ಗುರುವಾರ , ಸೆಪ್ಟೆಂಬರ್ 23, 2021
22 °C
ಬಾದಾಮಿ ಪೊಲೀಸರ ಬಲೆಗೆ ಔರಂಗಾಬಾದ್‌ನ ದರೋಡೆಕೋರರ ತಂಡ

ಬಾಗಲಕೋಟೆ: ದರೋಡೆಗೆ ರೈಲಿನಲ್ಲಿ ಬರುತ್ತಿದ್ದರು!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಹಾರಾಷ್ಟ್ರದಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬಂದು ಬಾಗಲಕೋಟೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ‌ಅಪರಾಧ ಕೃತ್ಯಗಳ ನಡೆಸುತ್ತಿದ್ದ ಔರಂಗಾಬಾದ್‌ನ ಕುಖ್ಯಾತ ದರೋಡೆಕೋರರ ತಂಡ ಬಾದಾಮಿ ಪೊಲೀಸರ ಬಲೆಗೆ ಬಿದ್ದಿದೆ.

ಬಾದಾಮಿ–ರಾಮದುರ್ಗ ರಾಜ್ಯ ಹೆದ್ದಾರಿಯಲ್ಲಿರುವ ಕಾಕನೂರಿನ ಶಾಲೆಯ ಬಳಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಆರು ಮಂದಿಯ ತಂಡ ತಡರಾತ್ರಿ ದರೋಡೆ ನಡೆಸಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಈ ಬಗ್ಗೆ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ ಹಾನಾಪುರ, ಸಬ್‌ಇನ್‌ಸ್ಪೆಕ್ಟರ್ ನೇತ್ರಾವತಿ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಗುಳೇದಗುಡ್ಡ ಠಾಣೆ ಪಿಎಸ್‌ಐ ಕೂಡ ಇದ್ದರು ಎಂದು ತಿಳಿದುಬಂದಿದೆ. 

ಗದ್ದನಕೇರಿ ಕ್ರಾಸ್‌ ಪ್ರಕರಣದಲ್ಲಿ ಭಾಗಿ?: ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ದೇವದಾಸ್ ಮನೆಯ ದರೋಡೆಯಲ್ಲಿ ಈ ತಂಡದ ಸದಸ್ಯನೊಬ್ಬ ಭಾಗಿಯಾದ್ದಾನೆ ಎನ್ನಲಾಗಿದೆ. ದರೋಡೆ ವೇಳೆ ದೇವದಾಸ್ ಹಾಗೂ ಅವರ ಪತ್ನಿ ದರೋಡೆಕೋರರಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಈಗಲೂ ತೀವ್ರ ಚಿಕಿತ್ಸಾ ಘಟಕದಲ್ಲಿಯೇ ಇದ್ದಾರೆ.

ಔರಂಗಾಬಾದ್ ಹಾಗೂ ಬೀಡ್ ಜಿಲ್ಲೆಗಳ ಮೂರು ತಂಡಗಳು ಸುಲಿಗೆ, ದರೋಡೆಯನ್ನೇ ವೃತ್ತಿಯಾಗಿಸಿಕೊಂಡಿದ್ದು, ಈ ಭಾಗದಲ್ಲಿ ಸಕ್ರಿಯವಾಗಿವೆ. ಇವರು ಪರಸ್ಪರ ಸಂಪರ್ಕದಲ್ಲಿದ್ದು, ಅಪರಾಧ ಕೃತ್ಯಗಳಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಗದ್ದನಕೇರಿ ಕ್ರಾಸ್‌ನಲ್ಲಿ ನಡೆದ ದರೋಡೆ ಕೃತ್ಯದಲ್ಲಿ ಇನ್ನೊಂದು ತಂಡ ಭಾಗಿಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದು ತನಿಖೆಯಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ಮೂಲಗಳು ತಿಳಿಸಿವೆ.

ದರೋಡೆಗೆ ಸಿದ್ಧತೆ: ಕಾಕನೂರು ಬಳಿ ಹೆದ್ದಾರಿಯಲ್ಲಿ ವಾಹನ ಸವಾರರ ದರೋಡೆಗೆ ಸಿದ್ಧತೆ ನಡೆಸಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳ ಬಳಿ ಚಾಕು, ರಾಡು, ಹಗ್ಗ ಸೇರಿದಂತೆ ಮಾರಕಾಸ್ತ್ರಗಳ ವಶಪಡಿಸಿಕೊಂಡಿದ್ದರು. 

ವಿಶೇಷ ಗಸ್ತು ತಂಡ ರಚನೆ: ಗದ್ದನಕೇರಿ ಕ್ರಾಸ್‌ನಲ್ಲಿ ನಡೆದ ದರೋಡೆ ಹಾಗೂ ಜಿಲ್ಲೆಯ ವಿವಿಧೆಡೆ ಕಳ್ಳತನ ಪ್ರಕರಣಗಳು ಹೆಚ್ಚಾದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮೂರು ವಿಶೇಷ ಗಸ್ತು ತಂಡಗಳ ರಚನೆ ಮಾಡಿದ್ದರು. 

ಕೊರೊನಾ ಲಾಕ್‌ಡೌನ್ ನಂತರ ಏನೂ ಕೆಲಸವಿಲ್ಲದೇ ಈ ತಂಡಗಳು ರಾಜ್ಯದಲ್ಲಿ ದರೋಡೆ, ಕಳ್ಳತನ ಕೃತ್ಯಕ್ಕೆ ಇಳಿದಿದ್ದವು. ವಾಹನಗಳಲ್ಲಿ ಬಂದರೆ ನಾಕಾಬಂದಿಗೆ ಒಳಪ‍ಡಬಹುದು. ಪೊಲೀಸರಿಗೆ ಸಿಕ್ಕಿಬೀಳಬಹುದು ಎಂದು ಈ ತಂಡಗಳ ಸದಸ್ಯರು ರೈಲಿನಲ್ಲಿ ಬಂದು ಕೃತ್ಯ ನಡೆಸಿ ತೆರಳುತ್ತಿದ್ದರು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು