ಬುಧವಾರ, ಸೆಪ್ಟೆಂಬರ್ 22, 2021
24 °C

ಅಕ್ರಮ ಕಲ್ಲು ಗಣಿಗಾರಿಕೆ: ಕರಗುತ್ತಿದೆ ಬಾದಾಮಿ ಬೆಟ್ಟ ಸಾಲು

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಒಂದೆಡೆ ಮಲಪ್ರಭೆಯ ಒಡಲು ಬಗೆಯುವ ಅಕ್ರಮ ಮರಳುಗಾರಿಕೆ, ಇನ್ನೊಂದೆಡೆ ಚಾಲುಕ್ಯರಿಗೆ ನೆಲೆ ಒದಗಿಸಿದ್ದ ಬೆಟ್ಟ ಸಾಲನ್ನು ಕರಗಿಸುವ ಅಕ್ರಮ ಕಲ್ಲು ಗಣಿಗಾರಿಕೆ ಪರಿಣಾಮ ಬಾದಾಮಿ ತಾಲ್ಲೂಕು ಅಕ್ಷರಶಃ ನಲುಗಿದೆ. ತಾಲ್ಲೂಕಿನ ಅನಂತಗಿರಿ ಸುತ್ತಲಿನ ಅರಣ್ಯ ಇಲಾಖೆ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಒಡೆದು ಸಾಗಿಸಲಾಗುತ್ತಿದೆ. ಬಾದಾಮಿಯ ಬೆಟ್ಟ ಸಾಲಿನ ಮುಂದುವರಿದ ಭಾಗವಾದ ಮರಳುಶಿಲೆ ನಿಧಾನವಾಗಿ ಕರಗುತ್ತಿದೆ.

ಬೆಂಕಿ ಹಚ್ಚಿ ಒಡೆಯುತ್ತಾರೆ

ಬಾದಾಮಿ ತಾಲ್ಲೂಕಿನ ಕೊನೆಯ ಹಳ್ಳಿ ಅನಂತಗಿರಿ ಗ್ರಾಮ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕುಗಳ ಗಡಿ ಭಾಗ ಹಂಚಿಕೊಂಡಿದೆ. ಸಂಪೂರ್ಣ ಬೆಟ್ಟ ಪ್ರದೇಶದಿಂದ ಆವೃತವಾಗಿದ್ದು, ಹೆಚ್ಚಿನ ಭಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ.

‘ಕಲ್ಲು ಒಡೆಯಲು ಸ್ಫೋಟಕ ಬಳಸಲ್ಲ. ಬದಲಿಗೆ ಮರಳುಗಲ್ಲನ್ನು ಬೆಂಕಿ ಹಚ್ಚಿ ಕಾಯಿಸುತ್ತೇವೆ. ಆಗ ಸುಲಭವಾಗಿ ಒಡೆಯುತ್ತದೆ. ಕಲ್ಲು ಒಡೆಯಲು ಹಾಗೂ ಅದನ್ನು ಟ್ರಾಕ್ಟರ್‌ಗೆ ಲೋಡ್ ಮತ್ತು ಅನ್‌ಲೋಡ್‌ ಮಾಡಲು ಬೇರೆ ಕೂಲಿ ಪಡೆಯುತ್ತೇವೆ’ ಎಂದು ಅನಂತಗಿರಿ ನಿವಾಸಿಯೊಬ್ಬರು ಹೇಳಿದರು. ಇಲ್ಲಿಂದ ಒಯ್ದ ಕಲ್ಲುಗಳನ್ನು ಸಂಪೂರ್ಣ ಮನೆ ಕಟ್ಟಲು ಇಲ್ಲವೇ ತಳಪಾಯಕ್ಕೆ ಬಳಲು, ಸರ್ಕಾರಿ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿದೆ.

ಬೇಲೂರು ಮಾರ್ಗವಾಗಿ ಅನಂತಗಿರಿಗೆ ತೆರಳುವ ಮಾರ್ಗದಲ್ಲಿ ಅರಣ್ಯ ಪ್ರದೇಶದಿಂದ ಕಲ್ಲು ಹೊತ್ತು ಸಾಗುವ ಟ್ರಾಕ್ಟರ್‌ಗಳ ಸಾಲು ಕಾಣಸಿಗುತ್ತದೆ.

ಸ್ಥಳೀಯರ ಬಳಕೆ

ಅಕ್ರಮ ಕಲ್ಲು ಗಣಿಗಾರಿಕೆಗೆ ಹೆಚ್ಚಾಗಿ ಸ್ಥಳೀಯರನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್– 19 ಲಾಕ್‌ಡೌನ್ ಕಾರಣ ಸ್ಥಳೀಯರಿಗೆ ಕೆಲಸಕ್ಕೆ ಹೊರಗೆ ಹೋಗಲು ಆಗುತ್ತಿಲ್ಲ. ಅನಂತಗಿರಿ ಹಾಗೂ ಸುತ್ತಲಿನ ಹಳ್ಳಿಯವರು ಕೆಲಸ ಅರಸಿ ಮಂಗಳೂರು, ಗೋವಾಗೆ ಹೋಗಿದ್ದವರು ಈಗ ಮರಳಿದ್ದಾರೆ. ವರ್ಷದಲ್ಲಿ ಆರು ತಿಂಗಳು ಹೊರಗೆ ಹೋಗುತ್ತಿದ್ದವರೀಗ ಊರಿನಲ್ಲಿಯೇ ಉಳಿದಿದ್ದಾರೆ. ಅವರಿಗೆ ಗ್ರಾಮ ಪಂಚಾಯ್ತಿಯಿಂದ ಉದ್ಯೋಗ ಖಾತರಿ ಕೆಲಸವೂ ಇಲ್ಲವಾಗಿದೆ. ಅವರ ಈ ಅಸಹಾಯಕತೆ ದುರ್ಬಳಕೆ ಮಾಡಿಕೊಂಡು ಅವರನ್ನು ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು