ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲೋತ್ಪಾದನೆಯಲ್ಲಿ ರೈತರ ಸಹಭಾಗಿಗಳಾಗಿಸುವ ಇಥೆನಾಲ್ ನೀತಿ ಜಾರಿ: ಅಮಿತ್ ಶಾ

ಪ್ರಧಾನಿ ಮೋದಿ ರೈತ ಸ್ನೇಹಿ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ವಕ್ರದೃಷ್ಟಿ ಆರೋಪ
Last Updated 17 ಜನವರಿ 2021, 9:13 IST
ಅಕ್ಷರ ಗಾತ್ರ

ಬಾಗಲಕೋಟೆ: ದೇಶದ ತೈಲೋತ್ಪಾದನೆಯಲ್ಲಿ ರೈತರನ್ನು ಸಹಭಾಗಿಗಳನ್ನಾಗಿಸಿಕೊಳ್ಳಲು ನಿರ್ಧರಿಸಿರುವ ಕೇಂದ್ರ ಸರ್ಕಾರ, 2025ರ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಇಥೆನಾಲ್ ಸೇರ್ಪಡೆ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಳಗೊಳಿಸುವ ಗುರಿ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯಲ್ಲಿ ಭಾನುವಾರ ಮುಧೋಳದ ಎಂ.ಆರ್. ನಿರಾಣಿ ಸಮೂಹದ ಕೇದಾರನಾಥ ಸಕ್ಕರೆ ಕಾರ್ಖಾನೆ ಪುನರಾರಂಭ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಡೀಸೆಲ್ ಹಾಗೂ ಪೆಟ್ರೋಲ್ ನಲ್ಲಿ ಇಥೆನಾಲ್ ಮಿಶ್ರಣ ಪ್ರಮಾಣ ಶೇ 1.84ರಷ್ಟು ಇತ್ತು. ಅದೀಗ ಶೇ 10ಕ್ಕೆ ಹೆಚ್ಚಳಗೊಂಡಿದೆ. ಕಬ್ಬು ಸೇರಿದಂತೆ ಇತರೆ ಕೃಷಿ ತ್ಯಾಜ್ಯಗಳಿಂದ ಇಥೆನಾಲ್ ತಯಾರಿಕೆಗೆ ಒತ್ತು ನೀಡಲಾಗಿದೆ. ಇದರಿಂದ ಕಚ್ಚಾ ತೈಲ ಆಮದು ಪ್ರಮಾಣ ಕಡಿಮೆ ಆಗಿ ವಿದೇಶಿ ವಿನಿಮಯದ ರೂಪದಲ್ಲಿ ಗಲ್ಫ್ ರಾಷ್ಟ್ರಗಳ ಖಜಾನೆ ಸೇರಲಿದ್ದ ದೇಶದ ಹಣ ಈಗ ರೈತರ ಬ್ಯಾಂಕ್ ಖಾತೆಗಳಿಗೆ ಸೇರುತ್ತಿದೆ ಎಂದರು.

ಇಥೆನಾಲ್ ಪರಿಸರ ಸ್ನೇಹಿ ಆಗಿರುವ ಕಾರಣ ಇಂಧನ ತೈಲದಲ್ಲಿ ಅದರ ಮಿಶ್ರಣ ಉತ್ತೇಜನಗೊಳಿಸಲು ಈ ಮೊದಲು ಇಥೆನಾಲ್ ಗೆ ವಿಧಿಸುತ್ತಿದ್ದ ಶೇ 18ರಷ್ಟು ಜಿಎಸ್ ಟಿಯನ್ನು ಶೇ 5ಕ್ಕೆ ಇಳಿಸಲಾಗಿದೆ ಎಂದರು.

2014, 2019ರ ಲೋಕಸಭಾ ಚುನಾವಣೆಯಿಂದ ಮೊದಲುಗೊಂಡು ಮೊನ್ನಿನ ಗ್ರಾಮ ಪಂಚಾಯ್ರಿ ಚುನಾವಣೆಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೋಳಿಗೆ ಭರ್ತಿಯಾಗುವಷ್ಟು ಮತಗಳನ್ನು ಹಾಕಿದ ಕರ್ನಾಟಕದ ಜನತೆಗೆ ಅಭಾರಿಯಾಗಿದ್ದೇನೆ ಎಂದರು.

ದೇಶದ ರೈತರ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ದೊರಕಿಸಿಕೊಟ್ಟು ಅವರ ಆದಾಯ ದುಪ್ಪಟ್ಟುಗೊಳಿಸುವ ಉದ್ದೇಶ ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತರಲು ಹೊರಟಿರುವ ಬದಲಾವಣೆಗಳ ಹಿಂದೆ ಇದೆ. ಕರ್ನಾಟಕದಲ್ಲಿ ಅದನ್ನು ಅಳವಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವೆ. ರೈತರ ಅಭಿವೃದ್ಧಿ ಹಿತಕ್ಕೆ ಸಂಬಂಧಿಸಿದಂತೆ ಯಾವುದೇ ಅವಕಾಶಗಳನ್ನು ಯಡಿಯೂರಪ್ಪ ಬಿಡುವುದಿಲ್ಲ ಎಂದು ಶ್ಲಾಘಿಸಿದರು.

ರೈತರ ಹಿತಾಸಕ್ತಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುವ ಯಾವುದೇ ಕೆಲಸದ ಬಗ್ಗೆ ವಕ್ರದೃಷ್ಟಿ ಬೀರುವ ಕಾಂಗ್ರೆಸ್ ನವರು ಅವರ ಅವಧಿಯಲ್ಲಿ ರೈತ ಸ್ನೇಹಿ ಇಥೆನಾಲ್ ನೀತಿ ಏಕೆ ಜಾರಿಗೊಳಿಸಲಿಲ್ಲ, ಅವರ ಬ್ಯಾಂಕ್ ಖಾತೆಗೆ ₹6 ಸಾವಿರ ಏಕೆ ಹಾಕಲಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾದಂತಹ ಯೋಜನೆಗಳ ಜಾರಿಗೆ ತರಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ಆರ್.ಶಂಕರ್, ಸಂಸದರಾದ ಪಿ.ಸಿ.ಗದ್ದಿಗೌಡರ, ರಮೇಶ ಜಿಗಜಿಣಗಿ, ಜಿ.ಎಂ.ಸಿದ್ದೇಶ್ವರ ಉಪಸ್ಥಿತರಿದ್ದರು.

ಸಚಿವ ಮುರುಗೇಶ ನಿರಾಣಿ ಅವರಿಂದ ಅಮಿತ್ ಶಾ ಅವರಿಗೆ ಬೆಳ್ಳಿಗದೆ ಕಾಣಿಕೆ
ಸಚಿವ ಮುರುಗೇಶ ನಿರಾಣಿ ಅವರಿಂದ ಅಮಿತ್ ಶಾ ಅವರಿಗೆ ಬೆಳ್ಳಿಗದೆ ಕಾಣಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT