ಭಾನುವಾರ, ಜನವರಿ 24, 2021
18 °C

PV Web Exclusive: ಬಾಗಲಕೋಟೆಯ ಆತ್ಮಬಂಧು ಪಾಠಿ ಫ್ಯಾಕ್ಟರಿ!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಮುಂಬೈನ ದಲಾಲ್‌ ಸ್ಟ್ರೀಟ್‌, ಬೆಂಗಳೂರಿನ ಎಂ.ಜಿ ರಸ್ತೆಯ ಕಚೇರಿಗಳು, ಭಾರತೀಯ ರೈಲ್ವೆ, ಬಿಎಸ್‌ಎನ್‌ಎಲ್, ಅಂಚೆ ಕಚೇರಿ ಸೇರಿದಂತೆ ದೇಶಾದ್ಯಂತ ಪ್ರಮುಖ ಉದ್ಯಮ ಸಂಸ್ಥೆಗಳ ಆವರಣದಲ್ಲಿ ಕಾಣಸಿಗುವ ನಾಮಫಲಕಗಳಿಗೂ (ಸೈನ್‌ಬೋರ್ಡ್) ಬಾಗಲಕೋಟೆ ನಗರದ ಪಾಠಿ ಫ್ಯಾಕ್ಟರಿಗೂ (ವಾಸುದೇವ ಎನಾಮೆಲ್ಸ್) ನಂಟು ಇದೆ. ಶೀಘ್ರ ಅದು ನೇಪಥ್ಯಕ್ಕೆ ಸರಿಯಬಹುದು’ ಎಂದು ಹೀಗೆಯೇ ಲೋಕಾಭಿರಾಮವಾಗಿ ಮಾತಿಗೆ ಕುಳಿತಾಗ ಹಿರಿಯ ಉಪನ್ಯಾಸಕ ಮಿತ್ರರಾದ ಡಾ.ಹನುಮಂತ ಯಡಹಳ್ಳಿ ಹೇಳಿದರು. ಕ್ಷಣಕಾಲ ಅಚ್ಚರಿಗೊಳಗಾದೆ.

ಅದು ಈಗಿನದ್ದು ಅಲ್ಲ. 68 ವರ್ಷಗಳಷ್ಟು ಹಳೆಯ ಬಾಂಧವ್ಯ. ನಿಮ್ಮ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಸಂಸ್ಥೆಗೂ ಹಿಂದೆ ಇಲ್ಲಿಂದಲೇ ನಾಮ ಫಲಕಗಳ ಪೂರೈಕೆ ಆಗುತ್ತಿತ್ತು ಎಂದು ಅವರು ಹೇಳಿದಾಗ ಕುತೂಹಲ ಇಮ್ಮಡಿಗೊಂಡಿತು. ಛಾಯಾಗ್ರಾಹಕ ಗೆಳೆಯ ಸಂಗಮೇಶ ಬಡಿಗೇರ ಅವರೊಂದಿಗೆ ಹಳೆ ಬಾಗಲಕೋಟೆಯಲ್ಲಿ ಬೆಳಗಾವಿ ರಸ್ತೆಯಲ್ಲಿರುವ ಫ್ಯಾಕ್ಟರಿಯತ್ತ ಬೈಕ್ ತಿರುಗಿಸಿದೆ.

ವಾಸುದೇವ ಎನಾಮೆಲ್ಸ್ (ಸ್ಥಳೀಯರಿಗೆ ಅದು ಪಾಠಿ ಫ್ಯಾಕ್ಟರಿ) ಒಳ ಹೊಕ್ಕಾಗ ಈ ದೇಶ ಕಟ್ಟಿದ ನೂರಾರು ಸಾರ್ವಜನಿಕ ಉದ್ದಿಮೆಗಳು, ಖಾಸಗಿ ಕಂಪೆನಿಗಳ ಆರಂಭದ ದಿನಗಳಲ್ಲಿ ಹಾಗೂ ಈಗಲೂ ಬಳಸುತ್ತಿರುವ ನಾಮಫಲಕಗಳು ಕಣ್ಣಿಗೆ ಬಿದ್ದವು. UNIT TRUST OF INDIA, MADURA COATS, 40 ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದ MODI TREADS, ಮೈಸೂರು ಸಂಸ್ಥಾನದ ಹೆಮ್ಮೆಯ MYSORE LAMPS, ಟೈರ್ ಸಂಸ್ಥೆಗಳಾದ CEAT, VIKRANT, ಸಾರ್ವಜನಿಕ ಸಂಸ್ಥೆಗಳಾದ IPP, BP, APEX BANK, India Post, EMS speed Post, FACT, JAIKISAN, ವಾಹನ ತಯಾರಿಕೆಯ ESCORTS, FORD, Yezdi, ಹೀಗೆ ಬಾಲ್ಯದಿಂದಲೂ ಹಳ್ಳಿ–ಪಟ್ಟಣಗಳಲ್ಲದೇ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ನಾಮಫಲಕಗಳು ಅಲ್ಲಿ ಒಟ್ಟಿಗೆ ಕಾಣಸಿಕ್ಕವು.

ಪರಿಚಯ ಹೇಳುತ್ತಲೇ ಮಾಲೀಕ ದಿಲೀಪಕುಮಾರ್ ಚೌಹಾಣ್ ಮುಗುಳ್ನಗುತ್ತಾ ಸ್ವಾಗತಿಸಿದರು. ‘ಇಲ್ಲಿಯೇ ಪಕ್ಕದಲ್ಲಿರುವ ಬಾಗಲಕೋಟೆ ಸಿಮೆಂಟ್ಸ್ ಬಿಟ್ಟರೆ ನಮ್ಮ ಫ್ಯಾಕ್ಟರಿಯೇ ಹೆಚ್ಚುಕಾಲ ಇಲ್ಲಿ ಬಾಳಿಕೆ ಬಂದಿರುವುದು’ ಎಂದು ಚಟಾಕಿ ಹಾರಿಸಿದರು. ನಂತರ ಕೆಲಹೊತ್ತು ಮಾತಿಗೆ ಸಿಕ್ಕರು.

ಹುಬ್ಬಳ್ಳಿಯಿಂದ ಪೂರೈಕೆಯಾಗುವ ಸಿಆರ್‌ ಶೀಟ್‌ಗಳ ಮೇಲೆ ಎನಾಮೆಲ್ ಅಕ್ಷರಗಳ ಕೋಟಿಂಗ್ ಮಾಡಿ ಅದನ್ನು 800ರಿಂದ 850 ಡಿಗ್ರಿ ಉಷ್ಣಾಂಶದಲ್ಲಿ ಕಾಯಿಸಿ ಸಂಸ್ಕರಿಸುವ ಮೂಲಕ ಸೈನ್‌ಬೋರ್ಡ್‌ಗಳನ್ನು ಸಿದ್ಧಪಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಗುಜರಾತ್‌ನ ಭುಜ್‌ನಿಂದ ಬಾಗಲಕೋಟೆಗೆ ವಲಸೆ ಬಂದ ದಿಲೀಪ್ ಅವರ ತಂದೆ ಮಗನ್‌ ಭಾಯ್ ಚೌಹಾಣ್ 1952ರಲ್ಲಿ ಪಾಲುದಾರಿಕೆಯಲ್ಲಿ ನವಭಾರತ ಹೆಸರಿನ ಎನಾಮೆಲ್ ಇಂಡಸ್ಟ್ರಿ ಆರಂಭಿಸಿದ್ದರು. ಮೊದಲಿಗೆ ಇಲ್ಲಿ ಸ್ಟೋನ್ ಹಾಗೂ ಎನಾಮೆಲ್ ಸ್ಲೇಟ್ ತಯಾರಿಕೆ ಆರಂಭಿಸಿದ್ದರು. ಹೀಗಾಗಿಯೇ ಸ್ಥಳೀಯರು ಪಾಠಿ ಫ್ಯಾಕ್ಟರಿ ಅನ್ನುತ್ತಿದ್ದರು. ನಂತರ ಕೆಲ ವರ್ಷಗಳಲ್ಲಿ ಎನಾಮೆಲ್ ಸೈನ್‌ಬೋರ್ಡ್ ತಯಾರಿಕೆ ಶುರುವಾಯಿತು. ಮುಂದೆ 1969ರಲ್ಲಿ ಅದು ವಾಸುದೇವ ಎನಾಮೆಲ್ ಎಂದು ಹೆಸರು ಬದಲಾಯಿಸಿಕೊಂಡಿತು. ಸ್ಲೇಟ್–ಬಳಪದ ಬಳಕೆ ಕಡಿಮೆ ಆಗಿ ಬೇಡಿಕೆ ತಗ್ಗುತ್ತಿದ್ದಂತೆಯೇ ಬರೀ ಎನಾಮೆಲ್ ಬೋರ್ಡ್‌ಗಳ ತಯಾರಿಕೆ ಈಗ ನಡೆಯುತ್ತಿದೆ.

ದೀರ್ಘ ಕಾಲ ಬಾಳಿಕೆ: ‘ಇಲ್ಲಿ ಸಿದ್ಧವಾಗುವ ಎನಾಮೆಲ್ ಬೋರ್ಡ್‌ಗಳು ಕನಿಷ್ಠ 80 ವರ್ಷ ಬಾಳಿಕೆ ಬರುತ್ತವೆ. ಅಕ್ಷರ ಕೂಡ ಅಳಿಸುವುದಿಲ್ಲ. ಮಳೆ–ಗಾಳಿ, ಬಿಸಿಲು ಎಲ್ಲವನ್ನೂ ತಾಳಿಕೊಳ್ಳುವ ಗುಣ ಹೊಂದಿವೆ. ಈ ದೀರ್ಘ ಕಾಲದ ಬಾಳಿಕೆಯೇ ನಮ್ಮ ಸಂಸ್ಥೆಯ ಯಶಸ್ಸು‘ ಎಂದು ದಿಲೀಪ್ ಹೇಳುತ್ತಾರೆ. ಹೀಗಾಗಿಯೇ ಭಾರತೀಯ ಸೇನೆ, ಎನ್‌ಸಿಸಿ, ದೇಶದ ನವರತ್ನ ಎನಿಸಿದ ಉದ್ದಿಮೆ ಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಇಬಿ, ಮಾಧ್ಯಮ ಸಂಸ್ಥೆಗಳಾದ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್, ಈವನಿಂಗ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಮಹಾರಾಷ್ಟ್ರದ ಸಕಾಳ್, ರಾಷ್ಟ್ರೀಯ ದೈನಿಕ ಪೇಟ್ರಿಯಾಟ್, ಉತ್ತರ ಭಾರತದ ಅಮರ್–ಉಜಾಲ ಗ್ರಾಹಕರಾಗಿ ಲಭ್ಯವಾಗಲು ಸಾಧ್ಯವಾಯಿತು’ ಎನ್ನುತ್ತಾರೆ.

ಈಗ ಕಾಲ ಬದಲಾಗಿದೆ. ದೀರ್ಘ ಕಾಲದ ಬಾಳಿಕೆಗಿಂತ ಅಗ್ಗದ ದರಕ್ಕೆ ಕಡಿಮೆ ಕಾಲ ಬಾಳಿಕೆ ಬರುವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿಯೇ ಪ್ಲಾಸ್ಟಿಕ್, ವಿನೈಲ್, ಪಿವಿಸಿ ಸ್ಟಿಕ್ಕರ್, ಅಲ್ಯೂಮಿನಿಯಂ ಕೋಟೆಡ್ ಪೆನಲ್‌ಗಳನ್ನು ಬಳಸಿ ಬೋರ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ದೇಸಿ ಮಾರುಕಟ್ಟೆಯಲ್ಲಿ ಎನಾಮೆಲ್ ಬೋರ್ಡ್‌ಗಳಿಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಆದರೆ ವಿದೇಶದಲ್ಲಿ ಈಗಲೂ ಬಾಗಲಕೋಟೆಯ ಎನಾಮೆಲ್ ಬೋರ್ಡ್‌ಗಳಿಗೆ ಮನ್ನಣೆ ಇದೆ. ಅಮೆರಿಕಾ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್‌ಗಳಿಗೆ ವಾಸುದೇವ ಎನಾಮೆಲ್ಸ್ ಈಗಲೂ ಸೈನ್‌ಬೋರ್ಡ್‌ಗಳ ಪೂರೈಕೆ ಮಾಡುತ್ತಿದೆ ಎನ್ನುತ್ತಾರೆ. ಕಳೆದ ವಾರವಷ್ಟೇ ಆಸ್ಟ್ರೇಲಿಯಾಗೆ ಪೂರೈಸಿದ FROGS ಹೆಸರಿನ ಬೋರ್ಡ್‌ನ ಮಾದರಿ ತೋರಿಸಿದರು.

ಸೈಕಲ್‌ ಸ್ಟ್ಯಾಂಡ್‌ನಿಂದ ಮೊದಲುಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಕ್ಕುವ 65 ಅಡಿ ಉದ್ದದ ನಾಮಫಲಕಗಳನ್ನು ವಾಸುದೇವ ಫ್ಯಾಕ್ಟರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ 25 ವರ್ಷಗಳ ಹಿಂದೆಯೇ 150 ಅಡಿ ಉದ್ದದ ಗೇಜಿಂಗ್ ಪೆನಲ್ ಸಿದ್ಧಪಡಿಸಿದ ಶ್ರೇಯ ಸಂಸ್ಥೆಯದ್ದು.

ಬಾಗಲಕೋಟೆಯ ಹಳೆಯ ನಗರ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗಿದ್ದು, ವಾಸುದೇವ ಎನಾಮೆಲ್ಸ್ ಸಂಸ್ಥೆ ಕೂಡ ಅದೇ ಪ್ರದೇಶದಲ್ಲಿದೆ. ಜಲಾಶಯದ ಹಿನ್ನೀರು ಫ್ಯಾಕ್ಟರಿಯ ಹೊರ ಆವರಣಕ್ಕೆ ಬಂದಿದ್ದು, ನವನಗರದ ಕೈಗಾರಿಕಾ ಪ್ರದೇಶಕ್ಕೆ ಫ್ಯಾಕ್ಟರಿ ಸ್ಥಳಾಂತರಕ್ಕೆ ಜಾಗ ಕೂಡ ನೀಡಲಾಗಿದೆ. ಈಗ ಮಗನ್ ಭಾಯ್ ಅವರ ನಾಲ್ವರು ಮಕ್ಕಳಲ್ಲಿ ದಿಲೀಪ್‌ ಹಾಗೂ ಗಿರಿಧರ್ ಫ್ಯಾಕ್ಟರಿ ನೋಡಿಕೊಳ್ಳುತ್ತಿದ್ದಾರೆ. ‘ನನಗೀಗ 68 ವರ್ಷ, ಅಣ್ಣ ಗಿರಿಧರ ಅವರಿಗೆ 72. ನಮ್ಮ ಈಗಿನ ತಲೆಮಾರು ಐಟಿ ರಂಗದಲ್ಲಿ ತೊಡಗಿಕೊಂಡಿದೆ. ಹೀಗಾಗಿ ಇನ್ನು ಕೆಲಕಾಲ ನಾವು ಫ್ಯಾಕ್ಟರಿ ನಡೆಸಿಕೊಂಡು ಹೋಗಬಹುದು. ಮುಂದೆ ಕಷ್ಟ, ಕೃಷ್ಣೆಯ ಹಿನ್ನೀರಿನಲ್ಲಿ ಏಳು ದಶಕಗಳ ನೆನಪು ಲೀನವಾಗಬಹುದು. ಎಲ್ಲವೂ ನಮ್ಮ ಮಕ್ಕಳ ನಿರ್ಧಾರಕ್ಕೆ ಬಿಟ್ಟಿದೆ’ ಎಂದು ಹೇಳುತ್ತಾ ಮಾತು ಮುಗಿಸಿದರು.

ಕಲ್ಲಿನ ಪಾಠಿ ಈಗ ನೋಡಲು ಲಭ್ಯ!..

ಬಾಲ್ಯದಲ್ಲಿ ಸಾಲಿ ಗುಡಿಗೆ ಹೋಗುವಾಗ ನಮ್ಮ ಪಾಠಿ ಚೀಲ ಅಲಂಕರಿಸುತ್ತಿದ್ದ ಕಲ್ಲಿನ ಪಾಠಿ (ಸ್ಲೇಟು) ಕೂಡ ಈ ಕಾರ್ಖಾನೆಯಲ್ಲಿಯೇ ಸಿದ್ಧಗೊಳ್ಳುತ್ತಿದ್ದವು. ನವಭಾರತ ಸ್ಲೇಟ್ ಎಂದೇ ಆಗ ಖ್ಯಾತಿ ಹೊಂದಿದ್ದವು. ಸಮೀಪದ ಖಜ್ಜಿಡೋಣಿ ಬಳಿಯ ಸ್ಲೇಟ್ ಸ್ಟೋನ್ ಗಣಿಗಾರಿಕೆ ನಡೆಯುತ್ತಿತ್ತು. ಅಲ್ಲಿಂದ ಕಲ್ಲು ತರಿಸಿ ಅದಕ್ಕೆ ಚಿಕ್ಕಮಗಳೂರಿನ ಕಾಫಿ ತೋಟಗಳಿಂದ ತರಿಸುತ್ತಿದ್ದ ಸಿಲ್ವರ್ ಓಕ್ ಮರದ ಕಟ್ಟುಗಳನ್ನು ಜೋಡಿಸಿ ಮಾರುಕಟ್ಟೆಗೆ ಕಳುಹಿಸುತ್ತಿದ್ದೆವು. ಮುಂದೆ ಎನಾಮೆಲ್ ಸ್ಟೇಟ್‌ಗಳ ತಯಾರಿಕೆ ಕೂಡ ನಡೆಯುತ್ತಿತ್ತು. ಮಕ್ಕಳು ನೋಟ್‌ಬುಕ್‌ಗಳತ್ತ ಆಕರ್ಷಿತರಾಗುತ್ತಿದ್ದಂತೆಯೇ ಸ್ಲೇಟ್‌ಗಳು ನೇಪಥ್ಯಕ್ಕೆ ಸರಿದವು. ಈಗಲೂ ದಿಲೀಪ್ ಅವರ ಸಂಗ್ರಹದಲ್ಲಿ 40 ವರ್ಷಗಳ ಹಿಂದೆ ಸಿದ್ಧಗೊಂಡ ಸ್ಲೇಟ್‌ಗಳು ಕಾಣಸಿಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು