ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಷ್ಯಾ ಮೇಲೆ ನಿರ್ಬಂಧ- ಪರೋಕ್ಷ ಸಮರ

Last Updated 1 ಮಾರ್ಚ್ 2022, 21:45 IST
ಅಕ್ಷರ ಗಾತ್ರ

ನಿರ್ಬಂಧ ಎಂದರೇನು?

ಒಂದು ದೇಶದ ಜತೆಗಿನ ಆರ್ಥಿಕ, ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ತಾತ್ಕಾಲಿಕ ವಾಗಿ ಅಥವಾ ಭಾಗಶಃ ಕಡಿದುಕೊಳ್ಳುವುದನ್ನು ನಿರ್ಬಂಧಗಳು (ಸ್ಯಾಂಕ್ಷನ್ಸ್‌) ಎನ್ನಲಾಗುತ್ತದೆ.

ಸೇನಾ ಕಾರ್ಯಾಚರಣೆ ಮತ್ತು ಯುದ್ಧ‌ಕ್ಕೆ ಬದಲಾಗಿ ಈ ನಿರ್ಬಂಧಗಳನ್ನು ಹೇರಲಾಗುತ್ತದೆ. ಅಂದರೆ ದೇಶವೊಂದರ ಕೃತ್ಯ ಅಥವಾ ನೀತಿಯ ವಿರುದ್ಧ ಬೇರೆ ದೇಶಗಳು ಯುದ್ಧ ನಡೆಸಲು ಸಾಧ್ಯವಿಲ್ಲದೇ ಇದ್ದಾಗ ಅಥವಾ ಯುದ್ಧ/ಸೇನಾ ಕಾರ್ಯಾಚರಣೆ ನಡೆಸಲು ಬಯಸದೇ ಇದ್ದಾಗ ಇಂತಹ ನಿರ್ಬಂಧಗಳ ಮೊರೆ ಹೋಗಲಾಗುತ್ತದೆ. ಈ ನಿರ್ಬಂಧಗಳು ಬಹುತೇಕ ಸಂದರ್ಭಗಳಲ್ಲಿ ಏಕಪಕ್ಷೀಯವಾಗಿರುತ್ತವೆ. ರಷ್ಯಾದ ಸಂದರ್ಭದಲ್ಲಿ ಅಮೆರಿಕ, ಬ್ರಿಟನ್‌, ಐರೋಪ್ಯ ಒಕ್ಕೂಟವು ಏಕಪಕ್ಷೀಯವಾಗಿ ನಿರ್ಬಂಧ ಹೇರಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೂಲಕ ರಷ್ಯಾ ಮೇಲೆ ನಿರ್ಬಂಧ ಹೇರುವ ಯತ್ನ ಸಫಲವಾಗಿಲ್ಲ. ಭದ್ರತಾ ಮಂಡಳಿಯ ಶಾಶ್ವತ ಸದಸ್ಯನಾಗಿರುವ ರಷ್ಯಾ, ಈ ಯತ್ನವನ್ನು ತನ್ನ ವಿಟೋ ಅಧಿಕಾರ ಬಳಸಿ ತಡೆದಿದೆ.

ದೇಶವೊಂದನ್ನು ಆರ್ಥಿಕ ನಿರ್ಬಂಧಕ್ಕೆ ಗುರಿ ಮಾಡಿದಾಗ, ಬೇರೆಲ್ಲಾ ದೇಶಗಳು ಆ ದೇಶದೊಂದಿಗೆ ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳಬೇಕಾಗುತ್ತದೆ. ಆ ದೇಶದೊಂದಿ ಗಿನ ವಾಣಿಜ್ಯ ವಹಿವಾಟುಗಳನ್ನು ಸ್ಥಗಿತಗೊಳಿಸ ಬೇಕಾಗುತ್ತದೆ. ಇದನ್ನು ಮೀರುವ ಇತರ ದೇಶಗಳ ನ್ನೂ ಈ ನಿರ್ಬಂಧಕ್ಕೆ ಗುರಿಪಡಿಸುವ ಸಾಧ್ಯತೆ ಇದೆ.

ಇದು ಏಕಪಕ್ಷೀಯ ನಿರ್ಬಂಧವಾಗಿದ್ದರೂ, ನಿರ್ಬಂಧಕ್ಕೆ ಗುರಿಯಾದ ದೇಶದ ಜತೆಗೆ ಬೇರೆ ದೇಶಗಳೂ ಅದರ ಪರಿಣಾಮ ಎದುರಿಸ ಬೇಕಾ ಗುತ್ತದೆ. ನಿರ್ಬಂಧಕ್ಕೆ ಗುರಿಯಾದ ದೇಶದಿಂದ ಸರಕು ಮತ್ತು ಸೇವೆಗಳನ್ನು ಪಡೆದುಕೊಳ್ಳುವುದನ್ನು ಇತರ ದೇಶಗಳು ನಿಲ್ಲಿಸಬೇಕಾಗುತ್ತದೆ. ಹೀಗೆ ನಿಲ್ಲಿಸುವ ದೇಶಗಳು ಆ ಸರಕುಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ಆ ದೇಶದ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಹಲವುಸಂದರ್ಭಗಳಲ್ಲಿ ಇಂತಹ ನಿರ್ಬಂಧಗಳಲ್ಲಿ ವಿನಾಯಿತಿ ನೀಡಿದ ಉದಾಹರಣೆ ಇದೆ.

ಇದರ ಜತೆಯಲ್ಲಿಯೇ ನಿರ್ಬಂಧಕ್ಕೆ ಗುರಿಯಾದ ದೇಶದ ಮತ್ತು ಆ ದೇಶದ ಪ್ರಜೆಗಳಿಗೆ ಸಂಬಂಧಿಸಿದ ಸ್ವತ್ತುಗಳು ತಮ್ಮಲಿದ್ದರೆ, ಇತರ ದೇಶಗಳು ಅವುಗಳನ್ನು ಸ್ಥಗಿತಗೊಳಿಸುತ್ತವೆ ಅಥವಾ ಮುಟ್ಟುಗೋಲು ಹಾಕಿಕೊಳ್ಳುತ್ತವೆ.

ರಾಜತಾಂತ್ರಿಕ ನಿರ್ಬಂಧವೂ ಒಂದು ಪರಿಣಾಮಕಾರಿ ಕ್ರಮವಾಗಿದೆ. ನಿರ್ಬಂಧಕ್ಕೆ ಗುರಿಯಾದ ದೇಶಗಳೊಂದಿಗೆ ನಿರ್ಬಂಧ ಹೇರಿದ ದೇಶ, ಒಕ್ಕೂಟ ಮತ್ತು ಇತರ ದೇಶಗಳು ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳುತ್ತವೆ. ಪರಸ್ಪರರಲ್ಲಿ ಇರುವ ರಾಯಭಾರ ಕಚೇರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ. ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ.

ನಿರ್ಬಂಧಗಳು ಏನೇ ಆಗಿದ್ದರೂ, ಅದು ಆ ದೇಶದ ಯಾವುದೋ ಒಂದು ನಡೆ/ಕ್ರಮ/ನಿಲುವನ್ನು ಖಂಡಿಸುವ ಪ್ರತಿಭಟನಾ ಮಾರ್ಗವಾಗಿರುತ್ತದೆ. ಆ ನೀತಿ/ನಡೆ/ನಿಲುವಿನಿಂದ ಆ ದೇಶವು ವಾಪಸ್‌ ಸರಿಯುವಂತೆ ಮಾಡುವುದೇ ಇಂತಹ ನಿರ್ಬಂಧಗಳ ಪ್ರಧಾನ ಗುರಿಯಾಗಿರುತ್ತದೆ.

ಎರಡು ಅಲಗಿನ ಕತ್ತಿ

ನಿರ್ಬಂಧಗಳಲ್ಲಿ ಆರ್ಥಿಕ ನಿರ್ಬಂಧವು ಪ್ರಮುಖವಾದುದು. ಹೀಗಾಗಿ ಬಹುತೇಕ ದೇಶಗಳು ಆರ್ಥಿಕ ನಿರ್ಬಂಧಗಳನ್ನು ಹೇರಲು ಮುಂದಾಗುತ್ತವೆ. ಈ ಹಿಂದೆ ಇರಾನ್‌, ರಷ್ಯಾ ಮೇಲೆ ಹಲವು ಬಾರಿ ಆರ್ಥಿಕ ನಿರ್ಬಂಧಗಳನ್ನು ಹೇರಲಾಗಿದೆ. ಇಂತಹ ನಿರ್ಬಂಧಗಳು ನಿಜಕ್ಕೂ ಪರಿಣಾಮಕಾರಿಯೇ ಎಂಬ ಪ್ರಶ್ನೆ ಹೆಚ್ಚು ಚರ್ಚೆಯಾಗುತ್ತಿದೆ.

ಆರ್ಥಿಕ ನಿರ್ಬಂಧಗಳನ್ನು ಹೇರಿದಾಗ, ನಿರ್ಬಂಧಕ್ಕೆ ಗುರಿಯಾಗುವ ದೇಶಗಳ ಜಾಗತಿಕ ವ್ಯಾಪಾರ ಸ್ಥಗಿತವಾಗುತ್ತದೆ. ಆ ವ್ಯಾಪಾರದ ಸ್ವರೂಪ ಎಂಥದ್ದು ಎಂಬುದರ ಮೇಲೆ ನಿರ್ಬಂಧದ ಪರಿಣಾಮದ ತೀವ್ರತೆ ಗೊತ್ತಾಗುತ್ತದೆ. ನಿರ್ಬಂಧಕ್ಕೆ ಗುರಿಯಾದ ದೇಶವು ತೈಲ, ಔಷಧಗಳು, ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದರೆ, ಅದನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶಗಳ ಮೇಲೆ ನಿರ್ಬಂಧವು ಪರಿಣಾಮ ಬೀರುತ್ತದೆ. ಈ ಸಂಪನ್ಮೂಲಗಳಿಗಾಗಿ ಆ ದೇಶಗಳು ಬೇರೆ ದೇಶಗಳತ್ತ ಮುಖ ಮಾಡಬೇಕಾಗುತ್ತದೆ. ಇದು ಆ ಸರಕಿನ ಬೆಲೆ, ಆಮದು ವೆಚ್ಚ ಎಲ್ಲವೂ ಏರಿಕೆಯಾಗಲು ಕಾರಣವಾಗುತ್ತದೆ.

ಉದಾಹರಣೆಗೆ, ಈಗ ರಷ್ಯಾದ ಮೇಲೆ ನಿರ್ಬಂಧ ಹೇರಿರುವ ಕಾರಣ, ಅದರೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಬೇರೆ ದೇಶಗಳು ಕಡಿದುಕೊಳ್ಳಬೇಕಾಗುತ್ತದೆ. ರಷ್ಯಾವು ಅತಿಹೆಚ್ಚು ಕಚ್ಚಾತೈಲ ಉತ್ಪಾದಿಸುವ ಒಪೆಕ್‌ಯೇತರ ಎರಡನೇ ದೊಡ್ಡ ರಾಷ್ಟ್ರವಾಗಿದೆ. ರಷ್ಯಾದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯನ್ನು ನಿರ್ಬಂಧಿಸಿದರೆ, ಅದರ ಪರಿಣಾಮಗಳನ್ನು ಎಲ್ಲಾ ದೇಶಗಳು ಎದುರಿಸಬೇಕಾಗುತ್ತದೆ. ಇದರ ಪರಿಣಾಮ ಈಗಾಗಲೇ ಕಾಣುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಇದರ ಜತೆಯಲ್ಲಿಯೇ ಇದು ರಷ್ಯಾದ ಆದಾಯವನ್ನು ಕಡಿತ ಮಾಡುತ್ತದೆ ಎಂಬುದೂ ಪ್ರಮುಖವಾದ ಅಂಶ.

ಈಚಿನ ವರ್ಷಗಳಲ್ಲಿ ದಕ್ಷಿಣ–ಚೀನಾ ಸಮುದ್ರದಲ್ಲಿ ಚೀನಾದ ಕಾರ್ಯಚಟುವಟಿಕೆಗಳನ್ನು ಗುರಿ ಮಾಡಿಕೊಂಡು ಅಮೆರಿಕವು ಹಲವು ನಿರ್ಬಂಧಗಳನ್ನು ಏಕಪಕ್ಷೀಯವಾಗಿ ಜಾರಿಗೆ ತಂದಿತ್ತು. ಇದು ಅಮೆರಿಕ–ಚೀನಾ ವಾಣಿಜ್ಯ ಸಮರ ಎಂದೇ ಸುದ್ದಿಯಾಗಿತ್ತು. ಚೀನಾದ ಹಲವು ಉತ್ಪನ್ನಗಳು, ತಂತ್ರಜ್ಞಾನಗಳನ್ನು ಅಮೆರಿಕವು ನಿಷೇಧಿಸಿತು. ಪರಿಣಾಮವಾಗಿ ಚೀನಾ ಅಭಿವೃದ್ಧಿಪಡಿಸಿದ್ದ 5ಜಿ ತಂತ್ರಜ್ಞಾನವು ಅಮೆರಿಕದಲ್ಲಿ ಬಳಕೆಗೆ ಬರಲಿಲ್ಲ. ಅಮೆರಿಕದಲ್ಲಿ ಬೇರೆ 5ಜಿ ತಂತ್ರಜ್ಞಾನ ಬಳಕೆಗೆ ಬರುವುದು ತಡವಾಯಿತು. ಚೀನಾಕ್ಕೆ ಆರ್ಥಿಕ ನಷ್ಟವೂ ಆಯಿತು. ನಂತರದ ದಿನಗಳಲ್ಲಿ ಎರಡೂ ದೇಶಗಳು ಈ ಸಮರವನ್ನು ಸಡಿಲಗೊಳಿಸಿದವು. ಅಮೆರಿಕವೇ ಈ ಸಮರವನ್ನು ಆರಂಭಿಸಿದ್ದರೂ, ಅಮೆರಿಕ ಮತ್ತು ಚೀನಾ ಎರಡೂ ಅದರ ಪರಿಣಾಮಗಳನ್ನು ಎದುರಿಸಬೇಕಾಯಿತು. ಹೀಗಾಗಿ ನಿರ್ಬಂಧ ಎಂಬುವುದು ಎರಡು ಅಲಗಿನ ಕತ್ತಿಯೇ ಸರಿ.

ರಷ್ಯಾ ಕೈಕಟ್ಟಿದ ಪಾಶ್ಚಿಮಾತ್ಯ ದೇಶಗಳು

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಪ್ರತೀಕಾರದ ಕ್ರಮವಾಗಿ ಆರ್ಥಿಕ ನಿರ್ಬಂಧ ವಿಧಿಸುವ ಕ್ರಮಗಳನ್ನು ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ತೆಗೆದುಕೊಂಡಿವೆ. ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆ ‘ಸ್ವಿಫ್ಟ್‌’ನಿಂದ ರಷ್ಯಾವನ್ನು ಹೊರಗಿಡಲಾಗಿದೆ. ರಷ್ಯಾದ ಪ್ರಮುಖ ಬ್ಯಾಂಕ್‌ಗಳು ಸ್ವಿಫ್ಟ್ ಪದ್ಧತಿ ಮೂಲಕ ವ್ಯವಹಾರ ಮಾಡುವುದುನ್ನು ತಡೆ ಹಿಡಿಯಲಾಗಿದೆ.

ರಷ್ಯಾದ ಕೇಂದ್ರೀಯ ಬ್ಯಾಂಕ್‌ನ ಸುಮಾರು ₹45 ಲಕ್ಷ ಕೋಟಿ (60,000 ಕೋಟಿ ಡಾಲರ್) ಮೀಸಲು ನಿಧಿಯನ್ನು ಪಾಶ್ಚಿಮಾತ್ಯ ದೇಶಗಳು ನಿರ್ಬಂಧಿಸಿವೆ. ಹಣದುಬ್ಬರ ಹೆಚ್ಚಾಗಿ ರಷ್ಯಾದ ಕರೆನ್ಸಿ ‘ರೂಬೆಲ್’ ಮೌಲ್ಯ ಕುಸಿಯುವಂತೆ ಮಾಡುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶ.ಇದು ಆಧುನಿಕ ಕಾಲಘಟ್ಟದಲ್ಲಿ ‌ಪ್ರಬಲ ದೇಶವೊಂದರ ವಿರುದ್ಧ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಎಂದು ವಿಶ್ಲೇಷಿಸಲಾಗಿದೆ. ಯುದ್ಧ ಸಾರುವಂತಹ ನಿರ್ಧಾರ ತೆಗೆದುಕೊಂಡ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಈ ನಿರ್ಧಾರಕ್ಕೆ ಹೊಣೆಗಾರರನ್ನಾಗಿ ಮಾಡುವುದು ಪಾಶ್ಚಿಮಾತ್ಯ ದೇಶಗಳ ಉದ್ದೇಶ. ಈ ಹಿಂದೆ 2014ರಲ್ಲಿ, ಉಕ್ರೇನ್‌ನ ಕ್ರಿಮಿಯಾವನ್ನು ಅತಿಕ್ರಮಿಸಿದ್ದ ರಷ್ಯಾ ವಿರುದ್ಧ ಸ್ವಿಫ್ಟ್ ಅಸ್ತ್ರವನ್ನು ಪ್ರಯೋಗಿಸಲಾಗಿತ್ತು.

ರಷ್ಯಾದ ಎರಡು ಅತಿದೊಡ್ಡ ಬ್ಯಾಂಕ್‌ಗಳಾದ ಸ್ಪೆರ್‌ಬ್ಯಾಂಕ್ ಹಾಗೂ ವಿಟಿಬಿಗಳ ಮೇಲೆ ಅಮೆರಿಕ ಹಾಗೂ ಬ್ರಿಟನ್ ಪ್ರತ್ಯೇಕ ನಿರ್ಬಂಧಗಳನ್ನು ವಿಧಿಸಿವೆ. ರಾಜಕೀಯ ಬೆಂಬಲವಿರುವ ದೊಡ್ಡ ಉದ್ಯಮಿಗಳಿಗೆ ಸೇರಿದ ಆಸ್ತಿ ಸಂಬಂಧಿತ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆ ಅವರ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಅಮೆರಿಕ ಹಾಗೂ ಬ್ರಿಟನ್‌ ತೆಗೆದುಕೊಂಡ ಕ್ರಮಗಳನ್ನೇ ಅನುಸರಿಸಿವೆ.

ರಷ್ಯಾ ಜೊತೆಗಿನ ಮಹತ್ವಾಕಾಂಕ್ಷಿ ನಾರ್ಡ್ ಸ್ಟ್ರೀಮ್ 2 ಬಾಲ್ಟಿಕ್ ಸಮುದ್ರ ಅನಿಲ ಪೈಪ್‌ಲೈನ್ ಯೋಜನೆಯನ್ನು ಜರ್ಮನಿ ಕೈಬಿಡುವ ಸೂಚನೆ ನೀಡಿದೆ. ಈಗ ಪೂರೈಕೆಯಾಗುವುದಕ್ಕಿಂತ ದುಪ್ಪಟ್ಟು ಪ್ರಮಾಣದ ಅನಿಲವನ್ನು ರಷ್ಯಾದಿಂದ ನೇರವಾಗಿ ಜರ್ಮನಿಗೆ ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ. ಪೋಲೆಂಡ್, ಜೆಕ್ ರಿಪಬ್ಲಿಕ್, ಬಲ್ಗೇರಿಯಾ, ಎಸ್ಟೋನಿಯಾ ದೇಶಗಳು ರಷ್ಯಾದ ವಿಮಾನಗಳಿಗೆ ತಮ್ಮ ದೇಶದ ವಾಯು ವಾರ್ಗವನ್ನು ನಿರ್ಬಂಧಿಸಿವೆ.

ರಷ್ಯಾಕ್ಕೆ ಸಂಬಂಧಿಸಿದ ಹಲವರ ಆಸ್ತಿಗಳನ್ನು ಐರೋಪ್ಯ ಒಕ್ಕೂಟ ಸ್ಥಗಿತಗೊಳಿಸಿದೆ. ಇಂತಹ ವ್ಯಕ್ತಿಗಳ ಪಟ್ಟಿ ಮಾಡಿಕೊಂಡಿದ್ದು, ಅವರು ಐರೋಪ್ಯ ಒಕ್ಕೂಟವನ್ನು ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಪುಟಿನ್ ಹಾಗೂ ವಿದೇಶಾಂಗ ಸಚಿವ ಲಾವ್ರೋವ್‌ ಅವರನ್ನು ಗುರಿಯಾಗಿಸಿ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರುವ ಕುರಿತು ಚರ್ಚೆ ನಡೆಯುತ್ತಿದೆ.ಸ್ಟ್ರಾಸ್‌ಬರ್ಗ್‌ನಲ್ಲಿರುವ ಐರೋಪ್ಯ ಮಂಡಳಿಯು ಹಲವು ರಾಜತಾಂತ್ರಿಕ ನಿರ್ಬಂಧಗಳನ್ನು ಪ್ರಕಟಿಸಿದೆ. ಸಂಸದೀಯ ಸಮಿತಿ ಹಾಗೂ ಸಚಿವರ ಸಮಿತಿಯಲ್ಲಿ ರಷ್ಯಾದ ಪ್ರಾತಿನಿಧ್ಯದ ಹಕ್ಕನ್ನು ಐರೋಪ್ಯ ಮಂಡಳಿ ಅಮಾನತಿನಲ್ಲಿರಿಸಿದೆ.

ವಿಶ್ವಸಂಸ್ಥೆಯು ಎಲ್ಲ ದೇಶಗಳ ಪರವಾಗಿ ಸಮಗ್ರ ಕ್ರಮ ತೆಗೆದುಕೊಳ್ಳಲು, ಭದ್ರತಾ ಮಂಡಳಿಯಲ್ಲಿ ರಷ್ಯಾ ಹೊಂದಿರುವ ವಿಟೊ ಅಧಿಕಾರ ಅಡ್ಡಿಯಾಗಿದೆ. ಭದ್ರತಾ ಮಂಡಳಿಯಲ್ಲಿ ರಷ್ಯಾ ಕಾಯಂ ಸದಸ್ಯ ರಾಷ್ಟ್ರವಾಗಿದ್ದು, ವಿಶ್ವಸಂಸ್ಥೆ ಹೇರುವ ಯಾವುದೇ ನಿರ್ಬಂಧಗಳ ವಿರುದ್ಧ ಅದು ತನ್ನ ವಿಟೊ ಅಧಿಕಾರ ಚಲಾಯಿಸಿ, ನಿರ್ಬಂಧಗಳು ಜಾರಿಯಾಗದಂತೆ ತಡೆಯುವ ಅಧಿಕಾರ ಹೊಂದಿದೆ. ವಿಟೊ ಅಧಿಕಾರವನ್ನು ಬಳಸಿಕೊಂಡೇ, ಉಕ್ರೇನ್ ಮೇಲೆ ಪುಟಿನ್ ನಡೆಸಿದ ದಾಳಿಯನ್ನು ಖಂಡಿಸಿ ಭದ್ರತಾ ಮಂಡಳಿಯು ತೆಗೆದುಕೊಂಡಿದ್ದ ನಿರ್ಣಯವನ್ನು ರಷ್ಯಾ ತಿರಸ್ಕರಿಸಿತ್ತು.

ರಷ್ಯಾ ಮೇಲೆ ಪರಿಣಾಮ ಏನು?

ಜಾಗತಿಕ ಮಟ್ಟದಲ್ಲಿ ರಷ್ಯಾ ಮೇಲೆ ವಿಧಿಸಲಾಗಿರುವ ಹಲವು ನಿರ್ಬಂಧಗಳ ಪರಿಣಾಮ ಈಗಾಗಲೇ ಗೋಚರವಾಗುತ್ತಿದೆ. ಫೆ. 22ರಂದು ಅಮೆರಿಕದ ಡಾಲರ್ ಎದುರು 72 ರೂಬೆಲ್ ಇದ್ದ ರಷ್ಯಾದ ಕರೆನ್ಸಿ ಮೌಲ್ಯವು, ಸೋಮವಾರ 117 ರೂಬೆಲ್‌ಗೆ ಏರಿಕೆಯಾಗಿದೆ. ಅಂದರೆ ಕರೆನ್ಸಿ ಮೌಲ್ಯವು ಶೇ 30ರಷ್ಟು ಕುಸಿತ ಕಂಡಿದೆ. ಬ್ಯಾಂಕ್ ಆಫ್ ರಷ್ಯಾವು ಬಡ್ಡಿದರಗಳನ್ನು ದ್ವಿಗುಣಗೊಳಿಸಿದೆ. ಸಂಭಾವ್ಯ ಬೆಲೆ ಏರಿಕೆ ಎದುರಿಸಲು ರಷ್ಯಾ ಜನರು ಸಜ್ಜಾಗುತ್ತಿದ್ದು, ಎಟಿಎಂಗಳ ಎದುರು ಸಾಲುಗಟ್ಟಿ ನಿಂತಿದ್ದಾರೆ.

ಈ ಎಲ್ಲ ನಿರ್ಬಂಧಗಳಿಂದ ಆಗುವ ಒಟ್ಟಾರೆ ಪರಿಣಾಮ ಏನು ಎಂದು ತಕ್ಷಣಕ್ಕೆ ಹೇಳಲಾಗದು. ಪಾಶ್ಚಿಮಾತ್ಯ ದೇಶಗಳು ಏಕಪಕ್ಷೀಯವಾಗಿ ಹಾಗೂ ಸಂಘಟಿತವಾಗಿ ತೆಗೆದುಕೊಂಡ ಕ್ರಮಗಳು ಸಮಗ್ರವಾಗಿವೆ. ಇವೆಲ್ಲವನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯರೂಪಕ್ಕೆ ತರಲಾಗಿದೆ. ಪುಟಿನ್ ಹಾಗೂ ಲಾವ್ರೋವ್ ಅವರನ್ನು ಗುರಿಯಾಗಿಸಿಯೇ ಕೆಲವೊಂದು ಕ್ರಮಗಳನ್ನು ಘೋಷಿಸಿರುವುದು ವಿಶೇಷ.

ನಿರ್ಬಂಧಗಳ ಜಾರಿಯಲ್ಲಿ ಕೆಲವು ಸಮಸ್ಯೆಗಳು ಇವೆ. ಉದಾಹರಣೆಗೆ ಸ್ವಿಟ್ಜರ್ಲೆಂಡ್ ದೇಶವು ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಬೆಂಬಲಿಸಿದೆ. ಆದರೆ, ರಷ್ಯಾಗೆ ಸಂಬಂಧಿಸಿದ ಆಸ್ತಿಗಳನ್ನು ಸ್ಥಗಿತಗೊಳಿಸುವುದನ್ನು ವಿಳಂಬ ಮಾಡುತ್ತಿದೆ. ನಿರ್ಬಂಧ ಹೇರಲಾಗಿದ್ದರೂ, ರಷ್ಯಾ ಕಂಪನಿಗಳು ಕ್ರಿಪ್ಟೊಕರೆನ್ಸಿ ಮೂಲಕ ಯಾವುದೇ ಅಡ್ಡಿಯಿಲ್ಲದಂತೆ ವಹಿವಾಟು ನಡೆಸುವ ಸಾಧ್ಯತೆಯ ಬಗ್ಗೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಕಳವಳ ವ್ಯಕ್ತಪಡಿಸಿವೆ.

ಆಧಾರ: ರಾಯಿಟರ್ಸ್‌, ಪಿಟಿಐ, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT