ಸಿಎಂಗೆ ಸಿ.ಡಿ ತೋರಿಸಿ ಕಾಂಗ್ರೆಸ್ ನಾಯಕರ ಬ್ಲಾಕ್‌ಮೇಲ್: ಯತ್ನಾಳ ಆರೋಪ

ಬಾಗಲಕೋಟೆ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ ಇಟ್ಟುಕೊಂಡು ರಾಜ್ಯದ ಕಾಂಗ್ರೆಸ್ ನಾಯಕರು ಬ್ಲಾಕ್‌ಮೇಲ್ ಮಾಡಿ ತಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುತ್ತಿದ್ದಾರೆ’ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಸೇರಿರುವ ಕಣ್ಣಿನಲ್ಲಿ ನೋಡಲಾರದಂತಹ ಸಿಡಿ ಇದೆ. ಅದನ್ನು ಅವರ ಮನೆಯಲ್ಲಿ ಮೊಮ್ಮಗನೇ ಮಾಡಿದ್ದಾನೆ. ಅದೇ ಸಿಡಿ ನನ್ನ ಬಳಿ ಇದ್ದಿದ್ದರೆ ನಾನು ಉಪಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದರು.
ಸಿಎಂ ಮುಂದಿಟ್ಟುಕೊಂಡು ಸಿಎಂ ಬೆದರಿಸಿ ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರಗಳಿಗೆ ಬಿಜೆಪಿ ಶಾಸಕರಿಗಿಂತ ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ. ನಾವು (ಬಿಜೆಪಿಯವರು) ಅನುದಾನ ಕೇಳಿದರೆ ವಿಷ ಕುಡಿಯಲು ಹಣವಿಲ್ಲ ಎನ್ನುತ್ತಾರೆ. ಆದರೆ ಜಮೀರ್ ಅಹಮದ್, ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರಗಳಿಗೆ ಹೆಚ್ಚಿನ ನೆರವು ಸಿಗುತ್ತಿದೆ. ಇನ್ನೊಂದೆಡೆ ಸಿಎಂ ಪುತ್ರ ವಿಜಯೇಂದ್ರ ಚೇಲಾಗಳಿಗೆ ಹುದ್ದೆಗಳು ಸಿಗುತ್ತಿವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಸಿಡಿ ಎಂಬುದು ಅವರು ಮಾತನಾಡುವ ರೀತಿಯಿಂದಲೇ ಗೊತ್ತಾಗುತ್ತದೆ. ನಿಜವಾಗಲೂ ಕಾಂಗ್ರೆಸ್‌ನವರು ವಿರೋಧ ಪಕ್ಷದವರಾಗಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಯತ್ನಾಳ, ಸಿಡಿ ರಹಸ್ಯ ಕುರಿತು ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.