ಗುರುವಾರ , ಜುಲೈ 16, 2020
23 °C

ಕೋವಿಡ್-19: ವೆಂಟಿಲೇಟರ್ ಅಳವಡಿಸಿದ್ದ ವ್ಯಕ್ತಿ ಸೇರಿ 17 ಮಂದಿ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸೇರಿದಂತೆ  ಜಿಲ್ಲೆಯಲ್ಲಿ 17 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದು, ಮಂಗಳವಾರ ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮನೆಗೆ ಬೀಳ್ಕೊಡಲಾಯಿತು.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಿಡುಗಡೆಯಾದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಒಟ್ಟು 77 ಮಂದಿ ಸೋಂಕಿತರ ಪೈಕಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. ಇನ್ನು 14 ಪ್ರಕರಣಗಳು ಸಕ್ರಿಯವಾಗಿವೆ.

ಆಸ್ಪತ್ರೆಯಿಂದ ಬಿಡುಗಡೆಯಾದವರ ಪೈಕಿ ಮುಧೋಳ ನಗರದ 13 ಮಂದಿ, ಬಾದಾಮಿ ತಾಲ್ಲೂಕಿನ ಢಾಣಕ ಶಿರೂರ ಗ್ರಾಮದ 19 ವರ್ಷದ ಯುವತಿ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹೊಸರಿತ್ತಿ ಗ್ರಾಮದ 32 ವರ್ಷದ ವ್ಯಕ್ತಿ ಹಾಗೂ ಜಮಖಂಡಿಯ ಇಬ್ಬರು ಸೇರಿದ್ದಾರೆ.

ಅವರಲ್ಲಿ ಮುಧೋಳದ ವಡ್ಡರ ಓಣಿಯ 56 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಜೊತೆಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಅವರಿಗೆ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ನೀಡಲಾಗಿತ್ತು.

'ನನಗೆ ಹಿಂದೆ ಮುಂದೆ ಯಾರೂ ಇರಲಿಲ್ಲ. ಒಬ್ಬಂಟಿಯಾದ ನನಗೆ ವೈದ್ಯರು ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಿ ನನ್ನನ್ನು ಬದುಕಿಸಿದರು' ಎಂದು ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಕೋವಿಡ್-19 ಸೋಂಕಿನಿಂದ ಗುಣಮುಖರಾದವರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ತಜ್ಞ ವೈದ್ಯ ಡಾ.ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಣೆ ಮಾಡಿ ಶುಭ ಹಾರೈಸಿದರು.

ಜಿಲ್ಲಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟು ಮೂಲಕ ಎಲ್ಲರನ್ನೂ ಬೀಳ್ಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು