ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ರೋಹಿಣಿ ಮಳೆ ಆರ್ಭಟ; ಮುಂಗಾರು ಶುಭಾರಂಭ

ಬಾಗಲಕೋಟೆ, ಬಾದಾಮಿ, ರಬಕವಿ–ಬನಹಟ್ಟಿಯಲ್ಲಿ ವರ್ಷಧಾರೆ
Last Updated 1 ಜೂನ್ 2020, 13:25 IST
ಅಕ್ಷರ ಗಾತ್ರ

ಬಾಗಲಕೋಟೆ: ರಣಬಿಸಿಲಿಗೆ ಬಸವಳಿದಿದ್ದ ಜಿಲ್ಲೆಯ ಜನತೆಗೆ ಜೂನ್ ಮೊದಲ ದಿನ ಸುರಿದ ಮಳೆರಾಯ ಕೊಂಚ ನೆಮ್ಮದಿ ಮೂಡಿಸಿದ್ದಾನೆ. ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಭರ್ಜರಿ ಮಳೆಯಾಗಿದೆ.

ಬಾಗಲಕೋಟೆಯ ನವನಗರ, ವಿದ್ಯಾಗಿರಿ, ಹಳೆಯ ಬಾಗಲಕೋಟೆ ಹಾಗೂ ತಾಲ್ಲೂಕಿನ ಹಲವೆಡೆ ಸಂಜೆ ಜೋರು ಮಳೆಯಾಯಿತು. ಗುಡುಗು–ಸಿಡಲಿನ ಆರ್ಭಟದೊಂದಿಗೆ ಸುರಿದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ನೆಲ–ಮುಗಿಲನ್ನು ಒಟ್ಟುಗೂಡಿಸಿತ್ತು.

ಮಳೆಯ ಮುನಿಸಿಗೆ ಮುನ್ನ ಬೀಸಿದ ಬಿರುಗಾಳಿಗೆ ಸಿಲುಕಿ ನವನಗರದ ಸೆಕ್ಟರ್ ನಂ. 57ರಲ್ಲಿ ಬೃಹತ್ ಮರವೊಂದು ಬುಡಮೇಲಾಯಿತು. 45ನೇ ಸೆಕ್ಟರ್‌ನ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.

ಮುಂಗಾರು ಹಂಗಾಮಿನ ಮೊದಲ ದಿನ ಸುರಿದ ಮಳೆಗೆ ಹೆಸರು ಬಿತ್ತನೆ ಮಾಡಿದವರಿಗೆ ಅನುಕೂಲವಾಗಲಿದೆ. ಜೊತೆಗೆ ಬಿತ್ತನೆಗೆ ನೆಲ ಹದ ಮಾಡಿಕೊಂಡ ರೈತಾಪಿ ವರ್ಗಕ್ಕೂ ನೆರವಾಗಲಿದೆ. ರೋಹಿಣಿ ಮಳೆಯ ಆರ್ಭಟ ಮುಂದಿನ ದಿನಗಳಲ್ಲಿ ಮಳೆಯ ಸಮೃದ್ಧಿಯ ಮುನ್ಸೂಚನೆ ನೀಡಿದೆ.

ಬಾದಾಮಿ ವರದಿ: ಪಟ್ಟಣದಲ್ಲಿ ಸೋಮವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಗಂಟೆ ಕಾಲ ಮಳೆ ಸುರಿಯಿತು. ಇದರಿಂದ ಎಪಿಎಂಸಿಯಲ್ಲಿ ಆರಂಭವಾಗಿದ್ದ ತರಕಾರಿ ಮಾರುಕಟ್ಟೆಯು ಸಂಪೂರ್ಣವಾಗಿ ಜಲಾವೃತವಾಯಿತು. ನೀರು ಹರಿದ ರಭಸಕ್ಕೆ ಕಾಯಿ–‍ ಪಲ್ಯೆತೇಲಿ ಹೋದವು.

ಕೋವಿಡ್–19 ಹರಡುವಿಕೆ ಹಿನ್ನೆಲೆಯಲ್ಲಿ ಸೋಮವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು. 100ಕ್ಕೂ ಅಧಿಕ ಸ್ಥಳೀಯ ಮತ್ತು ಗ್ರಾಮೀಣ ಕಿರುಕುಳ ವರ್ತಕರು ತರಕಾರಿ ಖರೀದಿಸಿ ವಹಿವಾಟು ನಡೆಸಿದ್ದರು. ಮಧ್ಯಾಹ್ನ ಎರಡು ಗಂಟೆಯವರೆಗೆ ತರಕಾರಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿತ್ತು. ಮಧ್ಯಾಹ್ನದ ನಂತರ ಆಕಾಶದಲ್ಲಿ ಒಮ್ಮಿಂದೊಮ್ಮೆಗೆ ಕಾರ್ಮೋಡ ಕವಿದು ಧಾರಾಕಾರ ಮಳೆ ಸುರಿಯಿತು. ಮೆಣಸಿನಕಾಯಿ, ಲಿಂಬೆಹಣ್ಣು, ತಪ್ಪಲು ಪಲ್ಯೆ ನೀರಿನಲ್ಲಿ ತೇಲಿ ಹೋದವು.

‘ರೊಕ್ಕ ಕೊಟ್ಟು ತರಕಾರಿ ಖರೀದಿ ಮಾಡಿದ್ದಿವಿ ಮಳಿ ಬಂದು ಎಲ್ಲಾ ನೀರಾಗ ತೇಲಿಕೊಂಡು ಹೋದೂವ್ರಿ ಬಡ ವ್ಯಾಪಾರಿಗಳು ಬದಕೂದು ಕಷ್ಟೈತ್ರಿ’ ಎಂದು ಗೌರಮ್ಮ ಪತ್ರಿಕೆಗೆ ಹೇಳಿದರು.

‘ನಮಗ ಹಳೇ ಬಜಾರನ ಚೊಲೊ ಇತ್ತರಿ ಇಲ್ಲಿ ಮಳೀ ಬಂದರ ತರಕಾರಿ ಜ್ವಾಪಾನ ಮಡಾಕ ಯಾವುದೂ ಜಾಗ ಇಲ್ಲ. ನೀರಾಗ ತೇಲಿ ಹೋದವು. ಮಾಲಕರಿಗೆ ರೊಕ್ಕ ಹ್ಯಾಂಗ್ ಕೊಡಬೇಕು’ ಎಂದು ಲಾಲ್‌ಸಾಬ್ ಕೇಳಿದರು.

ಮಾರುಕಟ್ಟೆ ಜಲಾವೃತವಾಗಿದ್ದರಿಂದ ಮತ್ತೆ ಬೆಂಬಿಡದ ಜಿಟಿ ಜಿಟಿ ಮಳೆಯಿಂದ ವರ್ತಕರು ಜಾಗ ಖಾಲಿ ಮಾಡಿ ಮನೆಗೆ ತೆರಳಿದರು. ₹3 ಲಕ್ಷಕ್ಕೂ ಅಧಿಕ ಮೌಲ್ಯದ ತರಕಾರಿ ನೀರಿಗೆ ಕೊಚ್ಚಿಕೊಂಡು ಹೋಗಿದೆ ಎಂದು ವರ್ತಕರು ಹೇಳಿದರು.

ಮಳೆಯಿಂದ ಬೆಟ್ಟದ ಮೇಲಿನ ಜೋಡಿ ಜಲಧಾರೆಗಳು ಮತ್ತೆ ಧುಮ್ಮಿಕ್ಕಿದವು.ನಿಸರ್ಗಪ್ರಿಯರಿಗೆ ಜಲಧಾರೆಯನ್ನು ವೀಕ್ಷಿಸಿದರು. ರಸ್ತೆಯಲ್ಲಿ ನೀರು ಹರಿದು ಚರಂಡಿಗಳು ಸ್ವಚ್ಛವಾಯಿತು.

ರಬಕವಿ ಬನಹಟ್ಟಿ ವರದಿ: ನಾಲ್ಕು ತಿಂಗಳಿಂದ ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಜನ ಸೋಮವಾರ ಸುರಿದ ಮಳೆಯಿಂದಾಗಿ ಸ್ವಲ್ಪಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ.

ಭಾನುವಾರ ಸಂಜೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೆ ಸೋಮವಾರ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ತಂಪೆರೆದಿದೆ.

ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೆ ಇದರಿಂದ ಅನುಕೂಲವಾಗಿದೆ. ರೈತರು ಈಗಾಗಲೇ ಭೂಮಿ ಹದಗೊಳಿಸಿದ್ದಾರೆ. ಈ ಮಳೆಯಿಂದಾಗಿ ರೈತರ ಮೊಗದಲ್ಲಿ ನಗೆ ಕಂಡಿದೆ ಎಂದು ರೈತ ಮುಖಂಡ ಭೀಮಶಿ ಮಗದುಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT