ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಬನಶಂಕರಿ ತೇರಿಗೆ ಮಾಡಲಗೇರಿ ಹಗ್ಗ: ದೇವಿಗೆ ತವರಿನ ಉಡುಗೊರೆ

18ನೇ ಶತಮಾನದಿಂದ ನಡೆದು ಬಂದ ಸಂಪ್ರದಾಯ
Last Updated 10 ಜನವರಿ 2020, 10:00 IST
ಅಕ್ಷರ ಗಾತ್ರ

ರೋಣ: ಬದಾಮಿಯ ಐತಿಹಾಸಿಕ ಬನಶಂಕರಿದೇವಿ ಜಾತ್ರೆ ಜ. 10ರಿಂದ ಆರಂಭಗೊಳ್ಳುತ್ತಿದ್ದು, ಈ ಜಾತ್ರೆಯ ತೇರನ್ನು ಎಳೆಯಲು ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ಪೂರೈಕೆ ಆಗುತ್ತದೆ.

ಮಾಡಲಗೇರಿ ಬನಶಂಕರಿ ದೇವಿಯ ತವರು. ಈ ಗ್ರಾಮದ ಜನತೆ ಪುಂಡಿನಾರಿನಿಂದ ತಯಾರಿಸಿದ ಹಗ್ಗವನ್ನು, ಹದಿನಾರು ಎತ್ತಿನ ಎರಡು ಹಳಿಬಂಡಿಯಲ್ಲಿ ರಥೋತ್ಸವಕ್ಕೆ ಕೊಂಡೊಯ್ಯುವ ಸಂಪ್ರದಾಯ 18ನೇ ಶತಮಾನದಿಂದ ನಡೆದು ಬಂದಿದೆ. ಇದು ಬನಶಂಕರಿ ದೇವಿಗೂ ರೋಣ ತಾಲ್ಲೂಕಿಗೂ ಇರುವ ಅವಿನಾಭಾವ ಸಂಬಂಧ.

ಮಾಡಲಗೇರಿಯ ಗೌಡರ ಮನೆತನಗಳಾದ ಹಿರೇಸಕ್ಕರಗೌಡ್ರ, ಅಮಾತಿಗೌಡ್ರ, ತಿಪ್ಪನಗೌಡ್ರ, ರಾಯನಗೌಡ್ರ, ಭೀಮನಗೌಡ, ಗೋವಿಂದಗೌಡ್ರ, ಬಾಳನಗೌಡ್ರ, ಬಾಲನಗೌಡ್ರ, ಹಿರೇಕೆಂಚನಗೌಡ್ರ, ಸಣ್ಣಸಕ್ಕರಗೌಡ್ರ ತೆರಿನ ಹಗ್ಗವನ್ನು ಒಯ್ಯುವ ಪ್ರಮುಖ ಮನೆತನಗಳು.

ಈ ಗೌಡರ ಮನೆತನದವರು ಎರಡು ಹಳಿಬಂಡಿಯಲ್ಲಿ ತೇರಿನ ಹಗ್ಗವನ್ನು ತೆಗೆದುಕೊಂಡು ಹೋಗುತ್ತಾರೆ. ಒಂದು ಹಳಿಬಂಡಿಗೆ 16 ಎತ್ತುಗಳನ್ನು ಹೂಡುತ್ತಾರೆ. ಈ ಹಳಿಬಂಡಿ ಆರಂಭದಲ್ಲಿ ಹೂಡುವ ಎತ್ತುಗಳು ಕಿಲಾರಿ ತಳಿಯ ಹೋರಿಗಳನ್ನು ಕುತನಿ ಜೂಲ, ತೊಗಲಿನ ಬಾಸಿಂಗ, ಹಣೆ ಕಟ್ಟು, ಗೊಂಡೆ, ಕಂಬನಸು, ಸೇವಂತಿಗಿ ಹೂವುಗಳಿಂದ ಸಿಂಗರಿಸಲಾಗುತ್ತದೆ.

ಹಗ್ಗ ಹೊತ್ತ ಹಳಿಬಂಡಿ ಬನದ ಹುಣ್ಣಿಮೆಯ ದಿನ ಬೆಳಗ್ಗೆ 8 ಗಂಟೆಗೆ ಮಾಡಲಗೇರಿ ಗ್ರಾಮದಿಂದ ಹೊರಟು, ಸಾವಿರಾರು ಭಕ್ತರ ಮೆರವಣಿಗೆಯು ಮೂಲಕ ಮಲಪ್ರಭಾ ನದಿ ದಾಟಿ ಮಧ್ಯಾಹ್ನ 3 ಗಂಟೆಗೆ ಬನಶಂಕರಿ ಸನ್ನಿಧಿ ತಲುಪುತ್ತದೆ. ಮುಖಂಡರು ದೇವಿಯ ಆರ್ಶೀವಾದ ಪಡೆದು ತೇರು ಎಳೆಯಲು ಹಗ್ಗ ಅರ್ಪಿಸುತ್ತಾರೆ. ನಂತರ ಸಂಜೆ 6ಕ್ಕೆ ರಥೋತ್ಸವ ನಡೆಯುತ್ತದೆ.

ಬನಶಂಕರಿ ತೇರಿನ ಹಗ್ಗವನ್ನು ಪುಂಡಿನ ನಾರಿನಿಂದಲೇ ತಯಾರಿಸುತ್ತಾರೆ. ಎರಡು ಹಳಿಬಂಡಿಗೆ ಹೂಡುವ ಕಿಲಾರಿ ತಳಿ ಹೋರಿಗಳನ್ನು ಎರಡು ತಂಡದವರು ತಮ್ಮ ಶಕ್ತಿಗೆ ಅನುಸಾರವಾಗಿ ಒಂದು ಜಾತ್ರೆಯ ವ್ಯವಸ್ಥೆಗೆ ₹ 1 ಲಕ್ಷದಿಂದ ₹ 1.50 ಲಕ್ಷದವರೆಗೆ ಕೊಟ್ಟು ಖರೀದಿಸುತ್ತಾರೆ. ರಾಜ್ಯದ ತುಂಬಾ ಸುತ್ತಾಡಿ ಬಲಾಡ್ಯ ಹೋರಿಗಳನ್ನು ತರುತ್ತಾರೆ. ಹಳಿಬಂಡಿಗಳನ್ನು ಮರಳು ತುಂಬಿದ ಮತ್ತು ಹರಿಯುವ ನದಿಯಲ್ಲಿ ಹೋರಿಗಳು ನಿಲ್ಲದೇ ಎಳೆಯಬೇಕು. ಇದಕ್ಕಾಗಿ ಎರಡು ತಿಂಗಳ ಮುಂಚೆಯೇ ಹೋರಿಗಳನ್ನು ಖರೀದಿಸಿ ಅವುಗಳಿಗೆ ತರಬೇತಿ ನೀಡುತ್ತಾರೆ.

ತೆರು ಎಳೆದ ಮೂರನೆಯ ದಿನಕ್ಕೆ ಮಾಡಲಗೇರಿ ಗ್ರಾಮದಲ್ಲಿ ಹಳಿಬಂಡಿ ಮೆರವಣಿಗೆ ನೋಡಲು ಸುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಬರುತ್ತಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಗೀಗಿಪದ, ಲಾವಣಿ ಪದ, ಕರಡಿ ಮಜಲು, ಬ್ಯಾಂಡ್ ಸಟ್, ರಸಮಂಜರಿ ತಂಡಗಳು ಭಾಗವಹಿಸುತ್ತವೆ.

‘ಮಾಡಲಗೇರಿ ಗ್ರಾಮದ ಸಮಸ್ತ ಜನರಿಂದ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಇಂಥ ವಿಶಿಷ್ಟ ಆಚರಣೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಸಾಗಲಿ’ ಎನ್ನುತ್ತಾರೆ ಎರಡು ಹಳಿ ಬಂಡಿಯ ಎತ್ತಿನ ಸೇವೆಯ ಭಕ್ತರಾದ ನಾರಾಯಣ ಮೇಟಿ ಮತ್ತು ರೂಪೇಶ ನೈನಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT