ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಕಣದಲ್ಲೇ ಹಾಳಾಗುತ್ತಿದೆ ಕಡಲೆಕಾಳು

ಬೆಂಬಲ ಬೆಲೆಯಡಿ ಖರೀದಿಯ ನಿರೀಕ್ಷೆಯಲ್ಲಿ ರೈತಾಪಿ ವರ್ಗ
Last Updated 4 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಇನ್ನೂ ಕೊಯ್ಲು ಆರಂಭವಾಗದ ಬಿಳಿಜೋಳ ಬೆಂಬಲ ಬೆಲೆಯಡಿ ಖರೀದಿಗೆ ನೋಂದಣಿ ಆರಂಭಿಸಿದ್ದೀರಿ. ಆದರೆ ಕಟಾವು, ರಾಶಿ ಆಗಿ ಹುಳು ತಿನ್ನುತ್ತಿರುವ ಕಡಲೆ ಖರೀದಿಗೆ ಮುಂದಾಗುತ್ತಿಲ್ಲವೇಕೆ..

ಇದು ಜಿಲ್ಲೆಯ ಕಡಲೆ ಬೆಳೆಗಾರರ ಪ್ರಶ್ನೆ. ಈ ಬಾರಿಯ ಹಿಂಗಾರಿ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1.13,986 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ತುಸು ಹೆಚ್ಚೇ (2019ರಲ್ಲಿ 1.12,516 ಹೆಕ್ಟೇರ್) ಬಿತ್ತನೆಯಾಗಿದೆ. ಜನವರಿ ಆರಂಭದಿಂದಲೇ ಕಟಾವು ಆರಂಭಗೊಂಡಿದೆ. ಕಡಲೆ ಒಕ್ಕಿ ಕಣದಲ್ಲಿ ರಾಶಿ ಮಾಡಿಕೊಂಡು ಕುಳಿತಿರುವ ಬೆಳೆಗಾರರು, ಬೆಂಬಲ ಬೆಲೆಯಡಿ ಖರೀದಿಯ ನಿರೀಕ್ಷೆಯಲ್ಲಿದ್ದಾರೆ.

ಕಡಲೆ ಬೆಳೆಗಾರರಿಗೆ ನ್ಯಾಯಯುತ ಬೆಲೆ ಕಲ್ಪಿಸಲು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹5100 ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಆದರೆ ಹಂಗಾಮು ಆರಂಭವಾದಾಗ ಖರೀದಿ ಆರಂಭಿಸುವುದಿಲ್ಲ. ಬದಲಿಗೆ ನಮ್ಮ ಬಳಿ ಕಾಳು ಮುಗಿದ ಮೇಲೆ ಖರೀದಿ ಆರಂಭಿಸುತ್ತಾರೆ. ಅದರ ಉಪಯೋಗ ವರ್ತಕರು ಪಡೆಯುತ್ತಾರೆ ಎಂಬ ಆರೋಪ ರೈತ ಸಮುದಾಯದ್ದು. ಕಳೆದ ಜನವರಿ 1ರಿಂದ ಇಲ್ಲಿಯವರೆಗೆ ಬಾಗಲಕೋಟೆ ಎಪಿಎಂಸಿಗೆ 1169 ಕ್ವಿಂಟಲ್ ಕಡಲೆ ಆವಕಗೊಂಡಿದ್ದು, ಕನಿಷ್ಠ ₹3605ರಿಂದ ₹4755ಕ್ಕೆ ಮಾರಾಟವಾಗಿದೆ. ಬೆಂಬಲ ಬೆಲೆಯತ್ತಲೂ ಮಾರುಕಟ್ಟೆಯ ದರ ಸುಳಿದಿಲ್ಲ. ಇದು ಬೆಳೆಗಾರರ ನೋವಿಗೆ ಕಾರಣವಾಗಿದೆ.

ಕಡಲೆ ಬೇಗನೇ ಹಾಳಾಗುತ್ತದೆ. ಸಂಗ್ರಹಿಸಿಟ್ಟರೆ ಕೀಟಬಾಧೆಗೆ ತುತ್ತಾಗಿ‍ಪುಡಿಯಾಗಿ ತೂಕ ಕಳೆದುಕೊಳ್ಳುತ್ತದೆ. ಉಪಯೋಗಕ್ಕೂ ಬರುವುದಿಲ್ಲ. ಹೀಗಾಗಿ ಸಿಕ್ಕ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಿ ಕಾಳು ಖರೀದಿ ಕೇಂದ್ರ ಪ್ರಾರಂಭಿಸಬೇಕು. ತಡ ಮಾಡಿದರೆ ಮಾರುಕಟ್ಟೆಯ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಾನಿ ಅನುಭವಿಸಬೇಕಾಗುತ್ತದೆ ಎಂದು ಕಡಲೆ ಬೆಳೆಗಾರರು ಒತ್ತಾಯಿಸುತ್ತಾರೆ.

ಈಗಾಗಲೇ ರಾಶಿ ಮಾಡಿ ಸಂಗ್ರಹಿಸಿಟ್ಟುಕೊಂಡಿರುವ ಕಡಲೆ ಕಾಳು ಖರೀದಿಗೆ ಮುಂದಾಗದ ಸರ್ಕಾರ ಇನ್ನೂ ಕಟಾವು ಸಹಿತ ಅಗದೇ ಇರುವ ಬಿಳಿಜೋಳಕ್ಕೆ ಬೆಂಬಲ ಬೆಲೆ ಘೋಷಿಸಿರುವುದು ಸರಿಯಾದ ಕ್ರಮವಲ್ಲ. ನಮ್ಮ ನೆರವಿಗೂ ಬರಲಿ ಎಂದು ಹಳ್ಳೂರು ಗ್ರಾಮದ ರೈತ ಈಶ್ವರಗೌಡ ಪಾಟೀಲ ಹೇಳುತ್ತಾರೆ.

ಈಗ ರೈತರು ಕಡಲೆ ಬೆಳೆಯ ರಾಶಿ ಮಾಡಿ ಇಟ್ಟುಕೊಂಡಿದ್ದು ಮೊದಲು ಕಡಲೆ ಕಾಳು ಖರೀದಿಗೆ ಮುಂದಾಗಬೇಕು ಎಂದುಬೆನಕಟ್ಟಿ ರೈತರಂಗಣ್ಣ ಬೆಣ್ಣೂರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT