಸ ನೆಲೆ ಕಂಡಿದೆ.ನಳಂದ ವಿಶ್ವವಿದ್ಯಾಲಯವು ಸುಟ್ಟ ಪುಸ್ತಕಗಳನ್ನು ಮತ್ತೆ ಜೋಡಿಸುತ್ತಿದೆ.ಒಂದು ಹೊಸ ಮಂಥನದ ಕೆಲಸ ಬಹಿರಂಗದಲ್ಲಿ ನಡೆದಿದೆ.

ಇದೀಗ ಆತ್ಮ ಮಂಥನದ ಹೊತ್ತು. ಹೊರಗೆ ಬದಲಾದಂತೆ ಒಳಗೂ ಬದಲಾಗಲಿ.ಇಷ್ಟು ವರ್ಷ ಮಠದ ದಾರಿ ತಪ್ಪಿಸಿದವರು ಕಣ್ಣು ತೆರೆದಾರು.

ಹಿಂದೂ ಧರ್ಮ ತನ್ನನ್ನು ಶುಚಿ ಮಾಡುತ್ತಿರುವ ಹೊತ್ತಿಗೆ ಇದೂ ನಡೆದೀತು.ನಡೆಯ ಬೇಕು, ಇಲ್ಲದಿದ್ದರೆ ಈ ಒಳ ಮಾಲಿನ್ಯದಲ್ಲಿ ಹಿಂದೂ ಧರ್ಮಕ್ಕೆ ಕೆಟ್ಟ ವಾಸನೆ ಹಬ್ಬೀತು. ಆ ಎಚ್ಚರ ಬರಲಿಕ್ಕೆ ಇದು ಪೂರ್ವಪೀಠಿಕೆಯಾಗಲಿ.

ವಿದ್ಯಾಸಂಸ್ಥೆಗಳ ಮೂಲಕ ಹಣ ದೋಚುವ ಮಠದ ಜೊತೆ, ವಿದ್ಯಾದಾನ ಮಾಡುವ ಕೆಲವು ಅಪರೂಪದ ಸ್ವಾಮಿಗಳಿದ್ದಾರೆ. ದೀಕ್ಷೆ ಕೊಟ್ಟ ಬಳಿಕ ಖಾವಿ ಬಿಟ್ಟು, ಮಠಕ್ಕಾಗಿ ದುಡಿಯದೆ ಜಂಗಮನಂತೆ ಜ್ಞಾನ ಪ್ರಸಾರ ಮಾಡುತ್ತಿರುವ ಸ್ವಾಮಿಗಳಂಥವರು ನಮ್ಮ ನಡುವೆ ಅಪೂರ್ವವಾಗಿ ಇದ್ದಾರೆ. ಅಂಥವರು ಎಲ್ಲರನ್ನು ನಡೆಸಲಿ, ಅವರು ಎಲ್ಲ ಸಂನ್ಯಾಸಿಗಳಿಗೆ ಮಾದರಿಯಾಗಲಿ.ಹಿಂದೂಧರ್ಮವನ್ನು ಸದಾ ಬಯ್ಯವ, ಲೇವಡಿ ಮಾಡುವ ಆಡಳಿತಾರೂಢರು, ದೇಶದ ನಾಯಕರು, ರಾಜ್ಯದ ಮುಖ್ಯಮಂತ್ರಿಗಳೂ ಒಂದು ಮಠಕ್ಕೆ ಹೋದಾಗ, ಅವರನ್ನು ಆಶೀರ್ವದಿಸದ ಧೀಮಂತ ಸಂನ್ಯಾಸಿಗಳೂ ನಮ್ಮ ಜೊತೆ ಇದ್ದಾರೆ.ಅಂಥ ಅಪರೂಪದ ಸ್ವಾಮಿತ್ವಕ್ಕೂ ನಮನ. ನಿಮ್ಮ ಹಣ ಬೇಡ, ಅಧಿಕಾರ ಬೇಡ, ಭಕ್ತರು ಮತ್ತು ಧರ್ಮ ಸಾಕು ಎಂದ ಅಂಥ ಸಂನ್ಯಾಸಿಗಳು ಈಗ ನಿಜವಾದ ಆದರ್ಶ.

ಈಗ ಜಗತ್ತು ಮೊದಲಿನಂತಿಲ್ಲ. ತುಂಬ ಹತ್ತಿರವಾಗಿದೆ.ಕಳ್ಳತನದ ಒಳಗುಟ್ಟುಗಳು ಬಟಾಬಯಲಿಗೆ ಬಂದು ಬೀಳುತ್ತವೆ.ಯಾರು ನೋಡದಿದ್ದರೂ ದೇವರು ನೋಡುತ್ತಾನೆ ಎಂಬ ಕನಕದಾಸರ ಅಲೌಕಿಕ ಭಕ್ತಿ ಇಲ್ಲದಿದ್ದರೂ, ನಾನು ಏನು ಮಾಡಿದರೂ ಜಗತ್ತಿಗೆ ತಿಳಿಯುತ್ತದೆ ಎಂಬ ಲೌಕಿಕ ಎಚ್ಚರವಾದರೂ ಇರಲಿ. ಅಂದರೆ ಲೋಕಕ್ಕಾಗಿ ಬದುಕಿ ಎಂದ ಹಾಗೆ ಕೇಳಿಸಿತೇ?ಹಾಗಲ್ಲ ದೇವರು ಈಗ ಅಷ್ಟು ಎಚ್ಚರದ ಭಾಗವಾಗಿದ್ದಾನೆ ಎಂದು ಅದರ ಅರ್ಥ. ಕನಕನಂತೆ ಅಂತರಂಗದ ಎಚ್ಚರ ಉಳ್ಳವನಿಗೆ ಯಾವ ಭಯವಿಲ್ಲ.ಹೊರಗಿನ ಎಚ್ಚರ ಎಷ್ಟಿದ್ದರೂ ಭಯ ತಪ್ಪಿದ್ದಲ್ಲ.ಈಗಿನ ಎಲ್ಲ ಮಠಗಳೂ ಭಯದಲ್ಲೇ ಅಥವಾ ಭಯ ಹುಟ್ಟಿಸಿಯೇ ದೊಡ್ಡದಾಗುತ್ತಿವೆ.
ಅಪೇಕ್ಷೆ ಇದ್ದಲ್ಲಿ ಭಯ ಇದ್ದೇ ಇರುತ್ತದೆ.ಭಯ ಇದ್ದಲ್ಲಿ ಭಗವಂತ ಇದ್ದಾನು ಹೇಗೆ?ಹಾಗಾಗಿ ಹೊರಗಣ ಎಚ್ಚರ ಯಾವ ಉಪಯೋಗಕ್ಕೂ ಬಾರದು. ಒಳಗೆ ಎಚ್ಚರ ಹುಟ್ಟದವನು ಮಠದಲ್ಲಿ ಇರಬಾರದು.

-ವೀಣಾ ಬನ್ನಂಜೆ

ಲೇಖಕಿ: ಚಿಂತಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT